Advertisement

ಸಮುದಾಯ ಸಹಕಾರದಿಂದ ಸುಸೂತ್ರ ಚುನಾವಣೆ: ಎಸ್‌ಪಿ ರವಿಕಾಂತೇ ಗೌಡ

10:01 AM May 17, 2018 | Team Udayavani |

ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಗೆ ನಾಲ್ಕು ತಿಂಗಳ ಹಿಂದಷ್ಟೇ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಬಂದವರು ಬಿ.ಆರ್‌. ರವಿಕಾಂತೇಗೌಡ. ಜಿಲ್ಲೆಗೆ ಹೊಸಬರಾಗಿದ್ದರೂ ಶಾಂತಿಯುತ ಚುನಾವಣೆ ನಡೆಯುವಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದಾರೆ. ಜಿಲ್ಲೆಯಲ್ಲಿ ಯಾವುದೇ ಗೊಂದಲ ಅಥವಾ ಅಹಿತಕರ ಘಟನೆಗಳಿಗೆ ಅವಕಾಶ ನೀಡದೆ ಚುನಾವಣೆ ಸುಗಮವಾಗಿ ನಡೆಯುವುದಕ್ಕೆ ಉತ್ತಮ ರೀತಿಯ ಸಹಕಾರ ಕೊಟ್ಟ ಇಲ್ಲಿನ ಜನತೆಯನ್ನು ಅವರು ಮುಕ್ತ ಕಂಠದಿಂದ ಶ್ಲಾ ಸಿದ್ದಾರೆ. ಬೆಳಗಾವಿಯಲ್ಲಿ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಸೇವೆಯಲ್ಲಿದ್ದ ರವಿಕಾಂತೇ ಗೌಡ ಅವರು ಜಿಲ್ಲೆಗೆ ಆಗಮಿಸಿದ್ದ ಸಂದರ್ಭದಲ್ಲಿ ಕೆಲವು ಕಡೆ ಸಂಘರ್ಷಮಯ ಸನ್ನಿವೇಶ ಇತ್ತು. ಸಹಜವಾಗಿ ಅವರ ಮುಂದೆ ಸಾಕಷ್ಟು ಸವಾಲುಗಳಿದ್ದವು. ಆದರೆ ತಮ್ಮ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದರ ಬಗ್ಗೆ ಸಂತಸದಿಂದಿರುವ ಎಸ್‌ಪಿ ರವಿಕಾಂತೇ ಗೌಡ ಅವರು ಗಣೇಶ್‌ ಮಾವಂಜಿ ಅವರ ಜತೆ ನಡೆಸಿದ ಮಾತುಕತೆ ಇಲ್ಲಿದೆ.

Advertisement

ಚುನಾವಣೆಯ ನಿರ್ವಹಣೆ ಬಗ್ಗೆ ಏನೆನ್ನುತ್ತೀರಿ?
ಜಿಲ್ಲೆಯಲ್ಲಿ ಶಾಂತಿಯುತವಾಗಿ ಚುನಾವಣೆ ಪೂರ್ಣಗೊಂಡ ಬಗ್ಗೆ ನಿಜಕ್ಕೂ ಖುಷಿ ಇದೆ. ಈ ಯಶಸ್ಸಿನ ಹಿರಿಮೆ ಪೊಲೀಸ್‌ ಸಿಬಂದಿ, ಚುನಾವಣ ಅಧಿಕಾರಿಗಳಿಗೆ ಸಲ್ಲಬೇಕು. ಎಲ್ಲ ಪಕ್ಷಗಳ ನಾಯಕರು ತಮ್ಮ ಪಕ್ಷಗಳ ಕಾರ್ಯಕರ್ತರು ಎಲ್ಲೂ ಹದ್ದು ಮೀರಿ ವರ್ತಿಸದಂತೆ ನಿಗಾ ವಹಿಸಿದ್ದು ಕೂಡ ಇದಕ್ಕೆ ಕಾರಣವಾಯಿತು. ಚುನಾವಣೆ ಸುಸೂತ್ರವಾಗಿ ನಡೆಯುವಲ್ಲಿ ಸಹಕರಿಸಿದ ಎಲ್ಲರನ್ನೂ ಅಭಿನಂದಿಸುವೆ.

ಚುನಾವಣೆಯ ವೇಳೆ ಯಾವ ಸಮಸ್ಯೆಗಳನ್ನು ಎದುರಿಸಿದಿರಿ?
ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲೂ ಹೇಳಿಕೊಳ್ಳುವಂತಹ ಸಮಸ್ಯಗಳೇನೂ ಉಂಟಾಗಿಲ್ಲ. ಬಂಟ್ವಾಳ ತಾಲೂಕು ಸೂಕ್ಷ್ಮ ಕ್ಷೇತ್ರವಾದ್ದರಿಂದ ಅಲ್ಲಿ ಹೆಚ್ಚು ನಿಗಾ ವಹಿಸಬೇಕಾಯಿತು. ಒಂದೆರಡು ಕಡೆ ಸಣ್ಣಪುಟ್ಟ ಅಹಿತರ ಘಟನೆಗಳು ನಡೆದರೂ ಆರಂಭದಲ್ಲೇ ಅವುಗಳನ್ನು ಹತ್ತಿಕ್ಕುವಲ್ಲಿ ಪೊಲೀಸರು ಸಫಲರಾಗಿದ್ದಾರೆ. ಮತ ಎಣಿಕೆಯ ಅನಂತರ ಬಂಟ್ವಾಳ ದಲ್ಲಿ ರಾಜಕೀಯ ಪಕ್ಷವೊಂದನ್ನು ಬೆಂಬಲಿಸಿ ಕೆಲಸ ಮಾಡಿದ್ದಾನೆ ಎಂದು ಆರೋಪಿಸಿ ಇನ್ನೊಂದು ಪಕ್ಷಕ್ಕೆ ಸೇರಿದ ಕೆಲವರು ಆಟೋ ರಿಕ್ಷಾ ಚಾಲಕನೊಬ್ಬನನ್ನು ಥಳಿಸಲು ಮುಂದಾಗಿ ಆಟೋ ರಿಕ್ಷಾದ ಹಿಂಬದಿಯ ಗಾಜು ಒಡೆದು ಹಾನಿಗೊಳಿಸಿದ ಘಟನೆ ನಡೆದಿತ್ತು. ಆದರೆ ಸ್ಥಳೀಯ ಪೊಲೀಸರು ತತ್‌ಕ್ಷಣವೇ ಸ್ಥಳಕ್ಕೆ ತೆರಳಿ ದಾಳಿ ಮಾಡಿದ ಓರ್ವನನ್ನು ಬಂಧಿಸಿ, ಹಿಂಸೆ ವ್ಯಾಪಿಸದಂತೆ ಮುನ್ನೆಚ್ಚರಿಕೆ ವಹಿಸಿದರು. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಇಲ್ಲಿ ಚುನಾವಣೆಯ ವೇಳೆ ದೊಂಬಿ, ಗಲಭೆ ಕಡಿಮೆ ಎಂಬುದು ಸಾಬೀತಾಗಿದೆ.

ಚುನಾವಣೆಯನ್ನು ಸುಸೂತ್ರವಾಗಿ ನಿರ್ವಹಿಸಿದ ಅನುಭವದ ಬಗ್ಗೆ ನಿಮ್ಮ ಅಭಿಪ್ರಾಯ?
ಜಿಲ್ಲೆಯ ಜನರು ಕಾನೂನಿಗೆ ಗೌರವ ನೀಡಿ, ಕಾನೂನಿನ ಚೌಕಟ್ಟಿನಲ್ಲೇ ವ್ಯವಹರಿಸುವವರು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಸುಸೂತ್ರ ಚುನಾವಣೆಯಲ್ಲಿ ಪೊಲೀಸರ ಪಾತ್ರವೂ ಇದೆ ಎಂಬುದು ಹೆಮ್ಮೆಯ ಸಂಗತಿ. 

Advertisement

Udayavani is now on Telegram. Click here to join our channel and stay updated with the latest news.

Next