ಹೈದರಾಬಾದ್:ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಟಾಲಿವುಡ್ ನ ಯಶಸ್ವಿ ಹಿರಿಯ ನಿರ್ದೇಶಕರಾದ ಕೋಡಿ ರಾಮಕೃಷ್ಣ ಅವರು ಶುಕ್ರವಾರ ಹೈದರಾಬಾದ್ ನಲ್ಲಿ ವಿಧಿವಶರಾಗಿದ್ದಾರೆ.
ತೀವ್ರ ಉಸಿರಾಟದ ತೊಂದರೆಯಿಂದಾಗಿ ಗುರುವಾರ ಗಾಚಿಬೌಲಿಯಲ್ಲಿರುವ ಎಐಜಿ ಆಸ್ಪತ್ರೆಗೆ ರಾಮಕೃಷ್ಣ ಅವರನ್ನು ದಾಖಲಿಸಲಾಗಿತ್ತು. ನುರಿತ ವೈದ್ಯರ ತಂಡ ಚಿಕಿತ್ಸೆ ನೀಡಿದ್ದರು ಕೂಡಾ ಚಿಕಿತ್ಸೆ ಫಲಕಾರಿಯಾಗದೆ ಇಂದು ಮಧ್ಯಾಹ್ನ ವಿಧಿವಶರಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
2016ರಲ್ಲಿ ತೆರೆಕಂಡಿದ್ದ ನಾಗರಹಾವು ಸಿನಿಮಾವನ್ನು ಕೋಡಿ ರಾಮಕೃಷ್ಣ ನಿರ್ದೇಶಿಸಿದ್ದರು. ತೆಲುಗು, ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಸೇರಿದಂತೆ ಸುಮಾರು 30 ವರ್ಷಗಳ ಕಾಲ ನೂರಕ್ಕೂ ಅಧಿಕ ಸಿನಿಮಾವನ್ನು ನಿರ್ದೇಶಿಸಿದ್ದ ಹೆಗ್ಗಳಿಕೆ ಕೋಡಿ ರಾಮಕೃಷ್ಣ ಅವರದ್ದು.
ತೆಲುಗು ಸಿನಿಮಾರಂಗಕ್ಕೆ ನೀಡಿದ್ದ ಕೊಡುಗೆಯನ್ನು ಪರಿಗಣಿಸಿ 2012ರಲ್ಲಿ ಕೋಡಿ ರಾಮಕೃಷ್ಣ ಅವರಿಗೆ ರಘುಪತಿ ವೆಂಕಯ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು. ಮೂಲತಃ ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಪಾಲಾಕೊಲ್ಲು ಗ್ರಾಮದಲ್ಲಿ ಕೋಡಿ ರಾಮಕೃಷ್ಣ ಜನಿಸಿದ್ದರು.
1982ರಲ್ಲಿ ತೆಲುಗಿನ ಇಂಟ್ಲೋ ರಾಮಯ್ಯ, ವಿಡಿಲ್ಲೋ ಕೃಷ್ಣಯ್ಯ, ಮಂಗಮ್ಮಾಗಾರಿ ಮಾನವುಡು, ಆಹುತಿ, ಸ್ಟೇಶನ್ ಮಾಸ್ಟರ್, ಮುದ್ದುಲಾ ಮಾವಯ್ಯ, ಪೆಲ್ಲಿ, ದೋಂಗಾಟಾ, ಆರುಂಧತಿ, ಅಮ್ಮೋರು, ದೇವಿ ಸೇರಿದಂತೆ ಹಲವು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನಿರ್ದೇಶಿಸಿದ್ದರು.