Advertisement

ಸಾರಿಗೆ ಸಂಸ್ಥೆ ವಿರುದ್ಧ ರಸ್ತೆ ತಡೆ- ಮಾಲೂರು ರಸ್ತೆ ಬಂದ್‌

04:39 PM Feb 05, 2023 | Team Udayavani |

ಕೋಲಾರ: ನಗರ ಹೊರವಲಯದ ಮಂಗಸಂದ್ರದ ಬೆಂಗ ಳೂರು ಉತ್ತರ ವಿವಿ ಸ್ನಾತಕೋತ್ತರ ಕೇಂದ್ರದ ಬಳಿ ಸಾರಿಗೆ ಸಂಸ್ಥೆ ಬಸ್ಸುಗಳು ನಿಲುಗಡೆ ಮಾಡುತ್ತಿಲ್ಲ ಎಂದು ಆರೋಪಿಸಿ ಕೋಲಾರ-ಮಾಲೂರು ರಸ್ತೆ ತಡೆ ಮಾಡಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

Advertisement

ಕೋಲಾರದಿಂದ ಮಾಲೂರು ಮಾರ್ಗವಾಗಿ ತಮಿಳು ನಾಡಿನ ಹೊಸೂರು ನಗರಕ್ಕೆ ಹೋಗುವ ರಸ್ತೆಯಲ್ಲಿ ನಿತ್ಯ ನೂರಾರು ಸಾರಿಗೆ ಸಂಸ್ಥೆಯ ಬಸ್ಸುಗಳ ಓಡಾಟ ಇದ್ದರೂ ಅದೇ ರಸ್ತೆಯಲ್ಲಿ ಬರುವ ಮಂಗಸಂದ್ರ ಬಳಿ ಇರುವ ಬೆಂಗಳೂರು ಉತ್ತರ ವಿವಿ ಸ್ನಾತಕೋತ್ತರ ಕೇಂದ್ರದ ಬಸ್‌ ನಿಲ್ದಾಣದಲ್ಲಿ ಬಸ್ಸು ನಿಲ್ಲಿಸದೇ ಇರುವುದು ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಬೆಂಗಳೂರು ಉತ್ತರ ವಿವಿಯ ಹತ್ತಿರ ವೇಗದೂತ ಬಸ್ಸುಗಳು, ಹೊಸೂರು ಬಸ್‌ಗಳು ನಿಲ್ಲಿಸುವುದಿಲ್ಲ. ರಾತ್ರಿ 7.30 ಆದರೂ ವಿದ್ಯಾರ್ಥಿಗಳು ವಿವಿ ಗೇಟ್‌ ಬಳಿ ಇರುತ್ತಾರೆ. ಇದ ರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಮುಖ್ಯವಾಗಿ ಹೆಣ್ಣು ಮಕ್ಕಳಿಗೆ ತುಂಬಾ ತೊಂದರೆಯಾಗುತ್ತಿದ್ದು, ಮಾರನೆ ದಿನ ತರಗತಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಆದುದ್ದರಿಂದ ಈ ಹೋರಾಟ ಮಾಡುತ್ತಿದ್ದು, ನಮ್ಮ ಸಮಸ್ಯೆಗೆ ಪರಿಹಾರ ನೀಡುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಪಟ್ಟುಹಿಡಿದರು.

ವಿದ್ಯಾರ್ಥಿಗಳು ಟಿಕೆಟ್‌ ತೆಗೆದುಕೊಳ್ಳುವುದಿಲ್ಲ, ಎಲ್ಲರೂ ವಿದ್ಯಾರ್ಥಿ ಪಾಸ್‌ ತೋರಿಸುತ್ತಾರೆ ಅದಕ್ಕೆ ನಿಲ್ಲಿಸಲ್ಲ, ಎಕ್ಸ್‌ಪ್ರೆಸ್‌ ಬಸ್ಸುಗಳಲ್ಲಿ ಪಾಸ್‌ ಅಲೋ ಮಾಡೋಕಾಗಲ್ಲ ಅಂತಾರೆ. ಇದು ಕೋಲಾರ ಸಾರಿಗೆ ಸಂಸ್ಥೆ ವಿದ್ಯಾರ್ಥಿಗಳಿಗೆ ಮಾಡುತ್ತಿರುವ ಮೋಸ ಎಂದು ವಿದ್ಯಾರ್ಥಿಗಳು ಆರೋಪಿಸಿದರು.

ಈ ಪ್ರತಿಭಟನೆಯಿಂದ ಮಾಲೂರು ಹಾಗೂ ನೆರೆಯ ತಮಿಳು ನಾಡಿನ ಹೊಸೂರು ನಗರಕ್ಕೆ ತೆರಳುತ್ತಿದ್ದ ಸಾವಿರಾರು ಪ್ರಯಾಣಿಕರು ತೊಂದರೆಗೆ ಸಿಲುಕಿದರು. ವಿದ್ಯಾರ್ಥಿಗಳು ದೊಡ್ಡ ಸಂಖ್ಯೆಯಲ್ಲಿ ಮುಖ್ಯ ರಸ್ತೆಯಲ್ಲಿ ಧರಣಿ ಕುಳಿತ ಕಾರಣ ಸುಮಾರು 3-4 ಕಿಮೀ ಟ್ರಾಫಿಕ್‌ ಜಾಮ್‌ ಆಗಿತ್ತು.ಬಳಿಕ ಸಾರಿಗೆ ಸಂಸ್ಥೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ವಿದ್ಯಾರ್ಥಿಗಳ ಸಮಸ್ಯೆಗೆ ಪರಿಹಾರ ನೀಡುವ ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next