ಯಳಂದೂರು: ವಿದ್ಯಾರ್ಥಿಗಳಿಗೆ ಭಾರತೀಯ ಸಂವಿಧಾನದ ಅರಿವು ಹೆಚ್ಚು ಅಗತ್ಯವಿದೆ. ಈ ಬಗ್ಗೆ ಹೆಚ್ಚು ಅಭ್ಯಾಸ ಮಾಡಬೇಕು. ಇದರ ನಿಯಮಗಳನ್ನು ಪಾಲನೆ ಮಾಡಬೇಕು ಎಂದು ಸಿವಿಲ್ ನ್ಯಾಯಾಧೀಶ ಎನ್. ಶರತ್‌ಚಂದ್ರ ಸಲಹೆ ನೀಡಿದರು.
ಪಟ್ಟಣದ ಬಿಳಿಗಿರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಹಾಗೂ ಬಿಳಿಗಿರಿ ಪ್ರಥಮ ದರ್ಜೆ ಕಾಲೇಜಿನ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ಜಾಗೃತಿ ಮತ್ತು ಸಾಮಾನ್ಯ ಕಾನೂನು ಕಾರ್ಯಕ್ರಮವನ್ನು ಉದ್ಘಾಟಿಸಿದ ಅವರು ಮಾತನಾಡಿ, ಸಂವಿಧಾನದ ಪೀಠಿಕೆಯನ್ನು ಪ್ರತಿಯೊಬ್ಬರು ಅನುಸರಿಸಬೇಕು.
ಮೂಲಭೂತ ಹಕ್ಕುಗಳ ಪಾಲನೆ ಮಾಡಬೇಕು, ಕರ್ತವ್ಯಗಳನ್ನು ನಿರ್ವಹಿಸಬೇಕು. ಇದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಮೋಟಾರು ವಾಹನಗಳ ಕಾಯ್ದೆಯ ಬಗ್ಗೆ ಹೆಚ್ಚು ಗಮನ ನೀಡಬೇಕು. ಇದರ ಪರಿಪಾಲನೆ ಮಾಡಬೇಕು. ವ್ಯಾಸಂಗದ ಸಮಯ ಅಮೂಲ್ಯವಾಗಿದ್ದು, ಇತರೆ ವಿಚಾರಗಳಿಗೆ ಇದನ್ನು ವ್ಯರ್ಥ ಮಾಡಬಾರದು ಎಂದು ಹೇಳಿದರು.
ಓದು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು: ವಕೀಲ ಬಿ.ಎಂ. ಮಹಾದೇವಸ್ವಾಮಿ ಮಾತನಾಡಿ, ನಮ್ಮ ದೇಶದಲ್ಲಿ ಅಂದಾಜು 3500ಕ್ಕೂ ಹೆಚ್ಚು ಕಾನೂನುಗಳಿವೆ. ಇದರ ಮೂಲ ಸಂವಿಧಾನವಾಗಿದೆ. ಸಂವಿಧಾನ ಓದುವ ಮುಂಚೆ ಇದರ ಕತೃì ಡಾ.ಬಿ.ಆರ್.ಅಂಬೇಡ್ಕರ್ ಬದುಕು- ಬರಹಗಳ ಪುಸ್ತಕವನ್ನು ಅಭ್ಯಸಿಸಬೇಕು. ನಮ್ಮ ದೇಶದ ಧಾರ್ಮಿಕ ಗ್ರಂಥ ಸಂವಿಧಾನವಾಗಿದೆ ಎಂಬುದರ ಅರಿವನ್ನು ಪಡೆದುಕೊಳ್ಳಬೇಕು. ಓದು ನಮ್ಮ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಎಂಬುದನ್ನು ಅರಿಯಬೇಕು ಎಂದು ತಿಳಿಸಿದರು.
ಓದಿಗೆ ಮೌಲ್ಯ ತುಂಬುವ ಕೆಲಸ ಮಾಡಿ: ವ್ಯಾಪಾರೀಕರಣವಾಗುತ್ತಿರುವ ಇಂತಹ ಸಂದರ್ಭಗಳಲ್ಲಿ ಓದಿಗೆ ಮೌಲ್ಯವನ್ನು ತುಂಬುವ ಕೆಲಸ ಮಾಡಬೇಕು. ಆದಷ್ಟು ಮೊಬೈಲ್ ಬಳಕೆಗಳನ್ನು ಒಳ್ಳೆ ಉದ್ದೇಶಕ್ಕೆ ಬಳಸಬೇಕು. ಸ್ವಾಭಿಮಾನದ ಬದುಕಿಗೆ ನಮ್ಮ ಆಲೋಚನೆಗಳಲ್ಲಿ ಜವಾಬ್ದಾರಿಯನ್ನು ಹೆಚ್ಚಿಸಿಕೊಳ್ಳಬೇಕು. ಇದು ಶುದ್ಧವಾಗಿರುವಂತೆ ನೋಡಿಕೊಳ್ಳಬೇಕು. ಒಳ್ಳೆಯ ರೂಢಿ ಸಂಪ್ರದಾಯಗಳೂ ಕಾನೂನು ಆಗುವ ನಮ್ಮ ದೇಶದಲ್ಲಿ ವಿಭಿನ್ನತೆಯಲ್ಲಿ ಏಕತೆ ಸಾಧಿಸಬೇಕಾದರೆ, ಕಾನೂನು ಪಾಲನೆ ಅಗತ್ಯ ಹೆಚ್ಚಾಗಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷ ಎನ್.ಪ್ರಶಾಂತ್, ಕಾರ್ಯದರ್ಶಿ ಸಿ. ಮಹಾದೇವ ಸ್ವಾಮಿ, ಪ್ರಾಂಶುಪಾಲ ಎಂ.ವಿ.ಪುಷ್ಪಕುಮಾರ್, ಬಾಲ ನ್ಯಾಯ ಮಂಡಲಿ ಸದಸ್ಯ ಟಿ.ಜೆ. ಸುರೇಶ್, ವಕೀಲೆ ಪ್ರತಿಮಾ ದೇವಿ, ಉಪನ್ಯಾಸಕರಾದ ಹೇಮಂತ್‌ಕುಮಾರ್, ಗಣೇಶ್ ಪ್ರಸಾದ್, ಪದ್ಮಾ ಇತರರು ಹಾಜರಿದ್ದರು.