Advertisement

ಅಪರಾಧ ತಡೆಗೆ ಸುಬಾಹು ಇ-ಬೀಟ್‌ ಕಣ್ಗಾವಲು

07:18 PM Sep 25, 2020 | Suhan S |

ದಾವಣಗೆರೆ: ಪೊಲೀಸ್‌ ಗಸ್ತು ಕಾರ್ಯವನ್ನು ಇನ್ನಷ್ಟು ಬಿಗಿಗೊಳಿಸುವ ಮೂಲಕ ರಾತ್ರಿ ವೇಳೆ ನಡೆಯುವ ಕಳ್ಳತನ, ದರೋಡೆ ಸೇರಿದಂತೆ ಇನ್ನಿತರ ಅಪರಾಧ ಚಟುವಟಿಕೆಗೆ ಕಡಿವಾಣ ಹಾಕಲು ಜಿಲ್ಲಾ ಪೊಲೀಸ್‌ಇಲಾಖೆ ಸಹ ಆಧುನಿಕ ತಂತ್ರಾಂಶದ ಮೊರೆ ಹೋಗಿದೆ. ಸದ್ಯದಲ್ಲಿಯೇ “ಸುಬಾಹು ಇ-ಬೀಟ್‌’ ವ್ಯವಸ್ಥೆ ಜಿಲ್ಲೆಯಲ್ಲಿ ಜಾರಿಗೆ ಬರಲಿದೆ.

Advertisement

ಇದು ತಂತ್ರಾಂಶ ಆಧರಿಸಿದ ಹೊಸ ವ್ಯವಸ್ಥೆಯಾಗಿದ್ದು, ಎಲ್ಲ ಮಾಹಿತಿಯೂ ಡಿಜಿಟಲೀಕರಣಗೊಂಡು ಇಲಾಖೆಯ ಹಿರಿಯ ಅಧಿಕಾರಿಗಳು ತಾವಿದ್ದಲ್ಲಿಯೇ ಇಲಾಖಾ ಸಿಬ್ಬಂದಿಯರಾತ್ರಿ ಗಸ್ತು ಪಾಳಿಯನ್ನು ಪರಿಶೀಲಿಸಬಹುದಾಗಿದೆ. ಈ ಹಿಂದೆ ರಾತ್ರಿ ಗಸ್ತು ತಿರುಗುತ್ತಿದ್ದ ಪೊಲೀಸರು ನಿಗದಿತ ಸ್ಥಳದಲ್ಲಿಟ್ಟಿರುತ್ತಿದ್ದ ಪಟ್ಟಿಯಲ್ಲಿ ಕೈಬರಹದ ಮೂಲಕ ಸಹಿ ಹಾಕಿ ತಮ್ಮ ಕರ್ತವ್ಯ ಖಚಿತಪಡಿಸುತ್ತಿದ್ದರು. ಎಷ್ಟೋ ಬಾರಿ ಈ ಹಳೆಯ ವ್ಯವಸ್ಥೆಯಲ್ಲಿ ಗಸ್ತಿನಲ್ಲಿರುವ ಪೊಲೀಸರು ಕರ್ತವ್ಯ ಸ್ಥಳಕ್ಕೆ ಬರುವುದಿಲ್ಲ, ಸಹಿ ಮಾತ್ರ ಹಾಕುತ್ತಾರೆ ಎಂಬ ಸಾರ್ವಜನಿಕ ವಲಯದ ಆರೋಪಗಳಿಗೆ ಸುಬಾಹು ಇ-ಬೀಟ್‌ ವ್ಯವಸ್ಥೆಯಿಂದ ಕತ್ತರಿ ಬೀಳಲಿದೆ. ಈಗ ಸುಬಾಹು ಇ-ಬೀಟ್‌ ಜಾರಿಗೊಳಿಸುತ್ತಿರುವುದರಿಂದ ಕರ್ತವ್ಯದಲ್ಲಿರುವ ಸಿಬ್ಬಂದಿ ಸುಬಾಹು ಇ-ಬೀಟ್‌ ಆ್ಯಪ್‌ ತಮ್ಮ ಸ್ಮಾರ್ಟ್‌ ಫೋನ್‌ನಲ್ಲಿ ಡೌನ್‌ಲೋಡ್‌ ಮಾಡಿಕೊಂಡು ಬೀಟ್‌ ಸ್ಥಳಕ್ಕೆ ಹೋಗಿ ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡುವ ಮೂಲಕ ತಮ್ಮ ಕರ್ತವ್ಯ ಖಚಿತಪಡಿಸಲೇಬೇಕಾಗಿದೆ. ಇದರಿಂದ ಸಿಬ್ಬಂದಿ ಕರ್ತವ್ಯ ನಿರ್ವಹಿಸಿದ್ದಾರೆಯೋ ಇಲ್ಲವೋ ಎಂಬ ಮಾಹಿತಿ ಸಮಯ ಸಹಿತ ಇಲಾಖೆಯಲ್ಲಿ ದಾಖಲಾಗುತ್ತದೆ. ಈ ಡಿಜಿಟಲ್‌ ವ್ಯವಸ್ಥೆಯಿಂದ ಎಲ್ಲ ಪೊಲೀಸ್‌ ಸಿಬ್ಬಂದಿ ರಾತ್ರಿ ಗಸ್ತು ಕಡ್ಡಾಯವಾಗಿ ಮಾಡಲೇಬೇಕಾಗುತ್ತದೆ.

ಕಳ್ಳತನ, ದರೋಡೆಗೆ ಕಡಿವಾಣ: ಸುಬಾಹು ಇ-ಬೀಟ್‌ ವ್ಯವಸ್ಥೆ ಪೊಲೀಸ್‌ ಸಿಬ್ಬಂದಿ ರಾತ್ರಿ ಗಸ್ತು ಪಾಳಿಯನ್ನು ಕಡ್ಡಾಯವಾಗಿ ಮಾಡುವಂತೆ ಮಾಡುತ್ತದೆ. ಇದರಿಂದ ಸಹಜವಾಗಿ ಪೊಲೀಸರ ಗಸ್ತು ಕಾರ್ಯ ವಾಸ್ತವದಲ್ಲಿ ಇರುವುದರಿಂದ ಆ ಪ್ರದೇಶದಲ್ಲಿ ರಾತ್ರಿ ಕಳ್ಳತನ, ದರೋಡೆ ಸೇರಿದಂತೆ ಇನ್ನಿತರ ಅಪರಾಧ ಪ್ರಕರಣಗಳಿಗೂ ಕಡಿವಾಣ ಬೀಳಲಿದೆ. ಹೀಗಾಗಿ ಪೊಲೀಸ್‌ ಇಲಾಖೆ ಈ ತಂತ್ರಾಂಶವನ್ನು ಬಹುಪಯುಕ್ತವಾಗಿ ಬಳಸಿಕೊಳ್ಳಲು ಮುಂದಾಗಿದೆ. ಒಟ್ಟಾರೆ ಪೊಲೀಸ್‌ ಇಲಾಖೆ ರಾತ್ರಿ ಗಸ್ತು ಪಾಳಿಯನ್ನು ಬಿಗಿಗೊಳಿಸಲು ಸುಬಾಹು ತಂತ್ರಾಂಶ ಸಹಕಾರಿಯಾಲಿದೆ. ಜೊತೆಗೆ ಸಾರ್ವಜನಿಕರಿಗೆ ಹೆಚ್ಚಿನ ಭದ್ರತೆ, ರಕ್ಷಣೆಯ ಭರವಸೆಯನ್ನೂ ಮೂಡಿಸಿದೆ.

ರಾತ್ರಿ ವೇಳೆಯ ಪೊಲೀಸ್‌ ಗಸ್ತು ವ್ಯವಸ್ಥೆಯನ್ನು ಇನ್ನಷ್ಟು ಬಿಗಿಗೊಳಿಸಲು, ಸಾರ್ವಜನಿಕರ ಸುರಕ್ಷತೆ ಹೆಚ್ಚಿಸಲು ಹಾಗೂ ಅಪರಾಧಗಳನ್ನು ನಿಯಂತ್ರಿಸಲು ಸುಬಾಹು ತಂತ್ರಾಂಶ ಸಹಕಾರಿ. ಈ ನೂತನ ತಂತ್ರಾಂಶ ವ್ಯವಸ್ಥೆಯನ್ನು ಜಿಲ್ಲೆಯಲ್ಲಿ ಶೀಘ್ರದಲ್ಲಿಯೇ ಅನುಷ್ಠಾನಗೊಳಿಸಲಾಗುವುದು. – ಹನುಮಂತರಾಯ, ಎಸ್ಪಿ

ನಾಗರಿಕರಿಗೂ ಅನುಕೂಲ : ಸುಬಾಹು ತಂತ್ರಾಂಶದಿಂದ ಸಾರ್ವಜನಿಕರಿಗೂ ಅನುಕೂಲವಾಗಲಿದೆ. ಸಾರ್ವಜನಿಕರು ಸಹ ಸುಬಾಹು ರೆಸಿಡೆಂಟ್‌ ಆ್ಯಪ್‌ ಅನ್ನು ಉಚಿತವಾಗಿ ಮೊಬೈಲ್‌ನಲ್ಲಿ ಡೌನ್‌ ಲೋಡ್‌ ಮಾಡಿಕೊಂಡು ದೂರದ ಊರಿಗೆ ತೆರಳುವ ಮುನ್ನ ಹತ್ತಿರದ ಪೊಲೀಸ್‌ ಠಾಣೆಗೆ ಈ ತಂತ್ರಾಂಶದ ಮೂಲಕ ಮಾಹಿತಿ ನೀಡಬಹುದಾಗಿದೆ. ಇದರಿಂದ ದೂರ ಪ್ರಯಣ ಕೈಗೊಂಡ ಸಂದರ್ಭದಲ್ಲಿ ಬೀಟ್‌ ಪೊಲೀಸರು ಮನೆಯ ಬಳಿಯೂ ಬಂದು ಗಸ್ತು ತಿರುಗಲಿದ್ದಾರೆ . ಇದರಿಂದ ಸಾರ್ವಜನಿಕರಿಗೂ ಹೆಚ್ಚಿನ ಭದ್ರತೆ ಸುಲಭವಾಗಿ ಸಿಗಲಿದೆ ಎಂದು ನಿರೀಕ್ಷಿಸಲಾಗಿದೆ.

Advertisement

 

-ಎಚ್‌.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next