ಮೈಸೂರು: ನೇಮಕಾತಿಗಳಲ್ಲಿ ನಡೆದಿರುವ ಅಕ್ರಮ ಹೊರ ಬರುವ ಮುನ್ನವೇ, ಮೈಮುಲ್ ಹೈಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದೆ. ಅಕ್ರಮ ನಡೆದಿಲ್ಲ ಎನ್ನುವುದಾದರೆ, ಮೈಮುಲ್ ಕೇವಿಯೇಟ್ ಏಕೆ ಸಲ್ಲಿಸಬೇಕು ಎಂದು ಶಾಸಕ ಸಾ.ರಾ.ಮಹೇಶ್ ಪ್ರಶ್ನಿಸಿದರು. ಮೈಮುಲ್ ಅಕ್ರಮ ನೇಮಕಾತಿ ವಿಚಾರದಲ್ಲಿ ಸರ್ಕಾರದಿಂದ ನ್ಯಾಯ ಸಿಗುವು ದಿಲ್ಲ. ಹಾಗಾಗಿ, ನ್ಯಾಯಾಲಯದ ಮೂಲಕವೇ ಕಾನೂನು ಹೋರಾಟ ಮಾಡುತ್ತೇನೆ. ಅನ್ಯಾಯಕ್ಕೊಳಗಾಗಿರುವ ಅರ್ಹ ಅಭ್ಯರ್ಥಿಗಳಿಗೆ ನ್ಯಾಯ ಕೊಡಿಸುತ್ತೇನೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರತಿಭಟನೆಯ ಎಚ್ಚರಿಕೆ: ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಒಂದು ಕಡೆ ತನಿಖೆ ಆಗುತ್ತಿದೆ ಎನ್ನುತ್ತಾರೆ. ಇನ್ನೊಂದು ಕಡೆ ನೇಮಕಾತಿ ನಡೆಯುತ್ತಿದೆ ಅನ್ನುತ್ತಾರೆ. ತನಿಖೆಗೆ ಕಳುಹಿಸಿದ್ದಾರೆ. ನೇಮಕಾತಿ ಸಮಿತಿನಲ್ಲಿ ಜಾಯಿಂಟ್ ರಿಜಿಸ್ಟ್ರಾರ್ ಇದ್ದಾರೆ. ಅಲ್ಲಿ ತನಿಖೆ ಮಾಡುವುದಕ್ಕೆ ಜಿಲ್ಲಾ ರಿಜಿಸ್ಟಾರ್ ಅನ್ನೂ ಕಳುಹಿ ಸುತ್ತಾರೆ. ಡೀಸಿ ತೀರ್ಮಾನವನ್ನು ತಹಶೀಲ್ದಾರ್ ಹೋಗಿ ತನಿಖೆ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದರು. ದಯಮಾಡಿ ಸಚಿವರು ಒತ್ತಡಕ್ಕೆ ಮಣಿಯಬಾರದು. ಒಂದು ವೇಳೆ ಮೈಮುಲ್ ಅವರು ಇದೇ ರೀತಿ ಆರೋಪ ಮುಂದುವರಿಸಿಕೊಂಡು ಬಂದರೆ ಮಾಜಿ ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಸಿದರು.
ಮೈಮುಲ್‌ನಲ್ಲಿ 165 ಹುದ್ದೆಗಳ ನೇಮಕಾತಿಗೆ ಕರೆ ಮಾಡಲಾಗಿತ್ತು. ಆದರೆ, ಹೆಚ್ಚುವರಿಯಾಗಿ 25 ಹುದ್ದೆಗಳನ್ನು ಕರೆ ಮಾಡದೇ ಭರ್ತಿ ಮಾಡಿಕೊಳ್ಳಲು ಮುಂದಾಗಿ ದ್ದಾರೆ. ಅಲ್ಲದೇ, “ಸಾ.ರಾ.ಮಹೇಶ್ ಹುದ್ದೆ ಕೊಡಿಸುವಂತೆ ಕೇಳಿದ್ದರು, ಹುದ್ದೆಗಳು ಮುಗಿದು ಹೋಗಿವೆ ಎಂದು ಹೇಳಿದ್ದೆವೆ ಎನ್ನುತ್ತಿದ್ದಾರೆ. ಇದರಿಂದ ಹುದ್ದೆಗಳನ್ನು ಮಾಡಿಕೊಂಡಿದ್ದೇವೆ ಎಂದು ಅವರೇ ಒಪ್ಪಿಕೊಂಡಂತಾಯಿತಲ್ಲ ಎಂದರು.
ಒಎಂಆರ್ ಶೀಟ್ ವಿತರಿಸಿಲ್ಲ: ಯಾವುದೇ ಪರೀಕ್ಷೆಗಳು ಮಾಡುವಾಗ ಒಎಂಆರ್ ಶೀಟ್ ಕೊಡ್ತಾರೆ. ಪರೀಕ್ಷೆ ಮುಗಿದ 15-20ದಿನದಲ್ಲಿ ಕೀ ಆನ್ಸರ್ ಬಿಡುಗಡೆ ಮಾಡುತ್ತಾರೆ. ಯಾವುದು ಸರಿ ಯಾವುದು ತಪ್ಪು ನಮ್ಮ ಅಂಕ ಎಷ್ಟು ಅನ್ನುವಂಥದ್ದು ನಾವು ಒಎಂಆರ್ ಶೀಟ್ ಮೂಲಕ ಫಲಿತಾಂಶಕ್ಕೂ ಮುನ್ನವೇ ಪರಿಶೀಲಿಸಿಕೊಳ್ಳಬಹುದು. ಆದರೆ, ಇಲ್ಲಿ ಒಎಂಆರ್ ಶೀಟ್ ವಿತರಿಸಿಲ್ಲ. ಮೈಮುಲ್ ವೆಬ್‌ಸೈಟ್‌ನಲ್ಲಿ ಫಲಿತಾಂಶ ಸಂಬಂಧ ಯಾವುದೇ ಮಾಹಿತಿ ಸಿಗುತ್ತಿಲ್ಲ. ಜನ್ಮ ದಿನಾಂಕ ನಮೂದಿಸಿದರೆ ಮಾತ್ರ ಫಲಿತಾಂಶ ನೋಡುವಂತೆ ಮಾಡಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಬೆದರಿಕೆ ಕರೆಗಳು ಬರುತ್ತಿವೆ: ಮೈಮುಲ್ ಉದ್ಯೋಗಾಕಾಂಕ್ಷಿ ಚೈತ್ರ ಮಾತನಾಡಿ, ಮೈಮುಲ್ ಅಕ್ರಮ ನೇಮಕಾತಿ ನಿಲ್ಲಬೇಕು. ಇಲ್ಲವಾದರೆ “ನನ್ನ ಬಳಿ ಹಣ ಕೇಳಿದವರ ಹೆಸರು ಮತ್ತು ಅವರು ನಡೆಸಿದ ಸಂಭಾಷ ಣೆಯ ಆಡಿಯೋ ಬಹಿರಂಗ ಪಡಿಸುತ್ತೇನೆ. ಇದರಿಂದ ಅಕ್ರಮದಲ್ಲಿ ಭಾಗಿಯಾದ ಎಲ್ಲರ ಹೆಸರು ಹೊರಬರಲಿದೆ. ಆಡಿಯೋ ಬಿಡುಗಡೆಗೊಳಿಸಿದ ಮೇಲೆ ನನಗೆ ಬೆದರಿಕೆ ಕರೆಗಳು ಬರುತ್ತಿವೆ. ಸುದ್ದಿಗೋಷ್ಠಿ ಯಲ್ಲಿ ಶಾಸಕ ಅಶ್ವಿನ್‌ಕುಮಾರ್, ಜಾ.ದಳ ಮುಖಂಡರಾದ ಕೆ.ವಿ.ಮಲ್ಲೇಶ್, ಚೆಲುವೇಗೌಡ, ಪ್ರಕಾಶ್, ರಾಮು, ಅಭಿಷೇಕ್, ಸಿ.ಜೆ.ದ್ವಾರಕೀಶ್, ಮಾಜಿ
ಮೇಯರ್ ಆರ್.ಲಿಂಗಪ್ಪ ಇದ್ದರು.
ಮುಂದಿನ ದಿನಗಳಲ್ಲಿ ಮೈಮುಲ್‌ನಲ್ಲಿ ನಡೆಯುವ ನೇಮಕಾತಿಗೆ ಪ್ರಶ್ನೋತ್ತರಗಳ ಬದಲಾಗಿ ಒಎಂಆರ್ ಶೀಟ್ ಮೂಲಕ ಪರೀಕ್ಷೆ ನಡೆಸಬೇಕು. ಹಣ ಇರುವವರಿಗೇ ಕೆಲಸ ಸಿಗುತ್ತದೆ ಎನ್ನುವ ಮನೋಭಾವ ಹೋಗಬೇಕು. ಈ ಹಿಂದೆಯೂ ಡಿಸಿಸಿ ಹಾಗೂ ಮೈಸೂರು-ಚಾಮರಾಜನಗರದ ಸಹಕಾರಿ ಬ್ಯಾಂಕ್‌ನಲ್ಲಿ ಅಕ್ರಮ ನೇಮಕಾತಿ ನಡೆದಿದ್ದು, ತನಿಖೆಯಿಂದ ದೃಢಪಟ್ಟಿತು. ಆದರೆ, ಮೈಮುಲ್‌ನಲ್ಲಿ ನೇಮಕಾತಿಗೂ ಮುನ್ನವೇ ಗೊತ್ತಾಗಿದೆ.
-ಸಾ.ರಾ.ಮಹೇಶ್, ಶಾಸಕ