Advertisement

ವಿದ್ಯಾರ್ಥಿಗಳು ಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಿ

12:34 PM Nov 14, 2018 | |

ಹುಣಸೂರು: ಓದುಗರಲ್ಲಿ ಕ್ರಿಯಾಶೀಲತೆ ಉಂಟು ಮಾಡುವ, ದೈನಂದಿನ ವಿಚಾರಗಳನ್ನು ಕಟ್ಟಿಕೊಡುವ ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡಲ್ಲಿ ಹೆಚ್ಚು ಜ್ಞಾನ ಪಡೆಯಬಹುದಾಗಿದೆ ಎಂದು ರೋಟರಿ ಜಿಲ್ಲಾ ಚೇರ್ಮನ್‌ ಶಿವಕುಮಾರ್‌ ವಿ.ರಾವ್‌ ಹೇಳಿದರು. 

Advertisement

ನಗರದ ಶಾಸ್ತ್ರೀ ವಿದ್ಯಾಸಂಸ್ಥೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಸಹಯೋಗದಲ್ಲಿ ಆಯೋಜಿಸಿದ್ದ ವಿದ್ಯಾರ್ಥಿಗಳಲ್ಲಿ ದಿನಪತ್ರಿಕೆಗಳು ಓದುವ ಹವ್ಯಾಸ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೂರದರ್ಶನ, ಸಾಮಾಜಿಕ ಜಾಲತಾಣಗಳು ನಮಗೆ ಮಾಹಿತಿ ನೀಡಬಹುದಷ್ಟೆ. ಆದರೆ ಪತ್ರಿಕೆಗಳು ಓದುವುದರಿಂದ ಪ್ರಪಂಚದ ಆಗುಹೋಗುಗಳು ನಮ್ಮ ಸ್ಮತಿಪಟಲದಲ್ಲಿ ಮುದ್ರೆ ಹಾಕಿದಂತೆ ಉಳಿಯುತ್ತವೆ ಎಂದು ಹೇಳಿದರು. 

ಜ್ಞಾನ ವೃದ್ಧಿಸುವ ಪತ್ರಿಕೆಗಳು: ಪತ್ರಿಕೆಗಳಲ್ಲಿ ವಿದ್ಯಾರ್ಥಿಗಳಿಗೆ ಪೂರಕವಾದ ಪ್ರಚಲಿತ ವಿದ್ಯಮಾನಗಳು, ರಾಜಕೀಯ, ಶಿಕ್ಷಣ, ಕ್ರೀಡೆ, ಆರ್ಥಿಕ ವ್ಯವಹಾರ, ದೇಶ ವಿದೇಶಗಳ ಸಮಗ್ರ ಮಾಹಿತಿ, ಸಂಪಾದಕೀಯ, ವಿಮರ್ಶೆ ಲಭ್ಯವಿರುತ್ತದೆ. ಇನ್ನು ಸ್ಥಳೀಯ ಸಮಸ್ಯೆಗಳು, ಸಾಧನೆ-ಸಾಧಕರು, ವಿಜ್ಞಾನ-ಪರಿಸರಕ್ಕೆ ಪೂರಕವಾದ ವಿಶೇಷ ಲೇಖನಗಳನ್ನು ಗಮನಿಸಬಹುದು.

ವಿದ್ಯಾರ್ಥಿ ದೆಸೆಯಿಂದಲೇ ಪತ್ರಿಕೆಗಳನ್ನು ಓದುವ ಹವ್ಯಾಸ ರೂಢಿಸಿಕೊಂಡಲ್ಲಿ ಭಾಷೆಯ ಮೇಲಿನ ಹಿಡಿತದೊಂದಿಗೆ ವಿದ್ಯಾರ್ಥಿಯ ಜ್ಞಾನಭಂಡಾರವೂ ವೃದ್ಧಿಸಿಕೊಳ್ಳಲು ಸಾಧ್ಯ. ಆದ್ದರಿಂದ ವಿದ್ಯಾರ್ಥಿಗಳು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಅದಕ್ಕಾಗಿಯೇ ಶಾಲಾ ಕಾಲೇಜುಗಳಿಂದಲೇ ಗ್ರಂಥಾಲಯ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು. 

ದಂತಕಥೆಗಳಾದವರು: ಗಾಂಧೀಜಿ ತಮ್ಮ ಅನಿಸಿಕೆಗಳನ್ನು ಹರಿಜನ ಪತ್ರಿಕೆ ಮೂಲಕ ಅಭಿವ್ಯಕ್ತಗೊಳಿಸಿದರು. ದಿವಂಗತ ಅಬ್ದುಲ್‌ ಕಲಾಂ ಪತ್ರಿಕೆಗಳನ್ನು ಮನೆಮನೆಗೆ ತಲುಪಿಸುವ ಕೆಲಸ ಮಾಡುತ್ತಲೇ ಓದುವ ಹವ್ಯಾಸ ಬೆಳೆಸಿಕೊಂಡಿದ್ದರು. ಜೈಲಿನಲ್ಲಿದ್ದ ನೆಲ್ಸನ್‌ ಮಂಡೇಲಾ, ಜಾನ್‌ ಎಫ್‌ ಕೆನಡಿ, ಅಬ್ರಹಾಂ ಲಿಂಕನ್‌ ಓದುವ ಹವ್ಯಾಸಕ್ಕೆ ಮೊರೆಹೋದ ಕಾರಣವೇ ವಿಶ್ವದ ದಂತಕಥೆಗಳಾದರು ಎಂದರು. 

Advertisement

ಸಂವಹನ ಕೇಂದ್ರ: ಪ್ರಾಂಶುಪಾಲ ರವಿಶಂಕರ್‌ ಮಾತನಾಡಿ, ಪತ್ರಿಕೆಗಳು ಪ್ರಚಲಿತ ವಿದ್ಯಮಾನಗಳನ್ನು ತಿಳಿಸುವ ಸಂವಹನ ಕೇಂದ್ರಗಳಾಗಿವೆ. ವಿದ್ಯಾರ್ಥಿಗಳಲ್ಲಿ ಜ್ಞಾನ ತುಂಬಲು ಪತ್ರಿಕೆಗಳಿಗಿಂತ ಉತ್ತಮ ವೇದಿಕೆ ಬೇರೊಂದಿಲ್ಲ. ಇತ್ತೀಚಿನ ದಿನಗಳಲ್ಲಿ ಪತ್ರಿಕೆಗಳಲ್ಲಿ ವಿದ್ಯಾರ್ಥಿಗಳೂ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವ, ಕ್ರಿಯಾಶೀಲತೆ ಪ್ರದರ್ಶಿಸುವ ಅವಕಾಶ ಕಲ್ಪಿಸಿರುವುದು ಉತ್ತಮ ಬೆಳವಣಿಗೆಯೆಂದರು. 

ಶಾಶ್ವತ ನೆಲೆ: ಕಸಾಪ ಅಧ್ಯಕ್ಷ ವಸಂತ್‌ಮಂಜುನಾಥ್‌ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳುವಾಗ ಎಲ್ಲಾ ಪುಸ್ತಕಗಳನ್ನು ಗುಡ್ಡೆಹಾಕಿಕೊಂಡು ಓದುವ ಬದಲು ಈಗಿಂದಲೇ ದಿನಪತ್ರಿಕೆಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಿ. ಇಂದಿನ ಪ್ರಚಲಿತ ವಿದ್ಯಮಾನ ನಿಮ್ಮ ಮುಂದಿನ ಜೀವನದ ಇತಿಹಾಸದ ವಿಷಯಗಳಾಗಿ ಮೆದುಳಲ್ಲಿ ಶಾಶ್ವತವಾಗಿ ನೆಲೆಯೂರಲಿದೆ ಎಂದರು. ಮುಖ್ಯಶಿಕ್ಷಕಿ ಸತ್ಯವತಿ, ಶಿಕ್ಷಕರಾದ ನಾಗರಾಜ್‌, ಯೋಗಣ್ಣ ಮತ್ತಿತರರು ಭಾಗವಹಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next