Advertisement

ಶಾಂತಿಯುತ, ಸ್ವಯಂಪ್ರೇರಿತ ಬಂದ್‌

05:43 AM Mar 08, 2019 | Team Udayavani |

ಸುಬ್ರಹ್ಮಣ್ಯ: ನಾಗ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನವನ್ನು ಸಂಪುಟ ಶ್ರೀ ನರಸಿಂಹ ಸ್ವಾಮಿ ಮಠದ ಆಡಳಿತಕ್ಕೆ ಒಪ್ಪಿಸುವುದರ ವಿರುದ್ಧ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಭಕ್ತರ ಹಿತರಕ್ಷಣ ವೇದಿಕೆ ಗುರುವಾರ ಕರೆ ನೀಡಿದ್ದ ಕುಕ್ಕೆ ಸುಬ್ರಹ್ಮಣ್ಯ ಬಂದ್‌ ಶಾಂತಿಯುತವಾಗಿ ನಡೆಯಿತು. ಸ್ಥಳೀಯರು ಸ್ವಯಂ ಪ್ರೇರಣೆಯಿಂದ ಬಂದ್‌ ಕರೆಯನ್ನು ಬೆಂಬಲಿಸಿದರು.

Advertisement

ದೇವಸ್ಥಾನವನ್ನು ಮಠಕ್ಕೆ ಒಪ್ಪಿಸುವಂತೆ ಮಠದ ಪರವಾಗಿ ವಕೀಲರೊಬ್ಬರು ಸರಕಾರ ಮತ್ತು ಧಾರ್ಮಿಕ ದತ್ತಿ ಇಲಾಖೆಗೆ ನೋಟಿಸ್‌ ನೀಡಿರುವ ಕ್ರಮ ವಿರೋಧಿಸಿ ಮತ್ತು ದೇವಸ್ಥಾನವನ್ನು ಮಠದ ಆಡಳಿತಕ್ಕೆ ಒಪ್ಪಿಸದಂತೆ ಒತ್ತಾಯಿಸುವ ಸಲುವಾಗಿ ಈ ಪ್ರತಿಭಟನೆ ನಡೆಸಲಾಗಿತ್ತು.

ಮಠದ ಆಡಳಿತಕ್ಕೆ ಒಳಪಟ್ಟ ಕಟ್ಟಡದ ಅಂಗಡಿಮುಂಗಟ್ಟುಗಳು ಹೊರತುಪಡಿಸಿ ಉಳಿದೆಲ್ಲ ಮಳಿಗೆಗಳು ಸಂಜೆ 5 ಗಂಟೆ ತನಕವೂ ಮುಚ್ಚಿದ್ದವು. ರಥಬೀದಿ ಮುಂಭಾಗದ ದೇವಸ್ಥಾನದ ಹಣುಕಾಯಿ ಅಂಗಡಿಗಳು, ಮುಖ್ಯ ಪೇಟೆಯಿಂದ ಕುಮಾರಧಾರಾ ತನಕದ ಹೋಟೆಲ್‌ ಗಳು, ಅಂಗಡಿ-ಮುಂಗಟ್ಟುಗಳು, ಜ್ಯೂಸ್‌ ಸೆಂಟರ್‌ಗಳು ಬಂದ್‌ ಆಗಿದ್ದವು. ಆದಿಸುಬ್ರಹ್ಮಣ್ಯ. ಕುಮಾರಧಾರಾದಲ್ಲಿ ಅಂಗಡಿಗಳು ಬಹುತೇಕ ಮುಚ್ಚಿದ್ದವು. ಬಹುತೇಕ ಆಟೋ, ಟ್ಯಾಕ್ಸಿ ಸಹಿತ ಖಾಸಗಿ ವಾಹನಗಳೂ ರಸ್ತೆಗಿಳಿದಿರಲಿಲ್ಲ. ಸರಕಾರಿ ಬಸ್‌ ಇತ್ಯಾದಿಗಳ ಓಡಾಟ ಸಹಜ ಸ್ಥಿತಿಯಲ್ಲಿತ್ತು. ರಾಷ್ಟ್ರೀಕೃತ ಬ್ಯಾಂಕ್‌, ಇತರ ಸರಕಾರಿ ಕಚೇರಿಗಳು ಕಾರ್ಯಾಚರಿಸಿದವು. ದೇವಸ್ಥಾನದ ಆಡಳಿತಕ್ಕೆ ಒಳಪಟ್ಟ ಶಿಕ್ಷಣ ಸಂಸ್ಥೆಗಳು ಮಧ್ಯಾಹ್ನದ ತನಕ ಕಾರ್ಯಾಚರಿಸಿದವು. ರಾಜ್ಯದ ನಂ. 1 ದೇವಸ್ಥಾನವನ್ನು ಮಠಕ್ಕೆ ಹಸ್ತಾಂತರಿಸದಂತೆ ಭಕ್ತರಿಂದ ಒತ್ತಾಯ ಕೇಳಿಬಂತು.

ಹಿಂದಿನ ದಿನ ಗೊಂದಲ
ಗುರುವಾರದ ಬಂದ್‌ಗೆ ಅವಕಾಶ ನೀಡದಂತೆ ಮಠದ ಪರ ವಕೀಲ ಉದಯಪ್ರಕಾಶ್‌ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಈ ವಿಚಾರದಲ್ಲಿ ಮಧ್ಯಪ್ರವೇಶಿಸಲು ಆಸಕ್ತಿ ತೋರದ ನ್ಯಾಯಾಲಯವು ಬಂದ್‌ ತಡೆ ಬೇಡಿಕೆಯನ್ನು ನಿರಾಕರಿಸಿತ್ತು. ಬಲತ್ಕಾರದ ಬಂದ್‌ಗೆ ಅವಕಾಶ ನೀಡದಂತೆ ಸರಕಾರಕ್ಕೆ ಸೂಚಿಸಿತ್ತು. ಅದರಂತೆ ಶಾಂತಿಯುತ ಬಂದ್‌ ನಡೆಸಲು ಪೊಲೀಸರು ಅನುಮತಿ ನೀಡಿದ್ದರು. ಬಂದ್‌ ತಡೆಯಾಜ್ಞೆ ವಿಚಾರದಲ್ಲಿ ಬುಧವಾರ ರಾತ್ರಿಯಿಂದ ಗೊಂದಲ ಏರ್ಪಟಿತ್ತು.

ಪೊಲೀಸ್‌ ಸರ್ಪಗಾವಲು
ಶಾಂತಿಯುತ ಬಂದ್‌ ನಡೆಸುವಂತೆ ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ತೊಂದರೆ ಆಗಿ ಅಶಾಂತಿ ಸೃಷ್ಟಿಯಾದಲ್ಲಿ ಸಂಘಟಕರ ಮೇಲೆ ಕಾನೂನು ಕ್ರಮ ಜರಗಿಸುವ ಎಚ್ಚರಿಕೆಯನ್ನು ಬುಧವಾರ ರಾತ್ರಿಯೇ ಪೊಲೀಸರು ನೀಡಿದ್ದರು. ಹೀಗಿದ್ದರೂ ಮುಂಜಾಗ್ರತಾ ಕ್ರಮವಾಗಿ ನಗರದಲ್ಲಿ ಭಾರೀ ಪ್ರಮಾಣದಲ್ಲಿ ಪೊಲೀಸ್‌ ಹಾಗೂ ಗೃಹರಕ್ಷಕ ದಳ ಸಿಬಂದಿಯನ್ನು ನಿಯೋಜಿಸಲಾಗಿತ್ತು.

Advertisement

ಭಕ್ತರಿಗೆ ತೊಂದರೆ ಇಲ್ಲ
ಬಂದ್‌ ಇದ್ದರೂ ಗುರುವಾರ ಭಕ್ತರಿಗೆ ತೊಂದರೆ ಆಗಲಿಲ್ಲ. ಬೆಳಗ್ಗೆ ಉಪಾಹಾರ, ಮಧ್ಯಾಹ್ನ ಊಟದ ವ್ಯವಸ್ಥೆಯನ್ನು ದೇವಸ್ಥಾನದ ಕಡೆಯಿಂದ ಮಾಡಲಾಗಿತ್ತು. ಬಂದ್‌ ಕರೆ ಕುರಿತು ಪೂರ್ವ ಮಾಹಿತಿ ಇದ್ದ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರೂ ಬಂದಿರಲಿಲ್ಲ.

ಮಠಕ್ಕೆ ಭಾರೀ ಭದ್ರತೆ
ಸಂಪುಟ ಶ್ರೀ ನರಸಿಂಹ ಮಠ ಹಾಗೂ ಮಠದ ಆಡಳಿತದ ಹೊಟೇಲ್‌, ಅಂಗಡಿಗಳಿಗೆ ಪೊಲೀಸ್‌ ಭದ್ರತೆ ಒದಗಿಸಲಾಗಿತ್ತು. ಸಶಸ್ತ್ರ ಪೊಲೀಸರು ಕಟ್ಟಡಗಳ ಮೇಲೆ ನಿಂತು ದಿನವಿಡೀ ಹದ್ದಿನ ಕಣ್ಣಿರಿಸಿ ಕಾಯುತ್ತಿದ್ದರು. ಸುಬ್ರಹ್ಮಣ್ಯ ಮಾತ್ರವಲ್ಲದೆ, ಸುಳ್ಯ, ಬೆಳ್ಳಾರೆ, ಕಡಬ ಠಾಣೆಗಳ ಪಿಎಸ್‌ಐಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದರು. ಡಿವೈಎಸ್ಪಿ, ವೃತ್ತ ನಿರೀಕ್ಷಕರು ನಗರಕ್ಕೆ ಆಗಮಿಸಿ ಕಾನೂನು ಸುವ್ಯವಸ್ಥೆ ನೋಡಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next