Advertisement

ಅರಸು ಶೋಷಿತ ವರ್ಗಗಳ ಸಮಾಜದ ಧ್ವನಿ

03:22 PM Mar 27, 2017 | Team Udayavani |

ಚಿಂಚೋಳಿ: ರಾಜ್ಯದ ಮಾಜಿ ಮುಖ್ಯಮಂತ್ರಿ ದಿ| ಡಿ. ದೇವರಾಜ ಅರಸು ಸಮಾಜದ ಕಟ್ಟ ಕಡೆಯ ವರ್ಗಗಳ ಉದ್ಧಾರಕ್ಕಾಗಿ ಶ್ರಮಿಸಿದ ಧೀಮಂತ ನಾಯಕ. ಅವರು ಶೋಷಿತ ವರ್ಗಗಳ ಸಮಾಜದ ಧ್ವನಿಯಾಗಿದ್ದರು. ಶಕ್ತಿ ಮತ್ತು ಸಾಧನೆ ಇಲ್ಲದ ಸಮಾಜಕ್ಕೆ ಸ್ಥಾನಮಾನ ನೀಡಿ ಸಾಮಾಜಿಕ ಕ್ರಾಂತಿ ಮಾಡಿದ್ದಾರೆ ಎಂದು ವೈದ್ಯಕೀಯ ಖಾತೆ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಹೇಳಿದರು. 

Advertisement

ತಾಲೂಕಿನ ಸುಲೇಪೇಟ ಗ್ರಾಮದ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯ ಆವರಣದಲ್ಲಿ ರವಿವಾರ ಚಿಂಚೋಳಿ ಮತ್ತು ಸೇಡಂ ಮತಕ್ಷೇತ್ರದ ಡಿ. ದೇವರಾಜ ಅರಸು ಹೋರಾಟ ಸಮಿತಿ ಡಿ.ದೇವರಾಜ ಅರಸು ಜನ್ಮ ಶತಮಾನೋತ್ಸವ ಅಂಗವಾಗಿ ಏರ್ಪಡಿಸಲಾಗಿದ್ದ ಶೋಷಿತ ವರ್ಗಗಳ ಬೃಹತ್‌ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. 

ಡಿ. ದೇವರಾಜ ಅರಸು ಅವರ ರಾಜಕೀಯ ಗರಡಿಯಲ್ಲಿ ಪಳಗಿದ ಡಾ| ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯ್ಲಿ, ಎಸ್‌. ಬಂಗಾರಪ್ಪ ರಾಜಕೀಯ ಕ್ಷೇತ್ರದಲ್ಲಿ ಬೆಳೆಯಲು ಪ್ರಮುಖ ಕಾರಣಭೂತರಾಗಿದ್ದಾರೆ. ಎಲ್ಲರಿಗೂ ಸಾಮಾಜಿಕ ನ್ಯಾಯ ಸಿಗುವಂತಾಗಲು ಶ್ರಮಿಸಿದರು. ಧ್ವನಿ ಇಲ್ಲದ ವ್ಯಕ್ತಿಗೆ ಧ್ವನಿಯಾಗಿದ್ದರು.

ಮಾಜಿ ಪ್ರಧಾನ ಮಂತ್ರಿ ದಿ| ಇಂದಿರಾ ಗಾಂಧಿ ಅವರು ರೂಪಿಸಿದ 20 ಅಂಶಗಳ ಕಾರ್ಯಕ್ರಮಗಳನ್ನು ರಾಜ್ಯದಲ್ಲಿ ಬದ್ಧತೆಯಿಂದ ಅನುಷ್ಠಾನಗೊಳಿಸಿ ಕ್ರಾಂತಿಕಾರಿ ಬದಲಾವಣೆ ತಂದವರು. ಊಳುವವವನೆ ಒಡೆಯ, ಜೀತ ಪದ್ಧತಿ ನಿವಾರಣೆ, ಋಣ ಮುಕ್ತ ಕಾಯಿದೆ ಜಾರಿಗೊಳಿಸಿದರು ಎಂದು ಹೇಳಿದರು. 

ಡಿ. ದೇವರಾಜ ಅರಸು ಅವರು 70ರ ದಶಕದಲ್ಲಿ ಬಡವರು ಶ್ರೀಮಂತರಿಂದ ಪಡೆದ ಸಾಲ ಮನ್ನಾ ಮಾಡಿದ್ದರು. ಎಲ್ಲ ಸಮಾಜದ ನಾಯಕರಾಗಿದ್ದ ಅವರ ಯೋಜನೆಗಳು ಸಾಮಾಜಿಕ ಬದ್ದತೆ ಮತ್ತು ನಿಸ್ವಾರ್ಥತೆ ಕಳಕಳಿಯಿಂದ ಕೂಡಿದ್ದವು ಎಂದು ಹೇಳಿದರು. ದೇಶದಲ್ಲಿ ರಾಜಕೀಯ ಅಲ್ಲೋಲ ಕಲ್ಲೋಲ ನಡೆಯುತ್ತಿದೆ.

Advertisement

ವ್ಯಾಟ್ಸ್‌ ಆ್ಯಪ್‌ ಸೇರಿದಂತೆ ಸಾಮಾಜಿಕ ಜಾಲ ತಾಣಗಳಲ್ಲಿ ಸುಳ್ಳು ಸುದ್ದಿ ಹರಡಿಸಿ ಮತ ಪಡೆಯುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಮತದಾರರೇ ಮಾಲೀಕರು. ಚುನಾಯಿತ ಜನಪ್ರತಿನಿಧಿಗಳು ಸೇವಕರು. ಭ್ರಷ್ಟರಿಗೆ ಬೆಂಬಲ ನೀಡಬಾರದು ಎಂದು ಹೇಳಿದರು. 

ಮಾಜಿ ಮುಖ್ಯಮಂತ್ರಿ ದಿ| ದೇವರಾಜ ಅರಸು ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಜಾರಿಗೆ ತಂದ ಋಣಮುಕ್ತ ಕಾಯಿದೆಯನ್ನು ಸುಲೇಪೇಟ ಗ್ರಾಮದಲ್ಲಿಯೇ ಜಾರಿಗೊಳಿಸಿದ್ದರು ಎಂದು ಹೇಳಿದರು. ಸಂಸದೀಯ ಕಾರ್ಯದರ್ಶಿ ಡಾ| ಉಮೇಶ ಜಾಧವ, ತಿಪ್ಪಣ್ಣಪ್ಪ ಕಮಕನೂರ, ರೇಣುಕ ಚವ್ಹಾಣ, ಆಂಧ್ರಪ್ರದೇಶ ಶಾಸಕ ಆರ್‌.ಕೃಷ್ಣಯ್ಯ, ಬಸವರಾಜ ಸಜ್ಜನಶೆಟ್ಟಿ, ನಾಗೇಶ್ವರ ಮಾಲಿಪಾಟೀಲ, ಸುಭಾಷ ನಿಷ್ಟಿ,

ಸರೋಜನಿ ಘಂಟಿ, ನರೇಶ ಮಲಕೂಡ, ರುದ್ರಶೆಟ್ಟಿ ಪಡಶೆಟ್ಟಿ, ಲಕ್ಷಣ ಆವಂಟಿ, ವಿಶ್ವನಾಥ ಪಾಟೀಲ, ಬಂಡಪ್ಪ ಪೂಜಾರಿ, ಮಲಕಪ್ಪ ಬೀರಾಪುರ, ಜಗದೀಶ ಪಾಟೀಲ, ಮಸ್ತಾನ್‌ ಅಲಿ ಪಟ್ಟೇದಾರ ಇದ್ದರು. ಬಸವರಾಜ ಕೆರೋಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಗನ್ನಾಥ ಬೆಡಕಪಳ್ಳಿ ಸ್ವಾಗತಿಸಿದರು. ನ್ಯಾಯವಾದಿ ಬಸವರಾಜ ಗಿರಿ ನಿರೂಪಿಸಿದರು. ಮಹಾದೇವಪ್ಪ ಗೋಣಿ ವಂದಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next