ಕಲಬುರಗಿ: ಪ್ರತಿಯೊಬ್ಬರಲ್ಲೂ ಪ್ರತಿಭೆ ಅಡಗಿರುತ್ತಿದೆ. ಸಾಧಿಸುವ ಛಲದೊಂದಿಗೆ ಸಾಧನೆಯನ್ನು ಫ್ಯಾಷನ್ ಎಂದು ಭಾವಿಸಿದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಖ್ಯಾತ ಅಂತಾರಾಷ್ಟ್ರೀಯ ಮಾಜಿ ಕ್ರಿಕೆಟಿಗ ವೆಂಕಟೇಶ ಪ್ರಸಾದ ಹೇಳಿದರು.
ಹೈ.ಕ ಶಿಕ್ಷಣ ಸಂಸ್ಥೆಯ ಎಂ.ಎಸ್. ಇರಾನಿ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಎಲ್ಲರೂ ಡಾಕ್ಟರ್, ಇಂಜಿನಿಯರ್ ಆಗಲು ಸಾಧ್ಯವಿಲ್ಲ. ಆದರೆ, ತಮ್ಮಲ್ಲಿರುವ ಆಸಕ್ತಿಕರ ವಿಷಯದಲ್ಲಿ ಶ್ರದ್ಧೆಯಿಂದ ತೊಡಗಿಸಿಕೊಳ್ಳಬೇಕು. ಒಬ್ಬ ಕಲಾವಿದನಾಗಿ, ಕ್ರೀಡಾಪಟು ಆಗಿಯೂ ಸಾಧನೆ ಮಾಡಬಹುದು. ಆದರೆ, ಯಾವುದೇ ಸಾಧನೆ ಮಾಡಬೇಕಾದರೆ ಕಷ್ಟಪಡಲೇಬೇಕಾಗುತ್ತದೆ. ಶ್ರದ್ಧೆ ಮತ್ತು ಶ್ರಮ ಇದ್ದಲ್ಲಿ ಗುರಿ ಸುಲಭವಾಗಿ ಮುಟ್ಟಬಹುದು ಎಂದು ತಿಳಿಸಿದರು.
ಮತ್ತೂಬ್ಬ ಮಾಜಿ ಕ್ರಿಕೆಟಿಗ ಸುನೀಲ ಜೋಷಿ ಮಾತನಾಡಿ, ನಿಮ್ಮಲ್ಲಿರುವ ಯಾವುದೇ ಒಂದು ಹವ್ಯಾಸವನ್ನು ವೃತ್ತಿಯಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಯುವ ಜನಾಂಗ ಆಲೋಚಿಸಬೇಕು. ಆಗ ಮಾತ್ರ ತಮ್ಮಿಷ್ಟದ ಕೇತ್ರದಲ್ಲಿ ಸಾಧನೆ ಮಾಡಬಹುದು. ಸಾಧನೆಗೆ ಯಾವುದೇ ತಡೆಯಿಲ್ಲ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿವಿಧ ಕ್ರೀಡೆಗಳಲ್ಲಿ ಸಾಧನೆ ಮಾಡಿದ ಬಸವರಾಜ ಸಿ. (ವಾಲಿಬಾಲ್), ವಿಕಾಸ ರಾಠೊಡ (ಟೆಬಲ್ ಟೆನ್ನಿಸ್), ಕಿರಣ್ ಸಿ. (ಹ್ಯಾಂಡ್‌ಬಾಲ್), ಶಶಿಕುಮಾರ (ಕ್ರಿಕೆಟ್ -ಅಂಡರ್ 16ಕ್ಕೆ ಆಯ್ಕೆ)ಅವರನ್ನು ಸನ್ಮಾನಿಸಲಾಯಿತು.
ಪ್ರಾಸ್ತಾವಿಕವಾಗಿ ಮಹಾ ವಿದ್ಯಾಲಯದ ಪ್ರಾಚಾರ್ಯ ಡಾ| ಸಿ.ಎಸ್. ಪಾಟೀಲ ಮಾತನಾಡಿದರು. ಕರ್ನಾಟಕ ತಂಡದ ಮಾಜಿ ರಣಜಿ ಕ್ರಿಕೆಟಿಗ ಶ್ರೀನಿವಾಸ ಮೂರ್ತಿ, ಕೆನರಾ ಬ್ಯಾಂಕ್ ಎಜಿಎಂ ಎಚ್.ಕೆ. ಗಂಗಾಧರ, ಡಾ| ಶಾಂತಾ ಮಠ, ಡಾ| ಮಹೇಶ, ಮಲ್ಲಪ್ಪ ಮತ್ತು ಹಲವು ವಿದ್ಯಾರ್ಥಿಗಳು ಇದ್ದರು.