ನಂಜನಗೂಡು: ಮೈತ್ರಿಧರ್ಮ ಪಾಲನೆ ಕ್ಷೇತ್ರದ ಕೆಲ ಕಡೆ ಆಗಿದ್ದು, ಇನ್ನು ಕೆಲವೆಡೆ ಆಗಿಲ್ಲ. ಸಂಘಟನೆಯಲ್ಲಿ ವ್ಯತ್ಯಾಸವಾಗಿದ್ದರಿಂದ ಹಿನ್ನಡೆ ಉಂಟಾಯಿತು. ಹೀಗಾಗಿ ಸೋಲಿನ ಹೊಣೆಯನ್ನು ನಾನೇ ಹೊರುತ್ತೇನೆ ಎಂದು ಚಾಮರಾಜನಗರ ಲೋಕಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಆರ್.ಧ್ರುವನಾರಾಯಣ ಹೇಳಿದರು.
ನಗರಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಗಳ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿಧರ್ಮ ಪಾಲನೆ ಮಾಡುವ ನಿಟ್ಟಿನಲ್ಲಿ ರಾಜ್ಯ ಮಟ್ಟದಲ್ಲೇ ತಹಬದಿಗೆ ತರಲು ಸಾಧ್ಯವಾಗಲಿಲ್ಲ. ಕಾಂಗ್ರೆಸ್ ಜೆಡಿಎಸ್ ಒಮ್ಮತದ ಅಭ್ಯರ್ಥಿ ಆಯ್ಕೆ ಗೊಂದಲವೂ ಕೆಲಕಡೆ ಉಂಟಾಯಿತು. ಮತದಾರರ ತೀರ್ಪನ್ನು ಗೌರವಿಸುವುದು ಪ್ರಜಾಪ್ರಭುತ್ವ ವ್ಯವಸ್ಥೆ ಲಕ್ಷಣ.
ಹೀಗಾಗಿ ಫಲಿತಾಂಶವನ್ನು ಗೌರವಿಸುತ್ತೇನೆ ಎಂದು ಹೇಳಿದರು. ಅಭಿವೃದ್ಧಿ ಕೆಲಸ ಮಾಡುವುದು ನಮ್ಮ ಆತ್ಮತೃಪ್ತಿಗಾಗಿ ಹೊರತು ಚುನಾವಣೆಯಲ್ಲಿ ಮತ ಗಳಿಸುವ ಸಲುವಾಗಿ ಅಲ್ಲ. ಚುನಾವಣೆಗಳು ಕೆಲವು ವಿಷಯಗಳ ಮೇಲೆ ನಡೆಯುತ್ತದೆ.
ನನ್ನ ಅವಧಿಯಲ್ಲಿನ ಅಭಿವೃದ್ಧಿ ಕೆಲಸ ಹಾಗೂ ನನ್ನ ಕಾರ್ಯವೈಖರಿ ನೋಡಿ ಮತ ನೀಡುವಂತೆ ಮತದಾರರಲ್ಲಿ ಮನವಿ ಮಾಡಿದ್ದೆ. 5.6 ಲಕ್ಷ ಮತದಾರರು ನನಗೆ ಮತ ನೀಡಿದ್ದಾರೆ. ಹೀಗಾಗಿ ಮತದಾರರ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಕಳೆದ ಬಾರಿ ವರುಣ ಕ್ಷೇತ್ರದಲ್ಲಿ 37 ಸಾವಿರ ಮತಗಳ ಮುನ್ನಡೆ ಬಂದಿತ್ತು. ಈ ಬಾರಿ 9 ಸಾವಿರಕ್ಕೆ ಇಳಿದಿದೆ. ಉಳಿದ ಕ್ಷೇತ್ರಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ಮುನ್ನಡೆ ಬಂದಿಲ್ಲ. ಸೋಲಿನಿಂದ ಧೃತಿಗೆಟ್ಟಿಲ್ಲ. ಫಲಿತಾಂಶ ಮರುದಿನವೇ ನಗರಸಭೆ ಚುನಾವಣೆ ಸಂಬಂಧ ಅಭ್ಯರ್ಥಿಗಳ ಸಭೆ ನಡೆಸಿ ಚರ್ಚಿಸಿದ್ದೇನೆ.
ಪಕ್ಷದ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತೇನೆ. ನನಗೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಯಾವುದೇ ಇರಾದೆಯಿಲ್ಲ. ಮುಂಬರುವ ಲೋಕಸಭಾ ಚುನಾವಣೆಯಲ್ಲೆ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸಂಸದನಾಗುವುದಷ್ಟೆ ನನ್ನ ಗುರಿ ಎಂದು ಸ್ಪಷ್ಟಪಡಿಸಿದರು.
ಮಾಜಿ ಶಾಸಕ ಕಳಲೆ ಎನ್.ಕೇಶವಮೂರ್ತಿ, ಕೆಪಿಸಿಸಿ ಕಾರ್ಯದರ್ಶಿ ಎಸ್.ಸಿ.ಬಸವರಾಜು, ತಾಪಂ ಮಾಜಿ ಅಧ್ಯಕ್ಷ ಬಿ.ಎಂ.ನಾಗೇಶ್ ರಾಜ್, ಕೆಪಿಸಿಸಿ ಸದಸ್ಯ ಅಕºರ್ ಅಲಿ, ಬ್ಲಾಕ್ ಅಧ್ಯಕ್ಷ ಪಿ.ಶ್ರೀನಿವಾಸ್ ಸೇರಿದಂತೆ ಇತರರಿದ್ದರು.