ಬಳ್ಳಾರಿ: ತಮಿಳುನಾಡಿನಲ್ಲಿ ಪ್ರತಿಭಟನಾಕಾರರ ಮೇಲೆ ಪೊಲೀಸರು ನಡೆಸಿರುವ ದೌರ್ಜನ್ಯವನ್ನು ಖಂಡಿಸಿ ನಗರದ ಗಡಗಿ ಚನ್ನಪ್ಪ ವೃತ್ತದಲ್ಲಿ ಎಸ್ ಯುಸಿಐ(ಕಮ್ಯುನಿಸ್ಟ್) ಪಕ್ಷದ ಕಾರ್ಯಕರ್ತರು ಶುಕ್ರವಾರ ತಮಿಳುನಾಡು ಸರ್ಕಾರದ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದರು.
ತಮಿಳುನಾಡಿನ ತೂತುಕ್ಕುಡಿಯಲ್ಲಿನ ಲಂಡನ್ ಮೂಲದ ಬಹುದೊಡ್ಡ ಕಂಪನಿ ವೇದಾಂತ ಗ್ರೂಪ್ಸ್‌ನ ಭಾಗವಾಗಿದ್ದ ಸ್ಟೆರ್‌ಲೈಟ್ ತಾಮ್ರ ಸಂಸ್ಕರಣ ಘಟಕವನ್ನು ಶಾಶ್ವತವಾಗಿ ಮುಚ್ಚುವಂತೆ ಹಾಗೂ ಅದರ ವಿಸ್ತರಣಾ ಕಾರ್ಯವನ್ನು ಸ್ಥಗಿತಗೊಳಿಸುವಂತೆ ಒತ್ತಾಯಿಸಿ ಟ್ಯೂಟಿಕೊರಿನ್ ಮತ್ತು ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರು ಸತತ 100 ದಿನಗಳಿಂದ ಹೋರಾಟ ನಡೆಸುತ್ತಿದ್ದಾರೆ. 100ನೇ ದಿನವಾದ ಮೇ. 22 ರಂದು ಜಿಲ್ಲಾ ಕಚೇರಿಗೆ ಮುತ್ತಿಗೆ ಹಾಕಿದ್ದ 20 ಸಾವಿರಕ್ಕೂ ಹೆಚ್ಚು ಪ್ರತಿಭಟನಾಕಾರರ ಮೇಲೆ ಪೊಲೀಸರು ಗೋಲಿಬಾರ್ ನಡೆಸಿ 15 ಜನರು ಮೃತಪಟ್ಟಿದ್ದು, ನೂರಾರು ಜನರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಸಂಸ್ಕರಣ ಘಟಕದಿಂದ ಹೊರ ಬರುವ ವಿಷಕಾರಿ ಅನಿಲವು ಸುತ್ತಮುತ್ತಿನ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಪರಿಸರಕ್ಕೂ ಹಾನಿಯಾಗುತ್ತಿದೆ. ಪರಿಸರ ನಿಯಮಗಳನ್ನು ಉಲ್ಲಂಘಿಸಿದ್ದರಿಂದ ಅಲ್ಲಿಯ ಜನರು ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ನ್ಯಾಯಾಲಯವು ಕಂಪನಿಗೆ ದಂಡ ವಿಧಿಸಿ ಘಟಕಗಳನ್ನು ಮುಚ್ಚಬೇಕೆಂದು ಆದೇಶ ನೀಡಿದ್ದರೂ, ಯಾವುದೇ ಪ್ರಯೋಜನವಾಗುತ್ತಿಲ್ಲ. ರಾಜ್ಯ, ಕೇಂದ್ರ ಸರ್ಕಾರಗಳು, ಜಿಲ್ಲಾಡಳಿತ, ತಮಿಳುನಾಡು ಮಾಲಿನ್ಯ ನಿಯಂತ್ರಣ ಮಂಡಳಿ, ಪರಿಸರ ಮತ್ತು ಅರಣ್ಯ ಇಲಾಖೆ ಸೇರಿದಂತೆ ಎಲ್ಲವೂ ವೇದಾಂತ ಗ್ರೂಪ್ಸ್ ಪರವಾಗಿವೆ ಎಂದು ದೂರಿದರು. ಕೂಡಲೇ ಕಂಪನಿಯನ್ನು ಮುಚ್ಚಬೇಕು. ಮೃತಪಟ್ಟ, ಗಾಯಗೊಂಡ ಪ್ರತಿಭಟನಾಕಾರರಿಗೆ ಕೂಡಲೇ ಸೂಕ್ತ ಪರಿಹಾರ ವಿತರಿಸಬೇಕು.
ಗೋಲಿಬಾರ್ ನಡೆಸಿದ ಪೊಲೀಸರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಇದಕ್ಕಾಗಿ ನ್ಯಾಯಾಂಗ ಆಯೋಗವು ರಚನೆಯಾಗಬೇಕು ಎಂದ ಪ್ರತಿಭಟನಾಕಾರರು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಎಸ್‌ಯುಸಿಐ ಜಿಲ್ಲಾ
ಕಾರ್ಯದರ್ಶಿ ಕೆ.ಸೋಮಶೇಖರ್, ಸದಸ್ಯರಾದ ಡಿ.ನಾಗಲಕ್ಷೀ, ಎಂ.ಎನ್.ಮಂಜುಳಾ, ಆರ್. ಸೋಮಶೇಖರಗೌಡ, ಡಾ| ಪ್ರಮೋದ್, ಜಿ.ಸುರೇಶ್ ಸೇರಿದಂತೆ ಹಲವರು ಇದ್ದರು.