Advertisement

ಸುಬ್ರಹ್ಮಣ್ಯೇಶ್ವರ ಬ್ರಹ್ಮರಥೋತ್ಸವಕ್ಕೆ ಭಕ್ತಸಾಗರ

07:23 AM Feb 11, 2019 | Team Udayavani |

ಚಿಕ್ಕಬಳ್ಳಾಪುರ: ಅಲ್ಲಿ ಹೆಜ್ಜೆ ಹೆಜ್ಜೆಗೂ ಭಕ್ತರು ಕಿಕ್ಕಿರಿದು ತುಂಬಿದ್ದರು. ಕೆಲವರು ತೇರು ಎಳೆದು ಧನ್ಯತಾಭಾವ ಮೆರೆದರೆ ಮತ್ತೆ ಕೆಲವರು ರಥಕ್ಕೆ ಬಾಳೆಹಣ್ಣು, ದವನ ಎಸೆದು ಪುನೀತರಾದರು. ತಮ್ಮ ಇಷ್ಟಾರ್ಥ ಈಡೇರಿಸಿಕೊಂಡ ಭಕ್ತರು ಮುಡಿಕೊಟ್ಟು ಕಲ್ಯಾಣಿಯಲ್ಲಿ ಮಿಂದೆದ್ದೆರು.

Advertisement

ಚಿತ್ರಾವತಿ ಜಾತ್ರೆಗೆ ಬಂದವರು ಬರಗು, ಬತ್ತಾಸು ಖರೀದಿಗೆ ಮುಗಿಬಿದ್ದರೆ ಜಾತ್ರೆಯಲ್ಲಿ ಮಕ್ಕಳ ಆಟಿಕೆ ಸಾಮಾನು, ಮಹಿಳೆಯರಿಂದ ಗೃಹಪಯೋಗಿ ವಸ್ತುಗಳ ಖರೀದಿ ಭರಾಟೆ ಜೋರಾಗಿತ್ತು.

ನಗರದ ಹೊರ ವಲಯದ ಚಿತ್ರಾವತಿಯಲ್ಲಿ ಭಾನುವಾರ ಭಕ್ತಿಭಾವದ ನಡುವೆ ಸಂಭ್ರಮದಿಂದ ನಡೆದ ಐತಿಹಾಸಿಕ ಸುಬ್ರಹ್ಮಣ್ಯೇಶ್ವರಸ್ವಾಮಿಯ ವಾರ್ಷಿಕ ಬ್ರಹ್ಮರಥೋತ್ಸವಕ್ಕೆ ಸಾಕ್ಷಿಯಾದ ಸಹಸ್ರಾರು ಮಂದಿ ಭಕ್ತ ಸಮೂಹದ ನಡುವೆ ಕಂಡು ಬಂದ ದೃಶ್ಯಗಳು ಇವು.

ಸುಬ್ರಹ್ಮಣ್ಯೇಶ್ವರಸ್ವಾಮಿ ರಥೋತ್ಸವ ರಜೆ ದಿನವಾದ ಭಾನುವಾರ ಬಂದಿದ್ದರಿಂದ ನಿರೀಕ್ಷೆಗೂ ಮೀರಿ ಭಕ್ತರ ದಂಡು ಚಿತ್ರಾವತಿ ಜಾತ್ರೆಯಲ್ಲಿ ಜಮಾಯಿಸಿತ್ತು. ಬೆಳಗ್ಗೆಯಿಂದಲೇ ವಿಶೇಷ ಪೂಜೆ, ಅಭಿಷೇಕ, ರುದ್ರಾಭಿಷೇಕ, ಹೋಮ, ಹವನ ಸೇರಿದಂತೆ ಹಲವು ಧಾರ್ಮಿಕ ಕೈಂಕಾರ್ಯಗಳು ಶಾಸ್ತ್ರೋಕ್ತವಾಗಿ ನೆರವೇರಿದವು.

ಮಾಘ ಶುದ್ಧ ಷಷ್ಠಿಯ ದಿನದಂದು ಸುಬ್ರಹ್ಮಣ್ಯೇಶ್ವರ ಜಾತ್ರೆ ನಡೆಯುವುದು ಮೊದಲಿನಿಂದಲೂ ಸಂಪ್ರದಾಯ. ಅದರಂತೆ ಭಾನುವಾರ ರಥೋತ್ಸವ ಹಿನ್ನೆಲೆಯಲ್ಲಿ ದೇವರಿಗೆ ವಿದ್ಯುತ್‌ ದೀಪಾಲಂಕಾರದ ಜೊತೆಗೆ ಹೂವಿನ ಅಲಂಕಾರ ಮಾಡಲಾಗಿತ್ತು.

Advertisement

ರಥೋತ್ಸವಕ್ಕೆ ಜನಸಾಗರ: ಚಿತ್ರಾವತಿ ಜಾತ್ರೆಯ ವೀಕ್ಷಣೆಗೆ ನೆರೆಯ ಆಂಧ್ರಪ್ರದೇಶ, ಕೋಲಾರ, ತುಮಕೂರು ಸೇರಿದಂತೆ ರಾಜ್ಯದ ನಾನಾ ಮೂಲೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.

ಮಧ್ಯಾಹ್ನದ ನಂತರ ಸುಬ್ರಹ್ಮಣೇಶ್ವರ ಉತ್ಸವ ಮೂರ್ತಿಗಳನ್ನು ಮಂಗಳವಾಧ್ಯಗಳೊಂದಿಗೆ ಭವ್ಯ ಮೆರÊ‌ಣಿಗೆ ಮೂಲಕ ಅಲಂಕೃತ ತೇರಿನಲ್ಲಿ ಪ್ರತಿಷ್ಠಾಪಿಸಿ ಭಕ್ತರು ಸಮ್ಮುಖದಲ್ಲಿ ರಥೋತ್ಸವ ನಡೆಸಲಾಯಿತು. ಭಕ್ತರು ತೇರಿಗೆ ದವನ ಹಾಗೂ ಬಾಳೆಹಣ್ಣು ಎಸೆದು ಇಷ್ಟಾರ್ಥಗಳನ್ನು ಸಿದ್ಧಿಸಿಕೊಂಡು ಧನ್ಯರಾದರು. ಈ ವೇಳೆ ಭಕ್ತರಿಂದ ಗೋವಿಂದ ನಾಮಸ್ಮರಣೆ ಮಾರ್ದನಿಸಿತು.

ಚಿತ್ರಾವತಿಯಲ್ಲಿ ದಾಸೋಹ: ರಥೋತ್ಸವದಲ್ಲಿ ಪಾಲ್ಗೊಂಡಿದ್ದ ಭಕ್ತರಿಗೆ ವಿವಿಧ ಸ್ವಯಂ ಸೇವಾ ಸಂಘಟನೆಗಳ ಪದಾಧಿಕಾರಿಗಳು ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಅನ್ನದಾಸೋಹ ನಡೆಸಿಕೊಟ್ಟರು. ವಿಶೇಷವಾಗಿ ಸ್ಥಳೀಯ ಆರ್ಯವೈಶ್ಯ ಸಮುದಾಯದ ಮುಖಂಡರು ಭಕ್ತಾದಿಗಳಿಗೆ ಅನ್ನದಾನ ಮಾಡಿದರು.

ರಾಷ್ಟ್ರೀಯ ಹೆದ್ದಾರಿಗೆ ಅಂಟಿಕೊಂಡಿರುವ ಹೊನ್ನೇನ‌ಹಳ್ಳಿ, ಚಿತ್ರಾವತಿ, ವಾಪಸಂದ್ರ ಮತ್ತಿತರ ಗ್ರಾಮಗಳ ಗ್ರಾಮಸ್ಥರು ಜಿಲ್ಲಾಡಳಿತದ ಅನುಮತಿ ಪಡೆದು ಭಕ್ತರಿಗೆ ದಾಸೋಹ ಜತೆಗೆ ಪಾನಕ, ಮಜ್ಜಿಗೆ, ಕೋಸಂಬರಿಸೊಪ್ಪು ವಿತರಿಸಿದರು.

ಪೊಲೀಸ್‌ ಭದ್ರತೆ: ಚಿತ್ರಾವತಿ ಜಾತ್ರೆಯಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಅದರಲ್ಲೂ ಕಳ್ಳಕಾಕರ ಕೈ ಚಳಕ ತಪ್ಪಿಸಲು ಚಿಕ್ಕಬಳ್ಳಾಪುರದ ಆರಕ್ಷಕ ವೃತ್ತ ನಿರೀಕ್ಷಕ ಸುದರ್ಶನ್‌ ಹಾಗೂ ಗ್ರಾಮಾಂತರ ಠಾಣೆ ಉಪ ನಿರೀಕ್ಷಕ ವೆಂಕಟೇಶ್‌ ನೇತೃತ್ವದಲ್ಲಿ ಚಿತ್ರಾವತಿ ಜಾತ್ರೆಗೆ ಬಿಗಿ ಪೊಲೀಸ್‌ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಜೇಬುಗಳ್ಳರನ್ನು ಪತ್ತೆ ಮಾಡಲೆಂದು ಕೆಲ ಪೊಲೀಸರು ಮಫ್ತಿಯಲ್ಲಿ ಕೆಲಸ ಮಾಡಿದರು. ಪ್ರಮುಖ ಸ್ಥಳಗಳಲ್ಲಿ ವಿಡಿಯೋ ಚಿತ್ರೀಕರಣ ಮಾಡಲಾಯಿತು. ತಾಲೂಕು ಪಂಚಾಯಿತಿ ಅಧಿಕಾರಿಗಳು ರಥೋತ್ಸವದ ಉಸ್ತುವಾರಿ ವಹಿಸಿದ್ದರು.

ಬರಗು, ಬತ್ತಾಸು ಖರೀದಿ ಜೋರು..: ಜಾತ್ರೆಯಲ್ಲಿ ಜಾತ್ರೆಯ ವಿಶೇಷವಾದ ಬರಗು, ಬತ್ತಾಸು ಖರೀದಿ ಜೋರಾಗಿತ್ತು. ಬರವನ್ನು ಲೆಕ್ಕಿಸದೇ ಜಿಲ್ಲೆಯ ವಿವಿಧೆಡೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಕೃಷಿ ಕೂಲಿ ಕಾರ್ಮಿಕರ ದಂಡೇ ಜಾತ್ರೆಗೆ ಆಗಮಿಸಿ ನೆಚ್ಚಿನ ಚಿತ್ರಾವತಿ ಜಾತ್ರೆಯನ್ನು ಕಣ್ತುಂಬಿಕೊಂಡರು. ಜಾತ್ರೆ ಪ್ರಯುಕ್ತ ಮಕ್ಕಳಿಗೆ ಪುಟಾಣಿ ರೈಲು ಸೇರಿದಂತೆ ವಿವಿಧ ಮನರಂಜನಾ ಕಾರ್ಯಕ್ರಮಗಳು ಆಕರ್ಷಣೆಗೊಂಡಿದ್ದವು.

ಪೋಷಕರು ಮಕ್ಕಳೊಂದಿಗೆ ವಿವಿಧ ಆಟೋಟದಲ್ಲಿ ಭಾಗಿಯಾಗಿದ್ದರು. ಗ್ರಾಮೀಣ ಜನರು ಗೃಹಪಯೋಪಗಿ ವಸ್ತುಗಳನ್ನು ಖರೀದಿಸಿದ ದೃಶ್ಯಗಳು ಸಾಮಾನ್ಯವಾಗಿತ್ತು. ಪೊಲೀಸ್‌ ಇಲಾಖೆ ಅಂದಾಜಿನ ಪ್ರಕಾರ ಈ ಬಾರಿ ಚಿತ್ರಾವತಿ ಜಾತ್ರೆಗೆ ಬರೋಬ್ಬರಿ 50 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರೆಂಬ ಮಾಹಿತಿ ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next