Advertisement
ಪ್ರಸಕ್ತ ಸಾಲಿನಿಂದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಸ್ಮಾರ್ಟ್‌ಕಾರ್ಡ್ ರೂಪದಲ್ಲಿ ವಿದ್ಯಾರ್ಥಿಗಳ ಪಾಸು ವಿತರಣೆಗೆ ನಿರ್ಧರಿಸಿದ್ದು, ಅದಕ್ಕೆ ಪೂರಕವಾಗಿ ಆನ್‌ಲೈನ್‌ನಲ್ಲೇ ಫೋಟೋ ಸಹಿತ ಅರ್ಜಿ ಸಲ್ಲಿಸಲು ಸೂಚಿಸಿದೆ. ಆದರೆ, ವಿದ್ಯಾರ್ಥಿಗಳು ಪಾಸ್‌ಪೋರ್ಟ್ ಫೋಟೋ ಹಾಕಬೇಕಾದ ಜಾಗದಲ್ಲಿ ತಮ್ಮ ನೆಚ್ಚಿನ ನಾಯಕ ಅಥವಾ ನಾಯಕಿ ಜತೆ ಒಂದು ಸೆಲ್ಫಿ, ಪಾರ್ಕ್‌ನಲ್ಲಿ ಸ್ನೇಹಿತರೊಂದಿಗೆ ಜಾಲಿಮೂಡ್‌ನಲ್ಲಿರುವ ಫೋಟೋ, ಬೈಕ್‌ನಲ್ಲಿ ಕುಳಿತ ವಿವಿಧ ಭಂಗಿಗಳು, ಸೆಲ್ಫಿ ವಿತ್ ಫ್ಯಾಮಿಲಿ ಫೋಟೋಗಳನ್ನು ಅಪ್‌ಲೋಡ್ ಮಾಡಿದ್ದಾರೆ. ಅದೇ ಈಗ ಉಚಿತ ಪಾಸ್‌ಗೆ ವಿತರಣೆಗೆ ಅಡ್ಡಿಯಾಗಿದೆ.
ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಹೀಗೆ ಬಂದಿರುವ ಫೋಟೋಗಳು 30 ಸಾವಿರಕ್ಕೂ ಹೆಚ್ಚು. ಆದರೆ, ಈ ರೀತಿಯ ಫೋಟೋಗಳನ್ನು ಸ್ಮಾರ್ಟ್‌ಕಾರ್ಡ್ ಸಾಫ್ಟ್ವೇರ್ ಸ್ವೀಕರಿಸುತ್ತಿಲ್ಲ. ಜತೆಗೆ ಹೋಲಿಕೆಯಾಗದೇ ತಿರಸ್ಕೃತಗೊಳ್ಳುತ್ತಿವೆ. ಇದು ಸಿಬ್ಬಂದಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಶಾಲಾ ವಿದ್ಯಾರ್ಥಿಗಳ ಫೋಟೋಗಳಲ್ಲಿ ಅಷ್ಟಾಗಿ ಈ ಸಮಸ್ಯೆ ಇಲ್ಲ. ಕಾಲೇಜು ವಿದ್ಯಾರ್ಥಿಗಳಲ್ಲೇ ಈ ಸಮಸ್ಯೆ ಹೆಚ್ಚಿದೆ. ಪರಿಣಾಮ ಪಾಸುಗಳ ವಿತರಣೆಯಲ್ಲಿ ವಿಳಂಬವಾಗುತ್ತಿದೆ ಎಂದು ಹೆಸರು ಹೇಳಲಿಚ್ಛಿಸದ ಬಿಎಂಟಿಸಿ ಅಧಿಕಾರಿಯೊಬ್ಬರು ಅಸಹಾಯಕತೆ ವ್ಯಕ್ತಪಡಿಸುತ್ತಾರೆ. ತಾಂತ್ರಿಕ ಕಾರಣದಿಂದ ಹಿನ್ನಡೆ:
ಶಾಲೆಗಳಿಂದ ಅಪ್‌ಲೋಡ್ ಆಗಿರುವ ಅರ್ಜಿಗಳ ಫೋಟೋಗಳು ಬಹುತೇಕ ಸರಿಯಾಗಿವೆ. ಕಾಲೇಜು ವಿದ್ಯಾರ್ಥಿಗಳು ಅಪ್‌ಲೋಡ್ ಮಾಡಿರುವ ಫೋಟೋಗಳೇ ಅಸಮರ್ಪಕವಾಗಿವೆ. ಅದರಲ್ಲಿ ತಂದೆಯೊಂದಿಗೆ, ಕುಟುಂಬದ ಸದಸ್ಯರು, ಸ್ಟಾರ್‌ಗಳೊಂದಿಗೆ ತೆಗೆದುಕೊಂಡ ಸೆಲ್ಫಿ ಹೆಚ್ಚಿನ ಸಂಖ್ಯೆಯಲ್ಲಿವೆ. ಇನ್ನು ಹಲವು ಫೋಟೋಗಳು ಉತ್ತಮ ಗುಣಮಟ್ಟದ್ದಾಗಿಲ್ಲ. ಕೆಲವು ಅಸ್ಪಷ್ಟವಾಗಿದ್ದು, ಒಂದಕ್ಕೊಂದು ಹೋಲಿಕೆಯೂ ಆಗುತ್ತಿಲ್ಲ. ಈ ರೀತಿಯ ತಾಂತ್ರಿಕ ಕಾರಣಗಳಿಂದ ಸ್ವಲ್ಪ ಹಿನ್ನಡೆ ಆಗಿದೆ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ. ಪೊನ್ನುರಾಜ್ ಸ್ಪಷ್ಟಪಡಿಸುತ್ತಾರೆ.
Related Articles
– ವಿ. ಪೊನ್ನುರಾಜ್, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ
Advertisement
– ವಿಜಯಕುಮಾರ ಚಂದರಗಿ