Advertisement
ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದಿರೆ ಮತ್ತು ಶಾಸಕ ವೇದವ್ಯಾಸ ಕಾಮತ್ ಅವರು ಪ್ರಗತಿ ರಥಕ್ಕೆ ಚಾಲನೆ ನೀಡಿದರು. ಬಳಿಕ ಸುದರ್ಶನ್ ಮೂಡುಬಿದಿರೆ ಮಾತನಾಡಿ, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಹಾಗೂ ಬೊಮ್ಮಾಯಿ ನೇತೃತ್ವದ ರಾಜ್ಯ ಸರಕಾರದ ಜನಪರ ಕೆಲಸಗಳನ್ನು ಜನರ ಮನೆ-ಮನಗಳಿಗೆ ತಲುಪಿಸುವ ಉದ್ದೇಶದಿಂದ ಬಿಜೆಪಿಯೇ ಭರವಸೆ ಪ್ರಗತಿ ರಥ ಯಾತ್ರೆಗೆ ಚಾಲನೆ ನೀಡಲಾಗಿದೆ. ಯುವಮೋರ್ಚಾ ಪದಾಧಿಕಾರಿಗಳು ಯಾತ್ರೆಯೊಂದಿಗೆ ಪ್ರತಿ ಗ್ರಾಮಕ್ಕೂ ಭೇಟಿ ನೀಡಲಿದ್ದಾರೆ. ಈ ಬಾರಿ ರಾಜ್ಯದಲ್ಲಿ 150ಕ್ಕೂ ಹೆಚ್ಚು ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದ್ದು, ಜಿಲ್ಲೆಯಲ್ಲೂ ಎಲ್ಲ 8 ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಬಿಜೆಪಿ ಶಾಸಕರು ವಿಧಾನ ಸಭೆ ಪ್ರವೇಶಿಸಲಿದ್ದಾರೆ. ಆ ಮೂಲಕ ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದರು.ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ರಥಯಾತ್ರೆ ವೇಳೆ ಬಿಜೆಪಿ ಸಾಧನೆಗಳನ್ನು ಪ್ರಚುರಪಡಿಸುವ ಜತೆಗೆ, ಚುನಾವಣೆ ಪ್ರಣಾಳಿಕೆಗೆ ಸಲಹೆ – ಸೂಚನೆಗಳನ್ನೂ ಸಾರ್ವಜನಿಕರಿಂದ ಸಂಗ್ರಹಿಸಲಾಗುವುದು. ಎಲ್ಲವನ್ನೂ ಕ್ರೋಢೀಕರಿಸಿ ರಾಜ್ಯಾಧ್ಯಕ್ಷರಿಗೆ ಸಲ್ಲಿಸಲಾಗುವುದು. ಆ ಮೂಲಕ ಜನಪರ ಪ್ರಣಾಳಿಕೆ ಪಕ್ಷ ಸಿದ್ಧಪಡಿಸಲಿದೆ ಎಂದರು.
ಜಿಲ್ಲೆಗೆ ಒಟ್ಟು ಆರು ವಾಹನಗಳು ಬಂದಿದ್ದು, ಎಲ್ಲ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಇದು ಸಂಚರಿಸಲಿದೆ. ಮಂಗಳೂರು ದಕ್ಷಿಣ ಮತ್ತು ಉತ್ತರದಲ್ಲಿ ಒಂದು, ಮಂಗಳೂರು ಮತ್ತು ಬಂಟ್ವಾಳ ಕ್ಷೇತ್ರದಲ್ಲಿ ಒಂದು ವಾಹನ ಸಂಚರಿಸಲಿದ್ದು, ಉಳಿದಂತೆ ಮೂಡುಬಿದಿರೆ, ಬೆಳ್ತಂಗಡಿ, ಪುತ್ತೂರು, ಸುಳ್ಯ ಕ್ಷೇತ್ರದಲ್ಲಿ ತಲಾ ಒಂದೊಂದು ವಾಹನ ಸಂಚರಿಸಲಿದೆ. ಎಲ್ಇಡಿ ಸ್ಕ್ರೀನ್ ಮೂಲಕ ವೀಡಿಯೋಗಳನ್ನು ಪ್ರದರ್ಶಿಸಿ ಜನರಿಗೆ ಸರಕಾರದ ಸಾಧನೆ ವಿವರಿಸಲಾಗುತ್ತದೆ. ನೇರ ಪ್ರಸಾರಕ್ಕೂ ವಾಹನದಲ್ಲಿ ಅವಕಾಶವಿದ್ದು, ಆಯ್ದ ಕಡೆ ಪ್ರಧಾನಿಯವರ ಭಾಷಣವನ್ನು ನೇರ ಪ್ರಸಾರ ಮಾಡಲಾಗುತ್ತದೆ ಎಂದು ರಥ ಯಾತ್ರೆಯ ರಾಜ್ಯ ಸಹ ಪ್ರಭಾರಿ ಪ್ರೇಮಾನಂದ ಶೆಟ್ಟಿ ತಿಳಿಸಿದ್ದಾರೆ.