Advertisement

ಎಡನೀರು ಯಕ್ಷಗಾನ ಶಿಬಿರಾರ್ಥಿಗಳ ಅಧ್ಯಯನ ಪ್ರವಾಸ

03:45 AM Jul 02, 2017 | Harsha Rao |

ಕಾಸರಗೊಡು: ಕಾಸರಗೋಡು ಸರಕಾರಿ ಕಾಲೇಜಿನ ಯಕ್ಷಗಾನ ಸಂಶೋಧನ ಕೇಂದ್ರದ  ಆಶ್ರಯದಲ್ಲಿ ಎಡನೀರಿನಲ್ಲಿ ನಡೆಯುತ್ತಿರುವ ಯಕ್ಷಗಾನ ಶಿಬಿರದ ವಿದ್ಯಾರ್ಥಿಗಳಿಗೆ ಎರಡು ದಿನಗಳ ಅಧ್ಯಯನ ಪ್ರವಾಸ ನಡೆಯಿತು.

Advertisement

ಪ್ರವಾಸದ ಅಂಗವಾಗಿ ಉಡುಪಿ ಗೋವಿಂದ ಪೈ ಸಂಶೋಧನ ಕೇಂದ್ರ, ಪ್ರಾದೇಶಿಕ ರಂಗಕಲೆಗಳ ಅಧ್ಯಯನ ಕೇಂದ್ರ ಹಾಗೂ ಉಡುಪಿ ಇಂದ್ರಾಳಿಯ ಯಕ್ಷಗಾನ ಕೇಂದ್ರ ಮತ್ತು ಎಂಜಿಎಂ ಕಾಲೇಜುಗಳಿಗೆ ಭೇಟಿ ನೀಡಿ ಭಾಷೆ, ಸಾಹಿತ್ಯ ಮತ್ತು ಯಕ್ಷಗಾನ ಕಲೆಗಳಿಗೆ ಸಂಬಂಧಿಸಿ  ಹಲವು ಮಾಹಿತಿಗಳನ್ನು ತಿಳಿದುಕೊಂಡರು. ಇದೇ ಸಂದರ್ಭದಲ್ಲಿ ವಿದ್ವಾಂಸರಿಂದ, ಹಿರಿಯ ಕಲಾವಿದರಿಂದ ವಿಶೇಷೋಪನ್ಯಾಸಗಳು ನಡೆದುವು.

ಉಡುಪಿ ಪ್ರಾದೇಶಿಕ ರಂಗಕಲೆಗಳ ಅಧ್ಯಯನ ಕೇಂದ್ರ  ಹಾಗೂ ಗೋವಿಂದ ಪೈ ಸಂಶೋಧನ ಕೇಂದ್ರಗಳಿಗೆ ಭೇಟಿ ನೀಡಿದ ಶಿಬಿರಾರ್ಥಿಗಳು ಅಧ್ಯಯನ ಕೇಂದ್ರದಲ್ಲಿ  ಯಕ್ಷಗಾನಕ್ಕೆ ಸಂಬಂಧಿಸಿದಂತೆ ಹಲವು ಹಳೆಯ ದಾಖಲಾತಿಗಳನ್ನು ವೀಕ್ಷಿಸಿದರಲ್ಲದೆ ಬಣ್ಣದ ಮಾಲಿಂಗ ಅವರ ಹದಿನಾರು ವಿಧದ ವೇಷಗಳನ್ನು ವೀಡಿಯೋ ಮೂಲಕ ವೀಕ್ಷಿಸಿದರು.

ಬಣ್ಣದ ಮಾಲಿಂಗ ಅವರು  ತಮ್ಮ ಎಂಬತ್ತೈದನೆಯ ವಯಸ್ಸಿನಲ್ಲಿ ರಾವಣ, ಕಾರ್ತವೀರ್ಯ, ಮೈರಾವಣ, ಶೂರ್ಪನಖೀ, ಕಿಮ್ಮಿàರಾ, ಹನುಮಂತ, ತಮಾಸೂರ, ಕಿರಾತ, ವಾಲಿ, ರುದ್ರಭೀಮ, ಯಮ, ವೀರಭದ್ರ, ವರಾಹ, ಕುಂಭಕರ್ಣ, ಮಹಿಷಾಸುರ ಮತ್ತು ನರಸಿಂಹ ಕಥಾಪಾತ್ರಗಳಿಗೆ  ಜೀವ ತುಂಬಿದ್ದನ್ನು ಕಂಡರು. ರಾಷ್ಟ್ರಕವಿ ಗೋವಿಂದ ಪೈ ಅವರು ಬಲ್ಲ ಹದಿನಾರು  ಭಾಷೆಗಳ ಕುರಿತು ಹಾಗೂ ಅವರ ಅಮೂಲ್ಯ ಪುಸ್ತಕ ಭಂಡಾರಗಳನ್ನು  ವೀಕ್ಷಿಸಿದರು. ಸಂಶೋಧನ ಕೇಂದ್ರದ  ಮುಖ್ಯಸ್ಥ ವರದೇಶ ಹಿರೇಗಂಗೆ, ಡಾ.ಅಶೋಕ ಆಳ್ವ, ಸುರೇಶ್‌ ಕುಮಾರ್‌ ಮಯ್ಯ, ವೆಂಕಟೇಶ್‌ ನಾಯಕ್‌, ಲಚ್ಚೇಂದ್ರ ಮುಂತಾದವರು  ಸಹಕರಿಸಿದರು.

ಉಡುಪಿ ಎಂಜಿಎಂ ಕಾಲೇಜಿನ ಪ್ರಿನ್ಸಿಪಾಲ್‌ ಪ್ರೊ|ಕುಸುಮ ಕಾಮತ್‌ ಶಿಬಿರಾರ್ಥಿಗಳನ್ನುದ್ದೇಶಿಸಿ ಮಾತನಾಡಿ, ಗಡಿನಾಡಿನಲ್ಲಿದ್ದು ಕನ್ನಡವನ್ನು ಜತೆಗೆ ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸುವ ಕಾರ್ಯ ಮಹತ್ವಪೂರ್ಣವಾದುದು. ಮೂವತ್ತು ದಿನಗಳ ಶಿಬಿರದಲ್ಲಿ  ವಿದ್ಯಾರ್ಥಿನಿಯರೇ ಹೆಚ್ಚಿನ ಸಂಖ್ಯೆ ಯಲ್ಲಿ ಭಾಗವಹಿಸಿರುವುದು ಪ್ರಶಂಸನೀಯ. ವಿದ್ಯಾರ್ಥಿ ಜೀವನವು ಸಫಲವಾಗಬೇಕಾದರೆ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳು ಅತೀ ಅನಿವಾರ್ಯ.

Advertisement

ಯಕ್ಷಗಾನ ಕಲೆಯನ್ನು ಅಭ್ಯಾಸ ಮಾಡುವುದರಿಂದ  ಪುರಾಣ ಪರಿಜ್ಞಾನ ವೃದ್ಧಿಯಾಗಿ  ಜೀವನಮೌಲ್ಯಗಳು ತನ್ನಿಂದ ತಾನೇ ಬೆಳೆಯುತ್ತವೆ.  ಧನಾತ್ಮಕ ಚಿಂತನೆಗಳು ಮನುಷ್ಯನನ್ನು ಎತ್ತರಕ್ಕೊಯ್ಯಬಲ್ಲುದು. ಇನ್ನೊಬ್ಬರನ್ನು  ವಿಮರ್ಶೆ ಮಾಡುವ ಮೊದಲು ನಮ್ಮನ್ನು ನಾವು ಅಳತೆಗೊಡ್ಡಬೇಕು. ಯಕ್ಷಗಾನದಂತಹ ಕಲೆಗಳು ಮೌಲ್ಯಗಳನ್ನು ಬಿತ್ತಲು ಪೂರಕ ಎಂದರು.

ಶಿಬಿರಾರ್ಥಿಗಳು ಕಾಲೇಜಿನ ಕನ್ನಡ ವಿಭಾಗ ಗ್ರಂಥಾಲಯ, ಸಸ್ಯಶಾಸ್ತ್ರ ವಿಭಾಗದ ಕೈತೋಟ ಮೊದ ಲಾದವುಗಳನ್ನು ಸಂದರ್ಶಿಸಿದರು. ಕನ್ನಡ ವಿಭಾಗ ಮುಖ್ಯಸ್ಥ ಡಾ.ವಸಂತ ಕುಮಾರ, ಉಪನ್ಯಾಸಕರಾದ ಸುಪ್ರೀತ ಡಿ.ಎಸ್‌., ಶ್ಯಮಂತ್‌ ಕುಮಾರ್‌ ಮುಂತಾದವರು ಶಿಬಿರಾರ್ಥಿಗಳ ಜತೆಗಿದ್ದು ಸಹಕರಿಸಿದರು.

ಅಲ್ಲಿಂದ ಇಂದ್ರಾಳಿಗೆ ತೆರಳಿದ ಶಿಬಿರಾರ್ಥಿಗಳು  ಯಕ್ಷಗಾನ ಕೇಂದ್ರದಲ್ಲಿ  ನಡೆಯುತ್ತಿರುವ ಬಡಗುತಿಟ್ಟು ಯಕ್ಷಗಾನ ತರಬೇತಿಯನ್ನು ವೀಕ್ಷಿಸಿದರು. ನಾಟ್ಯಗುರು ಬನ್ನಂಜೆ ಸಂಜೀವ ಸುವರ್ಣರು ಈ ಸಂದರ್ಭದಲ್ಲಿ ಮಾತನಾಡಿ, ಯಕ್ಷಗಾನ ಕಲೆಯು ಮನುಷ್ಯತ್ವವನ್ನು ಬೆಳೆಸುವುದಲ್ಲದೆ ವ್ಯಕ್ತಿತ್ವ  ವಿಕಸನವನ್ನುಂಟು ಮಾಡುತ್ತದೆ. ವಿದ್ಯಾರ್ಥಿಗಳ ಆಸಕ್ತಿಗೆ ತಕ್ಕ ಹಾಗೆ  ಅವರನ್ನು ಬೆಳೆಸಬೇಕಾಗುತ್ತದೆ. ಕಾಸರಗೋಡು ಸರಕಾರಿ ಕಾಲೇಜಿನ ಯಕ್ಷಗಾನ ಸಂಶೋಧನ ಕೇಂದ್ರ ಈ ನಿಟ್ಟಿನಲ್ಲಿ  ಮಾಡುತ್ತಿರುವ ಕಾರ್ಯ ನಾಡಿಗೆ ಮಾದರಿ. ಒಂದು ವಿದ್ಯಾಸಂಸ್ಥೆ ಹೇಗಿರಬೇಕು, ಪ್ರಾಧ್ಯಾಪಕರು ಹೇಗಿರ ಬೇಕು, ವಿದ್ಯಾರ್ಥಿಗಳು ಹೇಗಿರಬೇಕು ಎಂಬುದನ್ನು ಇವರಿಂದ ಕಲಿಯಬೇಕು. ಶಿವರಾಮ ಕಾರಂತರು ಬಡಗುತಿಟ್ಟು ಯಕ್ಷಗಾನವನ್ನು  ವಿಶ್ವದಾದ್ಯಂತ ಪಸರಿಸಿದಂತೆ ಇಂದು ತೆಂಕುತಿಟ್ಟು ಯಕ್ಷಗಾನಕ್ಕೂ  ಮಾನ್ಯತೆ ಬರುವಂತೆ, ಅದು ಯುವಜನರಿಗೆ ಅರ್ಥಪೂರ್ಣವಾಗಿ  ತಲುಪುವಂತೆ ಕಾಸರಗೋಡು  ಸರಕಾರಿ ಕಾಲೇಜಿನ ಯಕ್ಷಗಾನ ಸಂಶೋಧನ ಕೇಂದ್ರ ಮಾಡುತ್ತಿದೆ. ಕಲೆಯನ್ನು ಆಸಕ್ತಿಯಿಂದ ಕಲಿಯಲು ಬಂದವರು ದುಡ್ಡಿನ ಹಿಂದೆ ಹೋಗಬಾರದು. ಕಲೆಗೆ ನಿಜವಾದ ಪ್ರಾಧಾನ್ಯ ನೀಡಿದವನ ಹಿಂದೆ ಅಥವಾ ವೃತ್ತಿಯನ್ನು ಪ್ರಾಮಾಣಿಕವಾಗಿ ನಿಭಾಯಿಸಿದವನ ಹಿಂದೆ ದುಡ್ಡು ತಾನಾಗಿ ಬರುತ್ತದೆ. ಕಲೆಯ ಒಳಗುಟ್ಟು ಅರ್ಥಮಾಡಿಕೊಳ್ಳುವ ವಿವೇಚನೆ ನಮ್ಮಲ್ಲಿರಬೇಕು. ಎರಡನೆ ತರಗತಿ ಮಾತ್ರ ಕಲಿತ ನನ್ನನ್ನು  ಯಕ್ಷಗಾನ ನಲ್ವತ್ತೇಳು ದೇಶ ಸುತ್ತುವಂತೆ ಮಾಡಿತು.

ದೇಶದ ನಾನಾ ಕಡೆ, ಹಲವು ಹೊರದೇಶಗಳಲ್ಲಿ ನನಗೆ ಶಿಷ್ಯಂದಿರು ರೂಪುಗೊಳ್ಳುವಂತಾಯಿತು. ಪೂನ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ವೈಭವ್‌ ಸದ್ಯ ನಮ್ಮಲ್ಲಿ ಯಕ್ಷಗಾನ ಅಭ್ಯಸಿಸುತ್ತಿದ್ದಾರೆ. ಹೊರನಾಡಿನವರು ಕೂಡಾ ಯಕ್ಷಗಾನದಲ್ಲಿ ಆಸಕ್ತಿ ವಹಿಸುತ್ತಾರೆ ಎಂದಾದಾಗ ಅದರ ಮಹತ್ವ ಏನು ಎಂಬುದು ಅರ್ಥವಾಗಬಹುದು ಎಂದರು. ಕೇಂದ್ರದ ರೂವಾರಿ ಬನ್ನಂಜೆ  ಸಂಜೀವ ಸುವರ್ಣರು  ವಿದ್ಯೆಗಿಂತಲೂ ಪ್ರಾಮಾಣಿಕತೆ ಮತ್ತು  ತಾದಾತ್ಮತೆ  ಮುಖ್ಯ ಎಂದರಲ್ಲದೆ  ಯಕ್ಷಗಾನದಲ್ಲಿನ ಪೂರ್ವರಂಗದ ಬಾಲಗೋಪಾಲ ಪ್ರವೇಶ, ಕೋಡಂಗಿ ನƒತ್ಯ, ಪೀಠಿಕಾ ಸ್ತ್ರೀವೇಷ, ಒಡ್ಡೋಲಗ, ಯುದ್ಧದ ದೃಶ್ಯ ಈ ಮುಂತಾದವುಗಳನ್ನು ತಮ್ಮ ಸುಮಾರು ಅರುವತ್ತು ಹಿರಿಯ-ಕಿರಿಯ ಶಿಷ್ಯಂದಿರೊಂದಿಗೆ ಮಾಡಿ ತೋರಿಸಿದರು.

ಈ ಸಂದರ್ಭ ಕಾಸರಗೋಡು ಸರಕಾರಿ ಕಾಲೇಜಿನ ಯಕ್ಷಗಾನ ಸಂಶೋಧನ  ಕೇಂದ್ರದ ಸಂಯೋಜನಾಧಿ ಕಾರಿ ಹಾಗೂ ಶಿಬಿರದ ಸಂಚಾಲಕ ಡಾ.ರತ್ನಾಕರ ಮಲ್ಲಮೂಲೆ ಮಾತನಾಡಿ, ಸಂಜೀವ ಸುವರ್ನರಂತಹ ಸಾಹಸಿಗರ ಜೀವನವನ್ನು, ಕಲಾನಿಷ್ಠೆಯನ್ನು ಯುವಜನತೆ ಮೈಗೂಡಿಸಿಕೊಳ್ಳಬೇಕು. ಕಲೆ ಮನರಂಜನೆಗೆ ಮಾತ್ರವಲ್ಲ. ಅದರಿಂದ ಬಾಳು ಹಸನಾಗುತ್ತದೆ. ಕಲೆ ಬದುಕನ್ನು ನೀಡುತ್ತದೆ ಎಂದು ಸಾಧಿಸಿ ತೋರಿಸಿದ ಕೀರ್ತಿ ಈ ಕೇಂದ್ರಕ್ಕಿದೆ ಎಂದರು.
ವಿದ್ಯಾವಂತರಾದಂತೆ ವಿನಯ, ಪ್ರಾಮಾಣಿಕತೆ ದೂರವಾಗಿ  ಆ ಸ್ಥಾನದಲ್ಲಿ ಅವಿನಯ, ಸ್ವಾರ್ಥ ತುಂಬುತ್ತದೆ. ಆದರೆ ಹೆಚ್ಚು ಓದಿರದ ಸುವರ್ಣರು ತಮ್ಮ ಕಾರ್ಯತತ್ಪರತೆಯಿಂದ ವಿಶ್ವಮಾನ್ಯತೆ ಪಡೆದ ವ್ಯಕ್ತಿಯಾದರು ಎಂದರು.

ನಾಟ್ಯಗುರು ದಿವಾಣ ಶಿವ ಶಂಕರ ಭಟ್‌ ಅವರ ನೇತƒತ್ವದಲ್ಲಿ ಮೂವತ್ತಮೂರು ವಿದ್ಯಾರ್ಥಿಗಳು ತಾವು ಕಲಿತ ಯಕ್ಷಗಾನದ ಹೆಜ್ಜೆಗಳನ್ನು ಸುವರ್ಣರ ಎದುರು, ಅವರ ಶಿಷ್ಯಂದಿರ ಎದುರು  ಮಾಡಿ ತೋರಿಸಿದರು.

ಕೇಂದ್ರದ ಹಿತಾಕಾಂಕ್ಷಿ  ಬಬಿತಾ ಮಾತನಾಡಿದರು.  ರೋಹಿಣಿ, ಸುಮನ, ಪ್ರಶಾಂತ್‌ ಹೊಳ್ಳ, ರಕ್ಷಿತ್‌, ಅಜಿತ್‌ ಶೆಟ್ಟಿ,, ರಾಜಾರಾಮ, ಸುಪ್ರೀತಾ ಡಿ.ಎಸ್‌., ಶ್ರೀಸ್ಕಂದ, ಗಣೇಶ, ಜಗದೀಶ ಮುಂತಾದವರು ಉಪಸ್ಥಿತರಿದ್ದರು. ಸುಜಾತ ಸಿ.ಎಚ್‌., ಆರ್ಶಿತಾ, ನವೀನ್‌ಚಂದ್ರ ಶರ್ಮ, ದಿವಾಣ ಶಿವಶಂಕರ ಭಟ್‌, ರತ್ನಾಕರ ಮಲ್ಲಮೂಲೆ ಮೊದಲಾದವರು ಪ್ರವಾಸಕ್ಕೆ ನೇತƒತ್ವ ನೀಡಿದರು.

ಸಂಜೀವ ಸುವರ್ಣರು ಮಕ್ಕಳಿಗೆ ಕೇಂದ್ರದ ವತಿಯಿಂದ ಉಚಿತ ಯಕ್ಷಗಾನ ಶಿಕ್ಷಣವನ್ನು, ಔಪಚಾರಿಕ ಶಿಕ್ಷಣವನ್ನು ನೀಡುವುದನ್ನು ನೋಡಿ ಅರಿತ  ಕಾಸರಗೋಡಿನ ಶಿಬಿರಾರ್ಥಿಗಳು ತಮಗೆ ಕಲಾವಿದರು ಉದಾರವಾಗಿ ನೀಡಿದ  ಮೊತ್ತವನ್ನೂ, ತಮ್ಮ ಕೈಯಿಂದಾಗುವ ಆರ್ಥಿಕ ಸಹಾಯವನ್ನು ಯಕ್ಷಗಾನ ಕೇಂದ್ರದ ಯಕ್ಷಗಾನ ವಿದ್ಯಾರ್ಥಿಗಳಿಗೆ  ಹಸ್ತಾಂತರಿಸಿದರು. ಬನ್ನಂಜೆ ಸಂಜೀವ ಸುವರ್ಣ ಸ್ವಾಗತಿಸಿ, ಶಿಬಿರಾರ್ಥಿ ರಂಜಿನಿ ಎಡನೀರು ವಂದಿಸಿದರು. ಶಿಬಿರಾರ್ಥಿಗಳಾದ  ಶ್ರದ್ಧಾ ನಾಯರ್ಪಳ್ಳ ಹಾಗೂ ದಿತಿ ಅವರು  ಭಾಗವತಿಕೆ ಮತ್ತು ಭಾವಗಾಯನ ಪ್ರಸ್ತುತಪಡಿಸಿದರು.
ಅದೇ ದಿನ ಉಡುಪಿಯಲ್ಲಿ ಖ್ಯಾತ ವಿದ್ವಾಂಸ ಡಾ.ರಾಘವನ್‌ ನಂಬಿಯಾರ್‌ ಅವರಿಂದ  ವಿಶೇಷೋಪನ್ಯಾಸ ನಡೆಯಿತು. ಮರುದಿನ ಮಂಗಳೂರು ವಿವಿ  ಯಕ್ಷಗಾನ ಸಂಶೋಧನ ವಸ್ತು ಪ್ರದರ್ಶನ, ಗ್ರಂಥಾಲಯಕ್ಕೆ ಭೇಟಿ ನೀಡಿದರು.

ಯಕ್ಷಗಾನದ ತಾತ್ವಿಕ ಒಳನೋಟಗಳು ಎಂಬ ವಿಷಯದಲ್ಲಿ  ಡಾ.ಚಿನ್ನಪ್ಪ ಗೌಡರಿಂದ ಉಪನ್ಯಾಸ ನಡೆಯಿತು. ಮಂಜೇಶ್ವರ ರಾಷ್ಟ್ರಕವಿ ಗೋವಿಂದ ಪೈಯವರ ಸ್ಮಾರಕ ವೀಕ್ಷಿಸಿದರು. ಡಾ| ಕೆ. ಕಮಲಾಕ್ಷ ಅವರಿಂದ ಯಕ್ಷಗಾನ ಮತ್ತು ಕಥಕ್ಕಳಿ ಎಂಬ ವಿಷಯದಲ್ಲಿ  ವಿಶೇಷೋಪನ್ಯಾಸ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next