Advertisement

Karnataka: ಐದು ಗ್ಯಾರಂಟಿಗಳ ಯಶಸ್ವಿ ಅನುಷ್ಠಾನ: ರಾಜ್ಯಪಾಲರ ಮೆಚ್ಚುಗೆ

11:38 PM Jan 26, 2024 | Team Udayavani |

ಬೆಂಗಳೂರು: ರಾಜ್ಯ ಸರಕಾರ ತನ್ನ ಮಹತ್ವಾಕಾಂಕ್ಷಿ ಐದು ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವ ಮೂಲಕ ಬದ್ಧತೆ ಮೆರೆದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌, ಸಂವಿಧಾನದ ಆಶಯಗಳನ್ನು ಸಮರ್ಪಕವಾಗಿ ಸಾಕಾರಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಶ್ರಮಿಸುತ್ತಿದೆ ಎಂದು ಸರ ಕಾರದ ಸಾಧನೆಯ ಮಾಹಿತಿಯನ್ನು ಬಿಚ್ಚಿಟ್ಟರು.

Advertisement

75ನೇ ಗಣರಾಜ್ಯೋತ್ಸವದ ಅಂಗ ವಾಗಿ ಬೆಂಗಳೂರು ನಗರ ಜಿಲ್ಲಾಡಳಿತ ಮಾಣಿಕ್‌ ಶಾ ಪರೇಡ್‌ ಮೈದಾನದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಗಣರಾಜ್ಯೋತ್ಸವ ಸಮಾರಂಭದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿದ ಅವರು ರಾಜ್ಯದ ಜನತೆಯನ್ನುದ್ದೇಶಿಸಿ ಮಾತನಾಡಿದರು.

ನಮ್ಮ ಸಂವಿಧಾನ ನಾಗರಿಕರಿಗೆ ನ್ಯಾಯ, ಸ್ವಾತಂತ್ರ್ಯ ಹಾಗೂ ಸಮಾನತೆಯ ಅವಕಾಶ ಒದಗಿಸುವುದ ರೊಂದಿಗೆ, ದೇಶದ ಸಮಗ್ರತೆ, ಏಕತೆ ಕಾಪಾಡುವ ಮತ್ತು ಸ್ವಾಭಿಮಾನದ ಜೀವನ ಒದಗಿಸುವ ಧ್ಯೇಯ ಹೊಂದಿದೆ. ತಮ್ಮ ಏಳಿಗೆಯೊಂದಿಗೆ ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ ನೀಡಲು ಸಂವಿಧಾನ ಅವಕಾಶ ಕಲ್ಪಿಸಿದೆ. ಸಂವಿಧಾನದ ಈ ಆಶಯ ಸಾಕಾರಗೊಳಿಸಲು ಸರಕಾರ ಶ್ರಮಿಸುತ್ತಿರುವುದಾಗಿ ರಾಜ್ಯಪಾಲರು ತಿಳಿಸಿದರು.

ರಾಜ್ಯ ಸರಕಾರ ಜಾರಿಗೊಳಿಸಿರುವ ಐದು ಗ್ಯಾರಂಟಿ ಯೋಜನೆಗಳು ಸೇರಿ ವಿವಿಧ ಯೋಜನೆಗಳ ಬಗ್ಗೆ ರಾಜ್ಯಪಾಲರು ತಮ್ಮ ಭಾಷಣದಲ್ಲಿ ಬೆಳಕು ಚೆಲ್ಲಿದರು. ನನ್ನ ಸರಕಾರ ಐದು ಗ್ಯಾರಂಟಿಗಳಾದ ಶಕ್ತಿ ಯೋಜನೆ, ಅನ್ನಭಾಗ್ಯ, ಗೃಹಜ್ಯೋತಿ, ಗೃಹಲಕ್ಷ್ಮೀ ಮತ್ತು ಯುವನಿಧಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿ ಬದ್ಧತೆಯನ್ನು ಮೆರೆದಿದೆ ಎಂದು ತಿಳಿಸುವುದರ ಜತೆಗೆ 195 ಬರ ಪೀಡಿತ ತಾಲೂಕುಗಳಲ್ಲಿ ಬರ ಪರಿಹಾರ ಮತ್ತು ಪರಿಹಾರ ಕ್ರಮ ಕೈಗೊಳ್ಳಲು ಎನ್‌ಡಿಆರ್‌ಫ್ನಿಂದ ಅನುದಾನ ಕೋರಲಾಗಿದೆ ರಾಜ್ಯಪಾಲರು ಹೇಳಿದರು.

ಬೆಳೆ ಸಮೀಕ್ಷೆ: ಶೇ. 96.85 ಪ್ರಗತಿ
ಬರಗಾಲ ಘೋಷಿತ ತಾಲೂಕುಗಳಲ್ಲಿ ಪ್ರತಿ ರೈತನಿಗೆ 2000 ರೂ. ವರೆಗಿನ ಇನ್‌ಪುಟ್‌ ಸಬ್ಸಿಡಿಯನ್ನು ಮಧ್ಯಂತರ ಪರಿಹಾರವಾಗಿ ಘೋಷಿಸಲಾಗಿದ್ದು 30 ಲಕ್ಷ ರೈತರಿಗೆ 580 ಕೋಟಿ ರೂ.ಬಿಡುಗಡೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಜನ, ಜಾನುವಾರುಗಳಿಗೆ ಕುಡಿಯುವ ನೀರೊದಗಿಸಲು ಸರಕಾರ ಅಗತ್ಯ ಕ್ರಮ ಕೈಗೊಂಡಿದೆ. ಬೆಳೆ ಸಮೀಕ್ಷೆಯಲ್ಲಿ ಶೇ. 96.85 ಪ್ರಗತಿ ಸಾಧಿಸಲಾಗಿದೆ ಎಂದು ಹೇಳಿದರು.

Advertisement

ಡಾ| ಪುನೀತ್‌ ರಾಜ್‌ಕುಮಾರ್‌ ಹೃದಯ ಜ್ಯೋತಿ ಯೋಜನೆ ಯಡಿ ಸಾರ್ವಜನಿಕ ಸ್ಥಳಗಳಲ್ಲಿ ಹೃದಯಾಘಾತದಿಂದ ಸಂಭವಿಸುವ ಮರಣ ತಪ್ಪಿಸಲು ಅಟೋಮೆಟೆಡ್‌ ಎಕ್ಸ್‌ಟರ್ನಲ್‌ ಡಿಪೈಬ್ರಿಲೇಟರ್‌ ಸಾಧನ ಅಳವಡಿಸಲು ಯೋಜನೆ ರೂಪಿಸಲಾಗು ತ್ತಿದೆ ಎಂದು ರಾಜ್ಯಪಾಲರು ಹೇಳಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ರಾಜ್ಯಪಾಲರ ಭಾಷಣದ ಪ್ರಮುಖ ಅಂಶಗಳು
 2023-24ರ ಸಾಲಿನಲ್ಲಿ 35 ಲಕ್ಷಕ್ಕಿಂತ ಹೆಚ್ಚಿನ ರೈತರಿಗೆ 25 ಸಾವಿರ ಕೋಟಿ ರೂ ಸಾಲ ವಿತರಣೆ ಮಾಡುವ ಗುರಿ ಹೊಂದಲಾಗಿದೆ. ಈ ಪೈಕಿ 17.24 ಲಕ್ಷ ರೈತರಿಗೆ 13,672.74 ಕೋಟಿಗಳ ಬೆಳೆ ಸಾಲ ವಿತರಿಸಲಾಗಿದೆ. ಅಂದರೆ ಹಣಕಾಸು ವರ್ಷದ ಕೊನೆಯ ತ್ತೈಮಾಸಿಕ ಬಂದಿದ್ದರೂ ರೈತರ ಸಾಲ ವಿತರಣೆಯಲ್ಲಿ ಶೇ. 50 ಮಾತ್ರ ಗುರಿ ತಲುಪಲಾಗಿದೆ.
 ರಾಜ್ಯದ 44 ಯೋಜನೆಗಳನ್ನು ಡಿಬಿಟಿಗೆ ಸಂಯೋಜಿಸಿರುವುದಿಂದ 2.54 ಕೋಟಿ ಜನರಿಗೆ 10,035 ಕೋಟಿಗಳ ಆರ್ಥಿಕ ನೆರವು ತಲುಪಿಸಲಾಗಿದೆ. ಜಲ ಸಂಪನ್ಮೂಲ ಇಲಾಖೆಗೆ 16,735.49 ಕೋಟಿ ರೂ.ಅನುದಾನ ಒದಗಿಸಲಾಗಿದ್ದು 9,223.24 ಕೋಟಿ ರೂ.ಗಳ ಆರ್ಥಿಕ ಪ್ರಗತಿ ಸಾಧಿಸಲಾಗಿದೆ. 31,117 ಎಕರೆಗೆ ನೀರಾವರಿ ಸಾಮರ್ಥ್ಯ ಕಲ್ಪಿಸಲಾಗಿದೆ.
 ಅನೀಮಿಯಾ ಮುಕ್ತ ರಾಜ್ಯವನ್ನಾಗಿಸಲು 185.74 ಕೋಟಿ ರೂ ವೆಚ್ಚದಲ್ಲಿ ಅನಿಮಿಯಾ ಮುಕ್ತ ಪೌಷ್ಠಿಕ ಕರ್ನಾಟಕ ಯೋಜನೆ ಜಾರಿ. 108 ಆರೋಗ್ಯ ಕವಚ ಯೋಜನೆಯಡಿ 262 ಹೊಸ ಅಂಬ್ಯುಲೆನ್ಸ್‌ ಸೇರ್ಪಡೆಗೆ ಕ್ರಮ.
 ಬೆಂಗಳೂರಿನ ಮುಖ್ಯ ರಸ್ತೆಗಳ ಸುಸ್ಥಿರ ಅಭಿವೃದ್ಧಿಗೆ 2000 ಕೋಟಿ ರೂ.ಗಳ ವೈಟ್‌ ಟಾಪಿಂಗ್‌ ಟೆಂಡರ್‌ ಕರೆಯುವ ಪ್ರಕ್ರಿಯೆಗೆ ಚಾಲನೆ. ಬೆಂಗಳೂರಿನ ಆಯ್ದ ಸ್ಥಳಗಳಲ್ಲಿ ಸುರಂಗ ರಸ್ತೆ ನಿರ್ಮಾಣಕ್ಕೆ ಯೋಜನೆ. ಪ್ರಾಯೋಗಿಕವಾಗಿ 2 ಕಿ.ಮೀ. ವಿಸ್ತೀರ್ಣದ ಸುರಂಗ ರಸ್ತೆಯ ಡಿಪಿಆರ್‌ ತಯಾರಿಸುವ ಪ್ರಕ್ರಿಯೆಗೆ ಚಾಲನೆ.
 ಕಳೆದ 8 ತಿಂಗಳಲ್ಲಿ 1,148 ಹೊಸ ಬಸ್‌ಗಳ ಸೇರ್ಪಡೆ. 165 ಬಂಡವಾಳ ಹೂಡಿಕೆಗಳಿಂದ 45.325 ಕೋಟಿಗಳ ಬಂಡವಾಳ ಹೂಡಿಕೆ, 42,292 ಉದ್ಯೋಗ ಸೃಷ್ಟಿ. ಎತ್ತಿನಹೊಳೆ, ಮೇಕೆದಾಟು, ಕೃಷ್ಣಾ ಮೇಲ್ದಂಡೆ ಯೋಜನೆಗೆ ಆದ್ಯತೆ.

Advertisement

Udayavani is now on Telegram. Click here to join our channel and stay updated with the latest news.

Next