Advertisement

ಹಂತ ಹಂತದೀ ಮೂರು ರೀಮೇಕ್‌ಗಳ ನಂತರ ಸ್ವಮೇಕ್‌ ಸಂಹಾರ

10:39 PM May 05, 2017 | Team Udayavani |

ನಿರ್ದೇಶಕ ಗುರು ದೇಶಪಾಂಡೆ ತಮ್ಮ ಹೊಸ ಚಿತ್ರ ‘ಸಂಹಾರ’ದ ಬಗ್ಗೆ ಹೆಚ್ಚು ಏನನ್ನೂ ಬಿಟ್ಟುಕೊಡಲು ಸಿದ್ಧರಿರಲಿಲ್ಲ. ‘ಸಂಹಾರ’ ಎಂಬ ಸಿನಿಮಾ ಮಾಡುತ್ತಿದ್ದೇನೆ ಎಂದ ಅವರು ಕೇವಲ ಚಿತ್ರದ ತಾರಾಬಳಗ ಹಾಗೂ ತಾಂತ್ರಿಕ ವರ್ಗವನ್ನಷ್ಟೇ ಪರಿಚಯಿಸತೊಡಗಿದರು. ಸತತ ಮೂರು ರೀಮೇಕ್‌ ಸಿನಿಮಾಗಳ ನಂತರ ಗುರು ದೇಶಪಾಂಡೆ ಮಾಡುತ್ತಿರುವ ಸ್ವಮೇಕ್‌ ಸಿನಿಮಾವಿದು. ಆ ಕಾರಣದಿಂದಲೋ ಏನೋ ಚಿತ್ರದ ಒನ್‌ಲೈನ್‌ ಬಗ್ಗೆ ಮಾತನಾಡಲು ಕೂಡಾ ಗುರು ರೆಡಿಯಿರಲಿಲ್ಲ.

Advertisement

‘ಎಲ್ಲವನ್ನು ಈಗಲೇ ಹೇಳುವ ಬದಲು ಮುಂದಿನ ದಿನಗಳಲ್ಲಿ ಒಂದೊಂದನ್ನೇ ಹೇಳುತ್ತೇನೆ’ ಎನ್ನುವ ಮೂಲಕ ಸ್ಟೋರಿಲೈನ್‌ನಿಂದ ಗುರು ದೇಶಪಾಂಡೆ ಜಾರಿಕೊಳ್ಳುತ್ತಲೇ ಇದ್ದರು. ಪತ್ರಕರ್ತರು ಮತ್ತಷ್ಟು ಕೆದಕಿದಾಗ, ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವ ಕೆಲವು ವಿಷಯಗಳನ್ನಿಟ್ಟುಕೊಂಡು ಈ ಸಿನಿಮಾ ಮಾಡುತ್ತಿರುವುದಾಗಿ ಹೇಳಿದರು ಗುರುದೇಶಪಾಂಡೆ. ಜೊತೆಗೆ ಇದೊಂದು ಸಸ್ಪೆನ್ಸ್‌,
ಥ್ರಿಲ್ಲರ್‌ ಸಿನಿಮಾವಾಗಿದ್ದು, ಸಾಮಾಜಿಕ ವಿಷಯವನ್ನಿಟ್ಟುಕೊಂಡು ಇಡೀ ಸಿನಿಮಾ ಟ್ರಾವೆಲ್‌ ಆಗಲಿದೆ ಎಂಬುದು ಗುರು ದೇಶಪಾಂಡೆ ಮಾತು.

‘ಸಂಹಾರ’ ಮೂಲಕ ಚಿರಂಜೀವಿ ಸರ್ಜಾ ಹಾಗೂ ಗುರು ದೇಶಪಾಂಡೆ ಒಂದಾಗಿದ್ದಾರೆ. ಈ ಹಿಂದೆ ‘ರುದ್ರತಾಂಡವ’ ಚಿತ್ರದಲ್ಲಿ ಇವರು ಜೊತೆಯಾಗಿ ಕೆಲಸ ಮಾಡಿದ್ದಾರೆ. ಈಗ ಮತ್ತೂಮ್ಮೆ ‘ಸಂಹಾರ’ ಮಾಡಲು ಹೊರಟಿದ್ದಾರೆ. ಗುರು ದೇಶಪಾಂಡೆಗೂ ಮತ್ತೂಮ್ಮೆ ಚಿರಂಜೀವಿ ಜೊತೆ ಕೆಲಸ ಮಾಡುತ್ತಿರುವ ಖುಷಿ ಇದೆ.

‘ಚಿತ್ರದಲ್ಲಿ ನನಗೆ ಒಳ್ಳೆಯ ತಂಡ ಸಿಕ್ಕಿದೆ. ಚಿತ್ರದಲ್ಲಿ ಚಿರು ಈ ಹಿಂದೆ ಮಾಡಿರದಂತಹ ಪಾತ್ರ ಮಾಡುತ್ತಿದ್ದಾರೆ. ಜೊತೆಗೆ ನಾಯಕಿಯರಾದ ಹರಿಪ್ರಿಯಾ ಹಾಗೂ ಕಾವ್ಯಾ ಶೆಟ್ಟಿಗೂ ಒಳ್ಳೆಯ ಪಾತ್ರ ಸಿಕ್ಕಿದೆ. ತಾಂತ್ರಿಕವಾಗಿಯೂ ಈ ಸಿನಿಮಾ ರಿಚ್‌ ಆಗಿ ಮೂಡಿಬರಲಿದೆ. ಜಗದೀಶ್‌ ವಾಲಿ ಅವರ ಛಾಯಾಗ್ರಹಣ, ರವಿ ಬಸ್ರೂರು ಸಂಗೀತ ಕೂಡಾ ಈ ಸಿನಿಮಾದ ಪ್ಲಸ್‌ ಪಾಯಿಂಟ್‌’ ಎನ್ನುವುದು ಗುರುದೇಶಪಾಂಡೆ ಮಾತು.

ಚಿರಂಜೀವಿ ಸರ್ಜಾಗೆ ಇದು ಸವಾಲಿನ ಪಾತ್ರವಂತೆ. ‘ನಾನು ಇಲ್ಲಿವರೆಗೆ ಈ ತರಹದ ಒಂದು ಪಾತ್ರ ಮಾಡಿಲ್ಲ. ತುಂಬಾ ಸವಾಲಿನ ಪಾತ್ರ. ಈ ಪಾತ್ರವನ್ನು ಹೇಗೆ ನಿಭಾಯಿಸಬಹುದೆಂಬ ಬಗ್ಗೆ ನಾನು ಕೂಡಾ ಆಲೋಚಿಸುತ್ತಿದ್ದೇನೆ. ಈ ಪಾತ್ರಕ್ಕೆ ಒಂದಷ್ಟು ಪೂರ್ವತಯಾರಿ ಕೂಡಾ ಬೇಕಾಗುತ್ತದೆ’ ಎಂದರು. ಸಮಾಜದಲ್ಲಿ ದಿನನಿತ್ಯ ನಡೆಯುತ್ತಿರುವ ಮೋಸ ಸೇರಿದಂತೆ ಹಲವು ವಿಚಾರಗಳನ್ನಿಟ್ಟುಕೊಂಡು ಕಥೆ ಮಾಡಿದ್ದು, ವಿಭಿನ್ನವಾಗಿದೆ ಎಂಬುದು ಚಿರು ಮಾತು.

Advertisement

ಚಿತ್ರದಲ್ಲಿ ಹರಿಪ್ರಿಯಾ ಹಾಗೂ ಕಾವ್ಯಾ ಶೆಟ್ಟಿ ನಾಯಕಿಯರಾಗಿ ನಟಿಸುತ್ತಿದ್ದಾರೆ. ‘ನೀರ್‌ದೋಸೆ’ ನಂತರ ಹರಿಪ್ರಿಯಾಗೆ ಸಾಕಷ್ಟು ಅವಕಾಶಗಳು ಬಂದರೂ ಅವ್ಯಾವುದನ್ನೂ ಒಪ್ಪಿಕೊಳ್ಳದೇ ಈಗ ‘ಸಂಹಾರ’ ಒಪ್ಪಿಕೊಳ್ಳಲು ಕಾರಣ ಚಿತ್ರದ ಕಥೆ ಹಾಗೂ ಪಾತ್ರವಂತೆ. ಹಾಗಾದರೆ ಆ ಪಾತ್ರವೇನು ಎಂದರೆ ಅದಕ್ಕೆ ಈಗಲೇ ಉತ್ತರಿಸಲು ಹರಿಪ್ರಿಯಾ ರೆಡಿಯಿಲ್ಲ. ‘ನನ್ನ ಪಾತ್ರದ ಬಗ್ಗೆ ಒಂದೇ ಮಾತಲ್ಲಿ ಹೇಳ್ಳೋದು ಕಷ್ಟ. ಅವಳನ್ನು ಹೀಗೆ ಎಂದು ಊಹಿಸಿಕೊಳ್ಳಲು ಆಗದು. ಆ ತರಹದ ಒಂದು ಪಾತ್ರ’ ಎನ್ನುತ್ತಿದ್ದಂತೆ, ಪಕ್ಕದಲ್ಲಿದ್ದ ಗುರುದೇಶಪಾಂಡೆ ‘ಸಾಕು’ ಎಂಬಂತೆ ಕೈ ಸನ್ನೆ ಮಾಡಿದರು.

ಹರಿಪ್ರಿಯಾ ಮಾತಿಗೆ ಬ್ರೇಕ್‌ ಬಿತ್ತು. ಮತ್ತೂಬ್ಬ ನಾಯಕಿ ಕಾವ್ಯಾ ಶೆಟ್ಟಿ ಇಲ್ಲಿ ಪತ್ರಕರ್ತೆಯ ಪಾತ್ರ ಮಾಡುತ್ತಿದ್ದಾರೆ. ಅವರಿಗೂ ಈ ಪಾತ್ರ ಹೊಸದು ಎನಿಸಿ ಒಪ್ಪಿಕೊಂಡರಂತೆ. ಚಿತ್ರವನ್ನು ವೆಂಕಟೇಶ್‌ ಹಾಗೂ ಸುಂದರ್‌ ಕಾಮರಾಜ್‌ ಸೇರಿ ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಜಗದೀಶ್‌ ವಾಲಿ ಛಾಯಾಗ್ರಹಣ, ರವಿ ಬಸ್ರೂರು ಸಂಗೀತವಿದೆ. ಮೊದಲ ಹಂತವಾಗಿ ಮಂಗಳೂರಿನಲ್ಲಿ ಚಿತ್ರೀಕರಣ ನಡೆಯಲಿದೆ.

ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next