Advertisement

Subramanya: ಪಾರ್ಕಿಂಗ್‌ ನಿಯಮ ಉಲ್ಲಂಘಿಸಿದರೆ ದಂಡ ಅಸ್ತ್ರ ಜಾರಿ

01:08 PM Aug 25, 2024 | Team Udayavani |

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಪೇಟೆಯಲ್ಲಿ ಸುಗಮ ಸಂಚಾರ ಹಿನ್ನೆಲೆಯಲ್ಲಿ ಇತ್ತೀಚೆಗೆ ಹೊಸದಾಗಿ ಜಾರಿ ಮಾಡಲಾಗಿರುವ ಪಾರ್ಕಿಂಗ್‌ ಹಾಗೂ ಸಂಚಾರ ನಿಯಮ ಉಲ್ಲಂಘಿಸಿದಲ್ಲಿ ಶನಿವಾರದಿಂದ ದಂಡ ವಾಪತಿಸಬೇಕಾದ ನಿಯಮ ಜಾರಿಗೆ ಬಂದಿದೆ.

Advertisement

ಪ್ರಸಿದ್ಧ ಯಾತ್ರಾ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿನ ವಾಹನ ದಟ್ಟಣೆ ನಿಯಂತ್ರಿಸುವ ಉದ್ದೇಶದಿಂದ ಸುಬ್ರಹ್ಮಣ್ಯ ಪೊಲೀಸ್‌ ವತಿಯಿಂದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ, ಸುಬ್ರಹ್ಮಣ್ಯ ಗ್ರಾಮ ಪಂಚಾಯತ್‌, ವಿವಿಧ ಇಲಾಖೆಗಳು, ಸಾರ್ವಜನಿಕರ ಸಭೆ ನಡೆಸಿ ಹೊಸ ಪಾರ್ಕಿಂಗ್‌ ಹಾಗೂ ಸಂಚಾರ ನಿಯಮ ಜಾರಿಗೊಳಿಸಲಾಗಿತ್ತು. ಹೊಸ ನಿಯಮದ ಬಗ್ಗೆ ಪ್ರಾಯೋಗಿಕ ಹಂತ, ಪ್ರಾಥಮಿಕ ಹಂತದ ಮೂಲಕ ಸಾರ್ವಜನಿಕರಿಗೆ ಪ್ರಚಾರ ಮಾಡಲಾಗಿತ್ತು. ಪೇಟೆಯಲ್ಲಿ ಹೊಸ ನಿಯಮದ ಬಗ್ಗೆ ಈಗಾಗಲೇ ತಿಳಿಸಲಾಗಿರುವುದರಿಂದ ಶನಿವಾರಿಂದ ಪಾರ್ಕಿಂಗ್‌ ಹಾಗೂ ಸಂಚಾರ ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸಲು ತಯಾರಾಗಿದ್ದರೆ. ಮೊದಲ ದಿನ ದಂಡ ಪಾವತಿಸಿದ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ವಾಹನಗಳ ಚಕ್ರಕ್ಕೆ ಬೀಗ ಪದ್ಧತಿ
ಸುಬ್ರಹ್ಮಣ್ಯ ಪೇಟೆಯಲ್ಲಿ ಸುಗಮ ಸಂಚಾರ ಹಿನ್ನಲೆಯಲ್ಲಿ ಕಾಶಿಕಟ್ಟೆಯಿಂದ ರಥಬೀದಿ ಜಂಕ್ಷನ್‌ ವರೆಗೆ ಒನ್‌ವೇ ಪ್ರವೇಶ ಹಾಗೂ ಸವಾರಿ ಮಂಟಪದಿಂದ ಕಾಶಿಕಟ್ಟೆ ವರೆಗೆ ಒನ್‌ವೇ ನಿರ್ಗಮನ ನಿಯಮ ಮಾಡಲಾಗಿದೆ. ಕಾಶಿಕಟ್ಟೆಯಿಂದ ರಥಬೀದಿ ಜಂಕ್ಷನ್‌ವರೆಗೆ ರಸ್ತೆಯ ಎರಡೂ ಬದಿ ಪಾರ್ಕಿಂಗ್‌ ನಿಷೇಧಿಸಲಾಗಿದ್ದು, ಹಾಗೂ ಸವಾರಿ ಮಂಟಪದಿಂದ ಕಾಶಿಕಟ್ಟೆವರೆಗೆ ಒಂದು ಬದಿ ಪಾರ್ಕಿಂಗ್‌ ನಿಷೇಧಿಸಲಾಗಿದೆ. ಈ ನಿಯಮ ಉಲ್ಲಂಘಿಸುವವರಿಗೆ ಹಾಗೂ ಪಾರ್ಕಿಂಗ್‌ ನಿಷೇಧಿತ ಪ್ರದೇಶದಲ್ಲಿ ವಾಹನ ನಿಲುಗಡೆಗೂ ದಂಡ ಬೀಳಲಿದೆ. ವಾಹನಗಳ ಚಕ್ರಕ್ಕೆ ಲಾಕ್‌ ಕೂಡ ಮಾಡಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇತರ ನಿಯಮ ಉಲ್ಲಂಘನೆಗೂ ದಂಡ
ಇಲ್ಲಿ ಸಂಚಾರ, ಪಾರ್ಕಿಂಗ್‌ ನಿರ್ವಹಣೆಗೆ 7 ಗೃಹರಕ್ಷಕರು ಹಾಗೂ ಓರ್ವ ಪೊಲೀಸ್‌ ಸಿಬಂದಿ ಕರ್ತವ್ಯದಲ್ಲಿರಲಿದ್ದು ಅವರು ಸಂಚಾರ, ಪಾರ್ಕಿಂಗ್‌ ವ್ಯವಸ್ಥೆ ಮೇಲೆ ನಿಗಾ ಇರಿಸಲಿದ್ದಾರೆ. ಹೊಸ ನಿಯಮ ಉಲ್ಲಂಘಿಸಿರುವುದು ಕಂಡು ಬಂದಲ್ಲಿ ಸಾರ್ವಜನಿಕರೂ ಠಾಣೆಗೆ ಅಥವಾ ಸಿಬಂದಿಗೆ ಮಾಹಿತಿ ನೀಡಬಹುದಾಗಿದೆ. ಠಾಣೆ ಯಿಂದ ಸಿಸಿ ಕೆಮರಾ ಮೂಲಕ ಸಂಚಾರ, ಪಾರ್ಕಿಂಗ್‌ ವ್ಯವಸ್ಥೆಯ ಮೇಲ್ವಿಚಾರಣೆ ನಡೆಸ ಲಾಗುತ್ತದೆ. ನಿಯಮ ಉಲ್ಲಂಘಿಸುವವರಿಗೆ ದಂಡವನ್ನು ಆ ಮೂಲಕವೂ ವಿಧಿಸಲಾಗುತ್ತದೆ.

ಕೋರ್ಟ್‌ನಿಂದಲೇ ಮನೆಗೆ ನೋಟೀಸ್‌ ಬರಲಿದೆ. ಇದಲ್ಲದೆ ಇತರ ಸಂಚಾರ ನಿಯಮಗಳಾದ ಹೆಲ್ಮೆಟ್‌ ರಹಿತ ಪ್ರಯಾಣ ಸೇರಿದಂತೆ ಮತ್ತಿತರ ನಿಯಮ ಉಲ್ಲಂಘನೆಗೂ ದಂಡ ವಿಧಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ನಿಯಮ ಪಾಲಿಸಲು ಸಹಕರಿಸಿ
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಹೊಸ ಸಂಚಾರ, ಪಾರ್ಕಿಂಗ್‌ ನಿಯಮ ಯಶಸ್ವಿ ಹಂತದಲ್ಲಿದ್ದು, ಹೆಚ್ಚಿನ ಜನರು ಹೊಸ ನಿಯಮದ ಬಗ್ಗೆ ಶ್ಲಾಘಿಸಿದ್ದಾರೆ. ಆದ್ದರಿಂದ ಇದೀಗ ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸಲಾಗುತ್ತಿದೆ. ಪೇಟೆಯ ಸುಗಮ ಸಂಚಾರದ ಹಿನ್ನೆಲೆಯಲ್ಲಿ ಎಲ್ಲರೂ ಕಡ್ಡಾಯವಾಗಿ ಸಂಚಾರ, ಪಾರ್ಕಿಂಗ್‌ ನಿಯಮ ಪಾಲಿಸಬೇಕು.
-ಕಾರ್ತಿಕ್‌,ಉಪ ನಿರೀಕ್ಷಕರು ಸುಬ್ರಹ್ಮಣ್ಯ ಠಾಣೆ.

ವಾಹನಕ್ಕೆ ದಂಡದ ಗರಿಷ್ಠ ಲೆಕ್ಕಾಚಾರ
ಪಾರ್ಕಿಂಗ್‌ ನಿಯಮ ಉಲ್ಲಂಘಿಸಿದರೆ ಎಲ್ಲ ವಿಧದ ವಾಹನಗಳಿಗೆ 1 ಸಾವಿರ ರೂ.
ಏಕಮುಖ ಸಂಚಾರ ನಿಯಮ ಉಲ್ಲಂಘಿಸಿದರೆ ಎಲ್ಲ ವಿಧದ ವಾಹನಗಳಿಗೆ 500 ರೂ.

Advertisement

Udayavani is now on Telegram. Click here to join our channel and stay updated with the latest news.

Next