Advertisement

ಸಂಪನ್ಮೂಲ ವ್ಯಕ್ತಿಗಳಿಂದ ಉತ್ತರ ಕಂಡುಕೊಂಡ ವಿದ್ಯಾರ್ಥಿಗಳು

10:09 AM Mar 14, 2020 | mahesh |

ಉಡುಪಿ: ಸುವರ್ಣ ಮಹೋತ್ಸವ ಸಂಭ್ರಮದಲ್ಲಿರುವ ಉದಯವಾಣಿ ದಿನಪತ್ರಿಕೆಯು ಎಸೆಸೆಲ್ಸಿ ವಿದ್ಯಾರ್ಥಿಗಳಿಗಾಗಿ ಫೋನ್‌ಇನ್‌ ಕಾರ್ಯಕ್ರಮವನ್ನು ಗುರುವಾರ ಮಣಿಪಾಲದ ಕಚೇರಿಯಲ್ಲಿ ಆಯೋಜಿಸಿತ್ತು. ಗಣಿತ ಹಾಗೂ ವಿಜ್ಞಾನದ ವಿವಿಧ ವಿಷಯಗಳ ಬಗ್ಗೆ ವಿದ್ಯಾರ್ಥಿಗಳು ಕರೆಮಾಡಿ ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ಪಡೆದುಕೊಂಡರು.

Advertisement

ಜೀವಶಾಸ್ತ್ರ ವಿಷಯದಲ್ಲಿ ನಾವುಂದ ಸರಕಾರಿ ಪ.ಪೂ. ಕಾಲೇಜಿನ ಅಧ್ಯಾಪಕ ಕೃಷ್ಣಮೂರ್ತಿ ಪಿ.ಕೆ., ರಸಾಯನ ಶಾಸ್ತ್ರ ವಿಷಯದಲ್ಲಿ ಹಂಗಾರಕಟ್ಟೆ ಚೇತನಾ ಪ್ರೌಢ ಶಾಲೆಯ ಶಿಕ್ಷಕರಾದ ಗೋವಿಂದ ರಾವ್‌, ಭೌತಶಾಸ್ತ್ರ ವಿಷಯದಲ್ಲಿ ಮಣಿಪಾಲ ಪ.ಪೂ. ಕಾಲೇಜಿನ ಅಧ್ಯಾಪಕ ನಾಗೇಂದ್ರ ಪೈ, ಗಣಿತದ ಬಗ್ಗೆ ಮಟಪಾಡಿ ಶ್ರೀನಿಕೇತನ ಪ್ರೌಢಶಾಲೆಯ ಶಿಕ್ಷಕ ಹರಿಕೃಷ್ಣ ಹೊಳ್ಳ ಅವರು ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉದಾಹರಣೆ ಸಹಿತ ಉತ್ತರಿಸಿದರು. ವಿದ್ಯಾರ್ಥಿಗಳು ಹಲವಾರು ವಿಷಯ ಗಳ ಬಗ್ಗೆ ತಮಗಿದ್ದ ಸಮಸ್ಯೆ ಗಳನ್ನು ತಜ್ಞರ ಮೂಲಕ ನಿವಾರಿಸಿಕೊಂಡರು.

30ಕ್ಕೂ ಅಧಿಕ ಕರೆಗಳು
ಒಂದು ಗಂಟೆಯ ಫೋನ್‌ಇನ್‌ ಕಾರ್ಯಕ್ರಮದಲ್ಲಿ ಉಡುಪಿ, ಮಂಗಳೂರು, ಕಾರ್ಕಳ, ಕೋಟೇಶ್ವರ, ಕುಂದಾಪುರ, ಮುದರಂಗಡಿ, ಮುಧೋಳ, ಬೈಕಂಪಾಡಿ, ಮೂಲ್ಕಿ, ಶಂಕರಪುರ, ಯಲ್ಲಾಪುರ, ವಿಟ್ಲ, ಬಿ.ಸಿ.ರೋಡ್‌, ಸಿದ್ದಾಪುರ, ಬೆಳ್ತಂಗಡಿ, ಸುಳ್ಯ, ನೀಲಾವರ ಮೊದಲಾದ ಕಡೆಗಳಿಂದ ಹಲವು ವಿದ್ಯಾರ್ಥಿಗಳು ಕರೆ ಮಾಡಿದ್ದರು.

 ಪ್ರಮುಖ ಪ್ರಶ್ನೆಗಳ ಸಂದೇಹ
ಗಣಿತ ವಿಷಯದಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ತಮಗೆ ಗೊಂದಲವಿದ್ದ ಬೀಜಗಣಿತದ ಬಗ್ಗೆ, ತ್ರಿಭುಜಗಳ ವಿಸ್ತೀರ್ಣಗಳ ಬಗ್ಗೆ ಪ್ರಶ್ನೆಗಳನ್ನು ಬಿಡಿಸಿ ತಿಳಿಸುವಂತೆ ಸೂಚಿಸಿದರು. ಇನ್ನು ಕೆಲವು ವಿದ್ಯಾರ್ಥಿಗಳು ಪ್ರಮುಖವಾಗಿ ಬರುವ ಪ್ರಶ್ನೆಗಳು ಯಾವುದೆಂದು ಕೇಳಿ ತಿಳಿದುಕೊಂಡರು. ಉಳಿದಂತೆ ಕೊನೆಯ ಅವಧಿಯ ತಯಾರಿ, ಅನ್ವಯ ಪ್ರಶ್ನೆಗಳ ಬಗ್ಗೆ ಮಾಹಿತಿ, ತ್ರಿಭುಜ ಹಾಗೂ ವೃತ್ತದಲ್ಲಿ ಬರುವ ಪ್ರಮುಖ ಪ್ರಮೇಯದ ಬಗ್ಗೆ ಮಾಹಿತಿ ಪಡೆದುಕೊಂಡರು. ವಿಜ್ಞಾನ ವಿಷಯದಲ್ಲೂ 5 ಅಂಕದ ಪ್ರಶ್ನೆಗಳು ಹಾಗೂ 1 ಅಂಕದ ಪ್ರಶ್ನೆಗಳು ಸಹಿತ ಕೆಲವು ಗೊಂದಲಮಯ ಪ್ರಶ್ನೆಗಳನ್ನು ತಜ್ಞರಿಂದ ಕೇಳಿ ನಿವಾರಿಸಿಕೊಂಡರು.

ತಜ್ಞರಿಂದ ಕೇಳಿಬಂದ ಪರೀಕ್ಷಾ ಸಿದ್ಧತಾ ಸೂತ್ರ
ಪರೀಕ್ಷೆ ಆರಂಭಕ್ಕೆ ಮುನ್ನ ಕೊನೆಯ ಮೂರು ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಒಟ್ಟು 60 ಗಂಟೆಗಳ ಸಮಯವಿರುತ್ತದೆ. ಊಟ- ತಿಂಡಿ- ನಿದ್ದೆಗೆ 20 ಗಂಟೆಯನ್ನು ಮೀಸಲಿಡಬೇಕು. ಉಳಿದ 40 ಗಂಟೆಯಲ್ಲಿ 3 ಗಂಟೆಗಳ ಕಾಲ ನಾಳಿನ ಪರೀಕ್ಷೆಗೆ ಬೇಕಿರುವ ಡಯಾಗ್ರಮ್‌ ಸಹಿತ ಇನ್ನಿತರ ಸೂತ್ರಗಳ ಬಗ್ಗೆ ಗಮನಹರಿಸಬೇಕು. ಹಿಂದಿನ ಪರೀಕ್ಷೆಗಳಲ್ಲಿ ಮಾಡಿದ ಅಂಶಗಳನ್ನು, ಪ್ರಶ್ನೆಪತ್ರಿಕೆಗಳನ್ನು ಪುನರ್‌ ಮನನ ಮಾಡಿಕೊಳ್ಳಬೇಕು. ನಿಯಮ, ಸೂತ್ರಗಳನ್ನು ಬರೆದಿಡ ಬೇಕು. ಶಬ್ದಾರ್ಥಗಳನ್ನು ನೆನಪಿಟ್ಟುಕೊಳ್ಳುವ ಕೆಲಸವನ್ನು ಮಾಡಬೇಕು.

Advertisement

 ಪ್ರಶ್ನೆಗಳ ಪಟ್ಟಿ ಮಾಡಿಟ್ಟುಕೊಳ್ಳಿ
ಒಂದು ವಿಷಯದ ಬಗೆಗಿನ ಸುಮಾರು 35ರಿಂದ 40ರಷ್ಟು ವಿವಿಧ ಪ್ರಶ್ನೆಗಳನ್ನು ಪಟ್ಟಿ ಮಾಡಿಟ್ಟುಕೊಳ್ಳಬೇಕು. ಇದರಲ್ಲಿ ಸುಲಭವಾದುದು, ಸಂಪನ್ಮೂಲ, ಶಕ್ತಿ, ಆಕಾರ, ಪರಿಸರದಂತಹ ವಿಚಾರಗಳಿದ್ದರೆ ಈ ಬಗ್ಗೆ ಒಮ್ಮೆ ಕಲ್ಪಿಸಿಕೊಂಡು ಪುನರ್‌ಮನನ ಮಾಡಿಕೊಳ್ಳಬೇಕು. ಸಂದೇಹಗಳಿದ್ದರೆ ಅದನ್ನು ಮತ್ತೂಮ್ಮೆ ಪರಿಶೀಲಿಸಿ ಬಗೆಹರಿಸಿಕೊಳ್ಳಬೇಕು.

 ಹಿಂದಿನ ದಿವಸದ ತಯಾರಿ
ಪರೀಕ್ಷೆಯ ದಿನ ಹೊಸ ಪಾಠಗಳನ್ನು ಓದುವ ಆತುರದ ನಿರ್ಧಾರ ಒಳ್ಳೆಯದಲ್ಲ. ಈಗಾಗಲೇ ಕಲಿತಿರುವ ವಿಷಯಗಳನ್ನು ಮೆಲುಕು ಹಾಕಬೇಕು. ಪರೀಕ್ಷೆ ದಿನವೂ ಬೆಳಗ್ಗೆ ಎಂದಿನಂತೆ ಎದ್ದೇಳಬೇಕು. ಅನಂತರ ಆ ದಿನದ ವಿಷಯದ ಬಗ್ಗೆ ಒಮ್ಮೆ ಪುನರ್‌ಮನನ ಮಾಡಿಕೊಳ್ಳತಕ್ಕದ್ದು. ಆ ದಿನ ಗೆಳೆಯರೊಂದಿಗೆ ಹೆಚ್ಚಾಗಿ ಬೆರೆಯಬಾರದು. ಇದರಿಂದ ಬೇರೆ ರೀತಿಯ ಸಮಸ್ಯೆಗಳು ಸೃಷ್ಟಿಯಾಗಬಹುದು. ಪ್ರಶ್ನೆ ಪತ್ರಿಕೆ ನೀಡಿದಾಗಲೂ ಒಂದು ಬಾರಿ ಪೂರ್ಣವಾಗಿ ಒದಿಕೊಂಡು 5-6 ಅಂಕದ ಪ್ರಶ್ನೆ ಪತ್ರಿಕೆಗಳನ್ನು ಮತ್ತೂಮ್ಮೆ ಓದಿ ಅರ್ಥೈಸಿಕೊಳ್ಳಬೇಕು. ಒಂದೇ ಪ್ರಶ್ನೆಗೆ ಹೆಚ್ಚು ಸಮಯ ವ್ಯಯಿಸಬಾರದು. ಗೊತ್ತಿರುವ ಪ್ರಶ್ನೆಗಳಿಗೆ ಉತ್ತರಿಸಬೇಕು. ಗೊತ್ತಿಲ್ಲದೆ ಇರುವ ಪ್ರಶ್ನೆಗಳಿಗೂ ಉತ್ತರಿಸಬೇಕು. ಯಾವುದನ್ನೂ ಖಾಲಿ ಬಿಡಬಾರದು. ಪರೀಕ್ಷೆಯ ಕೊನೆಯ 10 ನಿಮಿಷದ ಗಡಿಬಿಡಿಯಲ್ಲಿ ಯಾವುದೇ ಪ್ರಶ್ನೆಗಳಿಗೆ ಉತ್ತರಿಸಬಾರದು.

 ಗಣಿತ ಮತ್ತು ವಿಜ್ಞಾನ ವಿಷಯಗಳ ಪ್ರಶ್ನೋತ್ತರದ ಸಮಗ್ರ ವಿವರ ಶನಿವಾರದ ಸಂಚಿಕೆಯಲ್ಲಿ ನೀಡಲಾಗುವುದು.

ಇಂದು ಸಮಾಜ ವಿಜ್ಞಾನ, ಭಾಷಾ ವಿಷಯ ಫೋನ್‌ಇನ್‌
ಸಮಾಜ ವಿಜ್ಞಾನ ಮತ್ತು ಭಾಷಾ ವಿಷಯಗಳಿಗೆ ಸಂಬಂಧಿಸಿದಂತೆ ಫೋನ್‌ ಇನ್‌ ಕಾರ್ಯಕ್ರಮವು ಇಂದು (ಶುಕ್ರವಾರ) ಸಂಜೆ 6ರಿಂದ 7ರ ವರೆಗೆ ನಡೆಯಲಿದೆ. ಕನ್ನಡ ಮತ್ತು ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳು ಪ್ರಶ್ನೆಗಳನ್ನು ಕೇಳಿ ವಿಷಯ ತಜ್ಞರಿಂದ ಉತ್ತರ ಪಡೆಯಬಹುದು. ಕರೆ ಮಾಡಬೇಕಾದ ದೂರವಾಣಿ ಸಂಖ್ಯೆ 0820 – 220 5000

Advertisement

Udayavani is now on Telegram. Click here to join our channel and stay updated with the latest news.

Next