Advertisement

ಅಭಿಯಾನ ಯಶಸ್ವಿಗೊಳಿಸಿ: ಮತ್ತೆ ಅಧಿಕಾರಕ್ಕೆ ಬರ್ತೇವೆ 

10:59 AM Nov 01, 2017 | Team Udayavani |

ಮೈಸೂರು: ಮನೆ ಮನೆಗೆ ಕಾಂಗ್ರೆಸ್‌ ಅಭಿಯಾನವನ್ನು ಪಕ್ಷದ ಕಾರ್ಯಕರ್ತರು, ಮುಖಂಡರು ಯಶಸ್ವಿಗೊಳಿಸಿದರೆ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದು ಶತಸಿದ್ಧ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ವಿಶ್ವಾಸ ವ್ಯಕ್ತಪಡಿಸಿದರು. ಜಿಲ್ಲಾ ಕಾಂಗ್ರೆಸ್‌ ಸಮಿತಿ ವತಿಯಿಂದ ಮಂಗಳವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ಏರ್ಪಡಿಸಿದ್ದ ಮೈಸೂರು ನಗರ ಮತ್ತು ಗ್ರಾಮಾಂತರ ಕಾಂಗ್ರೆಸ್‌ ಕಾರ್ಯಕಾರಿ ಸಭೆ ಉದ್ಘಾಟಿಸಿ ಮಾತನಾಡಿದರು.

Advertisement

ಎಐಸಿಸಿ ಉಪಾಧ್ಯಕ್ಷ ರಾಹುಲ್‌ಗಾಂಧಿ ಅವರ ಸೂಚನೆ ಮೇರೆಗೆ ಮನೆ ಮನೆಗೆ ಕಾಂಗ್ರೆಸ್‌ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ರಾಜ್ಯದ 54,261 ಬೂತ್‌ಗಳಲ್ಲಿ ಇದೇ ಮೊದಲ ಬಾರಿಗೆ ಬೂತ್‌ ಸಮಿತಿಗಳನ್ನು ರಚಿಸಲಾಗಿದೆ. ಪ್ರತಿ ಬೂತ್‌ ಸಮಿತಿಗಳಲ್ಲಿ ಅಧ್ಯಕ್ಷ ಸೇರಿದಂತೆ ಕನಿಷ್ಠ 13-25 ಸದಸ್ಯರನ್ನು ನೇಮಕ ಮಾಡಲಾಗಿದೆ ಎಂದು ಹೇಳಿದರು.

ಈ ಸದಸ್ಯರಿಗೆಲ್ಲಾ ಪ್ರದೇಶ ಕಾಂಗ್ರೆಸ್‌ ಸಮಿತಿಯಿಂದ ಗುರುತಿನ ಚೀಟಿ ನೀಡಲಾಗುತ್ತಿದೆ. ವಿಧಾನಸಭೆ ಚುನಾವಣೆ ಮುಗಿಯುವವರೆಗೂ ಆ ಬೂತ್‌ಗೆ ಅವರೇ ಉಸ್ತುವಾರಿ. ಒಂದು ಬೂತ್‌ನಲ್ಲಿ 200 ಮನೆಗಳಿದ್ದರೆ, ಬೂತ್‌ ಸಮಿತಿ ಪ್ರತಿ ಸದಸ್ಯನಿಗೆ 10 ಮನೆಗಳು ಬರುತ್ತವೆ. ಆ ಹತ್ತು ಮನೆಗಳವರ ಜತೆಗೆ ಬೂತ್‌ ಸಮಿತಿ ಸದಸ್ಯರು ನಿರಂತರವಾಗಿ ಸಂಪರ್ಕದಲ್ಲಿರಬೇಕು. ಇದಕ್ಕಾಗಿ 1.5 ಕೋಟಿ ಪುಸ್ತಕಗಳನ್ನು ಮುದ್ರಿಸಿದ್ದು ಪ್ರತಿ ಮನೆಗೆ ವಿತರಿಸಿ ಮನವೊಲಿಸುವ ಕೆಲಸ ಮಾಡಬೇಕು ಎಂದರು.

ಬಿಜೆಪಿಗೆ ನಡುಕ: ಕಾಂಗ್ರೆಸ್‌ನ ಮನೆ ಮನೆಗೆ ಕಾಂಗ್ರೆಸ್‌ ಅಭಿಯಾನ ಯಶಸ್ವಿಯಾಗುವ ಸುಳಿವು ಸಿಕ್ಕಿರುವ ಬಿಜೆಪಿಯವರಿಗೆ ನಡುಕ ಶುರುವಾಗಿದೆ. ಹೀಗಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಬೆಂಗಳೂರಿಗೆ ಬಂದು, ಪಕ್ಷದ ಆಂತರಿಕ ಸಭೆಯಲ್ಲಿ ರಾಜ್ಯಸರ್ಕಾರ ಮತ್ತು ಕಾಂಗ್ರೆಸ್‌ ವಿರುದ್ಧ ಒಂದು ಪ್ರತಿಭಟನೆ ಮಾಡಿಲ್ಲ, ಕಲ್ಲು ಹೊಡೆದಿಲ್ಲ, ಬೆಂಕಿಹಚ್ಚಿಲ್ಲ, ನೀವೆಂತಹ ಪಕ್ಷ ಸಂಘಟನೆ ಮಾಡುತ್ತೀರಿ ಎಂದು ತರಾಟೆಗೆ ತೆಗೆದುಕೊಂಡ ನಂತರ ಈಗ ಪರಿವರ್ತನಾ ಯಾತ್ರೆ ಹೊರಟಿದ್ದಾರೆ ಎಂದು ಟೀಕಿಸಿದರು. 

ಸಹಜ ಪ್ರಕ್ರಿಯೆ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿ ಚುನಾವಣೆಗಳು ಎದುರಾದಾಗ ಒಂದಷ್ಟು ರಾಜಕೀಯ ಪಕ್ಷಗಳು ಹುಟ್ಟಿಕೊಳ್ಳುವುದು ಸಹಜ. ಅಂತೆಯೇ ನಟ ಉಪೇಂದ್ರ ಕೂಡ ಹೊಸ ಪಕ್ಷ ಸ್ಥಾಪಿಸಿದ್ದಾರೆ. ಇದರಲ್ಲಿ ವಿಶೇಷವೇನೂ ಕಾಣುತ್ತಿಲ್ಲ. ಹಿಂದೆ ಈ ರೀತಿ ಹುಟ್ಟಿಕೊಂಡ ಹಲವು ರಾಜಕೀಯ ಪಕ್ಷಗಳು ಚುನಾವಣೆ ಮುಗಿದ ನಂತರ ಎಲ್ಲಿ ಹೋದವೋ ಗೊತ್ತಿಲ್ಲ ಎಂದು ಲೇವಡಿ ಮಾಡಿದರು.

Advertisement

ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಜ್ಯ ಉಸ್ತುವಾರಿ ವೇಣುಗೋಪಾಲ್‌, ಸಚಿವ ಡಾ.ಎಚ್‌.ಸಿ.ಮಹದೇವಪ್ಪ, ಸಂಸದ ಆರ್‌.ಧ್ರುವನಾರಾಯಣ, ಶಾಸಕರಾದ ಕೆ.ವೆಂಕಟೇಶ್‌, ವಾಸು, ಕಳಲೆ ಕೇಶವಮೂರ್ತಿ, ಡಾ.ಯತೀಂದ್ರ ಸಿದ್ದರಾಮಯ್ಯ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್‌, ನಗರ ಕಾಂಗ್ರೆಸ್‌ ಅಧ್ಯಕ್ಷ ಆರ್‌.ಮೂರ್ತಿ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next