Advertisement

ಸಬ್‌ಅರ್ಬನ್‌ ಡೆಮು ಸಂಚಾರ ಶುರು

11:14 AM Aug 19, 2017 | |

ಬೆಂಗಳೂರು: ಬೈಯಪ್ಪನಹಳ್ಳಿ-ವೈಟ್‌ಫೀಲ್ಡ್‌ ನಡುವೆ ಬಹುನಿರೀಕ್ಷಿತ “ಡೆಮು’ ರೈಲು ಸೇವೆಗೆ ಶುಕ್ರವಾರ ಚಾಲನೆ ದೊರೆಯಿತು. “ನಮ್ಮ ಮೆಟ್ರೋ’ ಕಾಮಗಾರಿ ಹಿನ್ನೆಲೆಯಲ್ಲಿ ಉಂಟಾಗಿರುವ ಸಂಚಾರದಟ್ಟಣೆ ಸಮಸ್ಯೆ ನಿವಾರಣೆಗಾಗಿ ವೈಟ್‌ಫೀಲ್ಡ್‌ನಿಂದ ನಗರಕ್ಕೆ ವಿಶೇಷ ರೈಲು ಸೇವೆಗಾಗಿ ಒತ್ತಾಯ ಕೇಳಿಬಂದಿತ್ತು. ಬೈಯಪ್ಪನಹಳ್ಳಿ ರೈಲು ನಿಲ್ದಾಣದಲ್ಲಿ ರೈಲು ಸೇವೆಗೆ ಚಾಲನೆ ನೀಡಲಾಯಿತು. 

Advertisement

ಅತ್ತ ಹುಬ್ಬಳ್ಳಿಯಲ್ಲಿ ರೈಲ್ವೆ ಸಚಿವ ಸುರೇಶ್‌ ಪ್ರಭು ಹುಬ್ಬಳ್ಳಿಯಲ್ಲಿ ವೀಡಿಯೊ ಕಾನ್ಫರೆನ್ಸ್‌ ವಿವಿಧ ರೈಲ್ವೆ ಯೋಜನೆಗಳಿಗೆ ಚಾಲನೆ ನೀಡುತ್ತಿದ್ದಂತೆ, ಬೈಯಪ್ಪನಹಳ್ಳಿಯಲ್ಲಿ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್‌, ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಅನಂತಕುಮಾರ್‌, ಸಂಸದರಾದ ಪಿ.ಸಿ. ಮೋಹನ್‌, ಪ್ರೊ.ಎಂ.ವಿ. ರಾಜೀವ್‌ಗೌಡ, ಶಾಸಕ ಬೈರತಿ ಬಸವರಾಜು, “ಡೆಮು’ (ಡೀಸೆಲ್‌ ಎಲೆಕ್ಟ್ರಿಕಲ್‌ ಮಲ್ಟಿಪಲ್‌ ಯೂನಿಟ್‌) ರೈಲಿಗೆ ಹಸಿರು ನಿಶಾನೆ ತೋರಿಸಿದರು. 

ರೈಲ್ವೆ ಬೋರ್ಡ್‌ ಎದುರು ಡಿಪಿಆರ್‌
ರೈಲಿಗೆ ಹಸಿರು ನಿಶಾನೆ ತೋರಿ ಮಾತನಾಡಿದ ಕೇಂದ್ರ ಸಚಿವ ಅನಂತಕುಮಾರ್‌, ಹೊಸೂರು-ಬೈಯಪ್ಪನಹಳ್ಳಿ ಮತ್ತು ಯಶವಂತಪುರ-ಬೈಯಪ್ಪನಹಳ್ಳಿ-ಚನ್ನಸಂದ್ರ ನಡುವೆ ಕೂಡ ಇದೇ ಮಾದರಿಯಲ್ಲಿ ರೈಲು ಸೇವೆ ಆರಂಭಿಸುವ ಅವಶ್ಯಕತೆ ಇದೆ. ಇದರಿಂದ ಮೊದಲ ಹಂತದ ಸಬ್‌ಅರ್ಬನ್‌ ಸೇವೆ ನಗರದ ನಾಗರಿಕರಿಗೆ ಸಿಕ್ಕಂತಾಗುತ್ತದೆ ಎಂದು ಹೇಳಿದರು. 

54 ಕಿ.ಮೀ. ಉದ್ದದ ಹೊಸೂರು-ಬೈಯಪ್ಪನಹಳ್ಳಿ ಮಾರ್ಗದ ಜೋಡಿ ಹಳಿಗಳ ನಿರ್ಮಾಣ, ವಿದ್ಯುದ್ದೀಕರಣ ಮತ್ತು ಅಟೋಮೆಟಿಕ್‌ ಸಿಗ್ನಲ್‌ಗ‌ಳ ಅಳವಡಿಕೆಗೆ ಸಂಬಂಧಿಸಿದಂತೆ “ಸಮಗ್ರ ಯೋಜನಾ ವರದಿ’ (ಡಿಪಿಆರ್‌) ಪೂರ್ಣಗೊಂಡಿದ್ದು, ವರದಿಯನ್ನು ರೈಲ್ವೆ ಮಂಡಳಿಗೆ ಕಳುಹಿಸಲಾಗಿದೆ ಎಂದು ತಿಳಿಸಿದರು. ಸಬ್‌ಅರ್ಬನ್‌ ರೈಲು ನಿರ್ವಹಣಾ ಕಾರ್ಯಗಳಿಗೆ 40 ಎಕರೆ ಭೂಮಿಯ ಅವಶ್ಯಕತೆ ಇದೆ. ಇದು ಬಾಣಸವಾಡಿಯ ಎನ್‌ಜಿಇಎಫ್ ಬಳಿ ಲಭ್ಯವಿದ್ದು, ಈ ಭೂಮಿ ಕಲ್ಪಿಸಲು ರಾಜ್ಯ ಸರ್ಕಾರ ಮನಸ್ಸು ಮಾಡಬೇಕು ಎಂದು ಮನವಿ ಮಾಡಿದರು. 

ಮುಂಬೈ ಮಾದರಿಯಲ್ಲಿ ಸಬ್‌ಅರ್ಬನ್‌ ರೈಲ್ವೆ ಜಾಲ ವಿಸ್ತರಿಸಲು “ಬಿ-ರೈಡ್‌’ (ಬೆಂಗಳೂರು ರೈಲ್ವೆ ಇನ್‌ಫ್ರಾಸ್ಟ್ರಕ್ಚರ್‌ ಡೆವಲಪ್‌ಮೆಂಟ್‌ ಎಂಟರ್‌ಪ್ರೈಸಸ್‌) ವಿಶೇಷ ಉದ್ದೇಶಕ್ಕಾಗಿ ನಿಗಮ ಸ್ಥಾಪಿಸಬೇಕು. ಅದರಡಿ ಯೋಜನೆ ಕೈಗೆತ್ತಿಕೊಳ್ಳಬೇಕು. ಇದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪಾಲುದಾರಿಕೆ ಇರಬೇಕು. ಇದಕ್ಕೆ ಕೇಂದ್ರದ ಇನ್ನಷ್ಟು ಅನುದಾನ, ಪ್ರೋತ್ಸಾಹದ ಅವಶ್ಯಕತೆ ಇದೆ.

Advertisement

ಈ ನಿಟ್ಟಿನಲ್ಲಿ ರೈಲ್ವೆ ಸಚಿವರೊಂದಿಗೆ ಚರ್ಚಿಸಲು ಸಿದ್ಧ ಎಂದರು. ಕೆ.ಜೆ. ಜಾರ್ಜ್‌ ಮಾತನಾಡಿ, ಸಬ್‌ಅರ್ಬನ್‌ ಯೋಜನೆ ಅನುಷ್ಠಾನಕ್ಕೆ ಕೇಂದ್ರ ರೂಪಿಸಿರುವ ನೀತಿ ಸಮಾಧಾನಕರವಾಗಿಲ್ಲ. ದೆಹಲಿ, ಮುಂಬೈನಲ್ಲಿ ಕೇಂದ್ರ ಸರ್ಕಾರವೇ ಸಬ್‌ಅರ್ಬನ್‌ ಜಾರಿಗೊಳಿಸಿದೆ. ಆದರೆ, ಕರ್ನಾಟಕದಲ್ಲಿ ಮಾತ್ರ ರಾಜ್ಯದ ಮೇಲೆ ಹೊರೆ ಹಾಕುತ್ತಿರುವುದು ಸರಿ ಅಲ್ಲ ಎಂದು ಬೇಸರ ವ್ಯಕ್ತಪಡಿಸಿದರು.  

ಪ್ರೊ.ಎಂ.ವಿ. ರಾಜೀವ್‌ಗೌಡ ಮಾತನಾಡಿ, ಸಬ್‌ಅರ್ಬನ್‌ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ರೂಪಿಸಿರುವ ನೀತಿ ತೃಪ್ತಿಕರವಾಗಿಲ್ಲ ಎಂದರು. ಕಾರ್ಯಕ್ರಮದಲ್ಲಿ ಶಾಸಕರಾದ ಎಸ್‌. ರಘು, ನಾರಾಯಣಸ್ವಾಮಿ, ಪಾಲಿಕೆ ಸದಸ್ಯೆ ರೇಖಾ, ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಆರ್‌.ಎಸ್‌. ಸಕ್ಸೇನಾ ಉಪಸ್ಥಿತರಿದ್ದರು. 

ಬೆಂಗಳೂರು ನಗರದ ವರೆಗೆ ವಿಸ್ತರಿಸಲು ಆಗ್ರಹ 
ವೈಟ್‌ಫೀಲ್ಡ್‌-ಬೈಯಪ್ಪನಹಳ್ಳಿ ನಡುವಿನ ಡೆಮು ರೈಲು ಸೇವೆಯನ್ನು ಕಂಟೋನ್‌ಮೆಂಟ್‌ ಅಥವಾ ಹೆಬ್ಟಾಳದವರೆಗೆ ವಿಸ್ತರಣೆ ಹಾಗೂ ಸೇವೆಗಳನ್ನು ಹೆಚ್ಚಿಸಬೇಕು ಎಂಬ ಒತ್ತಾಯ ಇದೇ ವೇಳೆ ಕೇಳಿಬಂತು.  ಸಂಸದ ಪಿ.ಸಿ. ಮೋಹನ್‌ ಮಾತನಾಡಿ, ಬೆಳಿಗ್ಗೆ ಬೈಯಪ್ಪನಹಳ್ಳಿಯಿಂದ ಹೊರಡುವ ರೈಲು, ಸಂಜೆ ವೈಟ್‌ಫೀಲ್ಡ್‌ನಿಂದ ಬೈಯಪ್ಪನಹಳ್ಳಿಗೆ ವಾಪಸ್‌ ಆಗುತ್ತದೆ. ಕೊನೆಪಕ್ಷ ಇದು ಎರಡು-ಮೂರು ಬಾರಿಯಾದರೂ ಹೋಗಿ-ಬರುವಂತಾಗಬೇಕು ಎಂದು ಒತ್ತಾಯಿಸಿದರು. 

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸ್ಥಳೀಯರು, “ಕೇವಲ ಬೈಯಪ್ಪನಹಳ್ಳಿಗೆ ಈ ಸೇವೆ ಸೀಮಿತವಾಗಿದೆ. ನಗರಕ್ಕೆ ತೆರಳಲು ಮತ್ತೆ ಬಸ್‌ ಅಥವಾ ಮೆಟ್ರೋ ಏರಬೇಕು. ಹಾಗಾಗಿ, ಈ ಪ್ರಯಾಣ ಜನರಿಗೆ ದುಬಾರಿ ಆಗಲಿದೆ. ಕಂಟೋನ್‌ಮೆಂಟ್‌ ರೈಲು ನಿಲ್ದಾಣ ಅಥವಾ ಹೆಬ್ಟಾಳದವರೆಗೆ ಇದನ್ನು ವಿಸ್ತರಿಸಬೇಕು. ಇದರಿಂದ ಹೆಚ್ಚು ಪ್ರಯಾಣಿಕರಿಗೆ ಅನುಕೂಲ ಆಗಲಿದೆ. ಅಷ್ಟೇ ಅಲ್ಲ, ಸಂಜೆ 7ರ ನಂತರ ಈ ಮಾರ್ಗದಲ್ಲಿ ರೈಲು ಸೇವೆಯೇ ಇಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು. 

ಘೋಷಣೆಗಳ ಪೈಪೋಟಿ
ಡೆಮು ರೈಲು ಸೇವೆ ಚಾಲನಾ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌-ಬಿಜೆಪಿ ಪಕ್ಷಗಳ ಕಾರ್ಯಕರ್ತರು ಘೋಷಣೆಗಾಗಿ ಪೈಪೋಟಿಗಿಳಿದರು. ವೇದಿಕೆಯಲ್ಲಿ ಎರಡೂ ಪಕ್ಷಗಳ ನಾಯಕರಿದ್ದರು. ಅದೇ ರೀತಿ, ಕಾರ್ಯಕ್ರಮದಲ್ಲಿ ಆಯಾ ನಾಯಕರ ಬೆಂಬಲಿಗರೂ ಇದ್ದರು. ಮಾತಿಗಿಳಿದ ಅತಿಥಿಗಳು, ವೇದಿಕೆಯಲ್ಲಿದ್ದ ನಾಯಕರ ಹೆಸರು ಪ್ರಸ್ತಾಪಿಸುತ್ತಿದ್ದಂತೆ ಬೆಂಬಲಿಗರು ಮತ್ತು ಕಾರ್ಯಕರ್ತರು ಪಕ್ಷ ಹಾಗೂ ನಾಯಕರ ಪರ ಘೋಷಣೆ ಹಾಕಿದರು. 

Advertisement

Udayavani is now on Telegram. Click here to join our channel and stay updated with the latest news.

Next