ಹುಣಸೂರು: ಪ್ರಾಥಮಿಕ ಹಂತದಿಂದಲೇ ಪರಿಸರ, ಶಿಸ್ತು, ಸಮಯಪ್ರಜ್ಞೆ ರೂಢಿಸಿಕೊಳ್ಳಬೇಕು ಎಂದು ಡಿವೈಎಸ್ಪಿ ಭಾಸ್ಕರ್ ರೈ ಸಲಹೆ ನೀಡಿದರು.
ತಾಲೂಕಿನ ಮರದೂರು ಲಾ ಸಲೆಟ್ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ್ದ ವಿದ್ಯಾರ್ಥಿ ಸಂಸತ್‌ನ ಪದಗ್ರಹಣ ಸಮಾರಂಭದಲ್ಲಿ ಆಕರ್ಷಕ ಪಥ ಸಂಚಲನದ ಮೂಲಕ ವಿದ್ಯಾರ್ಥಿಗಳು ನೀಡಿದ ಗೌರವ ವಂದನೆ ಸ್ವೀಕರಿಸಿ, ವಿದ್ಯಾರ್ಥಿ ನಾಯಕರಿಗೆ ಪದಗ್ರಹಣ ನೆರವೇರಿಸಿ ಮಾತನಾಡಿದರು.
ದುಶ್ಚಟದಿಂದ ದೂರವಿರಿ: ಕಲಿಕೆಯಲ್ಲಿ ಆಸಕ್ತಿ ತೋರಬೇಕು, ಶಾಲೆಯಲ್ಲಿ ನಡೆಯುವ ಎಲ್ಲಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ತನ್ಮೂಲಕ ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿರಬೇಕು, ಗುರಿ ಇಟ್ಟುಕೊಂಡು ಛಲದಿಂದ ಸಾಧಿಸುವ ಛಾತಿ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ನಾಯಕತ್ವ ಗುಣ: ಸಂಸ್ಥೆಯ ನಿರ್ದೇಶಕ ಫಾ.ಜೋಬಿಟ್, ಶಾಲಾ ಸಂಸತ್ ಮೂಲಕ ವಿದ್ಯಾರ್ಥಿಗಳಲ್ಲಿ ಸಾಮಾನ್ಯ ತಿಳಿವಳಿಕೆ ಹಾಗೂ ಲೀಡರ್‌ಶಿಪ್ ಬೆಳೆಯಲಿದೆ. ಸಂಸ್ಥೆಯ ಎಲ್ಲಾ ಚಟುವಟಿಕೆಗಳಲ್ಲೂ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳುವಂತೆ ನೋಡಿಕೊಳ್ಳಲಾಗುತ್ತಿದೆ ಎಂದರು.
ಸಂಸ್ಥೆಯ ವ್ಯವಸ್ಥಾಪಕ ಫಾ.ಜೋಜೋ, ಸಹಾಯಕ ವ್ಯವಸ್ಥಾಪಕ ಫಾ.ಅನಿತ್, ಫಾ.ಜಾನಿ, ಪ್ರಾಚಾರ್ಯ ರವಿದೀಪಕ್, ಮುಖ್ಯ ಶಿಕ್ಷಕಿ ಸಿಸ್ಟರ್ ಕರುಣಾ, ಶಾಲಾ-ಕಾಲೇಜು ಶಿಕ್ಷಕರು ಹಾಗೂ ಪೋಷಕರು ಪಾಲ್ಗೊಂಡಿದ್ದರು. ಮಕ್ಕಳು ಆಕರ್ಷಕ ಸಾಮೂಹಿಕ ನೃತ್ಯ ಪ್ರದರ್ಶಿಸಿ ಗಮನ ಸೆಳೆದರು. ಉತ್ತಮ ಪಥಸಂಚಲನ ನಡೆಸಿದ ತಂಡಕ್ಕೆ ಟ್ರೋಫಿ ವಿತರಿಸಲಾಯಿತು.
ಶಾಲಾ ಸಂಸತ್: ಶಾಲಾ ಸಂಸತ್‌ಗೆ ಎಂ.ಐ.ನಿಜಾಂ -ಹೆಡ್‌ಬಾಯ್, ಸಿ.ಮೋನಿಕಾ-ಹೆಡ್‌ಗರ್ಲ್, ಸಹನಾ ಎಂ.ಎಸ್ -ಶಿಕ್ಷಣಮಂತ್ರಿ, ಯು.ಎಂ.ಭೂಮಿಕಾ-ಶಿಸ್ತು ಮಂತ್ರಿ, ಎಂ.ಆರ್.ಸಿಂಚನಾ-ವಾರ್ತಾ ಮತ್ತು ಸಂಪರ್ಕ ಸಚಿವೆ, ಎಚ್.ಆರ್.ಮನೋಜ್ -ಕ್ರೀಡಾಮಂತ್ರಿ, ಮಹಮದ್ ಫಯಾಜ್- ಸಾಂಸ್ಕೃತಿಕ ಸಚಿವ ಹಾಗೂ ಪ್ರಮೋದ್ ಕುಮಾರ್ -ಆರೋಗ್ಯ ಮತ್ತು ಶುಚಿತ್ವ ಸಚಿವರಾಗಿ ಆಯ್ಕೆಯಾಗಿದ್ದಾರೆ.