ಗದಗ: ದಸರಾ, ದೀಪಾವಳಿ ಸೇರಿ ಸರಣಿ ಹಬ್ಬಗಳ ಸಂಭ್ರಮದಲ್ಲಿದ್ದ ಜನತೆಗೆ ಅಡುಗೆ ಎಣ್ಣೆ ದರವು (Cooking oil Price) ದಿಢೀರ್ ಶಾಕ್ ನೀಡಿದೆ. ಲೀಟರ್ ಎಣ್ಣೆಗೆ 20ರಿಂದ 25 ರೂ. ಗೆ ಏರಿಕೆಯಾಗಿದ್ದರಿಂದ ಗ್ರಾಹಕರಿಗೆ ಬರೆ ಎಳೆದಂತಾಗಿದೆ.
ಕಳೆದೊಂದು ವಾರದಿಂದ ಹಾವು ಏಣಿಯಾಟ ನಡೆಸಿದ್ದ ಅಡುಗೆ ಎಣ್ಣೆ ದರವು ಶನಿವಾರ ದಿಢೀರ್ ಗಗನಕ್ಕೇರಿದೆ. ಕೇವಲ ಒಂದೇ ದಿನದ ಅವಧಿಯಲ್ಲಿ ಪಾಮ್ ಆಯಿಲ್, ಸೋಯಾಬಿನ್ ಎಣ್ಣೆ ಹಾಗೂ ಸೂರ್ಯಕಾಂತಿ ರಿಫೈಂಡ್ ಆಯಿಲ್ ದರ ಹೆಚ್ಚಳವಾಗಿದ್ದರಿಂದ ಸಾರ್ವಜನಿಕರು ಪರದಾಡುವಂತಾಗಿದೆ.
ಅಡುಗೆ ಎಣ್ಣೆಯು ಈಗಾಗಲೇ ಜಿಎಸ್‌ಟಿ ವ್ಯಾಪ್ತಿಗೆ ಸೇರಿದೆ. ಆದರೆ, ಅಡುಗೆ ಎಣ್ಣೆಗೆ ಹೆಚ್ಚುವರಿಯಾಗಿ ಶೇ. 20ರಷ್ಟು ಇಂಪೋರ್ಟ್ ಡ್ಯೂಟಿ ಟ್ಯಾಕ್ಸ್ ಹೆಚ್ಚಳ ಮಾಡಿದ್ದರಿಂದ ಎಣ್ಣೆ ದರ ಗಗನಕ್ಕೇರಿದೆ ಎನ್ನುತ್ತಿದ್ದಾರೆ ಅಡುಗೆ ಎಣ್ಣೆ ವ್ಯಾಪಾರಿಗಳು.
ಎಡರನೇ ಶನಿವಾರ, ರವಿವಾರ ಹಾಗೂ ಸೋಮವಾರ ಈದ್ ಹಬ್ಬವಿರುವುದರಿಂದ ಸತತವಾಗಿ ಮೂರು ದಿನಗಳ ಕಾಲ ಸರಕಾರಿ ರಜೆ ಇರುವುದರಿಂದ ಮಂಗಳವಾರವೇ ಇಂಪೋರ್ಟ್ ಡ್ಯೂಟಿ ಟ್ಯಾಕ್ಸ್ ಕುರಿತು ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ. ಅಲ್ಲದೆ, ಮಂಗಳವಾರವೇ ಅಡುಗೆ ಎಣ್ಣೆಯ ದರದಲ್ಲಿ ಏರಿಕೆ ಹಾಗೂ ಇಳಿಕೆಯ ಮಾಹಿತಿ ಲಭ್ಯವಾಗಲಿದೆ. ಅಲ್ಲಿಯವರೆಗೆ ಅಡುಗೆ ಎಣ್ಣೆ ದರವು ಗ್ರಾಹಕರಿಗೆ ಬಿಸಿ ತುಪ್ಪವಾಗಿ ಪರಿಣಮಿಸಲಿದೆ.
ಪಾಮ್ ಆಯಿಲ್ ಬಾಕ್ಸ್ ದರ ದಿಡೀರ್ ಏರಿಕೆ
ಕಳೆದ ಎರಡು ದಿನಗಳ ಹಿಂದೆ 15 ಲೀಟರ್ ಹೊಂದಿದ ಪಾಮ್ ಆಯಿಲ್ ಬಾಕ್ಸ್ ಗೆ 1,450 ರೂ. ನಿಗದಿಯಾಗಿತ್ತು. ಆದರೆ, ಶುಕ್ರವಾರ ಸಂಜೆ ವೇಳೆಗೆ ಶೇ. 20ರಷ್ಟು ಇಂಪೋರ್ಟ್ ಡ್ಯೂಟಿ ಟ್ಯಾಕ್ಸ್ ಹೆಚ್ಚಳದಿಂದ ಕೇವಲ 24 ಗಂಟೆಯೊಳಗಾಗಿ ಬಾಕ್ಸ್ ಒಂದಕ್ಕೆ 200ರಿಂದ 250 ರೂ. ಅಂದರೆ 1,650ರಿಂದ 1,700 ರೂ. ವರೆಗೆ ಏರಿಕೆಯಾಗಿದೆ. ಲೀಟರ್ ಪಾಕೆಟ್ ಗೆ 98 ರೂ. ಇದ್ದ ಬೆಲೆ ಈಗ 120ಕ್ಕೇರಿದೆ.
ಸೂರ್ಯಕಾಂತಿ ರಿಫೈಂಡ್ ಆಯಿಲ್ ದರವೂ ಹೆಚ್ಚಳ
ಕಳೆದ ಎರಡು ದಿನಗಳ ಹಿಂದೆ 10 ಲೀಟರ್ ಹೊಂದಿದ ಸೂರ್ಯಕಾಂತಿ ರಿಫೈಂಡ್ ಆಯಿಲ್ ಬಾಕ್ಸ್ ಗೆ 1,050 ರೂ. ನಿಗದಿಯಾಗಿತ್ತು. ಆದರೆ, ಶುಕ್ರವಾರ ಸಂಜೆ ವೇಳೆಗೆ ಶೇ. 20ರಷ್ಟು ಇಂಪೋರ್ಟ್ ಡ್ಯೂಟಿ ಟ್ಯಾಕ್ಸ್ ಹೆಚ್ಚಳದಿಂದ ಕೇವಲ 24 ಗಂಟೆಯೊಳಗಾಗಿ ಬಾಕ್ಸ್ ಒಂದಕ್ಕೆ 150ರಿಂದ 200 ರೂ. ಅಂದರೆ 1,220ರಿಂದ 1,300 ರೂ. ವರೆಗೆ ಏರಿಕೆಯಾಗಿದೆ. ಲೀಟರ್ ಪಾಕೆಟ್‌ಗೆ 105 ರೂ. ಇದ್ದ ಬೆಲೆ ಈಗ 125ಕ್ಕೇರಿದೆ. ಇದರಿಂದಾಗಿ ಗ್ರಾಹಕರಿಗೆ ಭಾರಿ ಹೊಡೆತ ಬಿದ್ದಂತಾಗಿದೆ.
ಪಾಮ್ ಆಯಿಲ್, ಸೂರ್ಯಕಾಂತಿ ರಿಫೈಂಡ್ ಆಯಿಲ್ ಸೇರಿ ಅಡುಗೆ ಎಣ್ಣೆಯು ಈಗಾಗಲೇ ಜಿಎಸ್‌ಟಿ ವ್ಯಾಪ್ತಿಗೆ ಸೇರಿತ್ತು. ಇಂಪೋರ್ಟ್ ಡ್ಯೂಟಿ ಟ್ಯಾಕ್ಸ್ ಸೊನ್ನೆಗೆ ಇಳಿಸಲಾಗಿತ್ತು. ಶುಕ್ರವಾರ ಸಂಜೆ ಏಕಾಏಕಿ ಇಂಪೋರ್ಟ್ ಡ್ಯೂಟಿ ಟ್ಯಾಕ್ಸ್ ಶೇ. 20ರಷ್ಟು ಹೆಚ್ಚಿಸಿದ್ದರಿಂದ ಅಡುಗೆ ಎಣ್ಣೆ ದರದಲ್ಲಿ ಭಾರಿ ಏರಿಕೆ ಕಂಡಿದೆ. ಮಂಗಳವಾರ ಮಧ್ಯಾಹ್ನದವರೆಗೆ ದರದಲ್ಲಿ ಯಾವುದೇ ವ್ಯತ್ಯಾಸ ಕಾಣದು. ಅಂದೇ ಅಡುಗೆ ಎಣ್ಣೆ ದರದಲ್ಲಿ ಏರಿಕೆ ಅಥವಾ ಇಳಿಕೆ ಕುರಿತು ತಿಳಿಯಲಿದೆ ಎನ್ನುತ್ತಾರೆ ಗ್ರೇನ್ ಮಾರುಕಟ್ಟೆ ವ್ಯಾಪಾರಸ್ಥ ಹಿಮಾಂಶು ಜೈನ್.
ಲೀಟರ್ ಅಡುಗೆ ಎಣ್ಣೆಗೆ 20ರಿಂದ 25 ರೂ. ದರ ಹೆಚ್ಚಿಸಿರುವುದು ಗ್ರಾಹಕರ ಮೇಲೆ ಬರೆ ಎಳೆದಂತಾಗಿದೆ. ಬಡವರು, ಕೂಲಿಕಾರ್ಮಿಕರು, ಮಧ್ಯಮ ವರ್ಗದವರು ಪಾಮ್ ಆಯಿಲ್ ಹೆಚ್ಚಾಗಿ ಬಳಸುತ್ತಾರೆ. ಪಾಮ್ ಆಯಿಲ್ ದರದಲ್ಲಿ ಕೂಡ ಹೆಚ್ಚಳವಾಗಿದ್ದರಿಂದ ತೊಂದರೆ ಅನುಭವಿಸುವಂತಾಗಿದೆ. ಅಡುಗೆ ಎಣ್ಣೆ ದರ ಇಳಿಕೆಯಾಗದಿದ್ದರೆ ಮುಂಬರುವ ದಸರಾ ಹಾಗೂ ದೀಪಾವಳಿ ಹಬ್ಬಗಳು ಬಡವರ ಪಾಲಿಗೆ ಶಾಪವಾಗಿ ಪರಿಣಮಿಸಲಿವೆ ಎನ್ನುತ್ತಾರೆ ಸೋಮಶೇಖರ ಕರಸಿದ್ದಿಮಠ.