ಬಸವಕಲ್ಯಾಣ: ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಸಿಬ್ಬಂದಿ ನೇಮಕಾತಿ ಮತ್ತು ವಿವಿಯಲ್ಲಿ ನಡೆದಿರುವ ಭ್ರಷ್ಟಾಚಾರ ತನಿಖೆಗೆ ಒತ್ತಾಯಿಸಿ, ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಶುಕ್ರವಾರ ಉಪ ತಹಶೀಲ್ದಾರ್ ಶಿವಾನಂದ ಮೇತ್ರೆ ಅವರಿಗೆ ಮನವಿ ಸಲ್ಲಿಸಿದರು.
ಗುಣಮಟ್ಟದ ಶಿಕ್ಷಣ ಸಿಗಬೇಕು ಎಂಬ ನಿಟ್ಟಿನಲ್ಲಿ ರಾಜ್ಯದಲ್ಲಿ ಸಾಕಷ್ಟು ವಿಶ್ವವಿದ್ಯಾಲಯ ಪ್ರಾರಂಭಿಸಲಾಗಿದೆ. ಆದರೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ನೇಮಕಾತಿ ಆಗದೇ ಇಂದು ಹಲವಾರು ವಿಶ್ವವಿದ್ಯಾಲಯಗಳು ಶೈಕ್ಷಣಿಕ ವಾತಾವರಣ ಹಾಳು ಮಾಡುತ್ತಿರುವುದು ಶೋಚನೀಯ ಸಂಗತಿಯಾಗಿದೆ ಎಂದರು.
ವಿವಿಯಲ್ಲಿ ಒಟ್ಟು 6 ಸಾವಿರಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ. ಆದರೂ ಈವರೆಗೂ ಇದರ ಬಗ್ಗೆ ಯಾರೂ ತಲೆ ಕೆಡಸಿಕೊಳ್ಳದಿರುವುದನ್ನು ನೋಡಿದರೆ, ಉನ್ನತ ಶಿಕ್ಷಣವನ್ನು ನಿರ್ಲಕ್ಷ ಮಾಡಲಾಗುತ್ತಿದೆ ಎಂಬುದು ಬಗ್ಗೆ ಕಂಡುಬರುತ್ತಿದೆ ಎಂದು ಆರೋಪಿಸಿದರು.
ವಿವಿಗಳು ಇಂದು ಭ್ರಷ್ಟಾಚಾರದ ಕೇಂದ್ರಗಳಾಗುತ್ತಿವೆ. ಕಟ್ಟಡ ಕಾಮಗಾರಿ, ಪ್ರಯೋಗಾಲಗಳ ಅಭಿವೃದ್ಧಿ ಹೆಸರಿನಲ್ಲಿ ಮತ್ತು
ಉಪಕರಣಗಳ ಖರೀದಿ ಅಂಕಪಟ್ಟಿ ವಿತರಣೆ, ನೇಮಕಾತಿ ಮಾಡಿಕೊಳ್ಳುವಲ್ಲಿ ಅಕ್ರಮದಲ್ಲಿ ತೊಡಗಿವೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ ವಿವಿಗಳಲ್ಲಿನ ಸಮಸ್ಯೆಗಳನ್ನು ಆದಷ್ಟು ಬೇಗ ಬಗೆಹರಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಮನವಿಯಲ್ಲಿ ತಿಳಿಸಿದ್ದಾರೆ. ನಗರ ಕಾರ್ಯದರ್ಶಿ ರೇವಣಸಿದ್ದ ಚಿಲ್ಲಾಬಟ್ಟೆ, ತಾಲೂಕು ಸಂಚಾಲಕ ನವನಾಥ ಮೇತ್ರೆ, ಅರುಣಕುಮಾರ, ಕಲ್ಪನಾ, ಸ್ವಾತಿ, ನಿಲಾಂಬಿಕಾ ಹಾಗೂ ವಿದ್ಯಾರ್ಥಿಗಳು ಇದ್ದರು.