ಕುಷ್ಟಗಿ: ಹುಲ್ಲು ಕಡ್ಡಿ ಬೆಳೆಯದ ಸವಳು ಭೂಮಿಯಲ್ಲಿ ಸಿಮೆಂಟ್ ರಿಂಗ್ ಬಳಸಿ ಪಾಲಿಹೌಸ್ ನಲ್ಲಿ ಇಸ್ರೇಲ್ ತಂತ್ರಜ್ಞಾನ ಆಧಾರಿತ ದಾಳಿಂಬೆ ಬೆಳೆ ಪ್ರಯೋಗ ಯಶಸ್ವಿಯಾಗಿದೆ. ನಿಡಶೇಸಿ ತೋಟಗಾರಿಕೆ ಕ್ಷೇತ್ರ ಹಲವು ಪ್ರಯೋಗಗಳಿಗೆ ಸಾಕಾರವಾಗಿದೆ.
ಕುಷ್ಟಗಿ ತಾಲೂಕಿನ ನಿಡಶೇಸಿಯ ರಾಜ್ಯ ವಲಯದ ಕರ್ನಾಟಕ ರಾಜ್ಯ ತೋಟಗಾರಿಕೆ ಅಭಿವೃದ್ಧಿ ಏಜೆನ್ಸಿಯ ಉಸ್ತುವಾರಿಯಲ್ಲಿ ಇಸ್ರೇಲ್ ತಂತ್ರಜ್ಞಾನ ಮಾದರಿ ತೋಟಗಾರಿಕೆ ಕ್ಷೇತ್ರ ಹಲವು ಪ್ರಯೋಗಗಳಿಗೆ ಸಾಕ್ಷಿಯಾಗಿದೆ.
ಈ ಸವಳು ಭೂಮಿಯಲ್ಲಿ ನೀರು ಇಂಗದೇ, ಯಾವ ಬೆಳೆಯೂ ಬೆಳೆಯದ ಬರಡು ಭೂಮಿಯಲ್ಲಿ ಬೆಳೆ ತೆಗೆಯಬಹುದಾಗಿದೆ. ಸವಳು, ಜವಳು ಭೂಮಿಯಲ್ಲಿ ಏನೂ ಬೆಳೆಯುವುದಿಲ್ಲ. ಆದರೆ ನಿಡಶೇಸಿ ತೋಟಗಾರಿಕೆ ಕ್ಷೇತ್ರದಲ್ಲಿ 58 ಎಕರೆ ಪ್ರದೇಶದಲ್ಲಿ 20 ಎಕರೆ ಸವಳು ಭೂಮಿ ಇದೆ. ಈ ಭೂಮಿ ಖಾಲಿ ಬಿಡದೇ ಪರ್ಯಾಯ ವಿಧಾನಗಳ ಮೂಲಕ ಬರಡು ಭೂಮಿಯಲ್ಲಿ ಸಸ್ಯ ಕ್ಷೇತ್ರ ಅರಳಿಸಲಾಗುತ್ತಿದೆ.
ಈ ಸವಳು ಭೂಮಿಯಲ್ಲಿ ಪಾಲಿಹೌಸ್ ಅಳವಡಿಸಿಕೊಂಡು ಕಾಯಿಪಲ್ಲೆ ಬೆಳೆ ಈಗಾಗಲೇ ಫಲ ನೀಡಿದೆ. ಇದೇ ಪ್ರಯೋಗ ಮುಂದುವರಿದು ಪ್ಲಾಂಟೇಷನ್ ಬೆಳೆ ಬೆಳೆಯಲು ಪಾಲಿಹೌಸ್ ನಲ್ಲಿ ಸಿಮೆಂಟ್ ರಿಂಗ್ ಬಳಸಿ 10 ಗುಂಟೆ ವಿಸ್ತೀರ್ಣದಲ್ಲಿ 300 ಗಿಡ ಬೆಳೆಯಲಾಗಿದೆ. ದಾಳಿಂಬೆ ಗಿಡದ ಬೇರು, ಒಂದೂವರೆಯಿಂದ ಎರಡೂವರೆ ಅಡಿಯವರೆಗೆ ಹರಡಿಕೊಳ್ಳುತ್ತದೆ. ಹೀಗಾಗಿ ಸಿಮೆಂಟ್ ರಿಂಗ್ ನಲ್ಲಿ ಬೇರೆ ಜಮೀನಿನಿಂದ ಕೆಂಪು ( ಮಸಾರಿ) ಮಣ್ಣು, ಜೊತೆಗೆ ಕೊಟ್ಟಿಗೆ ಗೊಬ್ಬರ, ಮೇಲು ಗೊಬ್ಬರ ಬೆರೆಸಿ ಹನಿ ನೀರಾವರಿ ಆಧರಿಸಿ ಸೂಪರ್ ಭಗವಾ( ಕೊಪ್ಪಳ ಸ್ಪೆಷಲ್) ಸುಧಾರಿತ ತಳಿ ದಾಳಿಂಬೆ ಬೆಳೆ ನಾಟಿ ಮಾಡಲಾಗಿದೆ.
ಬೆಳೆದ ದಾಳಿಂಬೆ ಉತ್ತಮವಾಗಿ ಬೆಳೆದಿದ್ದು ರೋಗ ರಹಿತವಾಗಿವೆ. ಈ ಗಿಡಗಳಿಗೆ ಕಸಿ ಕಟ್ಟುವ (ಗೂಟಿ) ಸಸಿಗಳನ್ನು 20 ರಿಂದ 25 ದಿನಗಳವರೆಗೆ ಸಸಿಗಳನ್ನು ಬೆಳೆಸಿ ಕಡ್ಡಿ ಕಟ್ ಮಾಡಲಾಗುತ್ತಿದೆ. ಕಟ್ ಮಾಡಿದ ಕಸಿ ಸಸಿಗಳನ್ನು ನೇರವಾಗಿ ನಾಟಿ ಮಾಡಬಹುದು ಇಲ್ಲವೇ ನರ್ಸರಿಯಾಗಿ ಬೆಳೆಸಿ ರೈತರಿಗೆ ಮಾರಾಟ ಮಾಡಬಹುದು. ನೇರವಾಗಿ ಕಸಿ ಸಸಿಯಾಗಿದ್ದಲ್ಲಿ 2ರಿಂದ 3 ರೂ. ನರ್ಸರಿ ಯಲ್ಲಿ ಬೆಳೆಸಿದರೆ 25 ರೂ.ದಿಂದ 30 ರೂ.ಗೆ ಮಾರಾಟ ಮಾಡಬಹುದಾಗಿದೆ. ಇದರಿಂದ ಗಿಡ ಬೆಳೆದಂತೆ ಕಸಿ ಸಸಿಗಳನ್ನು ಬೆಳೆಸಬಹುದು ಇಲ್ಲವೇ ಹಣ್ಣಿಗೆ ಬಿಡಬಹುದು. ಈ ಪಾಲಿಹೌಸ್ ನಲ್ಲಿ ಕೀಟ ಹಾಗೂ ರೋಗ ಮುಕ್ತವಾಗಿರುತ್ತಿವೆ ನಿರೀಕ್ಷಿತ ಇಳುವರಿ ಪಡೆಯಬಹುದಾಗಿದ್ದು ಗುಣಮಟ್ಟದ ದಾಳಿಂಬೆ ಸಸಿಗಳಿಗೆ ಸಂಪರ್ಕಿಸಬಹುದಾಗಿದೆ ( 9449630918) ಎನ್ನುತ್ತಾರೆ ಸಹಾಯಕ ತೋಟಗಾರಿಕೆ ಅಧಿಕಾರಿ ಆಂಜನೇಯ ದಾಸರ್.
ಇದನ್ನೂ ಓದಿ:
ಕೋಲ್ಕತಾ ಎಲೆ ಬೆಳೆಸುವ ಪ್ಲಾನ್
ಇದೇ ಮಾದರಿಯಲ್ಲಿ ಪಾಲಿಹೌಸ್ ಇಲ್ಲದೇ ನಿಂಬೆ, ಡ್ರಾಗನ್ ಫ್ರುಟ್ ಬೆಳೆಸಲಾಗಿದೆ. ಇನ್ಮುಂದೆ ಕೊಟ್ಟಿಗೆ ಗೊಬ್ಬರ, ಮಣ್ಣು ಬೆರೆಸಿ ಪಾಲಿಹೌಸ್ ನಲ್ಲಿ ಇಲ್ಲವೇ ನೆಟ್ ಪರದೆ ಬಳಸಿ ಎಲೆಬಳ್ಳಿ ಬೆಳೆಸುವ ತಯಾರಿ ನಡೆದಿದೆ. ಇದರಲ್ಲಿಯೇ ಕಲ್ಕತ್ತಾ ಎಲೆ ಬೆಳೆಸಲಾಗುವುದು ಈ ಪ್ರಯೋಗ ಯಶಸ್ವಿಯಾದರೆ ಕ್ಷೇತ್ರ ವಿಸ್ತರಿಸುವ ಯೋಜನೆ ಇದೆ.
ಇದಕ್ಕೆಲ್ಲಾ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಕೃಷ್ಣಾ ಉಕ್ಕುಂದ, ಸಹಾಯಕ ತೋಟಗಾರಿಕೆ ನಿರ್ದೇಶಕ ವಿನಾಯಕ ರೆಡ್ಡಿ ಮಾರ್ಗದರ್ಶನ ದಲ್ಲಿ ಕೈಗೊಳ್ಳಲಾಗಿದೆ. ಇದೇ ಸವಳು ಭೂಮಿಯಲ್ಲಿ ಎರಡು ಎಕರೆಯಲ್ಲಿ ಹೊಂಡ ನಿರ್ಮಿಸಿ ಹೆಡ್ ಸ್ನೇಕ್ ಸೇರಿದಂತೆ ವಿವಿಧ ಜಾತಿಯ ಮೀನು ಸಾಕಲಾಗುತ್ತಿದೆ ಎಂದು ಆಂಜನೇಯ ದಾಸರ್ ಅವರು ಉದಯವಾಣಿ ಮಾಹಿತಿ ನೀಡಿದರು.
-ಮಂಜುನಾಥ ಮಹಾಲಿಂಗಪುರ