ಬೆಂಗಳೂರು: ನಗರದಲ್ಲಿ ಜಾಹೀರಾತು ಅಳವಡಿಕೆ ಸಂಬಂಧ ಒಂದು ವಾರದಲ್ಲಿ ಸಾರ್ವಜನಿಕರ ಆಕ್ಷೇಪಣೆಗಳನ್ನು ಸ್ವೀಕಾರ ಮಾಡಿ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸುವುದಾಗಿ ಬಿಬಿಎಂಪಿ ಹೈಕೋರ್ಟ್‌ಗೆ ಶನಿವಾರ ತಿಳಿಸಿದೆ.
ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಫ್ಲೆಕ್ಸ್, ಬ್ಯಾನರ್, ಹೋರ್ಡಿಂಗ್ಸ್ ತೆರವು ಕುರಿತಂತೆ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಹಾಗೂ ನ್ಯಾಯಮೂರ್ತಿ ಎಸ್.ಸುಜಾತ ಅವರಿದ್ದ ವಿಭಾಗೀಯ ಪೀಠಕ್ಕೆ ಬಿಬಿಎಂಪಿ ಪರ ವಕೀಲರು ಈ ಮಾಹಿತಿ ನೀಡಿದರು.
ವಿಚಾರಣೆ ವೇಳೆ ಬಿಬಿಎಂಪಿ ಪರ ವಾದ ಮಂಡಿಸಿದ ವಕೀಲ ವಿ. ಶ್ರೀನಿಧಿ, ಕರಡು ಜಾಹೀರಾತು ನೀತಿಗೆ 1,200ಕ್ಕೂ ಅಧಿಕ ಆಕ್ಷೇಪಣೆಗಳು ಬಂದಿದ್ದವು. ಡಿ.5ರಂದು ಸಾರ್ವಜನಿಕ ವಿಚಾರಣೆ ನಡೆಸಲಾಗುತ್ತದೆ. ಆ ನಂತರ ನೀತಿ ಮತ್ತು ಬೈಲಾ ಅಂತಿಮಗೊಳಿಸಿ 10 ದಿನಗಳಲ್ಲಿ ಸರ್ಕಾರಕ್ಕೆ ಸಲ್ಲಿಕೆ ಮಾಡಲಾಗುವುದು ಎಂದು ತಿಳಿಸಿದರು.
ನ್ಯಾಯಪೀಠ, ಕಳೆದ ವಿಚಾರಣೆ ವೇಳೆಯೇ ಜಾಹೀರಾತು ನೀತಿಯನ್ನು ಶೀಘ್ರ ಅಂತಿಮಗೊಳಿಸುವುದಾಗಿ ಹೇಳಿದ್ದೀರಿ. ಈವರೆಗೆ ಯಾಕೆ ಅಂತಿಮಗೊಳಿಸಿಲ್ಲ. ಹತ್ತು ದಿನ ಸಮಯ ನೀಡಲು ಸಾಧ್ಯವಿಲ್ಲ. ಒಂದು ವಾರದಲ್ಲಿ ನೀತಿ ಅಂತಿಮಗೊಳಿಸಿ ಎಂದು ಮೌಖೀಕ ಸೂಚನೆ ನೀಡಿತು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅರ್ಜಿದಾರರ ಪರ ವಕೀಲ ಜಿ.ಆರ್.ಮೋಹನ್, ಕರಡು ನೀತಿ ರಚನೆಗೆ ಸಂಬಂಧಿಸಿದಂತೆ 2018ರ ಸೆಪ್ಟೆಂಬರ್ 25ರಂದು ಸಾರ್ವಜನಿಕರಿಂದ ಆಕ್ಷೇಪಣೆ ಮತ್ತು ಸಲಹೆ ನೀಡುವಂತೆ ಕೋರಲಾಗಿದೆ. ಆದರೆ, ಪಾಲಿಕೆ ಅಧಿಕಾರಿಗಳು ಇಲ್ಲಿವರೆಗೂ ಈ ಸಂಬಂಧ ಅಂತಿಮ ನಿರ್ಧಾರಕ್ಕೆ ಕೈಗೊಂಡಿಲ್ಲ.
ಬೆಂಗಳೂರು ಅಭಿವೃದ್ಧಿ ಸಚಿವರೂ ಆದ ಉಪ ಮುಖ್ಯಮಂತ್ರಿ, ಬಿಬಿಎಂಪಿ ಆಯುಕ್ತರು ಸೇರಿದಂತೆ ಹಲವು ಅಧಿಕಾರಿಗಳ ತಂಡ ತ್ಯಾಜ್ಯ ವಿಲೇವಾರಿ ಅಧ್ಯಯನಕ್ಕೆಂದು ವಿದೇಶಕ್ಕೆ ತೆರಳಿದ್ದಾರೆ ಎಂದು ಪ್ರಮಾಣ ಪತ್ರ ಸಲ್ಲಿಸಿದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, “ನೀವು ಪ್ರಕರಣಕ್ಕೆ ಮಾತ್ರವೇ ಸೀಮಿತವಾಗಿರಬೇಕೇ ವಿನಃ ಇತರೆ ವಿಚಾರಗಳನ್ನು ನ್ಯಾಯಾಲಯಕ್ಕೆ ತಿಳಿಸುವುದು ಬೇಡ ಎಂದು ಕಿವಿಮಾತು ಹೇಳಿತು.