Advertisement

ಅಕ್ಷರ ಕಲಿಯಲು ವಿದ್ಯಾರ್ಥಿಗಳಿಗೆ ಇಲ್ಲಿ ಅಂಜಿಕ

12:31 PM Aug 21, 2018 | |

ವಾಡಿ: ಈಗೋ ಆಗೋ ಬಿದ್ದು ನೆಲ ಕಚ್ಚುವಂತಿರುವ ಶಾಲಾ ಕಟ್ಟಡ.. ಬಿರುಕು ಬಿಟ್ಟ ಗೋಡೆಗಳ ಮಧ್ಯೆ ಪ್ರಾಣ ಭಯದಲ್ಲೇ ಪಾಠ ಮಾಡುತ್ತಿರುವ ಶಿಕ್ಷಕರು.. ಸೋರುತ್ತಿರುವ ಮಾಳಿಗೆ.. ಅಲ್ಲಿಯೇ ಬಿಸಿಯೂಟ ಬೇಯಿಸುವ ಸ್ಥಿತಿ.. ಹೌದು. ಚಿತ್ತಾಪುರ ತಾಲೂಕಿನ ನಾಲವಾರ ಹೋಬಳಿ ವಲಯದ ಕುಲಕುಂದಾ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇಂದೋ ನಾಳೆಯೋ ಬೀಳುವಂತಿದೆ. ಶಾಲೆ ಕಟ್ಟಡದ ಆರೂ ತರಗತಿ ಕೋಣೆಗಳ ಗೋಡೆಗಳು ಬಾಗಿ ನಿಂತಿವೆ.

Advertisement

ಮೇಲ್ಛಾವಣಿ ಸೋರುತ್ತದೆ. ಕಾಂಕ್ರೀಟ್‌ ಕಳಚಿ ಬಿದ್ದು ಕಬ್ಬಿಣದ ರಾಡುಗಳು ಹೊರಗಣ್ಣು ಚಾಚಿವೆ. ಪಾಠದ ಕೋಣೆಗಳಲ್ಲಿ ಹೆಗ್ಗಣಗಳು ಸುರಂಗ ಮಾರ್ಗ ಕೊರೆದಿವೆ. ಸಣ್ಣ ಸದ್ದು ಕೇಳಿದರೆ ಸಾಕು ಮಕ್ಕಳು ಬೆಚ್ಚಿ ಬೀಳುವುದು ಗ್ಯಾರಂಟಿ. ಇನ್ನು ಶಿಕ್ಷಕರು ಉಸಿರು ಹಿಡಿದುಕೊಂಡೇ ಪಾಠ ಮಾಡುತ್ತಾರೆ. ಗೋಡೆಗಳು ಕುಸಿದು ಮೇಲ್ಛಾವಣಿ ಯಾವಾಗ ತಲೆ ಮೇಲೆ ಬೀಳುತ್ತದೆಯೋ ಏನೋ ಎನ್ನುವ ಆತಂಕ ಇದ್ದದ್ದೇ. ಕೊಠಡಿಗಳು ಸೋರುವ ಕಾರಣಕ್ಕೆ ಪೀಠೊಪಕರಣಗಳ ತ್ಯಾಜ್ಯ ಹಾಕಿ ಬೀಗ ಜಡಿಯಲಾಗಿದೆ.

ಈ ಶಾಲೆಯಲ್ಲಿ ಒಟ್ಟು 160 ಮಕ್ಕಳು ಅಕ್ಷರ ಅಭ್ಯಾಸ ಮಾಡುತ್ತಿದ್ದಾರೆ. ಏಳು ಜನ ಶಿಕ್ಷಕರಿದ್ದಾರೆ.ಬಿರುಕುಬಿಟ್ಟ ಕೋಣೆಯೊಂದರಲ್ಲಿ ಶಾಲಾ ಕಚೇರಿ ಮತ್ತು ತರಗತಿ ನಡೆಸಲಾಗುತ್ತಿದೆ. ಒಟ್ಟು ಐದು ತರಗತಿಗಳ ಮಕ್ಕಳಿಗೆ ಕಳೆದ ಮೂರು ವರ್ಷಗಳಿಂದ ಮರದ ಕೆಳಗೆ ಪಾಠ ಮಾಡಲಾಗುತ್ತಿದೆ. ಮಳೆ ಬಂದರೆ ಶಾಲೆಗೆ ರಜೆ ಘೋಷಿಸಲಾಗುತ್ತದೆ. ಇಂಥ ದುಸ್ಥಿತಿ ಮಧ್ಯೆ ಶಾಲೆ ನಡೆಯುತ್ತಿದೆ.

ಯಾವ ತಪ್ಪಿಗಾಗಿ ನಮ್ಮ ಮಕ್ಕಳು ಮಳೆ, ಗಾಳಿ, ಚಳಿಗೆ ಮೈಯೊಡ್ಡಿ ಅಕ್ಷರ ಕಲಿಯಬೇಕು ಎಂಬುದು ಪಾಲಕರ ಪ್ರಶ್ನೆ. ಆರು ವರ್ಷಗಳ ಹಿಂದೆ ಶಾಸಕರಾಗಿದ್ದ ವಾಲ್ಮೀಕಿ ನಾಯಕ ಹಾಗೂ ಹಾಲಿ ಶಾಸಕ ಪ್ರಿಯಾಂಕ್‌ ಖರ್ಗೆ ಅವರಿಗೆ ಶಾಲೆ ದುಸ್ಥಿತಿ ಅರಿವಿದೆ, ಆದರೂ ಮಕ್ಕಳಿಗೆ ಸುಸಜ್ಜಿತವಾದ ಶಾಲಾ ಕೊಠಡಿ ನಿರ್ಮಿಸಿಕೊಡಲು ಸಾಧ್ಯವಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ. ಜಿಲ್ಲೆಯಲ್ಲಿ ಶಿಕ್ಷಣ ಇಲಾಖೆ ಎನ್ನುವುದು ಜೀವಂತ ಇದೆಯೋ, ಇಲ್ಲವೋ ಎನ್ನುವಂತಾಗಿದೆ. ಈ ಶಾಲೆ ಶಿಕ್ಷಣ ಇಲಾಖೆ ಮತ್ತು ಚುನಾಯಿತ ಜನಪ್ರತಿನಿಧಿಗಳನ್ನು ಅಣಕಿಸುವಂತಿದೆ. ಗ್ರಾಪಂ ಆಡಳಿತ ಕಣ್ಮುಚ್ಚಿ ಕುಳಿತಿದೆ.

ಕಳೆದ ಒಂದು ವರ್ಷದಿಂದ ಕುಲಕುಂದಾ ಗ್ರಾಮದ ಶಾಲೆಯ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತಿದ್ದೇವೆ. ಪರಿಸ್ಥಿತಿ ಪಟ್ಟಿ ಮಾಡಿಕೊಂಡು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ. ಗ್ರಾಮಸ್ಥರೊಂದಿಗೆ ಸಮಾಲೋಚಿಸಿದ್ದೇವೆ.
ಶಾಲೆಗೆ ಸ್ವಂತ ಹಾಗೂ ಸುಸಜ್ಜಿತ ಕಟ್ಟಡ ಇಲ್ಲದ ಕಾರಣ ಮಳೆ ಬಂದರೆ ರಜೆ ನೀಡಲಾಗುತ್ತಿದೆ. ಇದರಿಂದ ಮಕ್ಕಳ ಶೈಕ್ಷಣಿಕ ಗುಣಮಟ್ಟ ಕುಸಿಯುತ್ತಿದೆ. ಸಮಸ್ಯೆಗೆ ಪರಿಹಾರ ಒದಗಿಸದಿದ್ದರೆ, ಮಕ್ಕಳು ಶಾಲೆಯಿಂದ ಹೊರಗುಳಿಯುತ್ತಾರೆ. ಇದರಿಂದ ಮಕ್ಕಳು ಬಾಲ್ಯ ವಿವಾಹ ಮತ್ತು ಬಾಲಕಾರ್ಮಿಕ ಪದ್ಧತಿಗೆ ತುತ್ತಾಗುವ ಸಾಧ್ಯತೆಯಿದೆ. ಗ್ರಾಮೀಣ ಭಾಗದ ಮಕ್ಕಳು ಕನಿಷ್ಠ ಎಂಟನೇ ತರಗತಿ ವರೆಗಾದರೂ ಶಿಕ್ಷಣ ಪಡೆಯುವಂತಹ ಉತ್ತಮ ಪರಿಸರ ನಿರ್ಮಿಸಿಕೊಡಲು ಸಂಬಂಧಿಸಿದವರು ಮುಂದಾಗಬೇಕು.
 ಆನಂದರಾಜ, ಜಿಲ್ಲಾ ನಿರ್ದೇಶಕರು, ಮಕ್ಕಳ ಮಾರ್ಗದರ್ಶಿ ಸಂಸ್ಥೆ

Advertisement

ಈಗಿರುವ ಶಾಲಾ ಕಟ್ಟಡ ಸಂಪೂರ್ಣ ಶಿಥಿಲಗೊಂಡಿದೆ. ಕುಸಿದು ಬೀಳುವ ಹಂತಕ್ಕೆ ತಲುಪಿದೆ. ಜೀವ ಭಯದಲ್ಲಿ ಪಾಠ ಮಾಡುತ್ತಿದ್ದೇವೆ. ಮರದ ಕೆಳಗೆ ಪಾಠ ಮಾಡಿ ಮಕ್ಕಳ ಪ್ರಾಣ ರಕ್ಷಣೆ ಮಾಡುತ್ತಿದ್ದೇವೆ. ಈ ಕುರಿತು ಅಧಿ ಕಾರಿಗಳಿಗೆ ವರದಿ
ನೀಡಿದ್ದೇವೆ. ಶಾಲೆಯ ದುಸ್ಥಿತಿ ಕಂಡು ಶಾಸಕ ಪ್ರಿಯಾಂಕ್‌ ಖರ್ಗೆ ಅವರು 44 ಲಕ್ಷ ರೂ. ಅನುದಾನ ಮಂಜೂರು ಮಾಡಿದ್ದಾರೆ.

ಹಣ ಬಂದು ಎರಡು ವರ್ಷ ಕಳೆದಿದೆ. ಸ್ವಂತ ಜಾಗ ಇಲ್ಲದ ಕಾರಣ ಹಾಗೂ ಶಾಲೆಗೆ ಜಾಗ ದೇಣಿಗೆ ನೀಡಲು ಗ್ರಾಮಸ್ಥರು ಮುಂದೆ ಬರದ ಕಾರಣ ಸಮಸ್ಯೆ ಜೀವಂತವಿದೆ. ಈಗಿರುವ ಶಿಥಿಲ ಶಾಲಾ ಕಟ್ಟಡದ ಜಾಗ ಶಾಲೆಯ ಹೆಸರಿಗಿಲ್ಲ. ಜಾಗ ದೇಣಿಗೆ ನೀಡಲು ಗ್ರಾಮಸ್ಥರ ಮಧ್ಯೆ ಹಗ್ಗಜಗ್ಗಾಟ ನಡೆದಿದೆ. ನದಿ ದಂಡೆಯಲ್ಲಿ ಮೂರು ಎಕರೆ ಸರಕಾರಿ ಗೈರಾಣಿ ಭೂಮಿಯಿದೆ. ಅದನ್ನು ಶಾಲೆ ಹೆಸರಿಗೆ ಬರೆದುಕೊಟ್ಟರೆ ಅನುಕೂಲವಾಗುತ್ತದೆ ಎನ್ನುತ್ತಾರೆ ಪ್ರಭಾರ ಮುಖ್ಯ ಶಿಕ್ಷಕ ಬಿ.ಲಕ್ಷ್ಮಣ.

„ಮಡಿವಾಳಪ್ಪ ಹೇರೂರ

Advertisement

Udayavani is now on Telegram. Click here to join our channel and stay updated with the latest news.

Next