ಮಲ್ಟಿಪ್ಲೆಕ್ಸ್‌ಗಳ ಜಮಾನ ಮಂಗಳೂರಿಗೆ ಕಾಲಿಟ್ಟ ಕೂಡಲೇ ಸಿಂಗಲ್ ಥಿಯೇಟರ್ ಕಥೆ ಮುಗಿದೇ ಹೋಯಿತು ಎಂದು ಹೇಳುತ್ತಿದ್ದ ಕಾಲವೊಂದಿತ್ತು. ಆದರೆ, ಹಾಗಾಗಲಿಲ್ಲ. ಮಲ್ಟಿಪ್ಲೆಕ್ಸ್‌ಗಳ ಮಧ್ಯೆಯೂ ಸಿಂಗಲ್ ಥಿಯೇಟರ್‌ಗಳು ಕೂಡ ತನ್ನ ತಾಕತ್ತು ತೋರಿಸಿತು. ಹೊಸ ಹೊಸ ಸಿನೆಮಾಗಳ ಮೂಲಕ ಥಿಯೇಟರ್‌ನತ್ತ ಪ್ರೇಕ್ಷಕರನ್ನು ಕರೆತರುವ ಪ್ರಯತ್ನ ನಡೆಯಿತು. ಜತೆಗೆ ಥಿಯೇಟರ್‌ಗಳು ಕೂಡ ಒಂದಷ್ಟು ಬದಲಾವಣೆಯ ಗಾಳಿಯೊಂದಿಗೆ ಹೊಸತನಗಳ ಹುಡುಕಾಟ ನಡೆಸುವ ಮೂಲಕ ಮನೆ ಮಾತಾಗುವ ಪ್ರಯತ್ನ ನಡೆಯುತ್ತಿದೆ.
ಇದೇ ಆಶಯದೊಂದಿಗೆ ಮಂಗಳೂರಿನ ಸುಚಿತ್ರಾ ಥಿಯೇಟರ್ ಈಗ ನವಸಿಂಗಾರಗೊಳ್ಳಲು ರೆಡಿಯಾಗಿದೆ. ಹಳೆಯ ಸುಚಿತ್ರಾವನ್ನು ಹೊಸತನದೊಂದಿಗೆ ಬದಲಾಯಿಸಲು ಥಿಯೇಟರ್‌ನ ಮಾಲೀಕರು ನಿರ್ಧರಿಸಿದ್ದಾರೆ. ಇದಕ್ಕಾಗಿ ಕಳೆದ ಒಂದೂವರೆ ತಿಂಗಳಿನಿಂದ ಥಿಯೇಟರ್ ಬಂದ್ ಮಾಡಿ ನವೀಕರಣ ಕೆಲಸ ಮಾಡಲಾಗುತ್ತಿದೆ. ಹೆಚ್ಚಾ ಕಡಿಮೆ ಇನ್ನೂ ಎರಡು ತಿಂಗಳು ಈ ಕೆಲಸ ನಡೆಯುವುದರಿಂದ ಸುಚಿತ್ರ ಥಿಯೇಟರ್‌ನಲ್ಲಿ ಸದ್ಯಕ್ಕೆ ಯಾವುದೇ ಸಿನೆಮಾ ಪ್ರದರ್ಶನ ಇರುವುದಿಲ್ಲ. ಪ್ರಸ್ತುತ ಇರುವ ಪ್ರೋಜೆಕ್ಟರ್ ಬದಲಾಯಿಸಿ 4 ಕೆ ಮಾದರಿಯ ಸುಧಾರಿತ ಹಾಗೂ ಅತ್ಯಾಧುನಿಕ ಶೈಲಿಯ ಪ್ರೋಜೆಕ್ಟರ್ ಅನ್ನು ಇಲ್ಲಿ ಅಳವಡಿಸಲು ತೀರ್ಮಾನಿಸಲಾಗಿದೆ. ಹೊಸ ಶೈಲಿಯ ಸೀಟ್ ವ್ಯವಸ್ಥೆಯನ್ನು ಕೂಡ ಇಲ್ಲಿ ಪರಿಚಯಿಸಲಾಗುತ್ತದೆ. ಪ್ರಸ್ತುತ ಥಿಯೇಟರ್‌ಗೆ ಬಣ್ಣ ಬಳಿದು ಸುಂದರೀಕರಣ ಮಾಡಲಾಗುತ್ತಿದೆ.
ಅಂದಹಾಗೆ, ಕೆ.ಎಸ್. ರಾವ್ ರಸ್ತೆಯಲ್ಲಿರುವ ಪ್ರಭಾತ್ ಚಿತ್ರಮಂದಿರದ ಸ್ಥಳ ವಿಸ್ತಾರದ ಆವರಣವನ್ನು 1970ರಲ್ಲಿ ಸ್ವಾಧೀನಪಡಿಸಿಕೊಂಡ ಬೆಂಗಳೂರಿನ ಡಿ.ಎನ್. ಗೋಪಾಲಕೃಷ್ಣ ಅವರು, ಲಕ್ಷ್ಮೀನಾರಾಯಣ ಎಂಟರ್‌ಪ್ರೈಸಸ್‌ನ ಸಂಸ್ಥೆಯ ಹೆಸರಿನಲ್ಲಿ ‘ಪ್ರಭಾತ್’ ಚಿತ್ರಮಂದಿರದ ಆವರಣದಲ್ಲಿ ‘ಸುಚಿತ್ರಾ’ ಎಂಬ ಹೆಸರಿನ ಇನ್ನೊಂದು ಚಿತ್ರಮಂದಿರ ಸ್ಥಾಪಿಸಿದರು. 1976ನೇ ಮೇ ತಿಂಗಳಿನಲ್ಲಿ ಡಾ| ರಾಜ್ ಕುಮಾರ್ ಅವರ ‘ಬಹದ್ದೂರ್ ಗಂಡು’ ಎಂಬ ಕನ್ನಡ ಚಿತ್ರದ ಮೂಲಕ ಪ್ರದರ್ಶನವನ್ನು ಆರಂಭಿಸಿದರು. ಈ ಸಿನೆಮಾ ಮಂದಿರದಲ್ಲಿ ಅತೀ ಹೆಚ್ಚು ವಾರ ಪ್ರದರ್ಶನವಾದ ಸಿನೆಮಾವೆಂದರೆ ‘ಶಂಕರ್ ಗುರು’ ಕನ್ನಡ ಸಿನೆಮಾ. ಸುಮಾರು 907 ಪ್ರೇಕ್ಷಕರ ಆಸನ ವ್ಯವಸ್ಥೆಯ ಸ್ಥಳಾವಕಾಶವಿರುವ ಈ ಚಿತ್ರಮಂದಿರದಲ್ಲಿ ನಂಜುಂಡಿ ಕಲ್ಯಾಣ, ಮಿಲನ ಸಹಿತ ಕನ್ನಡ, ಹಿಂದಿ, ತಮಿಳು, ತುಳು ಸಿನೆಮಾಗಳು ಪ್ರದರ್ಶನವಾಗಿವೆ. ವಿಷ್ಣವರ್ಧನ್, ಅಂಬರೀಶ್, ಶ್ರೀನಾಥ್, ಪುಟ್ಟಣ್ಣ ಕಣಗಾಲ್, ಲಕ್ಷ್ಮೀ ಸಹಿತ ಖ್ಯಾತ ನಟ-ನಟಿಯರು ಇಲ್ಲಿಗೆ ಭೇಟಿ ನೀಡಿದ್ದಾರೆ. ಮಂಗಳೂರಿನ ಒಂದೇ ಆವರಣದೊಳಗೆ ಪ್ರಭಾತ್ ಹಾಗೂ ಸುಚಿತ್ರಾ ಎಂಬ ಎರಡು ಚಿತ್ರಮಂದಿರಗಳಿರುವುದು ಇಲ್ಲಿನ ವಿಶೇಷ.
ಪ್ರಸ್ತುತ ಜ್ಯೋತಿ ಸಿನೆಮಾ ಮಂದಿರ ಹೊಸ ಲುಕ್‌ನೊಂದಿಗೆ ಕಾಣಿಸಿಕೊಳ್ಳುತ್ತಿದೆ. ಉಳಿದಂತೆ ಈಗ ಇರುವ ಸಿಂಗಲ್ ಥಿಯೇಟರ್‌ಗಳು ಇನ್ನಷ್ಟು ಹೈಫೈ ಆಗಬೇಕಾದ ಅನಿವಾರ್ಯತೆ ಇದೆ. ಸಿನೆಮಾಗಳ ಮೂಲಕ ಥಿಯೇಟರ್‌ಗಳತ್ತ ಜನರನ್ನು ಆಕರ್ಷಿಸುವ ಈ ಸಂದರ್ಭದಲ್ಲಿ ಥಿಯೇಟರ್‌ಗಳು ಕೂಡ ಅದೇ ರೀತಿಯಲ್ಲಿ ಬದಲಾವಣೆ ಆಗಬೇಕಿದೆ. ಮಲ್ಟಿಪ್ಲೆಕ್ಸ್‌ಗೆ ಹೋಗುವ ಜನರನ್ನು ಹಿಡಿದಿಟ್ಟು ಸಿಂಗಲ್ ಥಿಯೇಟರ್‌ಗೆ ಕರೆತರುವ ಪ್ರಯತ್ನ ನಡೆಸಬೇಕಾಗಿದೆ. ಇದೆಲ್ಲದರ ಮಧ್ಯೆ ಫಳ್ನೀರ್ ರಸ್ತೆಯಲ್ಲಿ 1974ರಲ್ಲಿ ಪಿ.ಎಂ. ಶಾಹಿದಾ ಇಬ್ರಾಹಿಂ ಅವರು ಸ್ಥಾಪಿಸಿದ ಪ್ಲಾಟಿನಂ ಥಿಯೇಟರ್ ಇಂದು ನೆನಪಾಗಿ ಉಳಿದಿದೆ. ಹಿಂದಿ ಚಿತ್ರನಟ ರಾಜ್‌ಕುಮಾರ್ ಉದ್ಘಾಟಿಸಿದ ಈ ಥಿಯೇಟರ್ ಈಗ ಸಿನೆಮಾ ಪ್ರದರ್ಶನದಿಂದ ದೂರ ಉಳಿದಿದೆ. ಪ್ರಸ್ತುತ ಥಿಯೇಟರ್‌ನ ಮುಂದುಗಡೆ ಬಟ್ಟೆ ಬರೆಗಳ ಸೇಲ್ ನಡೆಯುತ್ತಿದ್ದು, ಸಿನೆಮಾ ಮಂದಿರ ಮಾತ್ರ ಸ್ಥಗಿತಗೊಂಡಿರುವುದು ಸಿನಿ ಪ್ರಿಯರಿಗೆ ಬೇಸರ ತರಿಸಿದ್ದಂತು ನಿಜ.
– ದಿನೇಶ್ ಇರಾ