ಮಂಗಳೂರು: ಭಾವೈಕ್ಯ, ಸ್ಫೂರ್ತಿ, ಸಂಭ್ರಮದ ಪ್ರತೀಕವಾದ ಓಣಂ ಹಬ್ಬದ ಆಚರಣೆಯೊಂದಿಗೆ ನಮ್ಮ ಬದುಕಿನ ಯೋಚನೆಯನ್ನು ಬದಲಾಯಿಸಿ, ಶುದ್ಧ ಚಿಂತನೆಯಿಂದ ಯಶಸ್ವಿ ಬದುಕಿನ ನಿರ್ಮಾಣದತ್ತ ನಮ್ಮ ಗುರಿ ರೂಪಿಸಬೇಕು ಎಂದು ನಗರದ ಕರಾವಳಿ ಕಾಲೇಜುಗಳ ಸಮೂಹದ ಆಡಳಿತ ಮಂಡಳಿ, ಜಿ.ಆರ್. ಎಜುಕೇಶನ್ ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ ಎಸ್. ಗಣೇಶ್ ರಾವ್ ತಿಳಿಸಿದರು.
ಅವರು ಶನಿವಾರ ನಗರದ ಕರಾವಳಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಆಯೋಜಿಸಲಾದ ಓಣಂ ಸಂಭ್ರಮಾಚರಣೆ ಯನ್ನು ಉದ್ಘಾಟಿಸಿದರು.
ಪ್ರಥಮವಾಗಿ ಓಣಂ ಆಚರಣೆಗೆ ನಾಂದಿ ಹಾಡಿದ ಕರಾವಳಿ ಕಾಲೇಜು ಸತತ 21 ವರ್ಷಗಳಿಂದ ಈ ಹಬ್ಬವನ್ನು ಅತ್ಯಂತ ಸಡಗರದಿಂದ ಆಚರಿಸುತ್ತಿದೆ. ವಿದ್ಯಾರ್ಥಿಗಳು ತಮ್ಮಲ್ಲಿ ಅಡಗಿರುವ ಜಾಣ್ಮೆ, ಪ್ರತಿಭೆ ಹಾಗೂ ಆತ್ಮವಿಶ್ವಾಸದಿಂದ ಸುಪ್ತ ಶಕ್ತಿಯನ್ನು ಜಾಗೃತಗೊಳಿಸಿ, ಉತ್ತಮ ಸಮಾಜದ ನಿರ್ಮಾಣಕ್ಕೆ ಜೀವನವನ್ನು ಮುಡಿಪಾಗಿರಿಸಬೇಕು ಎಂದರು.
ಕಾರ್ಯಕ್ರಮದ ಆರಂಭದಲ್ಲಿ ಸಾಂಪ್ರದಾಯಿಕ ಮೆರವಣಿಗೆ ಆಯೋಜಿಸಲಾಗಿತ್ತು. ಪೂಕ್ಕಳಂ ಹಾಗೂ ಕಾಲುದೀಪಗಳಿಂದ ಅಲಂಕೃತವಾದ ಕಾಲೇಜು ಆವರಣ ಗಮನ ಸೆಳೆಯಿತು. ಕರಾವಳಿ ಕಾಲೇಜುಗಳ ಸಮೂಹದ ನಿರ್ದೇಶಕಿ ಲತಾ ಜಿ. ರಾವ್, ಕರಾವಳಿ ಕಾಲೇಜುಗಳ ಸಮೂಹದ ಪಾಂÅಶುಪಾಲರು ಉಪಸ್ಥಿತರಿದ್ದರು.
ಐಶ್ವರ್ಯಾ ಸ್ವಾಗತಿಸಿದರು. ಅಪೂರ್ವಾ ಆಳ್ವ ವಂದಿಸಿದರು. ಅಂಜುಮ್ ಕಾರ್ಯಕ್ರಮ ನಿರೂಪಿಸಿದರು.