Advertisement

ಸ್ಥಳಾಂತರ ಖಂಡಿಸಿ ಒಂದಾದ ವಿದ್ಯಾರ್ಥಿಗಳು

11:29 AM Aug 18, 2017 | |

ಬೆಂಗಳೂರು: ಶತಮಾನದ ಹೊಸ್ತಿಲಲ್ಲಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿದ್ಯಾಲಯದ ಸ್ಥಳಾಂತರ ವಿರೋಧಿಸಿ ಗುರುವಾರ ಕಾಲೇಜಿನ ಹಳೆಯ ವಿದ್ಯಾರ್ಥಿಗಳು ಬೀದಿಗಿಳಿದರು. 50-60 ವರ್ಷಗಳ ಹಿಂದೆ ಯುವಿಸಿಇನಲ್ಲಿ ವಿದ್ಯಾರ್ಥಿಗಳಾಗಿದ್ದ ಹಳೆಯ ವಿದ್ಯಾರ್ಥಿಗಳಾದ ಪದ್ಮವಿಭೂಷಣ ಪ್ರೊ. ರೊದ್ದಂ ನರಸಿಂಹ, ವಿಶ್ರಾಂತ ಕುಲಪತಿಗಳಾದ ಪ್ರೊ.ಕೆ. ಚಿದಾನಂದಗೌಡ, ಡಾ.ಎನ್‌. ಪ್ರಭುದೇವ್‌ ಸೇರಿ ಹಲವರು ತಮ್ಮ ಹಳೆಯ ಕಾಲೇಜಿನ ರಕ್ಷಣೆಗೆ ನಿಂತರು.

Advertisement

ವಿದ್ಯಾಲಯ ಶತಮಾನದ ಹೊಸ್ತಿಲಲ್ಲಿರುವ ಸಂದರ್ಭದಲ್ಲಿ ಉತ್ಸವ ಆಚರಿಸಬೇಕು. ಆದರೆ, ಸರ್ಕಾರ ಕಾಲೇಜು ಸ್ಥಳಾಂತರಿಸಲು ಹೊರಟಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು. ಯುವಿಸಿಇ ನಗರದ ಹೆಗ್ಗುರುತು. ಇಂತಹ ಕಟ್ಟಡಗಳನ್ನು ಯಥಾವತ್ತಾಗಿ ಉಳಿಸಿಕೊಂಡು ಹೋಗುವುದು ನಮ್ಮೆಲ್ಲರ ಜವಾಬ್ದಾರಿ.

ಆದರೆ, ಯಾವುದೇ ಕಾರಣಗಳಿಲ್ಲದೆ, ಏಕಾಏಕಿ ಸ್ಥಳಾಂತರಕ್ಕೆ ನಿರ್ಧರಿಸಿರುವುದು ಎಷ್ಟು ಸಮಂಜಸ? ಇದರ ಹಿಂದೆ ರಿಯಲ್‌ ಎಸ್ಟೇಟ್‌ ಕೈವಾಡ ಇದೆಯೇ? ಒಂದು ವೇಳೆ ಸ್ಥಳಾಂತರಗೊಂಡ ನಂತರ ಈಗಿರುವ ಹಳೆಯ ಕಟ್ಟಡವನ್ನು ಯಾವ ಉದ್ದೇಶಕ್ಕೆ ಬಳಸಲು ಸರ್ಕಾರ ನಿರ್ಧರಿಸಿದೆ ಎಂದು ಪ್ರತಿಭಟನಾಕಾರರು ಪ್ರಶ°ಸಿದರು. 

ಪ್ರತಿಭಟನೆ ನಂತರ ಮಾತನಾಡಿದ ವಿಜ್ಞಾನಿ ಪ್ರೊ. ರೊದ್ದಂ ನರಸಿಂಹ, ಪಾರಂಪರಿಕ ಹಿನ್ನೆಲೆಯಿರುವ ಈ ಕಾಲೇಜಿಗೆ ತನ್ನದೇ ಆದ ವೈಶಿಷ್ಟವಿದೆ. ಆದ್ದರಿಂದ ಸರ್ಕಾರ ಕೂಡಲೇ ಸ್ಥಳಾಂತರದ ಆದೇಶ ಹಿಂಪಡೆಯಬೇಕು ಮತ್ತು ಇಲ್ಲಿಯೇ ಬೇಕಾದ ಮೂಲಸೌಕರ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು. 

ಮರುಪರಿಶೀಲಿಸಲಿ; ಪ್ರೊ.ಚಿದಾನಂದಗೌಡ
ವಿಶ್ರಾಂತ ಕುಲಪತಿ ಪ್ರೊ.ಕೆ. ಚಿದಾನಂದಗೌಡ ಮಾತನಾಡಿ, 1959-1964ರಲ್ಲಿ ನಾನು ಈ ಕಾಲೇಜಿನಲ್ಲಿ ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌ ವಿಭಾಗ ವಿದ್ಯಾರ್ಥಿಯಾಗಿದ್ದೆ. ಭಾರತ ರತ್ನ ಸರ್‌ ಎಂ. ವಿಶ್ವೇಶ್ವರಯ್ಯ ಈ ಕಾಲೇಜಿಗೆ ಭೇಟಿ ನೀಡಿದ್ದರು. ಹತ್ತಿರದಿಂದ ಅವರನ್ನು ನೋಡುವ ಅವಕಾಶ ಅಂದು ನಮಗೆ ದೊರಕಿತ್ತು.

Advertisement

ಇಲ್ಲಿ ಕಲಿತವರು ಈಗ ಹತ್ತುಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ಇಂತಹ ಮಹತ್ವ ಹೊಂದಿರುವ ಯುವಿಸಿಇ ಕಟ್ಟಡವನ್ನು ಉಳಿಸಬೇಕು. ಆದ್ದರಿಂದ ಸರ್ಕಾರ ತನ್ನ ನಿರ್ಧಾರವನ್ನು ಮರುಪರಿಶೀಲನೆ ಮಾಡಬೇಕು ಎಂದು ಆಗ್ರಹಿಸಿದರು. ವಿಶ್ರಾಂತ ಕುಲಪತಿ ಡಾ.ಎನ್‌.ಪ್ರಭುದೇವ, ಕೆ.ಆರ್‌. ವೃತ್ತದಲ್ಲಿರುವ ಯುವಿಸಿಇ ಕಾಲೇಜಿಗೆ ಬೇಕಾದ ಮೂಲಸೌಕರ್ಯಗಳನ್ನು ಒದಗಿಸಿ ಅಭಿವೃದ್ಧಿ ಪಡಿಸಬೇಕು.

ಸ್ವಾತಂತ್ರ ಪೂರ್ವದಲ್ಲೇ ಸರ್‌ ಎಂ. ವಿಶ್ವೇಶ್ವರಯ್ಯ ಅವರು ಈ ಕಾಲೇಜು ಸ್ಥಾಪಿಸಿದ್ದಾರೆ. ಈಗ ಈ ಕಾಲೇಜು ಸ್ಥಳಾಂತರಿಸುವ ಮೂಲಕ ವಿಶ್ವೇಶ್ವರಯ್ಯ ಅವರಿಗೆ ಅವಮಾನ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. 

ವಿಧಾನಸೌಧ ಸ್ಥಳಾಂತರಿಸಲು ಆಗುತ್ತಾ?
ಇಂಡಿಯಾ ಮಾರ್ಚ್‌ ಫಾರ್‌ ಸೈನ್ಸ್‌ ಸಂಘಟಕ ಜಿ. ಸತೀಶ್‌ ಕುಮಾರ್‌, ವಿಧಾನಸೌಧ ಅತ್ಯಂತ ದಟ್ಟಣೆ ಇರುವ ಪ್ರದೇಶದಲ್ಲಿ ನಿರ್ಮಾಣವಾಗಿದೆ ಎಂದು ವಿಧಾನಸೌಧವನ್ನೇ ಸ್ಥಳಾಂತರಿಸಲು ಅಥವಾ ಒಡೆಯಲು ಸಾಧ್ಯವೇ? ಇಲ್ಲ, ಅದಕ್ಕೆ ಪೂರಕವಾಗಿ ಮತ್ತೂಂದು ಕಟ್ಟಡವನ್ನು ನಿರ್ಮಿಸಬೇಕಾಗುತ್ತದೆ. ಅದೇ ರೀತಿ, ಯುವಿಸಿಇ ಕಟ್ಟಡ ಒಂದು ಪಾರಪಂರಿಕ ಪಳೆಯುಳಿಕೆ. ಅದನ್ನು ಸ್ಥಳಾಂತರಿಸುವ ಬದಲು, ಮತ್ತೂಂದು ಕಟ್ಟಡವನ್ನು ಜ್ಞಾನಭಾರತಿಯಲ್ಲಿ ನಿರ್ಮಿಸಬೇಕು ಎಂದು ಸಲಹೆ ಮಾಡಿದರು.  

ಸಂಭ್ರಮಾಚರಣೆ ವೇಳೆ ಸ್ಥಳಾಂತರದ ಮಾತು!
ಮೆಕಾನಿಕಲ್‌ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿ ಕಲ್ಯಾಣ್‌, ಈಗಿರುವ ಯುವಿಸಿಇ ಕಟ್ಟಡಕ್ಕೆ ಮೆಟ್ರೋ, ಮೆಜೆಸ್ಟಿಕ್‌ ಬಸ್‌ ನಿಲ್ದಾಣ ಸೇರಿದಂತೆ ಕನೆಕ್ಟಿವಿಟಿ ಅತ್ಯುತ್ತಮವಾಗಿದೆ. ಪಠ್ಯ-ಪುಸ್ತಕಗಳಿಗೆ ಅವೆನ್ಯು ರಸ್ತೆ ಇದೆ. ಇದಕ್ಕಿಂತ ಹೆಚ್ಚಾಗಿ ಸ್ಥಳಾಂತರದಿಂದ ಕಟ್ಟಡದಲ್ಲಿರುವ ಅತ್ಯಂತ ಹಳೆಯದಾದ ಎಂಜಿನಿಯರಿಂಗ್‌ಗೆ ಸಂಬಂಧಿಸಿದ ಉಪಕರಣಗಳಿವೆ. ಇದೆಲ್ಲದಕ್ಕೂ ತೊಂದರೆ ಆಗಲಿದೆ. ಹಾಗಾಗಿ, ಸ್ಥಳಾಂತರಿಸುವುದು ಬೇಡ ಎಂದು ಅಭಿಪ್ರಾಯಪಟ್ಟರು. 

ಮೆಕಾನಿಕಲ್‌ ಎಂಜಿನಿಯರಿಂಗ್‌ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿ ರೋಷನ್‌, ಪಾರಂಪರಿಕ ಕಟ್ಟಡವನ್ನು ಉಳಿಸಿಕೊಳ್ಳುವುದು ನಮ್ಮ ಕರ್ತವ್ಯ. ಶತಮಾನೋತ್ಸವ ಆಚರಣೆಗೆ 25 ಕೋಟಿ ನೀಡಿದ ಸರ್ಕಾರ ಈಗ ಅದೇ ಕಟ್ಟಡವನ್ನು ಸ್ಥಳಾಂತರಿಸಲು ನಿರ್ಧರಿಸಿರುವುದು ಅಚ್ಚರಿ ಮೂಡಿಸಿದೆ. ಸಂಭ್ರಮಾಚರಣೆ ಸಂದರ್ಭದಲ್ಲಿ ಸ್ಥಳಾಂತರದ ಮಾತು ಸರಿ ಅಲ್ಲ ಎಂದರು. 

ಅಖೀಲ ಭಾರತ ಶಿಕ್ಷಣ ಉಳಿಸಿ ಸಮಿತಿ ಕರ್ನಾಟಕದ ಕಾರ್ಯದರ್ಶಿ ಕೆ. ಉಮಾ, ಯುವಿಸಿಇಯ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ವಾಸುದೇವಮೂರ್ತಿ, ಅಜಯ್‌ ಕಾಮತ್‌ ಮತ್ತಿತರರು ಉಪಸ್ಥಿತರಿದ್ದರು. 

ವಿದೇಶದಲ್ಲಿರುವ ವಿದ್ಯಾರ್ಥಿಗಳಿಂದಲೂ ವಿರೋಧ 
ಯವಿಸಿಇ ಕಟ್ಟಡ ಸ್ಥಳಾಂತರ ವಿರೋಧಿಸಿ ನಡೆಯುತ್ತಿರುವ ಹೋರಾಟಕ್ಕೆ ಅಮೆರಿಕದಲ್ಲಿರುವ ಹಳೆಯ ವಿದ್ಯಾರ್ಥಿಗಳು ಕೂಡ ಕೈಜೋಡಿಸಿದ್ದಾರೆ. 
ಯುವಿಸಿಇನಲ್ಲಿ ಕಲಿತು, ಈಗ ವಿವಿಧ ಕ್ಷೇತ್ರಗಳಲ್ಲಿ ಅಮೆರಿಕದಲ್ಲಿ ಹತ್ತಾರು ಹಳೆಯ ವಿದ್ಯಾರ್ಥಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.

ತಾವು ಕಲಿತ ಕಾಲೇಜು ಕಟ್ಟಡ ಸ್ಥಳಾಂತರಗೊಳ್ಳುತ್ತಿರುವುದನ್ನು ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್‌, ವ್ಯಾಟ್ಸ್‌ಆ್ಯಪ್‌ನಲ್ಲಿ ನೋಡಿ, ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. “ಯುವಿಸಿಇ ಕಟ್ಟಡ ಸ್ಥಳಾಂತರ ಬೇಡ’ ಎಂಬ ಫ‌ಲಕವನ್ನು ಹಿಡಿದು ಅಮೆರಿಕದಲ್ಲಿ ಪ್ರತಿಭಟನೆ ನಡೆಸಿದರು. ಅಲ್ಲದೆ, ನಟ ರಮೇಶ್‌ ಅರವಿಂದ್‌ ಸೇರಿದಂತೆ ಹಲವು ಗಣ್ಯರು ಈ ಹೋರಾಟಕ್ಕೆ ಸಾಥ್‌ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next