Advertisement

ವಿಶೇಷ ಪ್ಯಾಕೇಜ್‌ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ

04:55 PM Sep 15, 2018 | Team Udayavani |

ಚಿತ್ರದುರ್ಗ: ಜಿಲ್ಲೆಯಲ್ಲಿ ತೀವ್ರ ಬರಗಾಲ ಇದ್ದು ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಆದ್ದರಿಂದ ಜಿಲ್ಲೆಗೆ ವಿಶೇಷ ಪ್ಯಾಕೇಜ್‌ ನೀಡುವಂತೆ ರಾಜ್ಯ ಸರ್ಕಾರಕ್ಕೆ ವರದಿ ಕಳುಹಿಸಬೇಕು ಎಂದು ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ ಸೋಮಗುದ್ದು ರಂಗಸ್ವಾಮಿ ಅವರು ಜಿಲ್ಲಾಧಿಕಾರಿಯವರಲ್ಲಿ ಮನವಿ ಮಾಡಿದರು.

Advertisement

ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ರೈತ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ಅವರಿಗೆ ಮನವಿ ಸಲ್ಲಿಸಿದ ಸಂದರ್ಭದಲ್ಲಿ ಮಾತನಾಡಿದರು.

ಶೇಂಗಾ ಫಸಲು ಸಂಪೂರ್ಣ ಒಣಗಿ ಹೋಗಿದೆ. ಅರೆ ಬರೆ ಮಳೆಗೆ ಬಿತ್ತನೆ ಮಾಡಿದ ಸಾಕಷ್ಟು ರೈತರ ಜಮೀನುಗಳಲ್ಲಿ ಶೇಂಗಾ, ಸೂರ್ಯಕಾಂತಿ ಹುಟ್ಟುವಳಿ ಆಗಲಿಲ್ಲ. ಕಳೆದ ಮೂರು ತಿಂಗಳುಗಳಿಂದ ಜಿಲ್ಲೆಯಲ್ಲಿ ಹನಿ ಮಳೆಯೂ ಆಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಬೆಳೆ ಸಮೀಕ್ಷೆಯನ್ನು ಯಾವ ರೀತಿ ಮಾಡಲಾಗುತ್ತದೆ ಎನ್ನುವ ಆತಂಕ ರೈತರಲ್ಲಿದೆ ಎಂದರು.
 
ಸಕಾಲಕ್ಕೆ ಮಳೆ ಬಾರದ ಕಾರಣ ಶೇಂಗಾ, ಮೆಕ್ಕೆಜೋಳ ಒಣಗಿ ಹೋಗಿವೆ. ಬರಡು ಜಿಲ್ಲೆ ಚಿತ್ರದುರ್ಗಕ್ಕೆ ಹೆಚ್ಚಿನ ಒತ್ತು ಕೊಡಬೇಕಾಗಿದೆ. ಉತ್ತರೆ ಮಳೆಯೂ ಬಾರದಿದ್ದರೆ ಜಿಲ್ಲೆಯಲ್ಲಿ ಬೆಳೆಗಳು ಸಂಪೂರ್ಣವಾಗಿ ನಾಶವಾಗುವುದರಲ್ಲಿ ಅನುಮಾನವಿಲ್ಲ. ಜಿಲ್ಲೆಯಲ್ಲಿ ಕುರಿ-ಮೇಕೆ, ಜಾನುವಾರುಗಳು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಈಗಿನಿಂದಲೇ ಮೇವು ಶೇಖರಣೆ ಮಾಡಿಕೊಂಡು ನೀರಿಗೆ ಬರ ಎದುರಾಗದಂತೆ ಮುಂಜಾಗ್ರತೆ ವಹಿಸಬೇಕು ಎಂದು ಒತ್ತಾಯಿಸಿದರು.

ಭದ್ರಾ ಮೇಲ್ದಂಡೆ ಯೋಜನೆ ಅಡಿ ಡಿಸೆಂಬರ್‌ ನೊಳಗೆ ಜಿಲ್ಲೆಗೆ ನೀರು ಹರಿದು ಬರಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಮಣಪ್ಪ ಭರವಸೆ ನೀಡಿದ್ದಾರೆ. ಹತ್ತಾರು ವರ್ಷಗಳಿಂದ ಹೋರಾಟ ನಡೆಸಿದ ಫಲವಾಗಿ ಭದ್ರಾ ಮೇಲ್ದಂಡೆ ಯೋಜನೆಯ ಕೆಲವು ಭಾಗದ ಕಾಮಗಾರಿಗಳು ಪೂರ್ಣಗೊಳ್ಳುವ ಹಂತದಲ್ಲಿದ್ದು, ಡಿಸೆಂಬರ್‌ ಒಳಗೆ ನೀರು ನೀಡಲು ಅಧಿಕಾರಿಗಳು ಭರದ ಸಿದ್ಧತೆ ಮಾಡಿಕೊಳ್ಳಬೇಕು. ಭದ್ರಾ ನೀರು ಹರಿದು ಬರುವುದೇ ಎನ್ನುವ ಸಂದೇಹ ಇನ್ನೂ ರೈತರನ್ನು ಕಾಡುತ್ತಿದೆ ಎಂದರು.

ಕೃಷಿ, ತೋಟಗಾರಿಕೆ ಹಾಗೂ ಕಂದಾಯ ಇಲಾಖೆಗಳು ಜಂಟಿಯಾಗಿ ಬೆಳೆ ನಷ್ಟ ವರದಿಯನ್ನು ಕೂಡಲೆ ನೀಡುವಂತೆ ಸೂಚಿಸಬೇಕು. ರೈತರಿಗೆ ಬೆಳೆ ವಿಮೆ ಇನ್ನೂ ಕೈಸೇರಿಲ್ಲ ಎಂದು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.
 
ಅಖಂಡ ಕರ್ನಾಟಕ ರೈತ ಸಂಘದ ತಾಲೂಕು ಅಧ್ಯಕ್ಷ ಸಿದ್ದಪ್ಪ, ರೈತ ಮುಖಂಡರಾದ ಎಲ್‌. ಬಸವರಾಜಪ್ಪ, ಎಸ್‌.ಎಂ. ಶಿವಕುಮಾರ್‌, ಎಂ. ಕಲ್ಲಣ್ಣ, ಭೀಮಾರೆಡ್ಡಿ, ಷಣ್ಮುಖ, ಪರಮೇಶ್ವರಪ್ಪ, ನಂಜುಂಡಪ್ಪ, ಸತೀಶ, ವೀರಣ್ಣ, ಹನುಮಂತಪ್ಪ, ಎಸ್‌.ಆರ್‌. ತಿಮ್ಮಾರೆಡ್ಡಿ, ಶಾಂತಣ್ಣ ಇದ್ದರು. 

Advertisement

ಜಿಲ್ಲೆಯನ್ನು ಈಗಾಗಲೆ ಬರಪೀಡಿತ ಪ್ರದೇಶ ಎಂದು ಘೋಷಿಸಲಾಗಿದೆ. ಆದರೆ ಬರ ಪರಿಹಾರ ನೀಡುವ
ಕೆಲಸವಾಗಬೇಕು. ರೈತರಿಗೆ ಅನುಕೂಲ ಕಲ್ಪಿಸಲು ನನ್ನ ಕೈಲಾದಷ್ಟು ಪ್ರಯತ್ನ ಮಾಡಿದ್ದೇನೆ. ಬೆಳೆ ಪರಿಹಾರ ಹಾಗೂ
ಬೆಳೆ ವಿಮೆ ಬಗ್ಗೆ ಸರ್ಕಾರದ ಮಟ್ಟದಲ್ಲಿ ಮಾತನಾಡಿದ್ದೇನೆ. ಜಾನುವಾರುಗಳ ಮೇವು-ನೀರು ಸಂಗ್ರಹಕ್ಕೆ ಮೊದಲ ಆದ್ಯತೆ ನೀಡುತ್ತೇನೆ.
 ವಿ.ವಿ. ಜ್ಯೋತ್ಸ್ನಾ, ಜಿಲ್ಲಾಧಿಕಾರಿ. 

Advertisement

Udayavani is now on Telegram. Click here to join our channel and stay updated with the latest news.

Next