Advertisement
ಕೋಲ್ಕತ್ತಾದ ಕ್ಸೇವಿಯರ್ ಕಾಲೇಜಿನ ಸಹಪಾಠಿಗಳಾದ ಸಾಗರ್ ಮತ್ತು ಬಿನೋದ್ 2008ರಲ್ಲಿ ವಾವ್! ಮೊಮೊಸ್ ಆರಂಭಿಸಿದರು. ಗುಣಮಟ್ಟದ ಆಹಾರ ನೀಡಿದರೆ ಜನರು ಕೈ ಬಿಡುವುದಿಲ್ಲ ಎಂದರಿತು ತಮ್ಮಲ್ಲಿದ್ದ 30 ಸಾವಿರ ರೂ. ಬಂಡವಾಳ ಹಾಕಿದ್ದರು.
Related Articles
Advertisement
ಮೊದ ಮೊದಲು ಗ್ರಾಹಕರಿಗೆ ಉಚಿತವಾಗಿ ಸ್ಯಾಂಪಲ್ ಗಳನ್ನು ನೀಡಿ ತಮ್ಮ ಮೊಮೊಸ್ ರುಚಿಯ ಪ್ರಚಾರ ಮಾಡಿದ್ದರು. ಬೀದಿ ಬದಿ ವ್ಯಾಪಾರಸ್ಥರ ಬಳಿ ಸಿಗುತ್ತಿದ್ದ ಮೊಮೊಗಳಿಗೆ ಹೈಟೆಕ್ ಸ್ಪರ್ಶ ನೀಡಿದ್ದ ಈ ಯುವಕರಿಗೆ ಹಲವು ಸವಾಲುಗಳು ಆಗಾಗ ಎದುರಾಗುತ್ತಿದ್ದವು. ಕೆಲವು ಬಾರಿ ಇದೆಲ್ಲಾ ಸಾಕು ಎಂದೆನಿಸಿತ್ತು ಎನ್ನುತ್ತಾರೆ ಸಾಗರ್ ದರ್ಯಾನಿ.
ವಾವ್! ಮೊಮೊಸ್ ನ ಟಿ ಶರ್ಟ್ ಗಳನ್ನು ಧರಿಸಿ ಮೊಮೊ ಮಾರುತ್ತಿದ್ದ ಸಾಗರ್ ಮತ್ತು ಬಿನೋದ್, ಮುಂದಿನ ಎರಡು ವರ್ಷಗಳಲ್ಲಿ ಇಂತಹ ಸಣ್ಣ ಅಂಗಡಿಗಳನ್ನು ಕೋಲ್ಕತ್ತಾದ ಟೆಕ್ ಪಾರ್ಕ್ ಗಳು, ಮಾಲ್ ಗಳು, ಹೈಪರ್ ಮಾರ್ಕೆಟ್ ಗಳಲ್ಲಿ ಆರಂಭಿಸಿದ್ದರು.
ಅವರು ಸಸ್ಯಾಹಾರಿಗಳು ಮತ್ತು ಮಾಂಸಾಹಾರಿಗಳಿಗೆ 16 ವಿವಿಧ ವಿಧದ ಮೊಮೊಗಳನ್ನು ನೀಡುತ್ತಾರೆ. ಸಸ್ಯಾಹಾರಿಗಳಿಗೆ ಕಾರ್ನ್ ಮತ್ತು ಚೀಸ್ ಸೇರಿವೆ. ಮಾಂಸಾಹಾರಿಗಳು ಅವರು ಚಿಕನ್ ಮತ್ತು ಚೀಸ್, ಚಿಕನ್, ಪ್ರಾನ್ ಮತ್ತು ಶೆಜ್ವಾನ್ ಮೊಮೊಗಳನ್ನು ವಾವ್ ಮೊಮೊಸ್ ನೀಡುತ್ತದೆ. ಅಲ್ಲದೆ ಅವರ ಚಾಕೊಲೇಟ್ ಮೊಮೊಗಳು ಕೂಡಾ ಪ್ರಸಿದ್ದಿ ಪಡೆದಿದೆ.
14 ಲಕ್ಷ ರೂಪಾಯಿ ಹೂಡಿಕೆಯೊಂದಿಗೆ ಸಾಗರ್ ಮತ್ತು ಬಿನೋದ್ 2010 ರಲ್ಲಿ ಕೋಲ್ಕತ್ತಾದ ಸಾಲ್ಟ್ ಲೇಕ್ ನಲ್ಲಿರುವ ಸೆಕ್ಟರ್ ನಾಲ್ಕರಲ್ಲಿ ತಮ್ಮ ಮೊದಲ ಸ್ವತಂತ್ರ ಔಟ್ಲೆಟನ್ನು ಪ್ರಾರಂಭಿಸಿದರು. ಸದ್ಯ ಈ ಔಟ್ ಲೆಟ್ 1,200 ಚದರ ಅಡಿಗಳಿಗೆ ವಿಸ್ತರಿಸಿದೆ. ವಾವ್! ಮೊಮೊ ಇಷ್ಟೆಲ್ಲಾ ಬೆಳೆದರೂ ಉತ್ತರ ಭಾರತದ ಮಾಲ್ ಗಳಲ್ಲಿ ಇವರಿಗೆ ಜಾಗ ನೀಡಲಿಲ್ಲ. ಕಾರಣ ಮೊಮೊ ಬೀದಿ ಬದಿ ಮಾರುವ ಆಹಾರ, ಮಾಲ್ ಗಳಿಗೆ ಬಂದು ನಿಮ್ಮಲ್ಲಿ ಯಾರು ಖರೀದಿ ಮಾಡುತ್ತಾರೆ ಎಂಬ ಸಬೂಬು ನೀಡಿದ್ದರು. ಹೀಗಾಗಿ ಸಾಗರ್ ಮತ್ತು ಬಿನೋದ್ ಕೋಲ್ಕತ್ತಾದ ಹೊರಗಡೆ ತಮ್ಮ ಮೊದಲ ಔಟ್ ಲೆಟನ್ನು ನಮ್ಮ ಬೆಂಗಳೂರಿನಲ್ಲಿ ತೆರೆದಿದ್ದರು. 2011ರಲ್ಲಿ ಬೆಂಗಳೂರಿನ ಫೀನಿಕ್ಸ್ ಮಾಲ್ ನಲ್ಲಿ ವಾವ್! ಮೊಮೊ ಮಳಿಗೆ ತೆರಯಲಾಗಿತ್ತು.
ಇದಾದ ಬಳಿಕ ಈ ಯುವಕರು ಹಿಂದೆ ನೋಡಿಲ್ಲ. ಮುಂಬೈ, ನೋಯ್ಡಾ, ಗುರ್ಗಾಂವ್, ಚೆನ್ನೈ, ಲಕ್ನೋ, ಕಟಕ್, ಪುರಿ, ಕೊಚ್ಚಿನ್, ಭುವನೇಶ್ವರ್, ಕಾನ್ಪುರ ಹೀಗೆ ಹಲವೆಡೆ ತಮ್ಮ ಔಟ್ ಲೆಟ್ ಗಳನ್ನು ತೆರೆದರು.
ಆರಂಭದಲ್ಲಿ ತಿಂಗಳಿಗೆ 60 ಸಾವಿರ ರೂ ದುಡಿಯುತ್ತಿದ್ದ ವಾವ್! ಮೊಮೊ ಇದೀಗ ಪ್ರತಿ ತಿಂಗಳು 40ರಿಂದ 45 ಕೋಟಿ ರೂ ಸಂಪಾದನೆ ಮಾಡುತ್ತಿದೆ. ಈ ಆರ್ಥಿಕ ವರ್ಷದಲ್ಲಿ ನಮ್ಮ ಆದಾಯ 500 ಕೋಟಿ ರೂ ತಲುಪಲಿದೆ. ದಿನಕ್ಕೆ ಒಂದು ಲಕ್ಷ ಪ್ಲೇಟ್ ಮೊಮೊಗಳು ಅಂದರೆ, ತಿಂಗಳಿಗೆ ಸುಮಾರು ಒಂದೂವರೆ ಕೋಟಿಯಷ್ಟು ಮೊಮೊಗಳನ್ನು ಮಾರಾಟ ಮಾಡುತ್ತಿದ್ದೇವೆ ಎಂದು ಹೆಮ್ಮೆಯಿಂದ ಹೇಳುತ್ತಾರೆ ಸಾಗರ್.
ಸದ್ಯ ಪ್ಯಾಕೇಜ್ ಮೊಮೊಸ್ ಗಳನ್ನು ಆರಂಭಿಸಿರುವ ವಾವ್! ಮೊಮೊ ಸದ್ಯ 19 ನಗರಗಳಲ್ಲಿ 425 ಔಟ್ ಲೆಟ್ ಗಳನ್ನು ಹೊಂದಿದೆ. 2700 ಮಂದಿಗಿಂತಲೂ ಹೆಚ್ಚು ಜನರಿಗೆ ಉದ್ಯೋಗ ನೀಡಿದ್ದಾರೆ.
ಕೀರ್ತನ್ ಶೆಟ್ಟಿ ಬೋಳ