Advertisement

ಕನ್ನಡಕ್ಕೊಬ್ಬ ಸ್ಟೈಲಿಶ್‌ ವಿಲನ್‌

04:45 PM Mar 09, 2018 | |

ಇವರನ್ನು ನೀವು ಈಗಾಗಲೇ ಒಂದಷ್ಟು ಸಿನಿಮಾಗಳಲ್ಲಿ ನೋಡಿರುತ್ತೀರಿ. ಸಖತ್‌ ಸ್ಟೈಲಿಶ ವಿಲನ್‌ ಆಗಿ ಅನೇಕ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಿಧಾನವಾಗಿ ಈಗ ಒಂದಷ್ಟು ಸಿನಿಮಾಗಳಲ್ಲಿ ಬಿಝಿಯಾಗುತ್ತಿದ್ದಾರೆ ಕೂಡಾ. ಇವರ ಹೆಸರು ದೀಪಕ್‌ ಶೆಟ್ಟಿ. ಈಗಾಗಲೇ “ಶ್ರೀಕಂಠ’, “ಟೈಗರ್‌’, “ಭರ್ಜರಿ’, “ಗೌಡ್ರು ಹೋಟೆಲ್‌’ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ನಟಿಸಿರುವ ಅಷ್ಟೂ ಸಿನಿಮಾಗಳಲ್ಲಿ ದೀಪಕ್‌ ಮಾಡಿರೋದು ನೆಗೆಟಿವ್‌ ಪಾತ್ರಗಳನ್ನೇ.  

Advertisement

ದೀಪಕ್‌ ಹುಟ್ಟಿದ್ದು, ಬೆಳೆದಿದ್ದು, ಓದಿದ್ದು ಎಲ್ಲವೂ ಮಂಗಳೂರಿನಲ್ಲಿ. ಉದ್ಯೋಗ ಅರಸಿ ಹೋಗಿದ್ದು ದುಬೈಗೆ. ದುಬೈನಲ್ಲಿ ಒಳ್ಳೆಯ ಉದ್ಯೋಗವೂ ಇತ್ತು. ಕೆಲಸದ ವಿಚಾರದಲ್ಲಿ ಬೇಸರವಾಗುವಂಥದ್ದೇನೂ ಇರಲಿಲ್ಲ. ಆದರೆ, ಮನಸ್ಸು ಮಾತ್ರ ಬೇರೇನೋ ಬಯಸುತ್ತಿತ್ತು. ಈ ಕ್ಷೇತ್ರ ನನ್ನದಲ್ಲ. ದಿನಾ ನಾನು ನಾನಾಗಿದ್ದರೆ ಚೆನ್ನಾಗಿರಲ್ಲ, ದಿನಕ್ಕೊಂದು ಪಾತ್ರವಾಗಬೇಕು, ಹೊಸ ಹಾದಿ ಹಿಡಿಯಬೇಕೆಂಬ ತುಡಿತ ಜೋರಾಗುತ್ತದೆ. ದೀಪಕ್‌ ಶೆಟ್ಟಿ ದುಬೈನಿಂದ ಮಂಗಳೂರು ಫ್ಲೈಟ್‌ ಹತ್ತಿಯೇ ಬಿಡುತ್ತಾರೆ.

ಹೀಗೆ ಬಂದ ಅವರು ಮಾಡೆಲಿಂಗ್‌ನಲ್ಲೂ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಮಾಡೆಲಿಂಗ್‌ನಿಂದ ದೀಪಕ್‌ ಶೆಟ್ಟಿ ನೇರವಾಗಿ ಪ್ರವೇಶಿಸಿದ್ದು ಕಿರುತೆರೆಗೆ. “ಕಾದಂಬರಿ’ ಎಂಬ ಧಾರಾವಾಹಿಯಲ್ಲಿ ನಟಿಸುವ ಮೂಲಕ ದೀಪಕ್‌ ಬಣ್ಣದ ಲೋಕಕ್ಕೆ ಎಂಟ್ರಿಕೊಡುತ್ತಾರೆ. ಆ ನಂತರ ವಿನು ಬಳಂಜ ಅವರ “ಪ್ರೀತಿ ಇಲ್ಲದ ಮೇಲೆ’, “ಬಂದೇ ಬರುತಾವ ಕಾಲ’, “ನಿಗೂಢ’ ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಆದರೆ, ದೀಪಕ್‌ ಶೆಟ್ಟಿಗೆ ಬ್ರೇಕ್‌ ಕೊಟ್ಟಿದ್ದು, “ಲವ್‌ಲವಿಕೆ’ ಧಾರಾವಾಹಿ.

ಈ ಧಾರಾವಾಹಿಯಲ್ಲಿ ವಯಸ್ಸಾದ ಪಾತ್ರ ಮಾಡುವ ಮೂಲಕ ಅನೇಕರ ಗಮನ ಸೆಳೆಯುತ್ತಾರೆ. ಈ ಧಾರಾವಾಹಿ ನೋಡಿ, ನಂದಕಿಶೋರ್‌ “ಟೈಗರ್‌’ ಚಿತ್ರದಲ್ಲಿ ಅವಕಾಶ ಕೊಟ್ಟರಂತೆ. “ನನಗೆ “ಲವ್‌ಲವಿಕೆ’ ಧಾರಾವಾಹಿ ಒಳ್ಳೆಯ ಹೆಸರು ತಂದುಕೊಟ್ಟಿತು. ಆ ಧಾರಾವಾಹಿಯಲ್ಲಿ ನಾನು ವಯಸ್ಸಾದ ಪಾತ್ರ ಮಾಡಿದ್ದೆ. ನನ್ನ ಹೇರ್‌ಸ್ಟೈಲ್‌ ಕೂಡಾ ಅದಕ್ಕೆ ಹೊಂದುವಂತಿತ್ತು. ಆ ಪಾತ್ರ ಒಪ್ಪಿಕೊಂಡಾಗ ಅನೇಕರು “ನಿನ್ನ ಕಥೆ ಮುಗೀತು, ಮುಂದೆ ನಿನಗೆ ಇಂತಹ ಪಾತ್ರಗಳೇ ಬರುತ್ತವೆ’ ಎಂದು ಹೆಸರಿಸಿದರು.

ಆದರೆ, ನಾನು ಅದನ್ನು ಸವಾಲಾಗಿ ಸ್ವೀಕರಿಸಿ, ಪಾತ್ರ ಮಾಡಿದೆ. ಅದು ನನಗೆ ಒಳ್ಳೆಯ ಹೆಸರು ತಂದುಕೊಟ್ಟಿತು’ ಎಂದು ತಮ್ಮ ಬಣ್ಣದ ಲೋಕದ ಆರಂಭದ ಬಗ್ಗೆ ಹೇಳುತ್ತಾರೆ ದೀಪಕ್‌ ಶೆಟ್ಟಿ. ದೀಪಕ್‌ ಶೆಟ್ಟಿಯವರು ಇಲ್ಲಿವರೆಗೆ ನಟಿಸಿದ ಸಿನಿಮಾಗಳನ್ನು ನೋಡಿದರೆ ಅಲ್ಲಿ ನಿಮಗೆ ಕಾಣಸಿಗೋದು ಒಬ್ಬ ಸ್ಟೈಲಿಶ್‌ ವಿಲನ್‌. ಮಾಡರ್ನ್ ಲುಕ್‌ನ ಸೂಟು-ಬೂಟು ಹಾಕಿಕೊಂಡಿರುವ ವಿಲನ್‌ ಪಾತ್ರಗಳಲ್ಲೇ ದೀಪಕ್‌ ಕಾಣಿಸಿಕೊಂಡಿದ್ದಾರೆ. ಮುಂದೆ ಒಪ್ಪಿಕೊಂಡಿರುವ ಸಿನಿಮಾಗಳಲ್ಲೂ ಅದೇ ತರಹದ ಪಾತ್ರ ಅವರಿಗೆ ಸಿಕ್ಕಿದೆಯಂತೆ.

Advertisement

“ಬಹುಶಃ ನನ್ನ ಸಾಲ್ಟ್ ಅಂಡ್‌ ಪೆಪ್ಪರ್‌ ಹೇರ್‌ಸ್ಟೈಲ್‌ ಹಾಗೂ ನನ್ನ ಲುಕ್‌ನಿಂದಾಗಿ ನನಗೆ ಸ್ಟೈಲಿಶ್‌ ವಿಲನ್‌ ಪಾತ್ರಗಳು ಸಿಗುತ್ತಿರಬಹುದು. ಆದರೆ, ಪಾತ್ರಗಳ ಹಿನ್ನೆಲೆ ಬೇರೆಯಾಗಿರುವುದರಿಂದ ಹೊಸತನದಿಂದ ಪಾತ್ರ ನಿರ್ವಹಿಸಲು ಪ್ರಯತ್ನಿಸುತ್ತಿದ್ದೇನೆ’ ಎನ್ನುವುದು ದೀಪಕ್‌. ಮುಂದೆ “ಅಸತೋಮ ಸದ್ಗಮಯ’, “ಕಾಲಚಕ್ರ’, “ಪೊಗರು’ ಸೇರಿದಂತೆ ಇನ್ನೂ ಒಂದಷ್ಟು ಚಿತ್ರಗಳಲ್ಲಿ ದೀಪಕ್‌ ಶೆಟ್ಟಿ ನಟಿಸಲಿದ್ದಾರಂತೆ. ಸದ್ಯ ಯೋಗರಾಜ್‌ ಭಟ್‌ ನಿರ್ದೇಶನದ “ಪಂಚತಂತ್ರ’ ಚಿತ್ರದಲ್ಲಿ ದೀಪಕ್‌ ನಟಿಸುತ್ತಿದ್ದಾರೆ.

ಈ ಚಿತ್ರದಲ್ಲಿ ಹಿಪ್ಪಿ ಸ್ಟೈಲ್‌ನ ಪಾತ್ರವಂತೆ. ವಯಸ್ಸಾದರೂ ದೇಹವನ್ನು ಗಟ್ಟಿಮುಟ್ಟಾಗಿಟ್ಟುಕೊಂಡು ಜಾಲಿಯಾಗಿರುವ ಪಾತ್ರ ಸಿಕ್ಕಿದೆಯಂತೆ. ದೀಪಕ್‌ ಶೆಟ್ಟಿಗೆ ಸಾಕಷ್ಟು ಅವಕಾಶಗಳು ಬರುತ್ತಿವೆ. ಬಹುತೇಕ ಪಾತ್ರಗಳು ನೆಗೆಟಿವ್‌. ಹಾಗಾದರೆ ಒಂದು ಸಿನಿಮಾ ಒಪ್ಪಿಕೊಳ್ಳುವ ಮುನ್ನ ದೀಪಕ್‌ ಏನು ನೋಡುತ್ತಾರೆ ಎಂಬ ಪ್ರಶ್ನೆ ಬರುತ್ತದೆ. ಅದಕ್ಕೂ ಅವರು ಉತ್ತರಿಸಿದ್ದಾರೆ.

“ನಾನು ಯಾವುದೇ ಪಾತ್ರ ಒಪ್ಪಿಕೊಳ್ಳುವ ಮುನ್ನ ಆ ಪಾತ್ರದ ಆದ್ಯತೆ ನೋಡುತ್ತೇನೆ. ಸಿನಿಮಾಕ್ಕೆ ಆ ಪಾತ್ರ ಎಷ್ಟು ಪ್ರಾಮುಖ್ಯವಾಗಿರುತ್ತದೆ ಎಂಬುದು ಕೂಡಾ ಮುಖ್ಯವಾಗುತ್ತದೆ. ಜೊತೆಗೆ ಸುಖಾಸುಮ್ಮನೆ ಬಂದು ಬಿಲ್ಡಪ್‌ ಕೊಡುವ ಪಾತ್ರ ನನಗಿಷ್ಟವಿಲ್ಲ. ನಟನೆಗೆ ಅವಕಾಶವಿರಬೇಕು. ಜೊತೆಗೆ ಆ ಪಾತ್ರ ನನಗೆ ಹೊಂದಿಕೆಯಾಗಬೇಕು. ಯಾರು ಸಿಕ್ಕಿಲ್ಲ ಎಂಬ ಕಾರಣಕ್ಕೆ ನಾನು ಪಾತ್ರ ಮಾಡಲು ಸಿದ್ಧವಿಲ್ಲ’ ಎಂದು ತಮ್ಮ ಸಿನಿಮಾ ಆಯ್ಕೆಯ ಬಗ್ಗೆ ಹೇಳುತ್ತಾರೆ. 

* ರವಿಪ್ರಕಾಶ್ ರೈ

Advertisement

Udayavani is now on Telegram. Click here to join our channel and stay updated with the latest news.

Next