Advertisement
ಧಾರವಾಡ: ತೊಲೆಗೆ ಜೋತು ಬೀಳುತ್ತಿರುವ ಈರುಳ್ಳಿ, ಊರ ಬಾಗಿಲಿನಲ್ಲಿ ಎತ್ತರದ ಕಂಬಕ್ಕೆ ನೇತಾಡುವ ತೆಂಗಿನಕಾಯಿ, ಸೀಮೆ ಕರಿಯಮ್ಮನೆದುರು ಕುರಿ ಬೇಟೆ, ಮನೆ ಜಗಲಿಯ ಮೇಲೆ ಬೇವಿನ ಸೊಪ್ಪು, ಹಿತ್ತ ಭರಮಪ್ಪನಿಗೆ ಕರಿಗಡಬು ಎಡೆ… ಕೊರೊನಾ ಹಾವಳಿ ಕಡಿಮೆಯಾಗಲು ಹಳ್ಳಿಗರು ಮತ್ತೆ ಮೂಢನಂಬಿಕೆಗಳ ಆಚರಣೆಗೆ ಮೊರೆ ಹೋಗಿದ್ದಾರೆ.
Related Articles
Advertisement
ಹೆಣ ಹೊರುವುದಕ್ಕೂ ಸರತಿ
ಕೆಲ ಗ್ರಾಮಗಳಲ್ಲಿ ದಿನಕ್ಕೆ 5-6 ಜನ ಸಾಯುತ್ತಿದ್ದು, ಇಂತಹ ಗ್ರಾಮಗಳಲ್ಲಂತೂ ಜನರು ನಿಜಕ್ಕೂ ಆತಂಕಗೊಂಡಿದ್ದಾರೆ. ಜಿಲ್ಲೆಯ ಕೆಲವು ಗ್ರಾಮಗಳಲ್ಲಿ ಹೆಣ ಹೊತ್ತುಕೊಂಡು ಹೋಗುವ ಸಿದಗಿ (ಹೆಣ ಕೂಡಿಸಿ ಸ್ಮಶಾನಕ್ಕೆ ಒಯ್ಯುವ ಮಂಟಪ)ಗೆ ಸರತಿ ಹಚ್ಚುವ ಸ್ಥಿತಿ ನಿರ್ಮಾಣವಾಗಿದೆ.
ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಬಂದ್
ಮೊದಲ ಅಲೆ ವೇಳೆ ಭಯಭೀತರಾಗಿದ್ದ ಹಳ್ಳಿಗರಿಗೆ ಆ ಆಲೆ ತಟ್ಟಿರಲಿಲ್ಲ. ಇದೀಗ 2ನೇ ಅಲೆ ಹೊಡೆತಕ್ಕೆ ಹಳ್ಳಿಗರು ತೀವ್ರ ಸಂಕಷ್ಟದಲ್ಲಿದ್ದು, ಮೇ18ರವರೆಗೂ ಹಳ್ಳಿಗಳಲ್ಲಿ ಮದುವೆ, ಮುಂಜಿ, ನಾಮಕರಣ, ಜಾತ್ರೆ, ಉಡಿ ತುಂಬುವ ಕಾರ್ಯಗಳು ನಡೆದಿವೆ. ಇದಕ್ಕೆ ಸರ್ಕಾರ ಮತ್ತು ಜಿಲ್ಲಾಡಳಿತವೇ ಒಪ್ಪಿಗೆ ಸೂಚಿಸಿತ್ತು. ಇದೇ ಗ್ರಾಮಾಂತರ ಪ್ರದೇಶದಲ್ಲಿ ಕೊರೊನಾ ತೀವ್ರತೆ ಪಡೆಯಲು ಪ್ರಮುಖ ಕಾರಣ. ಅದೂ ಅಲ್ಲದೇ ಸಾಮಾಜಿಕ ಅಂತರ, ಮಾಸ್ಕ್, ಸ್ಯಾನಿಟೈಜರ್‌ಗಳ ಬಳಕೆ ಗ್ರಾಮಾಂತರ ಪ್ರದೇಶದಲ್ಲಿ ಈಗಷ್ಟೇ ಪ್ರವೇಶ ಪಡೆದಿದೆ.
ಉಡದ ಬಲಿ
ಹಳ್ಳಿಗಳಲ್ಲಿ ಉಡ ಸಿಗುವುದೇ ಕಷ್ಟ. ಇದೀಗ ಅವಸಾನದ ಅಂಚಿಗೆ ಸೇರಿರುವ ಉಡ ಹುಡುಕಿ ಕೊಲ್ಲುವ ಕ್ರೂರ ಕೃತ್ಯಕ್ಕೆ ಧಾರವಾಡ ಜಿಲ್ಲೆಯ ಕಾಡಿನ ಮಧ್ಯದ ಊರುಗಳ ಕೆಲವಷ್ಟು ಮೂಢರು ಮುಂದಾಗಿದ್ದಾರೆ. ಇಂತಹ ಒಂದು ಘಟನೆ ಮೇ 11ರಂದು ಅಳ್ನಾವರ ಸಮೀಪದ ಗ್ರಾಮವೊಂದರಲ್ಲಿ ನಡೆದಿದೆ. ಅಷ್ಟೇಯಲ್ಲ, ಕೊಂದ ಉಡವನ್ನು ತಮ್ಮೂರಿನ ಸೀಮೆ ದೇವತೆಯರಿಗೆ ಹಸಿಮಾಂಸದ ರೂಪದಲ್ಲಿಯೇ ಎಡೆ ಹಿಡಿದು ಚೆಲ್ಲಿ ಹೋಗಿದ್ದಾರೆ. ಕೊರೊನಾಕ್ಕೂ ಕಾಡುಮೇಡು ಹೊಲಗದ್ದೆಯ ಮಣ್ಣಿನಲ್ಲಿ ಗೂಡು ಮಾಡಿಕೊಂಡು ಜೀವಿಸುವ ಉಡಕ್ಕೂ ಏನು ಸಂಬಂಧ? ಇಂತಹ ಮೂಢರ ವಿರುದ್ಧ ಸರ್ಕಾರ ಕಠಿಣ ಕ್ರಮ ಜರುಗಿಸಬೇಕು ಎನ್ನುತ್ತಿದ್ದಾರೆ ಜ್ಞಾನ ವಿಜ್ಞಾನ ಸಮಿತಿ ಸದಸ್ಯರು.
ವಾರ ಬಿಟ್ಟ ಹಳ್ಳಿಗರು
ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು, ಸ್ಯಾನಿಟೈಜೇಶನ್‌ಗೆ ಕೆಲವು ಹಳ್ಳಿಗರು ಮತ್ತು ಹಳ್ಳಿಯ ಹಿರಿಯರು ಇನ್ನೂ ಒತ್ತು ಕೊಡುತ್ತಿಲ್ಲ. ಆದರೆ ದನಕರುಗಳಿಗೆ, ಜನರಿಗೆ ಮಳೆಗಾಲದಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದ ಸಾಂಕ್ರಾಮಿಕ ರೋಗಗಳ ಸಂದರ್ಭದಲ್ಲಿ ಗ್ರಾಮದಲ್ಲಿ ಸೋಮವಾರ ಬಸವಣ್ಣ, ಮಂಗಳವಾರ ಹಾಗೂ ಶುಕ್ರವಾರ ಗ್ರಾಮ ದೇವತೆಯರ ಹೆಸರಿನಲ್ಲಿ ವಾರ ಬಿಡುವ ಪದ್ಧತಿಯನ್ನು ಜಿಲ್ಲೆಯ ಕೆಲವು ಹಳ್ಳಿಗರು ಆಚರಿಸುತ್ತಿದ್ದಾರೆ. ಆ ಇಡೀ ದಿನ ಮನೆಯಲ್ಲಿ ರೊಟ್ಟಿ ಮಾಡುವಂತಿಲ್ಲ. ಕರಿದ ಪದಾರ್ಥಗಳು ಮತ್ತು ಹುರಿದ ಪದಾರ್ಥಗಳನ್ನು ಸಿದ್ಧಪಡಿಸುವಂತಿಲ್ಲ. ಆದರೆ ಮುನ್ನಾ ದಿನವೇ ಇವುಗಳನ್ನು ಮಾಡಿಟ್ಟುಕೊಂಡು ತಿನ್ನಬಹುದು! ಇನ್ನೊಂದೆಡೆ ಹತ್ತಿಪ್ಪತ್ತು ಜನರು ಸೇರಿ ಗ್ರಾಮ ದೇವರ ಸಂಪ್ರೀತ ಮಾಡುವ ಪ್ರಯತ್ನಗಳು ನಡೆಯುತ್ತಿವೆ.