Advertisement

ಮಂಜುನಾಥನಗರ ಪ್ರಾಥಮಿಕ ಶಾಲೆಯಲ್ಲಿ ಮೆಟ್ರಿಕ್‌ ಮೇಳ 

04:30 PM Dec 11, 2017 | |

ಸವಣೂರು: ವಿದ್ಯಾರ್ಥಿಗಳು, ಶಿಕ್ಷಕರು, ಸಿಬಂದಿ ಕೂಡಿರುವ ಶಿಕ್ಷಣ ಕೇಂದ್ರವಾಗಿದ್ದ ಪುತ್ತೂರು ತಾಲೂಕಿನ ಪಾಲ್ತಾಡಿ ಗ್ರಾಮದ ಮಂಜುನಾಥನಗರ ಹಿರಿಯ ಪ್ರಾಥಮಿಕ ಶಾಲೆ ವಠಾರ ವ್ಯಾಪಾರ ಕೇಂದ್ರವಾಗಿ ಮಾರ್ಪಟ್ಟಿತ್ತು. ಇದಕ್ಕೆ ವೇದಿಕೆಯಾದದ್ದು ವಿದ್ಯಾರ್ಥಿಗಳ ಮೆಟ್ರಿಕ್‌ ಮೇಳ.

Advertisement

ಸದಾ ಓದು, ಪಾಠ, ಆಟದಲ್ಲಿ ತಲ್ಲೀನರಾಗುತ್ತಿದ್ದ ವಿದ್ಯಾರ್ಥಿಗಳು ಶಾಲಾ ಆವರಣದಲ್ಲಿ ತಮ್ಮ ಮನೆಗಳಿಂದ ತಂದ ಬಗೆ ಬಗೆಯ ತಾಜಾ ತರಕಾರಿ, ಹೂವು, ಸೊಪ್ಪು, ಹಣ್ಣು-ಹಂಪಲು ಹಾಗೂ ಗಿಡಗಳನ್ನು ಪೈಪೋಟಿಗೆ ಬಿದ್ದವರಂತೆ ವ್ಯಾಪಾರ ಮಾಡಿ, ಕೈತುಂಬ ಹಣ ಸಂಪಾದಿಸಿದರು. ಬೆಳಗ್ಗೆಯಿಂದಲೇ ವ್ಯಾಪಾರ ಭರ್ಜರಿಯಾಗಿ ನಡೆಯಿತು.

ಶಿಕ್ಷಕರು, ಪೋಷಕರೇ ಗ್ರಾಹಕರು!
ಮೆಟ್ರಿಕ್‌ ಮೇಳದಲ್ಲಿ ಗ್ರಾಹಕರು ಚೌಕಾಶಿ ಮಾಡಿ ತಮಗಿಷ್ಟವಾದ ವಸ್ತುಗಳನ್ನು ಖರೀದಿಸಿದರು. ಕೆಲವು ಗ್ರಾಹಕರು ಚರ್ಚೆ ಮಾಡದೆ, ವಿದ್ಯಾರ್ಥಿಗಳು ನಿಗದಿ ಪಡಿಸಿದ ದರಕ್ಕೇ ಸೊಪ್ಪು- ತರಕಾರಿ ಖರೀದಿಸಿದರು. ವಿದ್ಯಾರ್ಥಿಗಳು ತಾವು ತಂದಿದ್ದ ಎಲ್ಲ ವಸ್ತುಗಳನ್ನೂ ಮಾರಾಟ ಮಾಡಿ, ಲಾಭ ಜೇಬಿಗಿಳಿಸಿಕೊಂಡರು. ಶಿಕ್ಷಕರು, ಪೋಷಕರು ಹಾಗೂ ಸಾರ್ವಜನಿಕರೇ ಗ್ರಾಹಕರಾಗಿದ್ದರು.

ಶಿಕ್ಷಣದಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಸರಕಾರದ ಸುತ್ತೋಲೆಯಂತೆ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ವ್ಯಾಪಾರ ಮನೋಭಾವನೆ, ವ್ಯಾವಹಾರಿಕ ಜೀವನ ನಿರ್ವಹಣೆಯ ಮಹತ್ವ ತಿಳಿಯಪಡಿಸುವ ಉದ್ದೇಶದಿಂದ ವಿದ್ಯಾರ್ಥಿಗಳಿಗೆ ಆಯೋಜಿಸುತ್ತಿರುವ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿ ಯಶಸ್ವಿಯಾಯಿತು.

ಮಂಜುನಾಥನಗರ ಸರಕಾರಿ ಪ್ರೌಢಶಾಲೆಯ ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಬಿ.ಕೆ. ರಮೇಶ್‌ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸ್ಥಳೀಯ ವರ್ತಕ ಕೃಷ್ಣಪ್ಪ ಶೆಟ್ಟಿ, ವ್ಯಾಪಾರ- ವ್ಯವಹಾರದ ಕುರಿತು ಮಕ್ಕಳಿಗೆ ತಿಳಿಹೇಳಿದರು. ವ್ಯಾಪಾರಕ್ಕೆ ವಾಕ್ಚಾತುರ್ಯ, ಪ್ರಾಮಾಣಿಕತೆ ಅತ್ಯಗತ್ಯ ಎಂದರು.

Advertisement

ಸವಣೂರು ಗ್ರಾ.ಪಂ. ಮಾಜಿ ಸದಸ್ಯರಾದ ಸುಧೀರ್‌ ಕುಮಾರ್‌ ರೈ ಕುಂಜಾಡಿ, ಸುಂದರಿ ಬಿ.ಎಸ್‌., ಮಂಜುನಾಥನಗರ ಪ್ರಾಥಮಿಕ ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ವಿಮಲಾ, ಸದಸ್ಯೆ ಸವಿತಾ, ಸ್ಥಳೀಯ ಮುಂದಾಳುಗಳಾದ ಅಶ್ರಫ್‌ ಖಾಸಿಲೆ, ಸುಂದರ ಭಂಡಾರಿ, ವಿವೇಕಾನಂದ ಯುವಕ ಮಂಡಲದ ಅಧ್ಯಕ್ಷ ಅನ್ನಪ್ರಸಾದ್‌ ರೈ ಬೈಲಾಡಿ, ಮಂಜುನಾಥನಗರ ಪ್ರೌಢ ಶಾಲಾ ಮುಖ್ಯಗುರು ಯಶೋದಾ, ಅಂಗನವಾಡಿ ಕಾರ್ಯಕರ್ತೆ ಸುಮಂಗಲಾ ಹಾಗೂ ಮಕ್ಕಳ ಹೆತ್ತವರು ಉಪಸ್ಥಿತರಿದ್ದರು.

ಪೋಷಕರ ಪ್ರೋತ್ಸಾಹ
ಪೋಷಕರ ಪ್ರೋತ್ಸಾಹದೊಂದಿಗೆ ಅಯೋಜಿಸಿದ್ದ ಮೆಟ್ರಿಕ್‌ ಮೇಳ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ತಮ್ಮ ವ್ಯವಹಾರ ಜ್ಞಾನವನ್ನು ತೋರ್ಪಡಿಸಿದರು. ಮುಖ್ಯ ಶಿಕ್ಷಕಿ ಕುಸುಮಾ ಐ.ಟಿ. ಅವರ ನೇತೃತ್ವದಲ್ಲಿ ಶಿಕ್ಷಕಿಯರಾದ ನಂದಿನಿ ಆರ್‌., ಆರತಿ ಎಸ್‌., ಪ್ರಸಿಲ್ಲಾ ಆ್ಯಗ್ನೇಸ್‌ ಪಾಯಸ್‌, ರೇಖಾ ಅವರು ಮೆಟ್ರಿಕ್‌ ಮೇಳದ ಜವಾಬ್ದಾರಿ ವಹಿಸಿಕೊಂಡಿದ್ದರು.

ಸಂತೆಯಲ್ಲಿ ಏನೇನಿತ್ತು?
ಮೇಳದಲ್ಲಿ ಚೀನಿಕಾಯಿ, ಬೆಂಡೆಕಾಯಿ, ತೊಂಡೆ ಕಾಯಿ, ಕುಂಬಳಕಾಯಿ, ಪಡುವಲಕಾಯಿ, ಬಾಳೆಹಣ್ಣು ,ಹರಿವೆ ಸೊಪ್ಪು, ಹಸಿಮೆಣಸು, ಟೊಮೇಟೊ, ಸಿಹಿಗೆಣಸು, ಬಸಳೆ, ಎಳೆನೀರು, ಕೊಕ್ಕೊ, ವೀಳ್ಯದೆಲೆ, ತೆಂಗಿನಕಾಯಿ, ಕಬ್ಬು, ಸೀಬೆಕಾಯಿ, ಪರಂಗಿಹಣ್ಣು, ಚಿಕ್ಕು, ಪಪ್ಪಾಯಿ, ಕಲ್ಲಂಗಡಿ, ಔಷಧ ಸಸ್ಯ, ಹೂವಿನ ಗಿಡ, ತಾಳೆಹಣ್ಣು, ಗುಲಾಬಿ, ಮಲ್ಲಿಗೆ, ಅರಿಸಿನ, ಲಿಂಬೆ, ಬದನೆ, ತಾಜಾ ಹಣ್ಣಿನ ರಸಗಳು, ತರಕಾರಿಗಳು, ಹಣ್ಣಿನ ಗಿಡಗಳು, ಹೂವು, ಚರುಂಮುರಿ, ಮನೆಯಲ್ಲಿ ತಯಾರಿಸಿದ ತಿಂಡಿ, ಉಪ್ಪಿನಕಾಯಿ ಮೊದಲಾದ ವಸ್ತುಗಳು ಲಭ್ಯವಿದ್ದವು.

ವಿದ್ಯಾರ್ಥಿಗಳ ಉತ್ಸಾಹ
ವ್ಯಾವಹಾರಿಕ ಗಣಿತ ನಮ್ಮೆಲ್ಲರ ಜೀವನದಲ್ಲಿ ಹಾಸುಹೊಕ್ಕಾಗಿದೆ. ಅದನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವುದು ಈ ಮೆಟ್ರಿಕ್‌ ಮೇಳದ ಮುಖ್ಯ ಉದ್ದೇಶ. ಮೆಟ್ರಿಕ್‌ ಮೇಳಕ್ಕಾಗಿ ವಿದ್ಯಾರ್ಥಿಗಳು ಹಲವು ದಿನಗಳಿಂದ ಉತ್ಸಾಹದಿಂದ ಕಾದು ಕುಳಿತಿದ್ದರು.
ಕುಸುಮಾ ಐ.ಟಿ., ಮುಖ್ಯ ಶಿಕ್ಷಕಿ,
  ಮಂಜುನಾಥನಗರ ಪ್ರಾಥಮಿಕ ಶಾಲೆ

ತಿಂಗಳಿಗೊಮ್ಮೆ ನಡೆಸಿ
ಮಕ್ಕಳಿಗೆ ಭವಿಷ್ಯದಲ್ಲಿ ವ್ಯಾವಹಾರಿಕ ಜ್ಞಾನವನ್ನು ವೃದ್ಧಿಸುವ ಸಲುವಾಗಿ ಮೆಟ್ರಿಕ್‌ ಮೇಳವೆಂಬ ಕಾರ್ಯಕ್ರಮವನ್ನು ಸರಕಾರಿ ಶಾಲೆಯಲ್ಲಿ ಹಮ್ಮಿಕೊಂಡಿರುವುದು ಉತ್ತಮ ಬೆಳವಣಿಗೆ. ವರ್ಷಕ್ಕೊಮ್ಮೆ ನಡೆಯುವ ಈ ಮೇಳವನ್ನು ತಿಂಗಳಿಗೊಮ್ಮೆ ಅಥವಾ ಹಬ್ಬ ಹರಿದಿನಗಳಂದು ನಡೆಸಿದರೆ ಸ್ಥಳೀಯರಿಗೆ ಕೈಗಟಕುವ ದರದಲ್ಲಿ ತಾಜಾ ತರಕಾರಿಗಳು ಲಭ್ಯವಾಗುತ್ತದೆ.
ಸತೀಶ್‌ ಎ., ಗ್ರಾಹಕ

ಜ್ಞಾನ ವೃದ್ಧಿಗೆ ಸಹಕಾರಿ
ತಮ್ಮ ಮನೆಯಲ್ಲಿ ಬೆಳೆದ ತರಕಾರಿಯನ್ನು ತಾವೇ ಮಾರಾಟ ಮಾಡಿ ಹಣ ಗಳಿಸಲು ಮೆಟ್ರಿಕ್‌ ಮೇಳ ಸಹಕಾರಿಯಾಗಿದೆ. ವಿದ್ಯಾರ್ಥಿ ದಿಸೆಯಿಂದಲೇ ವಿದ್ಯೆಯೊಂದಿಗೆ ವ್ಯಾಪಾರ ವಹಿವಾಟಿನ ಜ್ಞಾನ ವೃದ್ಧಿಸಲು ಮೆಟ್ರಿಕ್‌ ಮೇಳದಿಂದ ಸಾಧ್ಯ.
– ಸೌಜನ್‌, ವಿದ್ಯಾರ್ಥಿ

ಪ್ರವೀಣ್‌ ಚೆನ್ನಾವರ

Advertisement

Udayavani is now on Telegram. Click here to join our channel and stay updated with the latest news.

Next