Advertisement

ವಿದ್ಯಾರ್ಥಿಗಳು ಸರ್ಕಾರಿ ಸೌಲಭ್ಯ ಸದುಪಯೋಗಪಡಿಸಿಕೊಳ್ತಿಲ್ಲ

03:52 PM Aug 30, 2017 | Team Udayavani |

ಚಿತ್ರದುರ್ಗ: ಸರ್ಕಾರ ಶೂ, ಸಮವಸ್ತ್ರ, ಸೈಕಲ್‌ ಸೇರಿದಂತೆ ಹತ್ತಾರು ಯೋಜನೆಗಳನ್ನು ನೀಡಿದ್ದರೂ ಮಕ್ಕಳು ಆ ಸೌಲಭ್ಯ ಬಳಸಿಕೊಂಡು ಓದುತ್ತಿಲ್ಲ ಎಂದು ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್‌ ಬೇಸರ ವ್ಯಕ್ತಪಡಿಸಿದರು.

Advertisement

ತಾಲೂಕಿನ ದೊಡ್ಡಸಿದ್ದವ್ವನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಮಂಗಳವಾರ ಉಚಿತ ಸೈಕಲ್‌ ವಿತರಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳಲ್ಲಿ ಸೃಜನಾತ್ಮಕ ಯೋಚನೆಯನ್ನು ಹುಟ್ಟು ಹಾಕಲು ಯಾವ ಕೊರತೆಯೂ ಇಲ್ಲ. ಆದರೂ ಮಕ್ಕಳಲ್ಲಿ ಓದುವ ಆಸಕ್ತಿ ಕಡಿಮೆಯಾಗಿದೆ ಎಂದರು. ಸರ್ಕಾರಿ ಶಾಲೆಗಳಲ್ಲಿ ಪಠ್ಯಪುಸ್ತಕ, ಸಮವಸ್ತ್ರ, ಶೂ, ಕ್ಷೀರಭಾಗ್ಯ, ಮಧ್ಯಾಹ್ನದ ಬಿಸಿಯೂಟ, ಹಾಸ್ಟೆಲ್‌ ಸೌಲಭ್ಯ, ವಿದ್ಯಾರ್ಥಿ ವೇತನ, ವಿದ್ಯಾಸಿರಿ ಸೇರಿದಂತೆ ಹಲವಾರು ಯೋಜನೆಗಳಿವೆ. ಇದಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೋಟ್ಯಂತರ ರೂ. ಖರ್ಚು ಮಾಡುತ್ತಿವೆ. ಆದರೆ ನಿರೀಕ್ಷಿತ ಫಲಿತಾಂಶ ಸಿಗುತ್ತಿಲ್ಲ. ಆದ್ದರಿಂದ ಶಿಕ್ಷಕರು ಗುಣಾತ್ಮಕ ಶಿಕ್ಷಣ ನೀಡುವ ಬಗ್ಗೆ ಹೆಚ್ಚಿನ ಗಮನ ನೀಡಬೇಕು ಎಂದು ಕರೆ ನೀಡಿದರು.

ಪ್ರತಿ ಶಾಲೆಯಲ್ಲಿ ಶುದ್ಧ ನೀರು ಮತ್ತು ಶೌಚಾಲಯ ಸೌಲಭ್ಯಗಳಿವೆ. ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಿಸುವ ಯೋಜನೆ ಇದೆ. ಸರ್ಕಾರಿ ಶಾಲೆಗಳಿಗೆ ಮೂಲ ಸೌಕರ್ಯ ಕಲ್ಪಿಸಲಾಗುತ್ತಿದೆ. ಶಿಕ್ಷಕರು ಹೆಚ್ಚಿನ ಹೊಣೆಗಾರಿಕೆ ವಹಿಸಿಕೊಂಡು ಮಾದರಿ ಶಿಕ್ಷಕರಾಗಬೇಕು. ಗ್ರಾಮೀಣ ಪ್ರದೇಶದಲ್ಲಿ ಬಡ ಮಕ್ಕಳಿಗೆ ಆಧಾರಸ್ತಂಭವಾಗಬೇಕು ಎಂದರು. 

ಬಹುತೇಕ ಜನರ ಮನೆಯಲ್ಲಿ ಟಿವಿ, ಸೈಕಲ್‌, ಬೈಕ್‌ ಸೇರಿದಂತೆ ಎಲ್ಲ ಸೌಲಭ್ಯಗಳಿವೆ. ಆದರೂ ಶೌಚಾಲಯಗಳನ್ನು ನಿರ್ಮಿಸಿಕೊಳ್ಳುತ್ತಿಲ್ಲ.
ಶೌಚಾಲಯ ನಿರ್ಮಿಸಿಕೊಳ್ಳಲು ಎಸ್ಸಿಎಸ್ಟಿ ವರ್ಗದವರಿಗೆ 15 ಸಾವಿರ, ಇತರೆ ಒಬಿಸಿ ವರ್ಗದವರಿಗೆ 12 ಸಾವಿರ ರೂ.ಗಳನ್ನು ಸರ್ಕಾರ ನೀಡುತ್ತಿದೆ. ಇದನ್ನು ಬಳಸಿಕೊಂಡು ಪ್ರತಿಯೊಬ್ಬರೂ ಶೌಚಾಲಯ ನಿರ್ಮಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಶೌಚಾಲಯ ನಿರ್ಮಿಸಿದರೆ ಮಾತ್ರ ನಾವು ಶಾಲೆಗೆ ಹೋಗುತ್ತೇವೆಂದು ಪಟ್ಟು ಹಿಡಿದು ಪೋಷಕರಲ್ಲಿ ಒತ್ತಾಯ ಮಾಡಬೇಕೆಂದು ಸಲಹೆ ನೀಡಿದರು. ಮೂಕಪ್ರಾಣಿ ಬೆಕ್ಕು ಮಲ ಮೂತ್ರ ವಿಸರ್ಜನೆ ಮಾಡಿದಾಗ ಅದು ಹಾಗೇ ಬರುವುದಿಲ್ಲ. ಮಣ್ಣು ಮುಚ್ಚಿ ಬರುತ್ತದೆ. ಬೆಕ್ಕಿಗೆ ಇರುವ ಸ್ವತ್ಛತಾ ಮನೋಭಾವ ಬುದ್ಧಿಜೀವಿಯಾದ ಮಾನವರಲ್ಲಿ ಇಲ್ಲದಿರುವುದು ಬೇಸರದ ಸಂಗತಿ. ಬೆಕ್ಕನ್ನು ನೋಡಿಯಾದರೂ ನಾವು ಶೌಚಾಲಯ ನಿರ್ಮಿಸಿಕೊಳ್ಳುವ ಶಪಥ ಮಾಡಬೇಕೆಂದರು.

ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ್‌ ಸದಸ್ಯ ನಿಂಗಮ್ಮ, ಗ್ರಾಮ ಪಂಚಾಯತ್‌ ಉಪಾಧ್ಯಕ್ಷ ರಾಮಕೃಷ್ಣ, ಸದಸ್ಯರಾದ ವಿದ್ಯಾವತಿ ಲಿಂಗಾಬಸಪ್ಪ, ಲಿಂಗಾರೆಡ್ಡಿ, ತಿಪ್ಪೇಸ್ವಾಮಿ, ಶಿಕ್ಷಣ ಇಲಾಖೆ ಅಧಿಕಾರಿಗಳಾದ ಶಶಿಕಲಾ, ಮೀನಾಕ್ಷಿ, ಗ್ರಾಮದ ಮುಖಂಡರಾದ ಗುಜ್ಜಾರಪ್ಪ, ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಸುಧಾ, ಶಿಕ್ಷಕ ಹನುಮಂತ ರೆಡ್ಡಿ
ಮತ್ತಿತರರು ಇದ್ದರು.

Advertisement

ಈ ಹಿಂದೆ ಬಡ ಮಕ್ಕಳಿಗೆ ಶಿಕ್ಷಣ ಗಗನಕುಸುಮವಾಗಿತ್ತು. ಈಗ ಪರಿಸ್ಥಿತಿ ಬದಲಾಗಿದೆ. ಶಿಕ್ಷಣಕ್ಕಾಗಿ ಸರ್ಕಾರ ಸೇರಿದಂತೆ ಅನೇಕ ಸಂಘ-ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಹಣಕಾಸಿನ ನೆರವು ನೀಡುತ್ತಿವೆ. ಇದನ್ನು ಸದುಪಯೋಗಪಡಿಸಿಕೊಂಡು ವಿದ್ಯಾರ್ಥಿಗಳು ಶೈಕ್ಷಣಿಕ ಪ್ರಗತಿ ಸಾಧಿಸಬೇಕು.
 ಸೌಭಾಗ್ಯ ಬಸವರಾಜನ್‌, ಜಿಪಂ ಅಧ್ಯಕ್ಷರು.

Advertisement

Udayavani is now on Telegram. Click here to join our channel and stay updated with the latest news.

Next