ಅಂಬರೀಷ್ ಅವರನ್ನು ಇಷ್ಟಪಡದವರು ಯಾರೂ ಇಲ್ಲ. ಅದು ಚಿಕ್ಕ ಮಗುವಿನಿಂದ ಹಿಡಿದು ಸ್ಟಾರ್ ನಟರವರೆಗೂ. ಹಾಗೆ ಅಂಬಿ ಅವರನ್ನು ತುಂಬಾ ಇಷ್ಟಪಡುತ್ತಿದ್ದ ನಟರಲ್ಲಿ ನಟ ಸುದೀಪ್ ಕೂಡಾ ಒಬ್ಬರು. ಪ್ರೀತಿಯಿಂದ “ಅಂಬಿ ಮಾಮ’ ಎಂದು ಕರೆಯುತ್ತಿದ್ದ ಸುದೀಪ್, ಅವರ ಜೊತೆ ಸಿನಿಮಾದಲ್ಲೂ ನಟಿಸಿದ್ದಾರೆ. ಅಂಬರೀಷ್ ಅವರ ನಿಧನದಿಂದ ಅಘಾತಕ್ಕೊಳಗಾಗಿರುವ ಸುದೀಪ್ ತಮ್ಮ ಪ್ರೀತಿಯ “ಅಂಬಿ ಮಾಮ’ನ ಕುರಿತಾಗಿ ಸುದೀರ್ಘ ಪತ್ರವೊಂದನ್ನು ಬರೆದಿದ್ದಾರೆ. ಆ ಪತ್ರ ಹೀಗಿದೆ …
ನಿಮಗೊಂದು ಕೆಟ್ಟ ಕನಸು ಬಿದ್ದ ರಾತ್ರಿಯಿದು. ನಿಮಗೆ ಆ ಕನಸು ಕಾಣಲು ಒಂಚೂರೂ ಇಷ್ಟವಿಲ್ಲ. “ನಾನೀಗ ನಿದ್ದೆಯಿಂದ ಏಳಲೇಬೇಕು. ಕಾರಣ ಆ ದುಃಸ್ವಪ್ನ ನಿಲ್ಲಲೇಬೇಕು’ ಎಂದು ನಿಮಗೆ ನೀವೇ ಹೇಳಿಕೊಳ್ಳುತ್ತಿದ್ದೀರ. ಅದು ಅಂಬರೀಶ್ ಸಾವಿನ ಕನಸು. ಸಿನಿಮಾ ಜಗತ್ತಿಗೆ ಮತ್ತೂಂದು ದೊಡ್ಡ ಆಘಾತವಾಗಿದೆ. ಯಾರೂ ಬಯಸದಂತಹ ಅತ್ಯಂತ ಕೆಟ್ಟ ಘಟನೆಯೊಂದು ನಡೆದುಹೋಗಿದೆ. ನಾವು ಮತ್ತೂಬ್ಬ ದಿಗ್ಗಜನನ್ನ ಕಳೆದುಕೊಂಡಿದ್ದೇವೆ.
ಈ ಸಾವಿನೊಂದಿಗೆ ನಾವು ಕಳೆದುಕೊಂಡಿರುವುದು ಕೇವಲ ಅಂಬಿಯನ್ನಲ್ಲ. ಒಬ್ಬ ನಾಯಕ, ಬ್ಬ ತಂದೆ, ಒಬ್ಬ ಮಾರ್ಗದರ್ಶಿ, ಹರಸಿ, ಆಶೀರ್ವದಿಸುವ ಒಂದು ಕೈ ಅಷ್ಟೇ ಏಕೆ ಒಂದು ದೊಡ್ಡ ಶಕ್ತಿಯನ್ನೇ ನಾವು ಕಳೆದುಕೊಂಡಿದ್ದೇವೆ. ಎಲ್ಲಕ್ಕಿಂತ ಹೆಚ್ಚಾಗಿ ಸುಂದರ ವ್ಯಕ್ತಿತ್ವವೊಂದು ನಮ್ಮಿಂದ ದೂರಾಗಿದೆ. ಅಂಬಿ ಮಾಮನ ಸಾವು, ನನ್ನ ಹೃದಯ ಛಿದ್ರಗೊಳಿಸಿದ ಸುದ್ದಿ.
ಜತೆಗೆ, ಅಂಬಿಯಂತಹ ಅಂಬಿಯೇ ಮೃತ್ಯು ಶಯ್ಯೆಯಲ್ಲಿ ಮಲಗಿದ್ದು ಕಂಡು ಎದೆಯಾಳದಲ್ಲೂ ಕಣ್ಣೀರು ಜಿನುಗಿತು. ನಾವೆಲ್ಲಾ ಅಂಬಿ ಮಾಮನನ್ನು ನೋಡಿರುವುದು ಒಬ್ಬ ನೇರ ಹಾಗೂ ದಿಟ್ಟ ವ್ಯಕ್ತಿತ್ವದ ಅಜಾನುಬಾಹುವಾಗಿ. ತಾನು ಹೇಗಿ, ಬಂದ ಕಡೆಯಲ್ಲೆಲ್ಲಾ ಜನರಿಂದ ಗೌರವಿಸಲ್ಪಡುತ್ತಿದ್ದ ಅನರ್ಘ್ಯ ರತ್ನ ಅವರು. ಜೀವನದಲ್ಲಿ ಯಾವುದೇ ಎಲ್ಲೆಗಳಿಲ್ಲದೆ ರಾಜನಂತೆ ಬದುಕಿದವರು ನಮ್ಮ ಅಂಬಿ ಮಾಮ.
ಅವರನ್ನ ನೋಡಿದಾಗಲೆಲ್ಲಾ ಅದೇನೋ ಸಂತೋಷ. ಉತ್ಸಾಹ. ಅವರಂತಿರುವ ಮತ್ತೂಬ್ಬ ವ್ಯಕ್ತಿಯನ್ನು ನಾನು ಕಂಡಿಲ್ಲ. ಅವರಿಗೆ ಹೋದಲ್ಲೆಲ್ಲಾ ಸ್ನೇಹಿತರೇ. ಅಂಬಿ ಮಾಮನನ್ನ ನೋಡಿಯೂ ನೋಡದಂತೆ ಹೋದ ಒಬ್ಬೇ ಒಬ್ಬ ವ್ಯಕ್ತಿಯನ್ನೂ ನಾನು ಈವರೆಗೆ ಕಂಡಿಲ್ಲ. ಹಾಗೇ, ಅವರಿಗೆ ಎಲ್ಲ ರಂಗಗಳಲ್ಲೂ ಇದ್ದಿದ್ದು ಬರೀ ಸ್ನೇಹಿತರು. ಒಬ್ಬ ವೈರಿ ಕೂಡ ಇರಲಿಲ್ಲ ಎಂಬ ಅಂಶ ಕೂಡ ನನ್ನನ್ನು ಚಕಿತಗೊಳಿಸುತ್ತದೆ.
ಸರಳವಾಗಿ ಹೇಳುವುದಾದರೆ ಅಂಬಿ ಒಬ್ಬ ಪರಿಪೂರ್ಣ ಸರಳ ಜೀವಿ ಹಾಗೇ ಒಬ್ಬ ಕರುಣಾಮಯಿ. ಕೆಲವೊಂದು ಕಥೆಗಳು ಹಾಗೂ ಕೆಲ ವ್ಯಕ್ತಿಗಳ ಜೀವನ ಎಂದೂ ಕೊನೆಯಾಗಬಾರದು ಎಂದು ನಾವು ಇಚ್ಛಿಸುತ್ತೇವೆ. ಅಂಬಿ ಮಾಮ ಬದುಕಿದ್ದು ಹೀಗೇ. ಅವರು ಮರೆಯಾಗುವುದು ಎಲ್ಲರಿಗೂ ಒಂದು ದುಃಸ್ವಪ್ನವೇ. ಒಂದಷ್ಟು ಸಂದರ್ಭಗಳನ್ನು ನಾನು ರಿವೈಂಡ್ ಮಾಡಬೇಕು. ಗಡಿಯಾರವನ್ನು ಹಾಗೇ ಒಮ್ಮೆ ಹಿಂದಕ್ಕೆ ತಿರುಗಿಸಬೇಕು.
ನಾನು ನನ್ನ ಸಿನಿ ಬದುಕಿನಲ್ಲಿ ಮೊಟ್ಟ ಮೊದಲ ಬಾರಿ ಕ್ಯಾಮೆರಾ ಮುಂದೆ ನಿಂತ (ಅಂಬಿ ಮಾಮನ ಕಾಲಿಗೆ ಬಿದ್ದ) ಆ ಕ್ಷಣ ಮತ್ತೆ ಬರಬೇಕು, ಬೆಲ್ ಸದ್ದು ಕೇಳಿ ಶಿವಮೊಗ್ಗದ ಮನೆಯ ಬಾಗಿಲ ಬಳಿ ಬಂದಾಗ ಎದುರು ಬಿಳಿ ಜುಬ್ಬ ಧರಿಸಿ, ಜೋಳಿಗೆ ರೀತಿಯ ಬ್ಯಾಗ್ ನೇತಾಕಿಕೊಂಡು ನಿಂತಿದ್ದ ಅಂಬಿ ಮಾಮನನ್ನು ನಾನು ಮೊದಲ ಬಾರಿ ನೋಡಿದ ಆ ಘಳಿಗೆ, ನನ್ನ ಹಿಂದೆ ನಿಂತಿದ್ದ ಅಪ್ಪ “”ಒಳಗೆ ಬಾರಯ್ನಾ ಅಂಬಿ” ಎಂದು ಕರೆದ ಆ ಕ್ಷಣ ಮರುಕಳಿಸಬೇಕು…
ನಿಮ್ಮನ್ನ ಮಿಸ್ ಮಾಡಿಕೊಳ್ತೇನೆ ಮಾಮ
ದೀಪು