ಬೆಂಗಳೂರು: ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್ ನೀಡುವಂತೆ ಆಗ್ರಹಿಸಿ ಸರ್ಕಾರದ ಮೇಲೆ ಒತ್ತಡ ಹೇರಲು
ಶನಿವಾರ ರಾಜ್ಯಾದ್ಯಂತ ಶಾಲಾ- ಕಾಲೇಜು ಬಂದ್‌ಗೆ ಕರೆ ನೀಡಲಾಗಿತ್ತು.
ಈ ಹಿನ್ನೆಲೆಯಲ್ಲಿ ರಾಜ್ಯದ ಹಲವೆಡೆ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ,ಪ್ರತಿಭಟನೆ ನಡೆಸಿದರು. ಹಿಂದಿನ ಸರ್ಕಾರದ ಘೋಷಣೆಯಂತೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಸೇರಿ ರಾಜ್ಯದ ಎಲ್ಲ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೂ ಉಚಿತ ಬಸ್‌ಪಾಸ್ ನೀಡಬೇಕು ಎಂದು ಆಗ್ರಹಿಸಿ ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ ಆರ್ಗನೈಸೇಷನ್, ಆಲ್ ಇಂಡಿಯಾ ಡೆಮಾಕ್ರಟಿಕ್ ಯೂತ್ ಆರ್ಗನೈ ಸೇಷನ್, ಆಲ್ ಇಂಡಿಯಾ ಮಹಿಳಾ ಸಾಂಸ್ಕೃತಿಕ ಸಂಘಟನೆಗಳು ಜತೆಯಾಗಿ ಶಾಲಾ ಕಾಲೇಜು ಬಂದ್‌ಗೆ ಕರೆ ನೀಡಿದ್ದವು.
ರಾಜಧಾನಿ ಬೆಂಗಳೂರು, ಮಂಡ್ಯ, ಮೈಸೂರು, ಚಿಕ್ಕಬಳ್ಳಾಪುರ,ರಾಯಚೂರು, ಹುಬ್ಬಳ್ಳಿ, ಧಾರವಾಡ, ಮಂಗಳೂರು, ಉಡುಪಿ, ಕಲಬುರಗಿ,ದಾವಣಗೆರೆ ಸೇರಿದಂತೆ ರಾಜ್ಯದ ಹಲವೆಡೆ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.
ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಎಐಡಿಎಸ್‌ಒ ಬೆಂಗಳೂರು ನಗರ ಜಿಲ್ಲಾ ಕಾರ್ಯದರ್ಶಿ ಅಜಯ್ ಕಾಮತ್,ರಾಜ್ಯಾದ್ಯಂತ ಎಲ್ಲ ಜಿಲ್ಲೆ, ತಾಲೂಕು ಕೇಂದ್ರಗಳು ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ತರಗತಿ ಬಹಿಷ್ಕರಿಸಿ ಬಂದ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳ ಹೋರಾಟ ಹತ್ತಿಕ್ಕುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹಲವಾರು ತಂತ್ರಗಳನ್ನು ಹೂಡಿತ್ತು ಎಂದು ಆರೋಪಿಸಿದರು.
ಎಐಡಿಎಸ್‌ಒ ರಾಜ್ಯ ಕಾರ್ಯದರ್ಶಿ ಕೆ.ಎಸ್.ಅಶ್ವಿನಿ, ಎಐಡಿವೈಒ ರಾಜ್ಯ ಕಾರ್ಯದರ್ಶಿ ಜಿ.ಎಸ್.ಕುಮಾರ್ ಹಾಗೂ ಎಐಎಂಎಸ್‌ಎಸ್ ರಾಜ್ಯ ಕಾರ್ಯದರ್ಶಿ ಎಸ್.ಶೋಭಾ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.