Advertisement

ಎನ್‌ಆರ್‌, ಚಾಮರಾಜ: ಕೈ ಅಭ್ಯರ್ಥಿಗಳಿಂದ ನಾಮಪತ್ರ

02:42 PM Apr 20, 2023 | Team Udayavani |

ಮೈಸೂರು: ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಶಾಸಕ ತನ್ವೀರ್‌ಸೇಠ್ 6ನೇ ಬಾರಿ ಹಾಗೂ ಚಾಮರಾಜ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಕೆ.ಹರೀಶ್‌ಗೌಡ ಉಮೇದುವಾ ರಿಕೆ ಸಲ್ಲಿಸಿದರು. ಅಪಾರ ಬೆಂಬಲಿಗರೊಂದಿಗೆ ಚಾಮುಂಡಿ ವಿಹಾರದ ಚುನಾವಣಾಧಿಕಾರಿ ಕಚೇರಿಗೆ ತೆರಳಿದ ಸೇಠ್ 4 ಸೆಟ್‌ ನಾಮ ಪತ್ರ ಸಲ್ಲಿಸಿದರು.

Advertisement

ನಾಮಪತ್ರದೊಂದಿಗೆ ಮತದಾನದ ಗುರುತಿನಪತ್ರ, ಆದಾಯ ಪ್ರಮಾಣ ಪತ್ರ, ಬಿ ಫಾರಂಗಳನ್ನು ಸಲ್ಲಿಸಿದರು. ಇವರಿಗೆ ನಗರ ಕಾಂಗ್ರೆಸ್‌ ಅಧ್ಯಕ್ಷ ಆರ್‌.ಮೂರ್ತಿ, ಮಾಜಿ ಮೇಯರ್‌ ಆಯುಬ್‌ ಖಾನ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಜಿ.ಎನ್‌. ಮಂಜುನಾಥ್‌, ಡಿಸಿಸಿ ಸದಸ್ಯ ಉದಯಕುಮಾರ್‌, ನಗರ ಕಾಂಗ್ರೆಸ್‌ ಪ್ರಚಾರ ಸಮಿತಿ ಅಧ್ಯಕ್ಷ ರಘು ರಾಜೇ ಅರಸು, ಡಿಸಿಸಿ ಸದಸ್ಯ ಅಣ್ಣಯ್ಯ ಸಾಥ್‌ ನೀಡಿದರು. ‌

ತನ್ವೀರ್‌ಸೇಠ್ ಅವರು ಕ್ಷೇತ್ರದಲ್ಲಿ ಈವರೆಗೆ ಐದು ಬಾರಿ ಗೆದ್ದು ಶಾಸಕರಾಗಿದ್ದು, ಕಾಂಗ್ರೆಸ್‌ ಸರ್ಕಾರದಲ್ಲಿ ಶಿಕ್ಷಣ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಇದೀಗ 6ನೇ ಬಾರಿ ಶಾಸಕರಾಗಲು ಬಯಸಿ ನಾಮಪತ್ರ ಸಲ್ಲಿಸಿದ್ದಾರೆ. ‌

ಭರ್ಜರಿ ಮೆರವಣಿಗೆ: ಶಾಸಕ ತನ್ವೀರ್‌ಸೇಠ್ ನಾಮಪತ್ರ ಸಲ್ಲಿಕೆಗೂ ಮುನ್ನ ಚಾಮುಂಡಿಬೆಟ್ಟಕ್ಕೆ ತೆರಳಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ರಾಜಕುಮಾರ್‌ ರಸ್ತೆಯ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ‌

ಅಲ್ಲಿಂದ ಎಸ್‌ಪಿ ಕಚೇರಿ ವೃತ್ತದ ಮಾರ್ಗವಾಗಿ ಸಾವಿರಾರು ಕಾರ್ಯ ಕರ್ತರು, ಅಭಿಮಾನಿಗಳೊಂದಿಗೆ ಮೆರವಣಿಗೆ ಮೂಲಕ ಚಾಮುಂಡಿ ವಿಹಾರದಲ್ಲಿರುವ ಚುನಾವಣಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ಮೆರವಣಿಯುದ್ದಕ್ಕೂ ಅಭಿಮಾನಿಗಳು ಜೈಕಾರ ಕೂಗಿದರು.

Advertisement

ನಾಮಪತ್ರ ಸಲ್ಲಿಸಿದ ಹರೀಶ್‌ಗೌಡ: ಚಾಮರಾಜ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಕೆ.ಹರೀಶ್‌ಗೌಡ ಬುಧವಾರ ತಮ್ಮ ಉಮೇದುವಾರಿಕೆ ಸಲ್ಲಿಸಿದರು. ಬೆಂಬಲಿಗರೊಂದಿಗೆ ಪಾಲಿಕೆ ಕಚೇರಿಗೆ ತೆರಳಿ ಚುನಾವಣಾ ಧಿಕಾರಿಗಳಿಗೆ 2 ಸೆಟ್‌ ನಾಮಪತ್ರ ಸಲ್ಲಿಸಿದರು. ನಾಮಪತ್ರದೊಂದಿಗೆ ಮತದಾನದ ಗುರುತಿನಪತ್ರ, ಆದಾಯ ಪ್ರಮಾಣ ಪತ್ರ, ಬಿ ಫಾರಂಗಳನ್ನು ಸಲ್ಲಿಸಿದರು.

ಇವರಿಗೆ ತಾಯಿ ಯಶೋಧಮ್ಮ, ಪತ್ನಿ ಗೌರಿ, ಮಾಜಿ ಮೇಯರ್‌ಗಳಾದ ಅಯೂಬ್‌ ಖಾನ್‌, ಧ್ರುವಕುಮಾರ್‌, ಮಾಜಿ ಉಪಮೇಯರ್‌ ಸಿದ್ದರಾಜು, ಕಾಂಗ್ರೆಸ್‌ ನಗರ ಪ್ರಧಾನ ಕಾರ್ಯದರ್ಶಿ ಶಿವಣ್ಣ, ಮುಖಂಡರಾದ ಲಿಂಗಪ್ಪ, ಪಡುವಾರಹಳ್ಳಿ ಜಯರಾಮ್‌ ಸಾಥ್‌ ನೀಡಿದರು.

ಕಾಂಗ್ರೆಸ್‌ ಶಕ್ತಿ ಪ್ರದರ್ಶನ: ಕೆ.ಹರೀಶ್‌ಗೌಡ ನಾಮಪತ್ರ ಸಲ್ಲಿಕೆಗೂ ಮುನ್ನ ತಮ್ಮ ಅಪಾರ ಬೆಂಬಲಿಗರೊಂದಿಗೆ ಮೆರವಣಿಗೆ ನಡೆಸಿ ಶಕ್ತಿ ಪ್ರದರ್ಶನ ಮಾಡಿದರು.

ಸರಸ್ವತಿಪುರಂನ ಚಂದ್ರಮೌಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಬಳಿಕ ಮೆರವಣಿಗೆಯಲ್ಲಿ ಅರಮನೆಯ ಕೋಟೆ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ನಂತರ ಮೆರವಣಿಗೆಯಲ್ಲಿ ಪಾಲಿಕೆಗೆ ತೆರಳಿ ನಾಮಪತ್ರ ಸಲ್ಲಿಸಿದರು.

ಮೆರವಣಿಗೆಯುದ್ದಕ್ಕೂ ಸಾವಿರಾರು ಅಭಿಮಾನಿಗಳು, ಕಾರ್ಯಕರ್ತರು ಹರೀಶ್‌ ಗೌಡ ಪರ ಜೈಕಾರ ಕೂಗಿದರು. ಪಾಲಿಕೆ ಮುಂಭಾಗವೂ ಜಮಾಯಿಸಿದ ನೂರಾರು ಅಭಿಮಾನಿಗಳು ಹರೀಶ್‌ಗೌಡ ಪರವಾಗಿ ಘೋಷಣೆ ಕೂಗಿದರು.

Advertisement

Udayavani is now on Telegram. Click here to join our channel and stay updated with the latest news.

Next