ಬೆಂಗಳೂರು:ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪ ಚುನಾವಣೆ ನಂತರ ರಾಜ್ಯದಲ್ಲಿ ಬರ ಕಾಮಗಾರಿ ಕುರಿತು ಪರಿಶೀಲನೆ ನಡೆಸಲು ಸಚಿವರ ತಂಡ ರಚಿಸಲಾಗುವುದು ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಬಹುತೇಕ ಸಚಿವರು ಮತ್ತು ಶಾಸಕರು ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿರುವುದರಿಂದ ಮುಂಬೈ ಕರ್ನಾಟಕ ಭಾಗದಲ್ಲಿ ಬರ ಕಾಮಗಾರಿ ಪರಿಶೀಲನೆ ಕಾರ್ಯ ಮುಂದೂಡಲಾಗಿದೆ. ಚುನಾವಣೆ ಪ್ರಚಾರ ಮುಕ್ತಾಯವಾದ ತಕ್ಷಣ ಸಚಿವರ ತಂಡ ರಚಿಸಲಾಗುವುದು ಎಂದು ಹೇಳಿದರು.
ಆದರೆ, ತಾವು ಬರ ಪರಿಹಾರ ಕಾಮಗಾರಿಯ ಪರಿಶೀಲನೆ ನಿರಂತರವಾಗಿ ನಡೆಸುತ್ತಿದ್ದು ಹಲವು ಜಿಲ್ಲೆಗಳಿಗೆ ಭೇಟಿ ನೀಡಿದ್ದೇನೆ. ಮಂಗಳವಾರವೂ ಚಿಕ್ಕಬಳ್ಳಾಪುರ ಬರ ಕಾಮಗಾರಿ ಪರೀಶೀಲನೆಗೆ ತೆರಳುತ್ತಿದ್ದೇನೆ ಎಂದರು.
ಮರಳು ಮಾಫೀಯಾ ವಿರುದ್ಧ ಶಿಸ್ತು ಕ್ರಮ: ಅಕ್ರಮ ಮರಳು ಗಣಿಗಾರಿಕೆಯಲ್ಲಿ ತೊಡಗಿದ್ದ ತಂಡ ಉಡುಪಿ ಜಿಲ್ಲಾಧಿಕಾರಿ ಮೇಲೆ ಹಲ್ಲೆ ನಡೆಸಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು.
-ಕಾಗೋಡು ತಿಮ್ಮಪ್ಪ, ಕಂದಾಯ ಸಚಿವ