Advertisement
ಪ್ರಧಾನಿ ನರೇಂದ್ರ ಮೋದಿ ಮನ್ ಕೀ ಬಾತ್‌ನಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ್ದರಲ್ಲದೆ, ಪರೀಕ್ಷೆ ಸಂದರ್ಭದಲ್ಲಿ ಮಾರ್ಗದರ್ಶಿಯಾಗಬಲ್ಲ, ಆತ್ಮಬಲ ತುಂಬಬಲ್ಲ ಹಲವು ಸಲಹೆಗಳನ್ನೂ ನೀಡಿದ್ದರು. “ಮನ್ ಕೀ ಬಾತ್’ನಲ್ಲಿ ನೀಡಿದ ಸಲಹೆಗಳನ್ನೇ ಒಟ್ಟುಗೂಡಿಸಿ ಅವುಗಳಿಗೆ ಅಕ್ಷರ ರೂಪ ನೀಡಲಾಗಿದೆ. ದೇಶದಲ್ಲಿ ಎಲ್ಲ ಭಾಷೆಗಳಲ್ಲೂ ಈ ಕೃತಿ ಹೊರ ಬರಲಿದ್ದು, ಕನ್ನಡ ಅವತರಣಿಕೆಯನ್ನು ಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನ ಹೊರತಂದಿದೆ.
ಪರೀಕ್ಷೆ ಎಂದ ಕೂಡಲೇ ವಿದ್ಯಾರ್ಥಿಗಳಿಗೆ ಹಾಗೂ ಪಾಲಕರಿಗೆ ಒಂದು ರೀತಿ ದಿಗಿಲು, ಆತಂಕ-ಭಯ ಆವರಿಸಿಕೊಳ್ಳುತ್ತದೆ. ಮನಸ್ಸಿನ ಒತ್ತಡ ಹೆಚ್ಚುತ್ತದೆ. ಉತ್ತಮ ಅಂಕ ಪಡೆಯಬೇಕೆಂದು ಪಾಲಕರು ಮಕ್ಕಳ ಮೇಲೆ ಹಾಕುವ ಒತ್ತಡ ಇದರ ಬಿಸಿಯನ್ನು ಇನ್ನಷ್ಟು ಹೆಚ್ಚುವಂತೆ ಮಾಡುತ್ತದೆ. ಕೆಲವೊಂದು ವಿದ್ಯಾರ್ಥಿಗಳು ತರಗತಿಯಲ್ಲಿ ಅತ್ಯುತ್ತಮ ವಿದ್ಯಾರ್ಥಿಗಳಾಗಿರುತ್ತಾರೆ. ಆದರೆ, ಪರೀಕ್ಷೆ ಸಂದರ್ಭದಲ್ಲಿ ಒತ್ತಡಕ್ಕೆ ಸಿಲುಕಿ ಅನುತ್ತೀರ್ಣರಾದ ಉದಾಹರಣೆಗಳು ಸಾಕಷ್ಟಿವೆ. ಇಂತಹ ಒತ್ತಡ ನಿವಾರಣೆ ನಿಟ್ಟಿನಲ್ಲಿ ಮೋದಿಯವರು “ಮನ್ ಕೀ ಬಾತ್’ ಮೂಲಕ ವಿದ್ಯಾರ್ಥಿಗಳಿಗೆ ಆತ್ಮಮಿತ್ರನಾಗಿ, ಮಾರ್ಗದರ್ಶಕ, ಶಿಕ್ಷಕನಾಗಿ ಸಲಹೆ ನೀಡಿದ್ದಾರೆ. ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದ್ದಾರೆ.
ಪರೀಕ್ಷೆಯನ್ನು ಹಬ್ಬದಂತೆ ಆಚರಿಸಿ ಎಂದು ಹೇಳುವ ಮೂಲಕ ವಿದ್ಯಾರ್ಥಿಗಳಲ್ಲಿ ಸಕಾರಾತ್ಮಕ ಭಾವನೆ ವೃದ್ಧಿಸುವ ಕಾರ್ಯ ಮಾಡಿದ್ದಾರೆ. ಹಬ್ಬಗಳೆಂದರೆ ಸಂಭ್ರಮದಿಂದ ಹೇಗೆ ಆಚರಿಸುತ್ತೇವೋ, ಅದಕ್ಕಾಗಿ ಹೇಗೆಲ್ಲ ತಯಾರಿ ಮಾಡಿಕೊಳ್ಳುತ್ತೇವೆಯೋ ಅದೇ ರೀತಿ ಪರೀಕ್ಷೆಯನ್ನು ಸಂಭ್ರಮದಿಂದಲೇ ಎದುರಿಸಿ, ಪರೀಕ್ಷೆಗೆ ಹೋಗುವಾಗ ಒತ್ತಡಕ್ಕೆ ಒಳಗಾಗದೆ ನಗು ಮೊಗದೊಂದಿಗೆ ಹೋಗಿ ಎಂಬ ಮಹತ್ವದ ಸಲಹೆ ನೀಡಿದ್ದಾರೆ.
Related Articles
Advertisement
ಸಮಯಕ್ಕೆ ಆದ್ಯತೆ ನೀಡಬೇಕೇ ವಿನಃ ಅದನ್ನು ಪೋಲು ಮಾಡಬೇಡಿ. ಸಮಯ ಅಮೂಲ್ಯ, ಅದರ ಪೂರ್ಣ ಪ್ರಮಾಣದ ಸದ್ಬಳಕೆ ಆಗಲಿ. ಇದು ತಂತ್ರಜ್ಞಾನದ ಯುಗವಾಗಿದ್ದು, ತಂತ್ರಜ್ಞಾನವೇ ನಿಮ್ಮ ಉತ್ತಮ ಶಿಕ್ಷಕನಾಗಲಿ. ಲವಲವಿಕೆಯಿಂದಿರಿ, ಇದಕ್ಕಾಗಿ ಕ್ರೀಡೆಯಲ್ಲಿ ಪಾಲ್ಗೊಳ್ಳಿ. ಪರೀಕ್ಷೆ ಚೆನ್ನಾಗಿ ಬರೆದರೆ ಉತ್ತಮ ಅಂಕ ಬಂದೇ ಬರುತ್ತದೆ. ಒಂದು ವೇಳೆ ಚೆನ್ನಾಗಿ ನಿಭಾಯಿಸಿಲ್ಲ ಎಂದಾದರೆ ಚಿಂತೆ ಬೇಡ. ಯಾಕೆಂದರೆ ನಿಮ್ಮ ಕೊರಗಿನಿಂದ ಉತ್ತರ ಪತ್ರಿಕೆ ಬದಲಾಯಿಸುವ ಸ್ವಾತಂತ್ರ್ಯ ನಿಮಗಿಲ್ಲ ಎನ್ನುವ ಮೂಲಕ ಪರೀಕ್ಷೆ ಮುಂಚೆ ಆತಂಕಕ್ಕೊಳಗಾಗುವ, ಪರೀಕ್ಷೆ ನಂತರ ನಿರಾಸೆಗೊಳಗಾಗುವ ವಿದ್ಯಾರ್ಥಿಗಳಿಗೆ ಬದುಕು ದೊಡ್ಡದಿದೆ, ಅವಕಾಶಗಳು ಸಾಕಷ್ಟಿವೆ ಎಂಬ ಧೈರ್ಯ ತುಂಬುವ ಮಾತುಗಳು ಕೃತಿಯಲ್ಲಿ ಕಾಣ ಸಿಗುತ್ತವೆ.
ಸುಮಾರು 224 ಪುಟಗಳನ್ನೊಳಗೊಂಡ “ಎಕ್ಸಾಮ್ ವಾರಿಯರ್’ ಕೃತಿ 25 ಪರಿವಿಡಿ, ಶಿಕ್ಷಕರಿಗೆ ಪತ್ರ, ಯೋಗದ ಕುರಿತಾದ ಮಾಹಿತಿಯನ್ನು ಹೊಂದಿದೆ. ಈ ಕೃತಿ ವಿದ್ಯಾರ್ಥಿಗಳಿಗೆ ಕೇವಲ ಪರೀಕ್ಷೆ ಸಂದರ್ಭದಲ್ಲಷ್ಟೇ ಅಲ್ಲದೆ, ಬದುಕಿನ ಮಹತ್ವ ಅರಿಯುವ ಕನ್ನಡಿಯಾಗಿ ಗೋಚರಿಸಿದೆ. ವಿದ್ಯಾರ್ಥಿಗಳಲ್ಲದವರಿಗೂ ಇದು ಆತ್ಮಸ್ಥೈರ್ಯ ತುಂಬುವ ಮಾರ್ಗದರ್ಶಿಯಾಗಬಲ್ಲದಾಗಿದೆ ಎಂಬ ಭರವಸೆಯನ್ನು ಕೃತಿ ಮೂಡಿಸುತ್ತದೆ.