ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ವಿಶುವಲ್ ಆರ್ಟ್ ಪದವಿ ವಿಭಾಗದ ಹಿರಿಯ ವಿದ್ಯಾರ್ಥಿ, ಹೊಸ ಬಗೆಯ ಕಲಾಕೃತಿಗಳನ್ನು ರಚಿಸಿ ಈಗಾಗಲೇ 3 ವಿಶ್ವದಾಖಲೆಗಳನ್ನು ನಿರ್ಮಿಸಿರುವ ತಿಲಕ್ ಕುಲಾಲ್ ಹಾಗೂ ಕಲಾವಿದರಾದ ರೋಹಿತ್ ನಾಯಕ್, ಅಕ್ಷಿತ್ ಕುಲಾಲ್ ಅವರು ಪುತ್ತಿಗೆಯ ವನಜಾಕ್ಷಿ ಶ್ರೀಪತಿ ಭಟ್ ವೇದಿಕೆಯಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ 30 ಅಡಿ ಉದ್ದ , 30 ಅಡಿ ಅಗಲದ ಕಲಾಕೃತಿಯನ್ನು ರಚಿಸಿದ್ದಾರೆ.
ಕೆಲವು ವಾರಗಳ ಹಿಂದಷ್ಟೇ ಬೆಳ್ತಿಗೆ ಅಕ್ಕಿ ಹಾಗೂ ಇದ್ದಿಲು ಬಳಸಿ ಆದಿ ಯೋಗಿಯ ಕಲಾಕೃತಿ ರಚಿಸಿ ಪ್ರಸಿದ್ಧಿ ಪಡೆದಿದ್ದರು.
ಸುಮಾರು 3 ಗಂಟೆ ಸಮಯದಲ್ಲಿ 80 ಕೆಜಿ ಇದ್ದಿಲು, 90 ಕೆಜಿ ಮರಳು, ರಂಗೋಲಿ ಹುಡಿಯ ಬಳಕೆಯೊಂದಿಗೆ ಈ ಕಲಾಕೃತಿ ಮೂಡಿಬಂದಿದೆ. ಕನ್ನಡದ ಮಹತ್ವ ಸಾರುವ ಹಳದಿ ಕೆಂಪು ಬಣ್ಣದ ಬಾವುಟವನ್ನು ಚಿತ್ರಿಸಿರುವುದು ಗಮನಾರ್ಹವಾಗಿದೆ.
ಶುಕ್ರವಾರದಿಂದ 3 ದಿನಗಳ ಕಾಲ ಈ ಕಲಾಕೃತಿಯನ್ನು ಸಾರ್ವಜನಿಕ ಪ್ರದರ್ಶನಕ್ಕೆ ಇರಿಸಲಾಗಿದೆ. ಆಳ್ವಾಸ್ ಸಂಸ್ಥೆಯ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ, ಟ್ರಸ್ಟಿ ವಿವೇಕ್ ಆಳ್ವ ಪೂರಕ ಸಹಕಾರ ನೀಡಿದ್ದು, ಮೂಡುಬಿದಿರೆ ಪೋಲಿಸ್ ಸಬ್ ಇನ್‌ಸ್ಪೆಕ್ಟರ್ ಸುದೀಪ್ ಕಲಾಕೃತಿಯನ್ನು ವೀಕ್ಷಿಸಿ ಶ್ಲಾಘಿಸಿದರು.