ಗದಗ: ನಗರದಲ್ಲಿ ಹಿಜಾಬ್ ವಿವಾದ ದಿನದಿಂದ ದಿನಕ್ಕೆ ತಾರಕ್ಕೇರುತ್ತಿದೆ. ನಗರದ ವಿವಿಧ ಶಾಲಾ-ಕಾಲೆಜುಗಳಲ್ಲಿ ಕಳೆದ ಮೂರು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳು, ಗುರುವಾರ ಶಾಲಾ-ಕಾಲೇಜಿಗೆ ಗೈರು ಹಾಜರಾಗುವ ಮೂಲಕ ತರಗತಿಗಳನ್ನು ಬಹಿಷ್ಕರಿಸಿದ್ದು, ನಗರದ ಉರ್ದು ಪ್ರೌಢಶಾಲೆಗೆ ಕೇವಲ 8 ವಿದ್ಯಾರ್ಥಿನಿಯರು ಹಾಜರಾಗಿದ್ದರು.
ನಗರದ ಪಂ.ಪುಟ್ಟರಾಜು ಕವಿಗವಾಯಿಗಳ ಬಸ್ ನಿಲ್ದಾಣ ಸಮೀಪದ ಉರ್ದು ಪ್ರೌಢ ಶಾಲೆಯಲ್ಲಿ ಕಳೆದ ಸೋಮವಾರ ಕೆಲ ವಿದ್ಯಾರ್ಥಿನಿಯರು ಹಾಗೂ ಪೋಷಕರು ಪ್ರತಿಭಟನೆ ನಡೆಸಿದ್ದರಿಂದ ವಿವಾದ ತೀವ್ರ ಸ್ವರೂಪ ಪಡೆದಿತ್ತು. ಬುಧವಾರ ಯಾವುದೇ ಗದ್ದಲ ಇಲ್ಲವಾಗಿತ್ತಾದರೂ, ಗುರುವಾರ ಬಹುತೇಕ ವಿದ್ಯಾರ್ಥಿನಿಯರು ಶಾಲೆಗೆ ಗೈರು ಹಾಜರಾಗಿದ್ದಾರೆ.
ಶಾಲೆಯಲ್ಲಿ 8 ರಿಂದ 10ನೇ ತರಗತಿ ವರೆಗೆ ಒಟ್ಟು 221 ವಿದ್ಯಾರ್ಥಿನಿಯರಿದ್ದು, ಈ ಪೈಕಿ ಕೇವಲ 8 ವಿದ್ಯಾರ್ಥಿನಿಯರು ಹಾಜರಾಗಿದ್ದರು. 10ನೇ ತರಗತಿಯಲ್ಲಿ 86 ವಿದ್ಯಾರ್ಥಿಗಳಲ್ಲಿ ಮೂವರು, 8ನೇ ತರಗತಿಯ 68 ವಿದ್ಯಾರ್ಥಿಗಳ ಪೈಕಿ ಐವರು ಮಾತ್ರ ಹಾಜರಾಗಿದ್ದು, 9ನೇ ತರಗತಿಯ 67 ವಿದ್ಯಾರ್ಥಿಗಳ ಪೈಕಿ ಯಾರೊಬ್ಬರೂ ಶಾಲೆಗೆ ಹಾಜರಾಗಿಲ್ಲ. ಹೀಗಾಗಿ, ಶಾಲೆಯಲ್ಲಿ ವಿದ್ಯಾರ್ಥಿಗಳಿಲ್ಲದೇ ತರಗತಿ ಕೊಠಡಿಗಳು ಬಿಕೋ ಎನ್ನುತ್ತಿದ್ದರೆ, ಮಕ್ಕಳಿಗಾಗಿ ಶಿಕ್ಷಕರು ಕಾದು ಕೂರುವಂತಾಯಿತು.
ಇನ್ನು, ಆಂಗ್ಲೋ ಉರ್ದು ಶಾಲೆಯಲ್ಲೂ ಹಿಜಾಬ್ ನಿರ್ಬಂಧದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯರ ಸಂಖ್ಯೆ ಇಳಿಮುಖವಾಗಿತ್ತು. ಪ್ರೌಢಶಾಲೆ ಹಾಗೂ ಪದವಿ ಪೂರ್ವ ತರಗತಿಗಳಲ್ಲೂ ಬೆರಳೆಣಿಕೆಯಷ್ಟು ಮಾತ್ರ ವಿದ್ಯಾರ್ಥಿನಿಯರು ಗೈರಾಗಿದ್ದರು ಎಂದು ತಿಳಿದು ಬಂದಿದೆ. ಕಾಲೇಜಿನಿಂದ ವಾಪಸ್: ಇಲ್ಲಿನ ಹಳೇ ಕೋರ್ಟ್ ಕಟ್ಟಡದಲ್ಲಿರುವ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಹಿಜಾಬ್‌ಗ ಅವಕಾಶ ನೀಡದಿರುವುದನ್ನು ಖಂಡಿಸಿ 10ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಮನೆಗೆ ವಾಪಸ್ಸಾದರು.
ಇದಕ್ಕೂ ಮುನ್ನ ಕಾಲೇಜಿಗೆ ಪ್ರವೇಶಿಸಲು ಅನುಮತಿ ಕೋರಿದರು. ಅದಕ್ಕೆ ನಿರಾಕರಿಸಿದ ಪೊಲೀಸ್ ಸಿಬ್ಬಂದಿ, ತರಗತಿ ಕೋಣೆ ವರೆಗೂ ಹಿಜಾಬ್ ಧರಿಸಲು ಅವಕಾಶವಿದೆ. ಆದರೆ, ತರಗತಿಯಲ್ಲಿ ಹಿಜಾಬ್‌ಗ ಅವಕಾಶ ನೀಡಲಾಗದು. ನ್ಯಾಯಾಲಯದ ಆದೇಶವನ್ನು ಎಲ್ಲರೂ ಪಾಲಿಸಬೇಕು ಎಂದು ಮನವರಿಕೆ ಮಾಡಿಕೊಡಲು ಯತ್ನಿಸಿದರಾದರೂ ಫಲಿಸಲಿಲ್ಲ.
ತರಗತಿಯಲ್ಲೂ ಹಿಜಾಬ್ ಧರಿಸಲು ಅವಕಾಶ ನೀಡುವುದಾದರೆ ಮಾತ್ರ ನಾವು ಕಾಲೇಜಿಗೆ ಬರುತ್ತೇವೆ ಎಂದು ಪಟ್ಟು ಹಿಡಿದ ವಿದ್ಯಾರ್ಥಿನಿಯರು, ಹಿಜಾಬ್ ಬೇಡವೆಂದಾದರೆ, ನಮಗೂ ತರಗತಿ ಬೇಡ. ಮುಂದೆ ಪರೀಕ್ಷೆ ಬರೆಯದಿದ್ದರೂ, ಚಿಂತೆ ಇಲ್ಲ. ನಾವು ನಮ್ಮ ಧರ್ಮವನ್ನು ಬಿಡೆವು ಎಂದು ಕಡ್ಡಿ ಮುರಿದಂತೆ ಹೇಳಿ, ಮನೆಯತ್ತ ಹೆಜ್ಜೆ ಹಾಕಿದರು.