Advertisement

950 ಕೋಟಿ ರೂಪಾಯಿ ವೈದ್ಯ ಸೀಟು ಹಂಚಿಕೆ ಅಕ್ರಮ: ಬಿಜೆಪಿ

02:25 PM May 07, 2024 | Team Udayavani |

ಬೆಂಗಳೂರು: ನಗರದ ಡಾ.ಬಿ.ಆರ್‌. ಅಂಬೇಡ್ಕರ್‌ ಮೆಡಿಕಲ್‌ ಕಾಲೇಜಿನ ಸೀಟು ಹಂಚಿಕೆಯಲ್ಲಿ 950 ಕೋಟಿ ರೂ.ಗೂ ಅಧಿಕ ಮೊತ್ತದ ಹಗರಣ ನಡೆದಿದ್ದು, ಇದರಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಳಿಯ ಹಾಗೂ ಕಲಬುರಗಿ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಸೇರಿದಂತೆ ಹಲವರು ಭಾಗಿಯಾಗಿದ್ದು ಸಮಗ್ರ ತನಿಖೆ ನಡೆಸುವಂತೆ ಸಿಬಿಐ ಮತ್ತು ಲೋಕಾಯುಕ್ತರಿಗೆ ದೂರು ಸಲ್ಲಿಸಿರುವುದಾಗಿ ಬಿಜೆಪಿ ಮುಖಂಡ ಹಾಗೂ ಬೆಂಗಳೂರಿನ ಮಾಜಿ ಕಾರ್ಪೋರೇಟರ್‌ ಎನ್‌. ಆರ್‌.ರಮೇಶ್‌ ಹೇಳಿದ್ದಾರೆ.

Advertisement

ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ಸಂಬಂಧ 900 ಪುಟಗಳ ದಾಖಲೆ ಬಿಡುಗಡೆ ಗೊಳಿಸಿದರು. ಮಲ್ಲಿಕಾರ್ಜುನ್‌ ಖರ್ಗೆ ಅವರ ಅಳಿಯ ರಾಧಾಕೃಷ್ಣ ದೊಡ್ಡಮನಿ, ಎಚ್‌.ಎಸ್‌. ಮಹದೇವಪ್ರಸಾದ್‌, ಡಾ.ಟಿ.ಮುರಳಿ ಮೋಹನ್‌, ಕುಬೇರ್‌ ಅಮಾನುಲ್ಲಾ ಖಾನ್‌ ವಿರುದ್ಧವೂ ದೂರು ನೀಡಲಾಗಿದೆ ಎಂದು ತಿಳಿಸಿದರು.

ಮಾಜಿ ಪ್ರಧಾನಿ ಇಂದಿರಾಗಾಂಧಿ, ಮಾಜಿ ಸಿಎಂ ಆರ್‌.ಗುಂಡೂರಾವ್‌, ಮಾಜಿ ಕೇಂದ್ರ ಸಚಿವ ವಿ.ಶಂಕರಾನಂದ, ದಲಿತ ಸಮುದಾಯದ ನಾಯಕ ಬಸವಲಿಂಗಪ್ಪ, ಬಿ.ರಾಚಯ್ಯ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು ಸೇರಿ 1980-81ರಲ್ಲಿ ಆನಂದ್‌ ಅಸೋಸಿಯೇಷನ್‌ ಆ್ಯಂಡ್‌ ಎಜುಕೇಷನಲ್‌ ಟ್ರಸ್ಟ್‌ ಹುಟ್ಟುಹಾಕಿದ್ದರು. ದಲಿತ ಸಮುದಾಯದ ಏಳಿಗೆಯೇ ಈ ಟ್ರಸ್ಟ್‌ನ ಉದ್ದೇಶವಾಗಿತ್ತು. ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ಕುಟುಂಬಗಳ ವಿದ್ಯಾರ್ಥಿಗಳಿಗೆ ಅತಿ ಕಡಿಮೆ ವೆಚ್ಚದಲ್ಲಿ ಅತ್ಯುನ್ನತ ಶೈಕ್ಷಣಿಕ ವಿದ್ಯಾಭ್ಯಾಸವನ್ನು ಒದಗಿಸುವ ಉದ್ದೇಶದಿಂದ ಸದರಿ ಸಂಸ್ಥೆಗಳ ಧ್ಯೇಯ ಆಗಿತ್ತು ಎಂದು ಹೇಳಿದರು.

ರಾಧಾಕೃಷ್ಣ ದೊಡ್ಡಮನಿ ಅವರು ಈ ಸಂಸ್ಥೆಗಳ ಧರ್ಮದರ್ಶಿ ಆಗಿ ನಿಯೋಜನೆಗೊಂಡ ನಂತರ ಸಂಸ್ಥೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ದಾಖಲೆ ಸಮೇತ ವಿವರಿಸಿದರು. ರಾಧಾಕೃಷ್ಣ ದೊಡ್ಡಮನಿ ಅವರ ಆಪ್ತ ಹಾಗೂ “ಡಿ’ ದರ್ಜೆ ನೌಕರ ಅಮಾನುಲ್ಲಾ ಖಾನ್‌ ಅವರು ಪಿಯುಸಿ ಅನುತೀರ್ಣರಾದ ವಿದ್ಯಾರ್ಥಿಗಳಿಗೂ ಸೀಟು ಮಾರಾಟ ಮಾಡಿರುವ ಆರೋಪವಿದೆ.

ಈವರೆಗೆ 6 ವಿದ್ಯಾರ್ಥಿಗಳಿಗೆ ಕಾಲೇಜು ಅಕ್ರಮವಾಗಿ ಸೀಟು ಹಂಚಿಕೆ ಮಾಡಿದೆ. ರಾಜ್ಯ ಹಾಗೂ ದೇಶದ ವಿವಿಧೆಡೆಗಳಲ್ಲಿ ಶ್ರೀಮಂತ ಮಕ್ಕಳನ್ನು ಹುಡುಕಿ ತಂದು ಅಕ್ರಮವಾಗಿ ಹಣ ಪಡೆದು ಅವರಿಗೆ ಎಂಬಿಬಿಎಸ್‌ ಮತ್ತು ಬಿಎಂಎಸ್‌ ಸೀಟು ನೀಡಲಾಗುತ್ತಿದೆ ಎಂದು ಹೇಳಿದರು.

Advertisement

ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.

ಅನಗತ್ಯವಾಗಿ ತೇಜೋವಧೆಗೆ ಯತ್ನ: ಬಿಜೆಪಿ ಈಗಾಗಲೇ ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಸೋಲೊಪ್ಪಿಕೊಂಡಿದೆ. ಆ ಹಿನ್ನೆಲೆಯಲ್ಲಿ ಅಸ್ತಿತ್ವದಲ್ಲೇ ಇರದ ಸಂಗತಿಗಳನ್ನು ಹುಟ್ಟುಹಾಕುವ ಮೂಲಕ ಕಾಂಗ್ರೆಸ್‌ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಅವರನ್ನು ತೇಜೋವಧೆ ಮಾಡಲು ಯತ್ನಿಸುತ್ತಿದೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ವಾಗ್ಧಾಳಿ ನಡೆಸಿದ್ದಾರೆ.

ಬಿಜೆಪಿ ಮುಖಂಡ ಎನ್‌.ಆರ್‌. ರಮೇಶ್‌ ಮಾಡಿರುವ ಆರೋಪಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು, ಕಳೆದ ಹತ್ತು ವರ್ಷಗಳಿಂದ ಏಕೆ ಸುಮ್ಮನಿದ್ದರು ಎಂದು ಪ್ರಶ್ನಿಸಿದ್ದಾರೆ. ಇದು ಬಿಜೆಪಿ ನಾಯಕರ ಹತಾಶೆಗೆ ಸಾಕ್ಷಿ ಎಂದು ಕಿಡಿಕಾರಿದ್ದಾರೆ.

ವಾಸ್ತವವಾಗಿ 800 ಕೋಟಿ ರೂ. ಹಗರಣವಾಗಿದ್ದಿದ್ದರೆ, ಕಳೆದ 10 ವರ್ಷಗಳಲ್ಲಿ ಪ್ರಧಾನಿ ಹಾಗೂ ಗೃಹ ಸಚಿವರು ಅಧಿಕಾರದಲ್ಲಿದ್ದರೂ ಏಕೆ ಸುಮ್ಮನಿದ್ದರೆ? ಖರ್ಗೆ ಸಾಹೇಬರು ಹಾಗೂ ನನ್ನನ್ನು ಗುರಿಯಾಗಿಸಲು ಬಿಜೆಪಿ ಐಟಿ, ಇಡಿ ಬಳಸುತ್ತಿರಲಿಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next