ರಾಮನಗರ: ಡೆಹ್ರಾಡೂನ್‌ನಲ್ಲಿ ಇದೇ ಅ. 3 ರಿಂದ 5ನೇ ತಾರೀಕಿನವರೆಗೆ ನಡೆದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಜಿಲ್ಲೆಯ ಅಡ್ವೆಂಚರ್ ಅಕಾಡೆಮಿಯ ಕ್ರೀಡಾಪಟುಗಳು 33 ಪದಕಗಳನ್ನು ಗಳಿಸಿದ್ದು, ಜಿಲ್ಲಾಧಿ ಕಾರಿ ಡಾ.ರಾಕೇಶ್ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಅಡ್ವೆಂಚರ್ ಅಕಾಡೆಮಿಯ ಕ್ರೀಡಾಪಟುಗಳು 15 ಚಿನ್ನದ ಪದಗಳು, 13 ಬೆಳ್ಳಿಯ ಪದಕಗಳು, 5 ಕಂಚಿನ ಪದಗಳು ಒಟ್ಟು 33 ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. 17 ವರ್ಷದ ಒಳಗಿನ ಬಾಲಕರ ಕ್ರೀಡಾ ವಿಭಾಗದ ಓಟದಲ್ಲಿ ವಿಶ್ವಾಸ್ 1500 ಮೀ. ಓಟ ಹಾಗೂ ಲಾಂಗ್ ಜಂಪ್‌ನಲ್ಲಿ 2ನೇ ಸ್ಥಾನಗಳಿಸಿದ್ದಾರೆ. 14 ವರ್ಷದ ಒಳಗಿನ ಕ್ರೀಡಾ ವಿಭಾಗದ 1500 ಹಾಗೂ 3000 ಮೀ. ಓಟದಲ್ಲಿ ಚಿರಾಗ್ ಗೌಡ ಪ್ರಥಮ ಸ್ಥಾನ ಗಳಿಸಿದ್ದಾರೆ.
ಇದನ್ನೂ ಓದಿ:- ದುಬೈನಲಿ ಆನ್‌ಲೈನ್ ಕನ್ನಡ ಕಲಿಕಾ ಶಾಲೆ ಆರಂಭ
100 ಹಾಗೂ 200 ಮೀ. ಓಟದ ಸ್ಪರ್ಧೆ ಯಲ್ಲಿ ಎಸ್.ಪಿ.ವಿನಿ ಪ್ರಥಮ, 400 ಮತ್ತು 200 ಮೀ. ಓಟದಲ್ಲಿ ಅನುಕ್ರಮವಾಗಿ 2ನೇ ಮತ್ತು 3ನೇಸ್ಥಾನ, 400 ಹಾಗೂ 200 ಮೀ. ಓಟದಲ್ಲಿ ಸಮರ್ಥ್ ಕ್ರಮವಾಗಿ ಮೊದಲ ಹಾಗೂ 2ನೇ ಸ್ಥಾನ, 1500 ಮತ್ತು 800 ಮೀ. ಓಟದಲ್ಲಿ ಚಿನ್ಮಯಿ ಮೊದಲ ಸ್ಥಾನಗಳಿಸಿದ್ದಾರೆ. 10000 ಮೀ. ಓಟದ ಸ್ಪರ್ಧೆಯಲ್ಲಿ ಸಮೃದ್ಧ್ 2ನೇ ಸ್ಥಾನ, 800 ಹಾಗೂ 3000 ಮೀ. ಓಟದಲ್ಲಿ ವಿರಾಟ್ ಪ್ರಥಮಸ್ಥಾನ ಗಳಿಸಿದ್ದಾರೆ.
ಬಾಲಕಿಯರ ಸಾಧನೆ: 10 ವರ್ಷದ ಒಳಗಿನ ಬಾಲಕಿಯರ ವಿಭಾಗದಲ್ಲಿ ರಚನಾ ಮನು ಎಂಬ ಬಾಲಕಿ 3000 ಮೀ. ಓಟದಲ್ಲಿ ಪ್ರಥಮ, 1500 ಮೀ. ಓಟದಲ್ಲಿ ತೃತೀಯ ಸ್ಥಾನ ಪಡೆದಿದ್ದಾಳೆ. 800 ಹಾಗೂ 400 ಮೀ. ಓಟದಲ್ಲಿ ಸಮೀûಾ ಎಸ್.ಗೌಡ ಮೊದಲನೇ ಸ್ಥಾನ, 100 ಹಾಗೂ 200 ಮೀ. ಓಟದಲ್ಲಿ ಭಾನು ಎಂಬ ಬಾಲಕಿ ಮೊದಲನೇ ಸ್ಥಾನ ಪಡೆದಿದ್ದಾಳೆ 100 ಹಾಗೂ 200 ಮೀ. ಓಟದಲ್ಲಿ ಅಧಿತಿ ಎಂಬ ಬಾಲಕಿ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿ ಯಶಸ್ವಿಯಾಗಿದ್ದಾಳೆ. 200 ಹಾಗೂ 400 ಮೀ. ಓಟದಲ್ಲಿ ಶ್ರೇಯಾ 2ನೇ ಸ್ಥಾನ, 100 ಹಾಗೂ 400 ಮೀ. ಓಟದಲ್ಲಿ ಐಶ್ವರ್ಯ ಕ್ರಮವಾಗಿ ಮೊದಲ ಹಾಗೂ 2ನೇ ಸ್ಥಾನ, 1500 ಮೀ. ವಿಭಾಗದಲ್ಲಿ ಬಾಂಧವ್ಯ ಎಸ್. ಗೌಡ ಮೊದಲನೇ ಸ್ಥಾನ, 10 ಕಿ.ಮೀ ಹಾಗೂ 5 ಕಿ.ಮೀ ವಿಭಾಗದಲ್ಲಿ ಸಾನಾ ಎಂಬ ಬಾಲಕಿ ಮೊದಲನೇ ಸ್ಥಾನ ಗಳಿಸಿದ್ದಾರೆ.
ಅಡ್ವೆಂಚರ್ ಅಕಾಡೆಮಿಯ ತರಬೇತುದಾರರಾದ ಮನೋಜ್ ಹಾಗೂ ಅಕ್ಷತಾ ನೇತೃತ್ವದಲ್ಲಿ ಹತ್ತು, ಹದಿನೈದು ಹಾಗೂ ಹದಿನೇಳು ವರ್ಷದ ಒಳಗಿನ ಬಾಲಕ, ಬಾಲಕಿಯರು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.ಅಪರ ಜಿಲ್ಲಾಧಿಕಾರಿ ಟಿ.ಜವರೇಗೌಡ ಸಹ ಹಾಜರಿದ್ದರು.