Advertisement

ಅನಿಯಂತ್ರಿತ ಅಂಕದುಬ್ಬರ : ನೂರಕ್ಕೆ ನೂರರ ಮಹಾಪೂರ-ಏನು ಪರಿಹಾರ?

05:15 PM Jun 02, 2022 | Team Udayavani |

ಪರೀಕ್ಷೆಗಳು ಪ್ರತಿಯೊಬ್ಬ ವಿದ್ಯಾರ್ಥಿಗೂ ತಾನು ಕಲಿಕೆಯ ಯಾವ ಹಂತವನ್ನೇರಿದ್ದೇನೆ, ಇನ್ನು ಎಷ್ಟು ಎತ್ತರಕ್ಕೇರಲಿಕ್ಕಿದೆ ಎನ್ನುವುದನ್ನು ಕಲಿಸಿಕೊಡಬೇಕು. ಜತೆಗೆ ತಾನು ಸರ್ವಜ್ಞನಲ್ಲ, ಕಲಿಯಲು ಇನ್ನೂ ತುಂಬಾ ವಿಷಯಗಳಿವೆ ಎನ್ನುವುದು ಮನದಟ್ಟಾಗುವಂತಿರಲಿ.

Advertisement

ದಿನೇದಿನೆ ಹೆಚ್ಚುತ್ತಿರುವ ಹಣದುಬ್ಬರ ನಮಗೆಲ್ಲ ತಿಳಿದಿರುವ ವಿಚಾರ. ಅಗತ್ಯ ವಸ್ತುಗಳ ಉತ್ಪಾದನೆ ಮತ್ತು ಪೂರೈಕೆ ಕಡಿಮೆಯಾಗಿ ಬೆಲೆಯೇರಿಕೆಯಾದಾಗ ಹಣದುಬ್ಬರವಾಗುತ್ತದೆ. ಕೆಲವು ವರ್ಷಗಳ ಹಿಂದೆ ನೂರು ರೂಪಾಯಿಗಳು ಕಿಸೆಯಲ್ಲಿದ್ದರೆ ದೊಡ್ಡ ಎರಡು ಚೀಲಗಳಲ್ಲಿ ತರಕಾರಿ ತರಬಹುದಿತ್ತು. ಆದರೆ ಈಗ ನೂರು ರೂಪಾಯಿಯ ತರಕಾರಿ ತರುವುದಕ್ಕೆ ಚೀಲವೇ ಬೇಡ. ಮುಂದೊಂದು ದಿನ ಚೀಲ ತುಂಬಾ ಹಣ ಕೊಟ್ಟು ಮುಷ್ಟಿ ತುಂಬುವಷ್ಟು ತರಕಾರಿ ತರುವ ದಿನಗಳೂ ಬರಬಹುದು. ಹಣದುಬ್ಬರದಂತೆಯೇ ಅತಿಯಾದ ಅನಿಯಂತ್ರಿತ ಉಬ್ಬರವನ್ನು ಕಾಣುತ್ತಿರುವ ಇನ್ನೊಂದು ವಿಷಯ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಗಳಿಸುತ್ತಿರುವ ಅಂಕಗಳು. ಇದನ್ನು ಅಂಕದುಬ್ಬರವೆನ್ನಬಹುದೇನೋ?

ಅಂಕದುಬ್ಬರವೆಂದರೆ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ಅಂಕಪಟ್ಟಿಯಲ್ಲಿನ ಅಂಕಗಳ ಅನಿ ಯಂತ್ರಿತ ಏರಿಕೆ. ಸುಮಾರು 2 ದಶಕಗಳ ಹಿಂದಿನ ವಿದ್ಯಾರ್ಥಿಗಳ ಅಂಕಪಟ್ಟಿಯನ್ನು ಈಗಿನ ವಿದ್ಯಾರ್ಥಿಗಳ ಅಂಕಪಟ್ಟಿಗೆ ಹೋಲಿಸಿದರೆ ಅಂಕದುಬ್ಬರದ ಅರಿವಾಗುತ್ತದೆ. ಒಂದೇ ಶಾಲೆಯಲ್ಲಿ ಕಲಿತ ಒಂದೇ ಮನೆಯ ಹಿರಿಯರ ಮತ್ತು ಕಿರಿಯರ ಅಂಕಪಟ್ಟಿಯನ್ನು ನೋಡಿದರೆ ಈ ವ್ಯತ್ಯಾಸ ಸುಲಭದಲ್ಲಿ ತಿಳಿಯುತ್ತದೆ. ಇತ್ತೀಚಿನ ವರ್ಷಗಳಲ್ಲಿ ನೂರಕ್ಕೆ ನೂರಂಕ ಗಳಿಸುತ್ತಿರುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗುತ್ತಿದೆ. ಅನುತ್ತೀರ್ಣಗೊಳ್ಳುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖವಾಗುತ್ತಿದೆ. ಇದು ಸಂತಸದ ಸುದ್ದಿಯಾದರೂ ಈ ಸಂತಸ ತಾತ್ಕಾಲಿಕವೇ ಅಥವಾ ದೀರ್ಘ‌ಕಾಲಿಕವೇ ಎನ್ನುವುದರ ಬಗ್ಗೆ ಅವಲೋಕನದ ಅಗತ್ಯವಿದೆ.
ಅಂಕದುಬ್ಬರ ಏಕೆ ಮತ್ತು ಹೇಗೆ?

ಕೆಲವು ವರ್ಷಗಳ ಹಿಂದೆ ಗಣಿತದಲ್ಲಿ ಮಾತ್ರ ನೂರಕ್ಕೆ ನೂರಂಕ ಸಿಗುತ್ತಿತ್ತು. ಕ್ರಮೇಣ ವಿಜ್ಞಾನದಲ್ಲೂ ನೂರು ಪ್ರತಿಶತ ಅಂಕಗಳನ್ನು ನೀಡುವ ಪದ್ಧತಿ ಆರಂಭವಾಯಿತು. ಸಮಾಜವಿಜ್ಞಾನ, ಕನ್ನಡ, ಇಂಗ್ಲಿಷ್‌, ಹಿಂದಿ, ಸಂಸ್ಕೃತ ಅಥವಾ ಇತರ ಪರೀಕ್ಷೆಗಳಲ್ಲಿ ನೂರು ಅಂಕ ಗಳಿಸುವುದು ಸುಲಭ ವಾಗಿರಲಿಲ್ಲ. ಇದಕ್ಕೆ ಕಾರಣ ಆಗಿನ ಪ್ರಶ್ನೆಪತ್ರಿಕೆಗಳು ಮತ್ತು ಮೌಲ್ಯಮಾಪನ ವ್ಯವಸ್ಥೆ. ವಿದ್ಯಾರ್ಥಿಗಳ ನೆನಪಿನ ಶಕ್ತಿ, ವಿವರಣಾ ಚಾತುರ್ಯ, ಯೋಚನಾಲಹರಿ, ಬರವಣಿಗೆಯಲ್ಲಿನ ಅಂದಚೆಂದ, ಬರೆದ ಉತ್ತರದಲ್ಲಿನ ನಿಖರತೆ, ಬರೆದ ಉತ್ತರದ ತುಲನೆ (ಇತರ ವಿದ್ಯಾರ್ಥಿಗಳ ಉತ್ತರ ದೊಂದಿಗೆ)ಗಳಿಗೆ ಹೊಂದಿಕೊಂಡು ಅಂಕಗಳನ್ನು ನೀಡಲಾಗುತ್ತಿತ್ತು. ಹಾಗಾಗಿ ನೂರಕ್ಕೆ ನೂರು ಅಂಕ ಗಳಿಸುವುದು ಸುಲಭದ ಮಾತಾಗಿರಲಿಲ್ಲ. ಪ್ರಥಮ ದರ್ಜೆಯಲ್ಲಿ (ಶೇ. 60ಅಂಕ) ಉತ್ತೀರ್ಣನಾಗುವುದು ಎಂದರೆ ಅತೀ ಪ್ರತಿಷ್ಠೆಯ ವಿಷಯವಾಗಿತ್ತು. ಆದರೆ ಈಗ ಶೇ.90 ಅಂಕ ಗಳಿಸಿದವರೂ ತಲೆತಗ್ಗಿಸಿ ನಡೆಯಬೇಕಾದ ಪರಿಸ್ಥಿತಿ ಇದೆ. ಇದಕ್ಕೆ ಕಾರಣ ಪರೀಕ್ಷೆ ಬರೆದ ಹೆಚ್ಚಿನ ವಿದ್ಯಾರ್ಥಿಗಳು ಶೇ.90 ಅಥವಾ ಅದಕ್ಕಿಂತಲೂ ಹೆಚ್ಚು ಅಂಕ ಗಳಿಸಿರುತ್ತಾರೆ. ವಿಪರ್ಯಾಸವೆಂದರೆ ಎಲ್ಲ ವಿಷಯಗಳಲ್ಲೂ ನೂರಕ್ಕೆ ನೂರು ಅಂಕ ಗಳಿಸಿದವರ ಸಂಖ್ಯೆ ದಿನೇದಿನೆ ಹೆಚ್ಚುತ್ತಿದೆ. ಇದಕ್ಕೆ ಕಾರಣವೇನು? ಈಗಿನ ವಿದ್ಯಾರ್ಥಿಗಳು ಅತೀ ಬುದ್ಧಿವಂತರೇ? ಪ್ರಶ್ನೆಗಳು ಸುಲಭವೇ? ಮೌಲ್ಯಮಾಪನದ ದೋಷವೇ?

ಪಠ್ಯ, ಕಲಿಸುವಿಕೆ, ಕಲಿಕೆ, ಪ್ರಶ್ನೆಪತ್ರಿಕೆಗಳು, ಮೌಲ್ಯಮಾಪನದ ವಿಧಾನ ಈ ಎಲ್ಲ ವಿಚಾರಗಳೂ ಅಂಕದುಬ್ಬರಕ್ಕೆ ತಮ್ಮ ಕೊಡುಗೆಯನ್ನು ನೀಡುತ್ತವೆ. ಅಂಕ ಗಳಿಸುವಿಕೆಯನ್ನೇ ಗಮನದಲ್ಲಿಟ್ಟು ಪಾಠ ಮಾಡುವುದು, ಅಧಿಕ ಅಂಕಗಳಿಕೆಗಾಗಿಯೇ ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸುವುದು, ಮೌಲ್ಯಮಾಪನದ ವೇಳೆ ಅಂಕ ನೀಡಿಕೆಯಲ್ಲಿ ಧಾರಾಳತನ ಇತ್ಯಾದಿಗಳು ಅಂಕದುಬ್ಬರಕ್ಕೆ ಮುಖ್ಯ ಕಾರಣಗಳು. ಬಿಟ್ಟ ಶಬ್ದ ತುಂಬಿಸುವುದು, ಹೊಂದಿಸಿ ಬರೆಯುವುದು, ಸರಿಯೋ ತಪ್ಪೋ ಎಂದು ಹೇಳುವುದು, ಒಂದು ವಾಕ್ಯದಲ್ಲಿ ಉತ್ತರಿಸುವುದು, ಇತ್ಯಾದಿ ಪ್ರಶ್ನೆಗಳು ಹೆಚ್ಚಾದಂತೆ ನೂರಕ್ಕೆ ನೂರಂಕ ಗಳಿಸುವ ಸಾಧ್ಯತೆಗಳೂ ಹೆಚ್ಚಾಗುತ್ತವೆ. ಇಲ್ಲಿ ವಿದ್ಯಾರ್ಥಿಯ ಬುದ್ಧಿವಂತಿಕೆಯೊಂದಿಗೆ ಅದೃಷ್ಟವೂ ತನ್ನ ಆಟವಾಡುತ್ತದೆ. ಆದರೂ ಎಲ್ಲ ವಿಷಯಗಳಲ್ಲೂ ನೂರಕ್ಕೆ ನೂರಂಕ ಗಳಿಸುವುದು ಅಷ್ಟು ಸುಲಭವಲ್ಲ. ನೂರಕ್ಕೆ ನೂರಂಕ ಗಳಿಸುವುದಕ್ಕೆ ಇನ್ನೊಂದು ಮುಖ್ಯ ಕಾರಣ ಮೌಲ್ಯಮಾಪನ ವ್ಯವಸ್ಥೆಯಲ್ಲಿನ ದೋಷಗಳು. ಅತೀ ಕಡಿಮೆ ಅವಧಿಯಲ್ಲಿ ಅತೀ ಹೆಚ್ಚು ಪತ್ರಿಕೆಗಳ ಮೌಲ್ಯಮಾಪನ ಮಾಡಬೇಕಾದ ಒತ್ತಡ, ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆಯಾಗದಿರಲಿ ಎನ್ನುವ ಕಳಕಳಿ, ಹೆಚ್ಚು ಕೊಟ್ಟರೆ ತಪ್ಪಿಲ್ಲ, ಕಡಿಮೆ ಕೊಡುವುದು ಬೇಡವೆನ್ನುವ ಭಾವನೆ ಇತ್ಯಾದಿಗಳೂ ಅಂಕದುಬ್ಬರಕ್ಕೆ ಸಹಕರಿಸುತ್ತವೆ.

Advertisement

ಅಂಕದುಬ್ಬರದ ಸಾಧಕ-ಬಾಧಕಗಳು
ಅಂಕದುಬ್ಬರದಿಂದ ಲಾಭಕ್ಕಿಂತ ನಷ್ಟವೇ ಜಾಸ್ತಿ ಎನ್ನಬಹುದು. ಇದು ವಿದ್ಯಾರ್ಥಿಗಳಲ್ಲಿ ಒತ್ತಡವನ್ನು ಹೆಚ್ಚಿಸುತ್ತದೆ. ಶೇ.90ಕ್ಕಿಂತ ಹೆಚ್ಚು ಅಂಕ ಗಳಿಸಿದರೂ ಮುಂದಿನ ವಿದ್ಯಾಭ್ಯಾಸಕ್ಕೆ ಪ್ರವೇಶ ಸಿಗದಿರುವುದು, ಉದ್ಯೋಗಾವಕಾಶದ ಕೊರತೆ, ನೂರಕ್ಕೆ ನೂರಂಕ ಸಿಕ್ಕಿದ ಅನಂತರ ಮುಂದೆಯೂ ಅಷ್ಟೇ ಸಿಗಬಹುದೇ? ಸಿಗದಿದ್ದರೆ? ಎನ್ನುವ ಒತ್ತಡ ಇತ್ಯಾದಿಗಳು ಅಂಕದುಬ್ಬರದ ಋಣಾತ್ಮಕ ಅಂಶಗಳು. ಹಿಂದೆ ಶೇ.60 ಅಂಕ ಗಳಿಸಿದವರಿಗೂ ಉದ್ಯೋಗಾವಕಾಶವಿತ್ತು. ಆದರೆ ಈಗಿನ ಪೈಪೋಟಿ ಯುಗದಲ್ಲಿ ಶೇ.90 ಅಂಕ ಗಳಿಸಿದವರಿಗೂ ಉದ್ಯೋಗಾವಕಾಶ ಕಡಿಮೆ.

ಅಂಕದುಬ್ಬರದ ನಿಯಂತ್ರಣವಾಗಬೇಕೇ?
ಖಂಡಿತವಾಗಿಯೂ ಕಾಲ ಕಾಲಕ್ಕೆ ಅಂಕದುಬ್ಬರಕ್ಕೆ ಕಡಿವಾಣವನ್ನು ಹಾಕಲೇ ಬೇಕು. ನೂರಕ್ಕೆ ನೂರಂಕ ಗಳಿಸಿದವನಿಗೆ/ಳಿಗೆ ತಿಳಿಯದ ವಿಷಯವೇ ಇಲ್ಲವೆಂದಾಯಿತು. ಇದು ಅವರ ಮುಂದಿನ ನಡವಳಿಕೆಯಲ್ಲಿ, ಜೀವನದಲ್ಲಿ ನಕಾರಾತ್ಮಕ ಪ್ರಭಾವ ಬೀರುವ ಸಾಧ್ಯತೆ ಹೆಚ್ಚು. ತಾನು ಸರ್ವಜ್ಞನಲ್ಲ, ತಾನು ಕಲಿಯಬೇಕಾದದ್ದು ಇನ್ನೂ ಇದೆ ಎನ್ನುವ ಭಾವನೆ ಬೆಳೆದರೆ ಸಮಾಜಕ್ಕೆ ಒಳ್ಳೆಯದು. ಒಂದೆರಡು ವಿಷಯಗಳಲ್ಲಿ ನೂರಕ್ಕೆ ನೂರಂಕ ಸಿಕ್ಕಿದರೆ ಪರವಾಗಿಲ್ಲ. ಆದರೆ ಎಲ್ಲ ವಿಷಯಗಳ ಅಂಕಗಳು ಶೇ. 90 ದಾಟದಂತೆ ನೋಡಿಕೊಳ್ಳಬೇಕು. ಶೇ. 90 ಮತ್ತು 100ರ ನಡುವಿನ ಅಂಕಗಳು ಚಿನ್ನದ ಅಂಕಗಳು. ಅವುಗಳನ್ನು ಗಳಿಸುವುದು ಅಷ್ಟು ಸುಲಭವಲ್ಲ ಎನ್ನುವ ಭಾವನೆ ವಿದ್ಯಾರ್ಥಿಗಳಲ್ಲಿದ್ದರೆ ಅವರ ಪ್ರಯತ್ನ ಮತ್ತೂ ಹೆಚ್ಚುತ್ತದೆ.

ಅಂಕದುಬ್ಬರದ ನಿಯಂತ್ರಣ ಹೇಗೆ?
ಮನಸ್ಸಿದ್ದರೆ ಮಾರ್ಗವಿದೆ. ಅಂಕದುಬ್ಬರವನ್ನು ನಿಯಂತ್ರಿಸಲು ಹಲವು ದಾರಿಗಳಿವೆ. ಪ್ರಶ್ನೆಪತ್ರಿಕೆಗಳಲ್ಲಿ ಅರ್ಧದಷ್ಟಾದರೂ ದೀರ್ಘ‌ವಾಗಿ ವಿವರಿಸಬೇಕಾದ, ವಿಶ್ಲೇಷಿಸಬೇಕಾದ, ರಚನಾತ್ಮಕ ಉತ್ತರಗಳನ್ನು ಅಪೇಕ್ಷಿಸುವ ಪ್ರಶ್ನೆಗಳಿರಲಿ. ಮೌಲ್ಯಮಾಪನದಲ್ಲೂ ಶಿಸ್ತು, ನಿಷ್ಠುರತೆ ಇರಲಿ. ಒಂದೇ ಉತ್ತರಪತ್ರಿಕೆಯನ್ನು ಇಬ್ಬರು ಅಥವಾ ಮೂವರು ಬೇರೆ ಬೇರೆಯಾಗಿ ಮೌಲ್ಯಮಾಪನ ಮಾಡಲಿ. ಮೂವರು ಮೌಲ್ಯಮಾಪಕರಿಗೂ ಇತರರು ಎಷ್ಟು ಅಂಕಗಳನ್ನು ಕೊಟ್ಟಿ¨ªಾರೆನ್ನುವುದು ತಿಳಿಯದಿರಲಿ. ಅನಂತರ ಆ ಮೂವರು ಕೊಟ್ಟ ಅಂಕಗಳನ್ನು ಕೂಡಿಸಿ ಸರಾಸರಿ ತೆಗೆದು ಅಂಕಗಳನ್ನು ನೀಡಲಿ. ಈ ಕ್ರಮದಿಂದ ಮರುಮೌಲ್ಯಮಾಪನದ ಆವಶ್ಯಕತೆಯೂ ಕಡಿಮೆಯಾಗುತ್ತದೆ. ಮೂವರೂ ನೂರಕ್ಕೆ ನೂರಂಕ ಕೊಡುವ ಸಾಧ್ಯತೆಯೂ ಕಡಿಮೆ. ಶಾಲಾಕಾಲೇಜುಗಳ ವಾರ್ಷಿಕ ಪರೀಕ್ಷೆಗಳಲ್ಲಿ, ಎಸೆಸೆಲ್ಸಿ, ಪಿಯುಸಿ ಮತ್ತು ಪದವಿ ಪರೀಕ್ಷೆಗಳಲ್ಲಿ ಕಡ್ಡಾಯವಾಗಿ ಈ ನಿಯಮವನ್ನು ಪಾಲಿಸಬೇಕು. ಆದರೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಇದು ಕಷ್ಟಸಾಧ್ಯ.

ಪರೀಕ್ಷೆಗಳು ಪ್ರತಿಯೊಬ್ಬ ವಿದ್ಯಾರ್ಥಿಗೂ ತಾನು ಕಲಿಕೆಯ ಯಾವ ಹಂತವನ್ನೇರಿದ್ದೇನೆ, ಇನ್ನು ಎಷ್ಟು ಎತ್ತರಕ್ಕೇರಲಿಕ್ಕಿದೆ ಎನ್ನುವುದನ್ನು ಕಲಿಸಿಕೊಡಬೇಕು. ಜತೆಗೆ ತಾನು ಸರ್ವಜ್ಞನಲ್ಲ, ಕಲಿಯಲು ಇನ್ನೂ ತುಂಬಾ ವಿಷಯಗಳಿವೆ ಎನ್ನುವುದು ಮನದಟ್ಟಾಗುವಂತಿರಲಿ. ಇದನ್ನು ಗಮನದಲ್ಲಿಟ್ಟುಕೊಂಡು ಈಗ ಇರುವ ಪರೀಕ್ಷಾ ಕ್ರಮಗಳ ಪರೀಕ್ಷೆಯಾಗಲಿ. ಮೌಲ್ಯಮಾಪನ ವಿಧಾನಗಳ ಮೌಲ್ಯಮಾಪನವಾಗಲಿ. ಅಷ್ಟು ಸುಲಭವೂ ಅಲ್ಲದ ಕಠಿನವೂ ಅಲ್ಲವೆನ್ನುವ ಸಂತುಲಿತ ಪರೀಕ್ಷಾ ಕ್ರಮಗಳು ಆರಂಭವಾಗಲಿ. ಅಂಕದುಬ್ಬರವಿಳಿದು ಅಂಕಪಟ್ಟಿಯ ಗೌರವ ಹೆಚ್ಚಲಿ.

– ಡಾ| ಸತೀಶ ನಾಯಕ್‌ ಆಲಂಬಿ

Advertisement

Udayavani is now on Telegram. Click here to join our channel and stay updated with the latest news.

Next