Advertisement

ಜನಮನ ಜಯಿಸಿದ ಸುದರ್ಶನ  ವಿಜಯ

06:00 AM Sep 07, 2018 | Team Udayavani |

ಮಧುಕುಮಾರ್‌ ವಿರಚಿತ “ಸುದರ್ಶನ ವಿಜಯ’ ತೆಂಕುತಿಟ್ಟಿನ ಚಾಲ್ತಿಯ ಪ್ರಸಂಗ . ಶ್ರೀಮನ್ನಾರಾಯಣನ ಆಯುಧವಾದ ಸುದರ್ಶನನಿಗೆ ಅಹಂಕಾರವು ಮಿತಿ ಮೀರಿದಾಗ ಶಾಪಕ್ಕೊಳಗಾಗಿ ಕಾರ್ತ್ಯವೀರ್ಯನಾಗಿ ಜನಿಸಿ, ವಿಷ್ಣುವಿನ ಪರಶುರಾಮ ಅವತಾರದಲ್ಲಿ ಮರಣ ಹೊಂದಿ ಪುನರಪಿ 
ವಿಷ್ಣುವಿನ ಕೈ ಸೇರುವ ಕಥಾಹಂದರ . 

Advertisement

 ತೆಂಕುತಿಟ್ಟಿನ ಯಕ್ಷಗಾನ ಕಲಾವಿದರು ತಮ್ಮ ಮಕ್ಕಳನ್ನು ಯಕ್ಷರಂಗಕ್ಕೆ ತಂದುದು ತೀರಾ ವಿರಳ .ಬೆರಳೆಣಿಕೆಯ ಒಬ್ಬಿಬ್ಬರು ಕಲಾವಿದರನ್ನು ಹೊರತುಪಡಿಸಿ ಬೇರಾವ ಕಲಾವಿದರೂ ತಮ್ಮ ಮಕ್ಕಳನ್ನು ಯಕ್ಷರಂಗದಲ್ಲಿ ತೊಡಗಿಸಿಕೊಳ್ಳಲಿಲ್ಲ . ತೆಂಕುತಿಟ್ಟಿನ ಪ್ರಸಿದ್ಧ ಯಕ್ಷಗಾನ ಕಲಾವಿದ ತಾರಾನಾಥ ವರ್ಕಾಡಿಯವರು ತಮ್ಮ ಪುತ್ರಿ ಕು| ಆಜ್ಞಾಸೋಹಂ ಅವರಿಗೆ ಯಕ್ಷಗಾನ ಕಲಿಸಿ , ರಂಗಪ್ರವೇಶಕ್ಕಾಗಿ ಇತ್ತೀಚೆಗೆ ಕಟೀಲಿನಲ್ಲಿ ಸುದರ್ಶನ ವಿಜಯ ಪ್ರದರ್ಶನ ಏರ್ಪಡಿಸಿದ್ದರು. ಈ ಆಟ ಉತ್ತಮ ಪ್ರಸ್ತುತಿಯಲ್ಲಿ ಮೂಡಿಬಂತು . ಪರಂಪರೆಯ ನಾಟ್ಯಗಳಿಗೆ ಒತ್ತು ಕೊಟ್ಟದಲ್ಲದೇ ಕಾಲಮಿತಿಯೊಳಗೆಯೇ ಅಚ್ಚುಕಟ್ಟಾಗಿ ಕಾರ್ಯಕ್ರಮ ಮುಗಿಸಿದುದು ಉಲ್ಲೇಖನೀಯ . 

 ಮಧುಕುಮಾರ್‌ ವಿರಚಿತ “ಸುದರ್ಶನ ವಿಜಯ’ ತೆಂಕುತಿಟ್ಟಿನ ಚಾಲ್ತಿಯ ಪ್ರಸಂಗ . ಶ್ರೀಮನ್ನಾರಾಯಣನ ಆಯುಧವಾದ ಸುದರ್ಶನನಿಗೆ ಅಹಂಕಾರವು ಮಿತಿ ಮೀರಿದಾಗ ಶ್ರೀಮನ್ನಾರಾಯಣನ ಸಂಕಲ್ಪದಂತೆ ಶಾಪಕ್ಕೊಳಗಾಗಿ ಕಾರ್ತ್ಯವೀರ್ಯನೆಂಬ ಮಾನವನಾಗಿ ಜನಿಸಿ, ಕೊನೆಗೆ ವಿಷ್ಣುವಿನ ಪರಶುರಾಮ ಅವತಾರದಲ್ಲಿ ಮರಣ ಹೊಂದಿ ಪುನರಪಿ ವಿಷ್ಣುವಿನ ಕೈ ಸೇರುವ ಕಥಾಹಂದರವೇ ಸುದರ್ಶನ ವಿಜಯ . 

ಇದರ ಮುಖ್ಯ ಪಾತ್ರವಾದ ಸುದರ್ಶನನಾಗಿ ಆಜ್ಞಾಸೋಹಂ ಉತ್ತಮ ನಿರ್ವಹಣೆ ನೀಡಿದರು . ಚುರುಕಿನ ಹೆಜ್ಜೆಗಾರಿಕೆ , ತಾಳಗತಿಗನುಗುಣವಾದ ನಾಟ್ಯ , ಭಾವಾಭಿವ್ಯಕ್ತಿಯ ಅಭಿನಯ , ಪಾತ್ರದ ಸ್ವಭಾವವನ್ನು ಅರಿತು ಸ್ವರಗಳ ಏರಿಳಿತದೊಂದಿಗಿನ ಮಾತುಗಾರಿಕೆ – ಎಲ್ಲವೂ ಸುದರ್ಶನ ಪಾತ್ರದ ಯಶಸ್ಸಿಗೆ ಕಾರಣವಾಯಿತು . ಆಜ್ಞಾರದ್ದು ಇದೇ ಪ್ರಥಮ ಪಾತ್ರವಲ್ಲ . ಈ ಹಿಂದೆ ಬಾಲ ಕಲಾವಿದೆಯಾಗಿ ದೇವೇಂದ್ರಬಲ , ರಕ್ಕಸ ಬಲದಂಥಹ ಪಾತ್ರಗಳನ್ನು ನಿರ್ವಹಿಸಿದ್ದರು .ಆದರೆ ಪೂರ್ಣ ಪ್ರಮಾಣದ ಪಾತ್ರ ನಿರ್ವಹಿಸಿದ್ದು ಪ್ರಥಮ . 

ಬಡಗುತಿಟ್ಟಿನ ನಾಟ್ಯವನ್ನು ಬನ್ನಂಜೆ ಸಂಜೀವ ಸುವರ್ಣರಿಂದ ಕಲಿತಿರುವ ಆಜ್ಞಾ ಉಭಯ ತಿಟ್ಟುಗಳಲ್ಲೂ ಪರಿಣತರು . ಭರತನಾಟ್ಯವನ್ನೂ ಅಭ್ಯಸಿಸಿರುವ ಆಜ್ಞಾ ಕರಾಟೆಯಲ್ಲೂ ಬ್ಲ್ಯಾಕ್‌ ಬೆಲ್ಟ… ಪಡೆದಿರುವ ಪ್ರತಿಭಾವಂತೆ . ಪ್ರಸ್ತುತ ಮೂಲ್ಕಿ ವಿಜಯಾ ಕಾಲೇಜಿನಲ್ಲಿ ದ್ವಿತೀಯ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದಾರೆ. 

Advertisement

 ವಿಷ್ಣುವಾಗಿ ತಾರಾನಾಥ ವರ್ಕಾಡಿಯವರ ನಿರ್ವಹಣೆ ಅತ್ಯುತ್ತಮವಾಗಿತ್ತು . ಪೀಠಿಕೆಯಲ್ಲಿ ನಾನು ಎಂದರೆ ಶೂನ್ಯ ಎಂಬುದನ್ನು ಉದಾಹರಣೆ ಸಹಿತ ನಿರೂಪಿಸಿ ಪ್ರಸಂಗವು ಪ್ರಾರಂಭದಲ್ಲೇ ಪ್ರೇಕ್ಷಕರನ್ನು ಹಿಡಿದಿಟ್ಟಿತು . ಸುದರ್ಶನನೊಂದಿಗಿನ ಸಂವಾದದಲ್ಲಿ ದೇವರು ಕೈ ಹಿಡಿದವರನ್ನು ಎಂದಿಗೂ ಬಿಡುವುದಿಲ್ಲ. ಆದರೆ ದೇವರ ಕೈಯಿಂದ ತಾನಾಗಿ ಜಾರಿದವನನ್ನು ಯಾವ ದೇವರಾದರೂ ರಕ್ಷಿಸಲು ಸಾಧ್ಯವೇ ? ಎಂದು ಹೇಳಿ ಸುದರ್ಶನನ ಅಹಂಕಾರವೇ ಅವನ ಅಧಃಪತನಕ್ಕೆ ಕಾರಣವೆಂದು ಸೂಚ್ಯವಾಗಿ ಪ್ರತಿಪಾದಿಸಿದರು . ಸುದರ್ಶನ – ವಿಷ್ಣು – ಲಕ್ಷ್ಮೀ ಸಂವಾದವೂ ಚೆನ್ನಾಗಿ ಮೂಡಿಬಂತು . ಮೂಲತಃ ತೆಂಕುತಿಟ್ಟಿನ ಹವ್ಯಾಸಿ ಕಲಾವಿದರಾದರೂ , ಇತ್ತೀಚೆಗೆ ಬಡಗುತಿಟ್ಟಿನಲ್ಲೇ ಹೆಚ್ಚಾಗಿ ತೊಡಗಿಸಿಕೊಂಡಿರುವ ಮಾಲತಿ ಪ್ರಭು ಲಕ್ಷ್ಮಿಯ ಚಿತ್ರಣವನ್ನು ಚೆನ್ನಾಗಿ ಕಟೆದು ನಿಲ್ಲಿಸಿದರು . ಈ ಸಂಭಾಷಣೆಯ ಭಾಗದಲ್ಲಿ ಮಾಮೂಲಾಗಿ ಬರುವ ಸಂಭಾಷಣೆಯನ್ನು ಕೈಬಿಟ್ಟು ಹೊಸ ಸಂವಾದ ಬಳಸಿದ್ದುದು ಉಲ್ಲೇಖನೀಯ . ಸುದರ್ಶನನಿಗೆ ತಲೆಗೇರಿದ ಅಹಂಕಾರವನ್ನು ಆಜ್ಞಾಸೋಹಂ ಸಮರ್ಪಕವಾಗಿ ಚಿತ್ರಿಸಿ ಮೆಚ್ಚುಗೆಗೆ ಪಾತ್ರರಾದರು .ಸಂಭಾಷಣೆಯಲ್ಲೂ ನೈಪುಣ್ಯತೆ ತೋರಿದರು . ತನ್ನದು ಪ್ರಥಮ ಪ್ರದರ್ಶನ ಎಂಬುದು ಎಲ್ಲಿಯೂ ತೋರ್ಪಡಿಸದ ರೀತಿಯಲ್ಲಿ ವೃತ್ತಿಪರರಂತೆಯೇ ಪಾತ್ರವನ್ನು ಚಿತ್ರಿಸಿದರು .ಶತ್ರುಪ್ರಸೂದನನಾಗಿ ತಾರಾನಾಥ ವರ್ಕಾಡಿಯವರ ಯಕ್ಷ ಗುರುಗಳಾದ ಕೆ.ಗೋವಿಂದ ಭಟ್ಟರ ನಿರ್ವಹಣೆ ಪ್ರಸಂಗದ ಯಶಸ್ಸಿಗೆ ಕಾರಣವಾಯಿತು ಗುರು – ಶಿಷ್ಯ – ಪ್ರಶಿಷ್ಯೆ ( ಶಿಷ್ಯನ ಪುತ್ರಿಯೂ ಹೌದು ) ಸಮಾಗಮದಲ್ಲಿ ಆಜ್ಞಾಸೋಹಂರವರ ಪ್ರಥಮ ರಂಗಪ್ರವೇಶ ಯಶಸ್ವಿಯಾಗಿ ಪ್ರಸ್ತುತಗೊಂಡಿತು . 

ಎಂ.ಶಾಂತರಾಮ ಕುಡ್ವ 

Advertisement

Udayavani is now on Telegram. Click here to join our channel and stay updated with the latest news.

Next