ಧಾರವಾಡ: ವಾಣಿಜ್ಯ ಮಳಿಗೆ ಕಟ್ಟಡ ನಿರ್ಮಾಣಕ್ಕೆ ಅಡಿಪಾಯ ಹಾಕಲು ನಿಗದಿತ ಪ್ರಮಾಣಕ್ಕಿಂತ ಹೆಚ್ಚಾಗಿ ನೆಲ ಅಗೆದಿದ್ದರಿಂದ ಅದಕ್ಕೆ ಹೊಂದಿಕೊಂಡ ಪಕ್ಕದ ಮನೆ ಗೋಡೆ ಕುಸಿದ ಘಟನೆ ನಡೆದಿದೆ.
ಶ್ರೀಕಾಂತ ಅವರ ಮನೆಯ ಪಕ್ಕದಲ್ಲಿಯೇ ಇದ್ದ ಮನೆ ಸಂಪೂರ್ಣ ನೆಲಸಮಗೊಳಿಸಿ, ಅಲ್ಲಿ ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ ನೆಲ ಅಗೆಯುವ ಕೆಲಸ ಗಂಗಾ ಪಾಸಲಕರ ಹಾಗೂ ಇತರರ ಮಾಲೀಕತ್ವದಲ್ಲಿ ಸಾಗಿತ್ತು. ಇದರಿಂದ ತಮ್ಮ ಮನೆಗೆ ಧಕ್ಕೆ ಆಗುವ ಬಗ್ಗೆ ಶ್ರೀಕಾಂತ ಕಟ್ಟಡ ಮಾಲೀಕರಿಗೆ ಹೇಳಿದ್ದರೂ ಅಗೆಯುವ ಕೆಲಸ ಕೈಗೊಂಡಿದ್ದರಿಂದ ಏ. 27ರಂದೇ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರು.
ನೆಲ ಅಗೆದ ಪರಿಣಾಮ ಯಾವುದೇ ಸಂದರ್ಭದಲ್ಲೂ ಅನಾಹುತ ಆಗುವ ಬಗ್ಗೆ ಅರಿವಿದ್ದ ಶ್ರೀಕಾಂತ ತಮ್ಮ ನಿವಾಸದಲ್ಲಿದ್ದ ಬಾಡಿಗೆದಾರರನ್ನು ಮನೆಯಿಂದ ಬೇರೆ ಕಡೆ ಸ್ಥಳಾಂತರ ಮಾಡಿದ್ದರು. ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಶನಿವಾರ ಬೆಳಗ್ಗೆ ಪಾಯಾ ಕುಸಿದ ಬಗ್ಗೆ ಮಾಹಿತಿ ತಿಳಿದು ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪರವಾನಗಿ ಪಡೆಯದೇ ಕೆಲಸ ಆರಂಭಿಸಿದ್ದಕ್ಕೆ ಮಾಲೀಕರಿಗೆ ನೋಟಿಸ್ ಸಹ ಜಾರಿ ಮಾಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕಟ್ಟಡ ಮಾಲೀಕ ವೆಂಕಟೇಶ ಪಾಸಲಕರ, ವಾಣಿಜ್ಯ ಕಟ್ಟಡವನ್ನು ಕಾನೂನು ಪ್ರಕಾರವೇ ನಿರ್ಮಿಸುತ್ತಿದ್ದೇವೆ. ನಮ್ಮ ಸ್ಥಳದ ಪಕ್ಕದಲ್ಲಿನ ಮನೆಗಳಿಗೆ ಆಗಿರುವ ಹಾನಿಯನ್ನು ಭರಿಸಲು ಸಿದ್ಧವಾಗಿದ್ದೇವೆ. ಈ ಕುರಿತು ಮನೆ ಮಾಲೀಕರ ಜತೆ ಮಾತುಕತೆ ಕೈಗೊಂಡಿದ್ದೇವೆ ಎಂದು ಹೇಳಿದ್ದಾರೆ.
Advertisement
ವಿದ್ಯಾಗಿರಿಯ ನಿವಾಸಿ ಶ್ರೀಕಾಂತ ದೇವಗಿರಿ ಅವರ ಮನೆ ಗೋಡೆ ಕುಸಿದಿದ್ದು, ಮನೆಯ ಪಾಯಾದ ಪಾರ್ಶ್ವ ಭಾಗವೂ ಶುಕ್ರವಾರ ತಡರಾತ್ರಿ ಕುಸಿದಿದೆ.
Related Articles
Advertisement
ಯಾವುದೇ ಅನುಮತಿ ಪಡೆಯದೆ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭಿಸಿದ್ದರಿಂದ ಪರಿಶೀಲನೆ ಕೈಗೊಂಡು ನಗರ ಯೋಜನಾ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು. ನಂತರ ಅವರು ಕೂಡ ಕೆಲಸ ಸ್ಥಗಿತಗೊಳಿಸುವಂತೆ ನೋಟಿಸ್ ನೀಡಿದ್ದರು. ಇದಲ್ಲದೇ ಅಕ್ಕಪಕ್ಕದ ಆಸ್ತಿಗಳಿಗೆ ಹಾಗೂ ಸಾರ್ವಜನಿಕರ ಜೀವಹಾನಿಯಾದರೆ ಅದಕ್ಕೆ ನೀವೇ ಹೊಣೆಗಾರರು. ಹೀಗಾಗಿ ಕೂಡಲೇ ಸುರಕ್ಷಾ ಕ್ರಮಗಳ ಬಗ್ಗೆ ವರದಿ ನೀಡುವಂತೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ವಲಯ ಕಚೇರಿ-12 ರ ಸಹಾಯಕ ಆಯುಕ್ತ ವಿ.ಎಂ. ಸಾಲಿಮಠ ತಿಳಿಸಿದ್ದಾರೆ.