‘ಅರಿವೆ ಗುರು ನುಡಿ ಜ್ಯೋತಿರ್ಲಿಂಗ ‘ ಮನುಷ್ಯ ಬದುಕಿನಲ್ಲಿ ಪ್ರತಿಯೊಂದು ಕಲಿಕೆಯೂ ಹೊಸ ಅನುಭವವಾಗಿ,ತಿಳುವಳಿಕೆಯಾಗಿ ಆತನ ಜ್ಞಾನ ಭಂಡಾರವನ್ನು ಸೇರುತ್ತದೆ. ಒಂದು ಮಾತಿದೆ ‘ಕಾಲಕ್ಕೆ ತಕ್ಕ ಕೋಲ’ ಪ್ರಸ್ತುತ ಇಂದಿನ ಶಿಕ್ಷಣದ ವ್ಯವಸ್ಥೆಗೆ ಸೂಕ್ತವಾಗಿದೆ.
ನಾವಿಂದು ಕೋವಿಡ್ 19ರ ಕಾಲ ಘಟ್ಟದಲ್ಲಿ ಇಂತಹ ಸಂಧಿಗ್ದ ಪರಿಸ್ಥಿತಿಯಲ್ಲಿ ಬದುಕುತ್ತಿದ್ದೇವೆ. ಈ ವಾಸ್ತವತೆ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಸವಾಲುಗಳನ್ನು ತಂದೊಡ್ಡಿದೆ. ಶಿಕ್ಷಕ ವಿದ್ಯಾರ್ಥಿ ತರಗತಿ ಎಂಬ ನಿಜ ಸ್ಥಿತಿ ಇಂದು ಬದಲಾಗಿ ಶಿಕ್ಷಕ ಆನ್‌ಲೈನ್ ತರಗತಿ ವಿದ್ಯಾರ್ಥಿ ಎಂಬ ವಾಸ್ತವವಾಗಿದೆ. ಮಾನವ ಎಲ್ಲಾ ಬೆಳವಣಿಗೆಗಳಿಗೆ ಶಿಕ್ಷಣವೇ ಮೂಲ ಅಡಿಪಾಯವಾಗಿರುವಾಗ ಸಮಾಜ, ಸರಕಾರದೊಂದಿಗೆ ಶಿಕ್ಷಕರಾದರು ವಿಶೇಷವಾದ ರೀತಿಯಲ್ಲಿ ಮುನ್ನಡೆಸಬೇಕಾದ ತುರ್ತಿಗೆ ಒಳಗಾಗಿದ್ದೇವೆ.
ಶಿಕ್ಷಕರಾದವರು ಅವರ ಜೀವಮಾನ ಪೂರ್ಣ ಅವರು ವಿದ್ಯಾರ್ಥಿಗಳೆ. ಈ ಮಾತು ಸಾರ್ವಕಾಲಿಕ ಸತ್ಯ. ಇಂದು ಶಿಕ್ಷಣ ಕ್ಷೇತ್ರ ಎಲ್ ಕೆಜಿಯಿಂದ ಉನ್ನತ ಶಿಕ್ಷಣದ ವರೆಗೆ ಆನ್‌ಲೈನ್ ತರಗತಿಗಳಿಗೆ ಒಗ್ಗಿಕೊಳ್ಳಬೇಕಾದ ಅನಿವಾರ್ಯತೆ ಒಳಗಾಗಿದೆ. ಸಮಾಜದಲ್ಲಿ ಯೋಧರು ಮತ್ತು ಶಿಕ್ಷಕರು ಸದಾ ಎಚ್ಚರಿಕೆಯಿಂದ ಇದ್ದಾಗ ಮಾತ್ರ ಸಮಾಜ ಕ್ರಿಯಾಶೀಲವೂ ಸುರಕ್ಷಿತವೂ ಆಗಿರಲು ಸಾಧ್ಯ.
ಇಂದಿನ ಪರಿಸ್ಥಿತಿಯಲ್ಲಿ ಶಿಕ್ಷಕರು ಮತ್ತು ಆನ್‌ಲೈನ್ ತರಗತಿಗಳು, ಅದರ ತಯಾರಿಕೆಯ ಬಗ್ಗೆ ಮಾತನಾಡುವಾಗ ಸವಾಲುಗಳ ಮುಂದೆ ಸವಾಲುಗಳು ಧುತ್ತೆಂದು ನಮ್ಮ ಮುಂದೆ ನಿಲ್ಲುತ್ತವೆ. ಗಂಭಿರವಾಗಿ ಯೋಚಿಸುವಾಗ ಆರೋಗ್ಯ ಮತ್ತು ವಿದ್ಯಾರ್ಥಿಗಳ ಭವಿಷ್ಯದ ದ್ರಷ್ಟಿಯಿಂದ ಆನ್‌ಲೈನ್ ತರಗತಿಗಳೇ ಸೂಕ್ತ. ಸಮಸ್ಯೆಗಳ ಬಗ್ಗೆ ಯೋಚಿಸುವಾಗ ಶಿಕ್ಷಕರು ಸರಕಾರ ಮತ್ತು ವಿಶ್ವವಿದ್ಯಾಲಯದ ಆದೇಶವನ್ನು ಪಾಲಿಸುತ್ತಾ ಕರ್ತವ್ಯಕ್ಕೆ ಬದ್ಧರಾಗಿದ್ದಾರೆ. ಒಬ್ಬ ಶಿಕ್ಷಕ ತನ್ನ ವಿಷಯಕ್ಕೆ ಸಂಬಂಧಿಸಿದಂತೆ ತರಗತಿಗಳನ್ನು ತಯಾರು ಮಾಡಿ ವಿದ್ಯಾರ್ಥಿಗಳಿಗೆ ತಲುಪಿಸುವವರೆಗೆ ಹಲವಾರು ತೊಂದರೆಗೆ ಒಳಗಾಗುತ್ತಾನೆ. ಹೊಸ ಪೀಳಿಗೆಯ ಶಿಕ್ಷಕರು ಆನ್‌ಲೈನ್ ವ್ಯವಸ್ಥೆ ಗೆ ಸುಲಭವಾಗಿ ಒಗ್ಗಿಕೊಂಡರೆ ಕೆಲವು ಹಿರಿಯ ಅಧ್ಯಾಪಕರು ಇನ್ನೊಬ್ಬರ ಸಹಾಯ ಪಡೆಯಬೇಕಾದ ದಾಕ್ಷೀಣ್ಯಕ್ಕೆ ಒಳಗಾಗ ಬೇಕಾಗಿದೆ. ವಿದ್ಯಾರ್ಥಿಗಳ ಹಿನ್ನೆಲೆಯಲ್ಲಿ ನೋಡುವುದಾದರೆ ತೀರ ಹಿಂದುಳಿದ ಪ್ರದೇಶದಲ್ಲಿ ನೆಟ್‌ವರ್ಕ್ ಸಮಸ್ಯೆಯಿಂದ ಅವರಿಗೆ ತಲುಪಬೇಕಾದ ಪಾಠವು ಸೂಕ್ತ ಕಾಲಕ್ಕೆ ಸಿಗದೆ ಹಾಜರಾತಿ ಪಾಠವನ್ನು ಕಳಕೊಳ್ಳಬೇಕಾದ ತೊಂದರೆಗೆ ಒಳಗಾಗಬೇಕಾಗುತ್ತದೆ. ಇದರ ಜೊತೆಯಲ್ಲಿ ಆಥಿ೯ಕ ಸಂಕಷ್ಟಕ್ಕೆ ತುತ್ತಾದ ವಿದ್ಯಾರ್ಥಿಗಳ ಹೆತ್ತವರ ಕಾರಣ ಬೇಕಾದಷ್ಟು ಡಾಟ ಕೊರತೆ ಉಂಟಾಗಬಹುದು ಮತ್ತು ಶಾರೀರಿಕವಾದ ಕಣ್ಣು ,ಕಿವಿ ಮತ್ತು ಮಾನಸಿಕ ಒತ್ತಡಗಳಿಗೆ ಒಳಗಾದರೂ ಅಲ್ಲಗಳೆಯುವಂತಿಲ್ಲ.
ಒಟ್ಟಾರೆ ಇಂದಿನ ತುರ್ತು ಸ್ಥಿತಿಗೆ ಆನ್‌ಲೈನ್ ತರಗತಿಗಳು ಒಂದು ತಾತ್ಕಾಲಿಕ ವ್ಯವಸ್ಥೆಯೇ ಹೊರತು ದೀರ್ಘಕಾಲಕ್ಕೆ ತುಂಬಾ ಆಘಾತಕಾರಿ ಸೂಚನೆಯಾಗಿದೆ. ಒಬ್ಬ ವಿದ್ಯಾರ್ಥಿಯ ಒಟ್ಟು ಬೆಳವಣಿಗೆಯಲ್ಲಿ ಅಡ್ಡ ಪರಿಣಾಮ ಉಂಟು ಮಾಡುತ್ತದೆ. ಇಲ್ಲಿ ಪಠ್ಯೇತರ ಚಟುವಟಿಕೆಗಳಿಗೆ ಅವಕಾಶವಿಲ್ಲ, ಸಮಾಜ ಮುಖಿಯಾಗಿ ಬೆಳೆಯಲು ಒಡನಾಡಿಗಳ ಕೊರತೆ ಕಾಡುತ್ತದೆ. ಸೃಜನಶೀಲ ಅಭಿವ್ಯಕ್ತಿಯನ್ನು ವಿದ್ಯಾರ್ಥಿಗಳು ಸಂಪೂರ್ಣವಾಗಿ ಕಳಕೊಳ್ಳುತ್ತಾರೆ. ಭಾಷಾ ವಿಷಯಕ್ಕೆ ಸಂಬಂಧಿಸಿದಂತೆ ಭಾವನಾತ್ಮಕ, ಲಾಲಿತ್ಯಪೂರ್ಣ ತುಡಿಗಳನ್ನು ಮರೆತು ನಿರ್ಜೀವ ವಾಸ್ತವತೆಗೆ ತಲುಪುವ ಅಪಾಯವಿದೆ. ದೀರ್ಘಕಾಲದಿಂದ ಇರುವ ನಮ್ಮ ಹೆಮ್ಮೆಯ ಭಾರತೀಯ ಸಂಸ್ಕೃತಿಯ ಗುರು ಶಿಷ್ಯ ಸಂಬಂಧಕ್ಕೆ ಧಕ್ಕೆ ಒದಗಬಹುದು. ಒಟ್ಟಿನಲ್ಲಿ ವಿದ್ಯಾರ್ಥಿಗಳು ಇಲ್ಲದ ವಿದ್ಯಾಲಯ ದೇವರಿಲ್ಲದ ಗುಡಿಯಂತೆ. ಆದಷ್ಟು ಬೇಗನೆ ಯಥಾಸ್ಥಿಗೆ ಸಮಾಜ ಬದುಕು ಮರಳಲಿ ಸರ್ವರ ಬಾಳು ಬೆಳಗಲಿ.
ಯಶೋದಾ ಎಲ್ಲೂರು
ಉಪನ್ಯಾಸಕಿ, ಸಂತ ಮೇರಿ ಕಾಲೇಜು ಶಿರ್ವ